Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ

ನುಡಿಸಿರಿ

ಕರ್ನಾಟಕದ ‘ಜೈನಕಾಶಿ’ ಎಂದೇ ಪ್ರಸಿದ್ಧಿ ಪಡೆದ ಊರು ಮೂಡುಬಿದಿರೆ. ದಕ್ಷಿಣ ಕನ್ನಡ ಜಿಲ್ಲೆಯ ಸರಹದ್ದಿನಲ್ಲಿ ಬರುವ ಈ ಪುಟ್ಟ ಊರು ಔದ್ಯೋಗಿಕವಾಗಿ ಹಾಗೂ ತಾಂತ್ರಿಕವಾಗಿ ಹೆಚ್ಚಿನ ಅಭಿವೃದ್ಧಿ ಹೊಂದಿಲ್ಲ. ಆದರೆ ಸಂಸ್ಕೃತಿ ಹಾಗೂ ಪಾರಂಪರಿಕತೆಯ ದೃಷ್ಟಿಯಿಂದ ನೋಡಿದರೆ ಮೂಡುಬಿದಿರೆ ವಿಶಿಷ್ಟವಾಗಿ ನಿಲ್ಲುತ್ತದೆ. ಸಾವಿರ ಕಂಬದ ಬಸದಿ ಹಾಗೂ ಇತರ ರಚನೆಗಳು, ರತ್ನಾಕರವರ್ಣಿಯಂತಹ ಕವಿ, ಎಸ್.ಎನ್.ಮೂಡುಬಿದ್ರಿ, ಕೆ.ಬಿ.ಜಿನರಾಜ ಹೆಗ್ಡೆಯವರಂತಹ ಹೋರಾಟಗಾರರನ್ನು ಮೂಡುಬಿದಿರೆ ಕೊಡುಗೆಯಾಗಿ ನೀಡಿದೆ.

ಆದರೆ ಇಂದು ಈ ಮೂಡುಬಿದಿರೆಯನ್ನು ಕನ್ನಡಲೋಕದಲ್ಲಿ, ಸಾಂಸ್ಕೃತಿಕ ಜಗತ್ತಿನಲ್ಲಿ ಚಿರಸ್ಥಾಯಿಯಾಗಿಸುವ ಕೆಲಸ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ‘ಮೂಡುಬಿದಿರೆಯ ಕನಸುಗಾರ’ ಎಂದೇ ಹೆಸರು ಗಳಿಸಿರುವ ಡಾ.ಎಂ.ಮೋಹನ್ ಆಳ್ವರ ನೇತೃತ್ವದಲ್ಲಿ ಇಂತಹ ಅದ್ಭುತ ಕೆಲಸ ನಡೆಯುತ್ತಿದೆ. ಕನ್ನಡ ಉಳಿಸುವ, ಬೆಳೆಸುವ ಕೆಲಸ ಕೇವಲ ಅಕಾಡೆಮಿ, ಪರಿಷತ್ತುಗಳದ್ದಲ್ಲ, ಅದು ನಡೆಯಬೇಕಾದ್ದು ಸಮಸ್ತ ಕನ್ನಡಿಗರಿಂದ ಎನ್ನುತ್ತಾರೆ ಡಾ.ಎಂ.ಮೋಹನ್ ಆಳ್ವರು. ಅದಕ್ಕಾಗಿ ರೂಪುಗೊಂಡ ಉತ್ಸವವೇ ‘ಆಳ್ವಾಸ್ ನುಡಿಸಿರಿ’. ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನವೆಂದೇ ಬಿಂಬಿತವಾದ ಈ ನುಡಿಸಿರಿ ಇಡೀ ಸಮುದಾಯದ ಉತ್ಸವವೆಂದೇ ಹೇಳಬಹುದು.

