Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ

ಅಧ್ಯಕ್ಷರ ನುಡಿ

DrMohnAlva1ಆಳ್ವಾಸ್ ವಿಶ್ವ ನುಡಿಸಿರಿ ವಿರಾಸರ್ ೨೦೧೩ರ ಸಮ್ಮೇಳನವು ನನ್ನ ಪಾಲಿಗೆ ಒಂದು ವಿಸ್ಮಯ.. ಬೆರಗು. ಅದರ ರೋಮಾಂಚನದಿಂದ ಇಂದೂ ಹೊರಬರಲಾರದ ಸ್ಥಿತಿ ನನ್ನದು. ಒಂದು ದಿನ ಸುಮ್ಮನೆ ಕುಳಿತು ಈ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ತಿರುವಿ ಹಾಕುತ್ತಿದ್ದೆ. ಅದರ ಗಾತ್ರ ಇಡಿಕಿರಿದು ತುಂಬಿದ ಕಾರ್ಯಕ್ರಮಗಳ ವ್ಯಾಪ್ರಿ ನನಗೆ ಅಚ್ಚರಿಯನ್ನುಂಟು ಮಾಡಿತು. ಇಷ್ಟು ವಿಚಾರಗಳು ಕೇವಲ ನಾಲ್ಕು ದಿನಗಳಲ್ಲಿ ನಡೆದು ಹೋಯಿತೋ ಎಂಬ ಪ್ರಶ್ನೆ ಇಂದಿಗೂ ನನ್ನನ್ನು ಕಾಡುತ್ತಿದೆ. ಕೇವಲ ಸಮ್ಮೇಳನ ಮಾತ್ರವಲ್ಲ ಅದಕ್ಕೆ ಒಂದು ವರ್ಷದಿಂದ ನಡೆಸಿದ ಪೂರ್ವತಯಾರಿ, ಅವುಗಳಿಂದ ಅನುಭವಿಸಿದ ಸಂತೋಷ ಎಲ್ಲವೂ ಮಾತಿನಲ್ಲಿ ಹಿಡಿದಿಡುವಂಥಾದಲ್ಲ. ನೈಜ ಅರ್ಥದಲ್ಲಿ ವಿಶ್ವಸಮ್ಮೇಳನ ಸಂಪನ್ನಗೊಂಡಾಗ ಕಷ್ಟ -ನಷ್ಟ-ಶ್ರಮಗಳೆಲ್ಲಾ ಹಿಮದಂತೆ ಕರಗಿ ಸಂತೋಷ ಬೆರೆಗು-ವಿಸ್ಮಯಗಳೇ ಶಾಶ್ವವಾಗಿ ಉಳಿದುದು.

ಹತ್ತು ವರ್ಷಗಳ ಹಿಂದೆ ಆಳ್ವಾಸ್ ನುಡಿಸಿರಿ, ೨೦ ವರ್ಷಗಳ ಹಿಂದ ಆಳ್ವಾಸ್ ವಿರಾಸತ್ ಕಾರ್ಯಕ್ರಮಗಳನ್ನು ಹುಟ್ಟು ಹಾಕುವಾಗಲೇ ನಮ್ಮಲ್ಲಿ ನಿರ್ಧಿಷ್ಠ ಯೋಚನೆಗಳಿದ್ದುವು. ಯಾವುದೇ ಕಾರ್ಯಗಳನ್ನು ಪ್ರಾರಂಭಿಸುವುದು ಸುಲಭ, ಮುಂದುವರಿಸಿಕೊಂಡು ಹೋಗುವುದು ಕಷ್ಟ. ಆರಂಭಶೂರ ತನದಲ್ಲಿ ಹೊರಟು ಬಿಟ್ಟರೆ ಗುರಿ ಮುಟ್ಟುವುದು ಸಾಧ್ಯವಾಗುವುದಿಲ್ಲ. ಮಾಡಿದ ಕೆಲಸಗಳು, ಯೋಚಿಸಿದ ಯೋಚನೆಗಳು ಸುದೀರ್ಘ. ಸೂರ್ಯ-ಚಂದ್ರರಿರುವಷ್ಟು ಕಾಲ ಮುನ್ನಡೆಯಬೇಕೆಂದು ನಮ್ಮ ಆಸೆ. ಅದಕ್ಕಾಗಿ ಸನ್ಮಿತ್ರರ ಬಳಗದಲ್ಲಿ ಯೋಚಿಸಿ, ಚಿಂತಿಸಿ, ಸ್ಫಷ್ಟ ನಿರ್ಧಾರಕ್ಕೆ ಬಂದು ಕಾರ್ಯೋನ್ಮುಖರಾಗಿದ್ದೆವು. ಕನ್ನಡದ ಮೇಲಿನ ಪ್ರೀತಿ ಕೇವಲ ಒಂದು ದಿನದ್ದಾದರೆ ಏನು ಪ್ರಯೋಜನ? ಅಥವಾ ಬೂಟಾಟಿಕೆಯ ಪ್ರೀತಿಯಾದರೆ ಏನು ಪ್ರಯೋಜನ? ಕನ್ನಡದ ಕುರಿತ ಚಿಂತನ-ಮಂಥನಗಳು ಅಲ್ಲಲ್ಲಿ ನಡೆಯುತ್ತವೆ ನಿಜ. ಕಾಲ ಧರ್ಮಕ್ಕೆ ಅನುಗುಣವಾಗಿ ಪ್ರತಿಯೊಂದು ವಿಚಾರಗಳು ಮೇಲ್ಸ್ತರಕ್ಕೆ ಏರಬೇಕಾದುದು ಅಗತ್ಯ. ನಾಡು ನುಡಿಯ ವಿಚಾರದಲ್ಲೂ ಹೀಗೆಯೇ. ಅಲ್ಲಲ್ಲಿ ನಡೆಯುವ ಕೆಲಸ ಕಾರ್ಯಗಳು ನಡೆದು ಕನ್ನಡ ಕಟ್ಟುವ ಕೆಲಸಗಳು ಸಾಂಗವಾಗಿ ನೆರವೇರಲಿ. ಆದರೆ ಅದಕ್ಕೊಂದು ಪ್ರದರ್ಶನ ಸ್ವರೂಪ ಬೇಕಾಗುತ್ತದೆ. ಆ ಪ್ರದರ್ಶನ ಸ್ವರೂಪವನ್ನು ವೈಭವ ಸ್ವರೂಪ ಎಂದರೂ ಅಡ್ಡಿಯಿಲ್ಲ. ಸೀಮಿತ ವ್ಯಾಪ್ತಿಯಿಂದ ಅಸೀಮ ವ್ಯಾಪ್ತಿಯ ಲಂಘನೆ ಎಂದು ಸಮ್ಮೇಳನಕ್ಕೆ ಬರಬೇಕೆಂಬುದು ನಮ್ಮ ಇರಾದೆಯಾಗಿತ್ತು. ಜೊತೆಗೆ ಸಮ್ಮೇಳನವು ಕೇವಲ ವಿದ್ವಾಂಸರು ಮಾತ್ರ ಒಂದೆಡೆ ಕುಳಿತು ಚರ್ಚಿಸುವ ವಿಚಾರ ವೇದಿಕೆಯಾಗದೆ, ವಿದ್ವಾಂಸರ ವಿಚಾರಗಳು ಯುವ ಪೀಳಿಗೆಯನ್ನು ಆವರಿಸಿಕೊಳ್ಳಬೇಕು. ಕನ್ನಡವನ್ನು ಕಟ್ಟುವ ಗುರುತರ ಜವಾಬ್ದಾರಿ ಅವರ ಹೆಗಲ ಮೇಲೆ ವರ್ಗಾವಣೆಯಾಗಬೇಕೆಂಬ ಮಹದಾಸೆ ನಮ್ಮದಾಗಿತ್ತು. ಕನ್ನಡ ಕಟ್ಟುವ ಕೆಲಸ ವಿದ್ವತ್-ಪ್ರಪಂಚದ ಆಚೆಗೂ ನಡೆದಿದೆ. ಆ ಲೋಕವನ್ನು ದರ್ಶಿಸಿ ಪರಿಚಯಿಸುವ ಕೆಲಸ ನಮ್ಮಿಂದಾಗಬೇಕು. ಆಗಲೇ ಕನ್ನಡತ್ವದ ಸಮಗ್ರ ಪರಿಚಯ ಸಾಧ್ಯ ಎನ್ನುವ ಆಲೋಚನೆಯಲ್ಲಿ ಬೀದಿ ಗಾಯಕರು, ಡೊಂಬರಾಟದವರು, ಜನಪದ ಗಾಯಕರು, ಆರಾಧನಾ ಸ್ವರೂಪದ ಆಚರಣೆಗಳು, ಪ್ರಾದೇಶಿಕ ಭಾಷಾ ವೈವಿಧ್ಯಗಳು-ಹೀಗೆ ವೃತ್ತಿ, ಕಸೂಬು, ಆರಾಧನೆಯೇ ಮೊದಲಾದ ಜಾನಪದ ಸ್ವರೂಪಗಳನ್ನು ಅದರ ಮೂಲ ನೆಲೆಯಲ್ಲಿಯೇ ಪರಿಚಯಿಸುವ ಕೆಲಸ ಆಗಬೇಕೆಂದು ಬಯಸಿದೆವು, ಅದರಂತೆ ನಡೆದೆವು. ಹೀಗೆ ಶಿಷ್ಟ ಮತ್ತು ಜಾನಪದದ ಒಂದುಗೂಡುವಿಕೆಯಿಂದ ಕನ್ನಡವನ್ನು ಕಟ್ಟಿದ ವಿಚಾರಗಳ ಸಮಗ್ರ ಪರಿಚಯ ಆಗುವುದೆಂದು ಕಾರ್ಯೋನ್ಮುಖರಾಗಿ ಸಾಧಿಸಿ ತೋರಿಸಲು ಅನ್ಮಿಂದ ಸಾಧ್ಯವಾಯಿರು.