ಈ ನುಡಿಸಿರಿಯ ಆರಂಭದ ಹಿಂದೆಯೂ ಒಂದು ಮಹತ್ವದ ಆಲೋಚನೆಗಳಿವೆ, ಅನುಭವಗಳಿವೆ. ೨೦೦೩ರಲ್ಲಿ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆಯಲ್ಲಿ ೭೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ನಿರ್ಧರಿಸಿತ್ತು. ಆಗ ಡಾ.ಆಳ್ವರಿಗೆ ಈ ಸಾಹಿತ್ಯ ಸಮ್ಮೇಳನದ ಕಾರ್ಯವನ್ನು ವಹಿಸಿಕೊಳ್ಳುತ್ತೀರಾ ಎಂದು ಕೇಳಿಕೊಂಡಿತ್ತು. ಆ ಕೆಲಸವನ್ನು ವಹಿಸಿಕೊಂಡ ಡಾ. ಎಂ. ಮೋಹನ್ ಆಳ್ವರ ನೇತೃತ್ವದಲ್ಲಿ ೨೦೦೩ರ ಡಿಸೆಂಬರ್ ೧೭, ೧೮ ಮತ್ತು ೧೯ರಂದು ಅತ್ಯಂತ ವೈಭವ ಹಾಗೂ ಶಿಸ್ತಿನಿಂದ ಈ ಸಮ್ಮೇಳನ ನಡೆಯಿತು.

ಯಾವುದಾದರೂ ಕಾರ್ಯದ ಯಶಸ್ಸಿನ ನಂತರ ಹೊಸ ಕಾರ್ಯಗಳನ್ನು ವಹಿಸಿಕೊಳ್ಳಲು ಮನಸ್ಸು ಸಿದ್ಧವಾಗುತ್ತದೆ. ಡಾ.ಆಳ್ವರ ವಿಷಯದಲ್ಲಿ ಆಗಿದ್ದೂ ಇದೇ. ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ಜವಾಬ್ದಾರಿ ನಂತರ ಮತ್ತೊಂದು ಮಹಾಜವಾಬ್ದಾರಿ ನಿರ್ವಹಿಸಲು ಆಳ್ವರು ಸಿದ್ಧರಾದರು. ಅದರ ಫಲವೇ ‘ಆಳ್ವಾಸ್ ನುಡಿಸಿರಿ’.

ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಕೇವಲ ಸರಕಾರೀ ಕಾರ್ಯಕ್ರಮಗಳಲ್ಲ. ಕನ್ನಡಪರ ಮನಸ್ಸುಗಳನ್ನು ಕಟ್ಟಬೇಕಾದರೆ ಅವು ಸಾರ್ವಜನಿಕ ಕಾರ್ಯಕ್ರಮಗಳಾಗಬೇಕು. ಇಂತಹ ಕಾರ್ಯಕ್ರಮಗಳಿಗೆ ಅದರದೇ ಆದ ಮಹತ್ವವಿದೆ. ಈ ಕಾರ್ಯಕ್ರಮಗಳನ್ನು ಮಾಡುವಾಗ ಅದಕ್ಕೆ ವಿನಿಯೋಗಿಸಬೇಕಾದ ಹಣವೂ ಅಪಾರ ಮೊತ್ತದ್ದು. ಇಂತಹ ವೈಭವ, ಸಂಭ್ರಮ, ವೆಚ್ಚಗಳಿಗೆ ಅದರದೇ ಆದ ತೂಕವಿದೆ. ಹಬ್ಬ ಮಾಡುವುದು, ಸಂಭ್ರಮ ಪಡುವುದು ನಮ್ಮ ಸಂಸ್ಕೃತಿಯ ಲಕ್ಷಣಗಳಲ್ಲಿ ಒಂದು. ಆದರೆ ಇಂತಹ ಉತ್ಸವಗಳನ್ನು ನಡೆಸುವಾಗ ಅದು ಯಾವಾಗಲೂ ವ್ಯವಸ್ಥಿತವಾಗಿರಬೇಕು. ಹಬ್ಬದ ಗೌಜಿಯೊಂದಿಗೆ ವೈಚಾರಿಕತೆಯನ್ನು ಅಲ್ಲಾಡಿಸುವ, ನಮ್ಮ ಯೋಚನೆಗಳನ್ನು ಇನ್ನಷ್ಟು ಖಚಿತ ಪಡಿಸುವ ಜಿಜ್ಞಾಸೆಯೂ ಈ ಸಂದರ್ಭದಲ್ಲಿ ನಡೆಯಬೇಕು. ಇಂತಹ ಅನೇಕ ಮಗ್ಗಲುಗಳನ್ನು ಇಟ್ಟುಕೊಂಡು ಆರಂಭವಾದ ನಾಡು ನುಡಿಯ ಉತ್ಸವವೇ ‘ಆಳ್ವಾಸ್ ನುಡಿಸಿರಿ’. ಕೇವಲ ಭಾಷಾಪರ ಕಾರ್ಯಕ್ರಮವಾಗದೇ ಸಾಂಸ್ಕೃತಿಕ ಕಲಾರಾಧನೆ ನಡೆಯುವ, ಜ್ಞಾನಧಾರೆಯ ಸಿಹಿ ಊಟವನ್ನು ಉಣಬಡಿಸುವ ‘ಹಬ್ಬ’ವಾಗಿ ನುಡಿಸಿರಿ ನಡೆದುಕೊಂಡು ಬರುತ್ತಿದೆ. ಸಮುದಾಯಕ್ಕೆ ಸಮುದಾಯವೇ ಭಾಗವಹಿಸುವ ಈ ಸಮ್ಮೇಳನ ಇಂದು ರಾಷ್ಟ್ರೀಯ ನಾಡು-ನುಡಿಯ ಉತ್ಸವವೆಂದೇ ಪ್ರಖ್ಯಾತವಾಗಿದೆ.

ಇಂದು ಕನ್ನಡಪರ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆಯುವುದರಲ್ಲಿಯೂ ಕೆಲವೊಂದುತೊಡಕುಗಳಿವೆ. ಕನ್ನಡ ಕಾರ್ಯಕ್ರಮಗಳನ್ನು ಕೇವಲ ಸಂಘಟಕರು, ಸರಕಾರ, ಪರಿಷತ್ತು, ಅಕಾಡೆಮಿಗಳು ಮಾತ್ರ ನಿರ್ವಹಿಸಬೇಕೆಂಬ ನಮ್ಮ ಮನೋಭಾವ, ಸಂಕುಚಿತ ಭಾವನೆಗಳೇ ಈ ತೊಡಕುಗಳ ಮುಖ್ಯ ಕಾರಣವಾಗಿರಲೂಬಹುದು. ಕನ್ನಡಸೇವೆ ಕೇವಲ ಯಾವುದೋ ಸಂಘ-ಸಂಸ್ಥೆಗಳದ್ದು ಮಾತ್ರವಲ್ಲ. ಅದು ಈ ನಾಡಿನ ಜನರ ಕೆಲಸ.ಭಾಷೆಯನ್ನು, ಸಂಸ್ಕೃತಿಯನ್ನು ರೂಪಿಸುವ, ನಿರ್ವಚಿಸುವ, ನಿರ್ಧರಿಸುವ ಕೆಲಸವನ್ನು ಯಾವತ್ತೂ ಪ್ರಭುತ್ವ ನಿರ್ವಹಿಸುವುದಕ್ಕೆ ಅವಕಾಶ ಮಾಡಿಕೊಡಬಾರದು. ಅದನ್ನು ಜನರೇ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ನಿಭಾಯಿಸಬೇಕು. ನಮ್ಮಲ್ಲಿಂದು ಇಂಥ ಅವಕಾಶಗಳು ಖಾಲಿ ಬಿದ್ದಿವೆ, ಅದನ್ನು ಭರ್ತಿ ಮಾಡುವುದಕ್ಕೆಂದು ನಿಂತಿರುವ ಸಂಸ್ಕೃತಿ ಪ್ರತಿಪಾದಕರು ಈ ದೇಶದ ಬಹುರೂಪಿ ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡು ಸಂಸ್ಕೃತಿ ಚಿಂತಕರಾಗಿ ಪರಿವರ್ತನೆಯಾಗಬೇಕಿದೆ.

ಇಂತಹ ಅನೇಕ ವಿಚಾರಗಳನ್ನು ಚರ್ಚಿಸಲು, ವಿಮರ್ಶಿಸಲು ವಾಗ್ವಾದದ ವೇದಿಕೆಯನ್ನು ಆಳ್ವಾಸ್ ನುಡಿಸಿರಿ ಕಲ್ಪಿಸಿಕೊಡುತ್ತಿದೆ.
ಇಂದಿನ ಯುವಜನತೆ ಸರಿಯಾದ ಹಾದಿಯಲ್ಲಿ ಸಾಗುತ್ತಿಲ್ಲ ಎಂದು ಅವರನ್ನು ಹಳಿಯುವವರು ಸಾಕಷ್ಟು ಜನ ಇದ್ದಾರೆ. ಆದರೆ ಸರಿಯಾದ ದಾರಿ ಯಾವುದು? ಈ ದೇಶದ ನೈಜ ಪರಂಪರೆ ಏನು ಎನ್ನುವುದನ್ನು ಅವರಿಗೆ ತಿಳಿಸಿಕೊಡುವ ಜನರು ಎಷ್ಟು ಜನ ಇದ್ದಾರೆ? ತಪ್ಪು ಹಾದಿಯಲ್ಲಿ ಸಾಗುತ್ತಿರುವ ವಿದ್ಯಾರ್ಥಿಗೆ ಸರಿಯಾದ ಮಾರ್ಗದರ್ಶನ ಸಿಗದೆ ಇದ್ದರೆ ಅವನು ಈ ದೇಶದ ಅತ್ಯಂತ ಅಪಾಯಕಾರಿ ವ್ಯಕ್ತಿಯಾಗಬಲ್ಲ. ಒಬ್ಬ ವಿದ್ಯಾರ್ಥಿ ಕಲಾವಿದನಾಗದಿದ್ದರೂ ತೊಂದರೆಯಿಲ್ಲ ಆದರೆ ಒಳ್ಳೆಯ ಸೌಂದರ್ಯಪ್ರಜ್ಞೆಯಿರುವವನಾಗಬೇಕು..ಒಳ್ಳೆಯ ಕ್ರೀಡಾಪಟುವಾಗದಿದ್ದರೂ ಚಿಂತೆಯಿಲ್ಲ ಆದರೆ ಉತ್ತಮ ಕ್ರೀಡಾ ಮನೋಭಾವವಿರುವವನಾಗಬೇಕು. ಅದಕ್ಕಾಗಿ ಅವರಿಗೆ ಸರಿಯಾದ ಸಮಯದಲ್ಲಿ ಸೂಕ್ತ ಮಾರ್ಗದರ್ಶನ ಅವಶ್ಯವಾಗಿ ಬೇಕು. ವಿದ್ಯಾರ್ಥಿಗಳು ಈ ದೇಶವನ್ನು, ಇಲ್ಲಿನ ಜನಸಮುದಾಯಗಳನ್ನು ಅರ್ಥ ಮಾಡಿಕೊಳ್ಳುವ ಉದ್ದೇಶದಿಂದ,ಇಲ್ಲಿಯ ಸಾಹಿತ್ಯ-ಸಂಸ್ಕೃತಿ, ನಾಡು-ನುಡಿಯ ಕುರಿತು ಪ್ರೀತಿಯೋ ಜಿಜ್ಞಾಸೆಯೋ ಅವರಲ್ಲಿ ಹುಟ್ಟಿಸುವ ಒಂದು ಪ್ರಯತ್ನವನ್ನು ಈ ಸಮ್ಮೇಳನಗಳ ಮೂಲಕ ಮಾಡಲಾಗುತ್ತಿದೆ.

ಯಾವ ರಾಜಕೀಯ ಒತ್ತಡಗಳಿಲ್ಲದೇ, ಧಾರ್ಮಿಕ ಬಣ್ಣಗಳಿಲ್ಲದೆಯೇ ನುಡಿಸಿರಿ ಋಜುಮಾರ್ಗದಲ್ಲಿ ನಡೆಯುತ್ತಿದೆ. ಸರಕಾರೀ ಸಂಸ್ಥೆಗಳಿಗೆ, ಸರಕಾರೀ ಅನುದಾನ ಪಡೆಯುವ ಸಂಸ್ಥೆಗಳಿಗೆ ಬೇರೆ ಬೇರೆ ಬಗೆಯ ಹಂಗು ಮತ್ತು ಒತ್ತಡಗಳಿರುವುದು ಸಾಧ್ಯ. ನುಡಿಸಿರಿ ಖಾಸಗಿ ಸಂಸ್ಥೆಯ ಪರವಾಗಿ ನಡೆಯುವ ಸಾರ್ವಜನಿಕ ಕಾರ್ಯಕ್ರಮವಾಗಿರುವುದರಿಂದ ಇಲ್ಲಿ ಅಂತಹ ಒತ್ತಡಗಳಿಲ್ಲ. ಸಮ್ಮೇಳನಾಧ್ಯಕ್ಷರನ್ನು ಆರಿಸುವಾಗ, ಗೋಷ್ಠಿಗಳನ್ನು ನಡೆಸುವಾಗ, ಸಂಪನ್ಮೂಲ ವ್ಯಕ್ತಿಗಳನ್ನು ಕರೆಸುವಾಗ ಆಯಾ ಕ್ಷೇತ್ರಗಳಲ್ಲಿ ಅವರು ನಡೆಸಿದ ಸಿದ್ಧಿ ಸಾಧನೆಗಳನ್ನು ಮಾತ್ರ ಗಮನದಲ್ಲಿಟ್ಟುಕೊಳ್ಳಲಾಗುತ್ತದೆ.

ಸಾಹಿತ್ಯಿಕ, ಬೌದ್ಧಿಕ, ಸಾಂಸ್ಕೃತಿಕ, ವೈಚಾರಿಕ ಹೀಗೆ ವಿವಿಧ ನೆಲೆಗಟ್ಟುಗಳಲ್ಲಿ ನಡೆಯುವ ನುಡಿಸಿರಿ ಒಂದು ಗುಣಾತ್ಮಕ ರೂಪ ಪಡೆದುಕೊಂಡಿದ್ದು ೨೦೧೪ರಲ್ಲಿ. ೨೦೧೪ರ ಡಿಸೆಂಬರ್ ೧೭,೧೮ ಮತ್ತು ೧೯ರಂದು ಮೊತ್ತ ಮೊದಲ ನುಡಿಸಿರಿ ಆರಂಭಗೊಂಡಿತು. ಮೊದಲ ನುಡಿಸಿರಿಯನ್ನು ಕನ್ನಡದ ಪ್ರಸಿದ್ಧ ಬರಹಗಾರ, ಸಂಸ್ಕೃತಿ ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಆಗ ನುಡಿಸಿರಿಯ ಕೇಂದ್ರ ಚರ್ಚೆ ಕನ್ನಡ ಮನಸ್ಸು: ಸಾಹಿತ್ಯಿಕ ಸಾಂಸ್ಕೃತಿಕ ಸವಾಲುಗಳು ಎಂಬುದಾಗಿತ್ತು.

ಅಂದಿನ ನುಡಿಸಿರಿಯಲ್ಲಿ ಚಂದ್ರಶೇಖರ ಪಾಟೀಲ, ಹಂ.ಪಾ.ನಾಗರಾಜಯ್ಯ, ಸಿ.ವೀರಣ್ಣ, ಕಿ.ರಂ. ನಾಗರಾಜ, ರಾಜೇಂದ್ರ ಚೆನ್ನಿ, ಶಿವರಾಮ್ ಪಡಿಕ್ಕಲ್, ತಾಳ್ತಜೆ ವಸಂತಕುಮಾರ್, ಪ್ರಸನ್ನ, ನಾಗತಿಹಳ್ಳಿ ಚಂದ್ರಶೇಖರ್, ಪ್ರಭಾಕರ್ ಜೋಶಿ ಮೊದಲಾದ ವಿದ್ವಾಂಸರು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ವೈದೇಹಿ, ದೊಡ್ಡರಂಗೇಗೌಡ, ಬಿ.ಆರ್.ಲಕ್ಷ್ಮಣರಾವ್, ಸುಬ್ರಾಯ ಚೊಕ್ಕಾಡಿ, ಎಂ.ಆರ್.ಕಮಲ, ಪ್ರಹ್ಲಾದ ಅಗಸನಕಟ್ಟೆ, ಡುಂಡಿರಾಜ್, ಯು.ಮಹೇಶ್ವರಿ ಮೊದಲಾದ ಕವಿಗಳು ಕವಿಸಮಯ-ಕವಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಶ್ರೀನಿವಾಸ ಹಾವನೂರ, ಅಮೃತ ಸೋಮೇಶ್ವರ, ಚನ್ನಬಸವಣ್ಣ, ಹರಿಕೃಷ್ಣ ಪುನರೂರು ಮತ್ತು ಬಿ.ಜಯಶ್ರೀಯವರನ್ನು ‘ಆಳ್ವಾಸ್ ನುಡಿಸಿರಿ-೨೦೧೪’ನ್ನು ಕೊಟ್ಟು ಸನ್ಮಾನಿಸಲಾಯಿತು.

ಹೀಗೆ ೨೦೦೪ರಲ್ಲಿ ಆರಂಭಗೊಂಡ ನುಡಿಸಿರಿ ಇಂದು ೧೧ ವರ್ಷಗಳನ್ನು ಪೂರೈಸಿ ೧೨ನೇ ವರ್ಷಕ್ಕೆ ಕಾಳಿಡುತ್ತಿದೆ. ಹತ್ತನೇ ವರ್ಷದ ಸಂದರ್ಭದಲ್ಲಿ ‘ವಿಶ್ವನುಡಿಸಿರಿ’ ಹೆಸರಿನಲ್ಲಿ ಜಾಗತಿಕ ಮಟ್ಟದಲ್ಲಿ ನಡೆದು ತನ್ನ ಪ್ರತಿಷ್ಠೆಯನ್ನೂ ಹೆಚ್ಚಿಸಿಕೊಂಡಿದೆ. ದಿನ ದಿನಕ್ಕೆ ‘ಆಳ್ವಾಸ್ ನುಡಿಸಿರಿ’ ಕಾರ್ಯಕ್ರಮದ ಜನಪ್ರಿಯತೆ ಹೆಚ್ಚುತ್ತಲೇ ಹೋಗುತ್ತಿದೆ. ಈ ಕಾರ್ಯಕ್ರಮದ ಅಭಿಮಾನಿಗಳ ಸಂಖ್ಯೆ ಬೆಳೆಯುತ್ತಲೇ ಇದೆ. ಸರಕಾರದ ಸಹಾಯವಿಲ್ಲದೇ ಸ್ವಂತ ಖರ್ಚಿನಲ್ಲಿ ನಡೆದು ಕನ್ನಡ ಸೇವೆಯನ್ನು ಮಾಡುತ್ತಿರುವ ನುಡಿಸಿರಿ ಇಂದು ಪ್ರಮುಖ ಕನ್ನಡ ಹಬ್ಬವಾಗಿ ಹೆಸರುಗಳಿಸಿದೆ.