ಆಳ್ವಾಸ್ ನುಡಿಸಿರಿಯು ಉದಯಿಸುವ ಸಂದರ್ಭದಲ್ಲಿ ಹತ್ತು ವರ್ಷಗಳು ಸಂದ ಮೇಲೆ ದಶಮಾನೋತ್ಸವನ್ನು ವಿಶ್ವ ಮಟ್ಟದಲ್ಲಿ ಆಚರಿಸಬೇಕೆಂಬ ಯೋಚನೆಯಿತ್ತು. (ಕಾಕತಾಳೀಯವೆಂಬಂತೆ ಆಳ್ವಾಸ್ ವಿರಾಸತ್‌ಗೆ ೨೦ನೇಯ ವರ್ಷಾಚರಣೆ) ಇಲ್ಲೂ ’ವಿಶ್ವ’ ಎಂಬ ಪದದ ಬಳಕೆ ಹೆಸರಿಗೆ ಮಾತ್ರವಾಗದೆ, ನಿಜವಾದ ಅಥದಲ್ಲಿ ವಿಶ್ವ ಸಮ್ಮೇಳನವಾಗಬೇಕೆಂಬ ತುಡಿತ ಆಗಲೇ ಇತ್ತು. ಯಾರೂ ನಾಲ್ಕು ವಿದೇಶಿ ವಿದ್ವಾಂಸರನ್ನು ಕರೆದು ಸಮ್ಮೇಳನ ನಡೆಸಿ ವಿಶ್ವ ಸಮ್ಮೇಳನದ ಹೆಸರು ಕೊಡುವುದಕ್ಕೆ ನನ್ನ ಮನಸ್ಸು ಸುತಾರಾಮಂ ಒಪ್ಪಲಿಲ್ಲ. ಆ ಬೇಗುದಿ ಎಷ್ಟು ಹೆಚ್ಚಾಯಿತ್ತೆಂದರೆ ಅಶ್ವಮೇಧ ಯಾಗದ ಕುದುರೆಯಂತೆ ನಮ್ಮ ೨೫೦ ವಿದ್ಯಾರ್ಥಿ- ಕಲಾವಿದರನ್ನೊಳಗೊಂಡ ತಂಡ ವಿದೇಶಗಳಲ್ಲೂ ನುಡಿಸಿರಿ ಘಟಕಗಳನ್ನು ಸ್ಥಾಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದುವು. ರಾಜ್ಯ-ದೇಶ-ವಿದೇಶಗಳಿಗೆ ತೆರಳಿ ಕನ್ನಡ ಸಂಸ್ಕೃತಿಯ ರಸದೌತಣ ನೀಡುವ ಮೂಲಕ ೮೫ ನುಡಿಸಿರಿ ಘಟಕಗಳ ರಚನೆ ಮಾಡಿತ್ತೆಂದರೆ ಊಹಿಸುವುದೇ ಕಷ್ಟವಾಗುತ್ತದೆ.

ಆಳ್ವಾಸ್ ನುಡಿಸಿರಿಯು ಆಯೋಜನೆಯಾದಾಗ ಜನಮೂಲಾಧಾರವಾದ ಕೃಷಿ, ಜಾನಪದ, ವಿದ್ಯಾರ್ಥಿಗಳನ್ನು ಪ್ರಮುಖವಾಗಿ ಪರಿಗಣಿಸಬೇಕೆಂದು ತೀರ್ಮಾನಿಸಿ ನಾಲ್ಕು ಸಮಾನಾಂತರ ವೇದಿಕೆಗಳಲ್ಲಿ ನುಡಿಸಿರಿ, ಕೃಷಿಸಿರಿ, ಜಾನಪದಸಿರಿ ಮತ್ತು ವಿದ್ಯಾರ್ಥಿಸಿರಿ ಸಮ್ಮೇಳನಗಳನ್ನು ನಡೆಸಿದೆವು. ದೇಶ-ವಿದೇಶಗಳಿಂದ ಕನ್ನಡಾಭಿಮಾನಿಗಳು, ವಿದ್ವಾಂಸರು ಈ ಸಮ್ಮೇಳನದಲ್ಲಿ ಭಾಗಿಗಳಾದರು. ವಿಶ್ವ ಸಮ್ಮೇಳನದ ಸವಿ ನೆನಪಿಗಾಗಿ ಆಳ್ವಾಸ್ ನುಡಿಸಿರಿ ವಿರಾಸತ್ ನಡೆದುಬಂದ ದಾರಿ ’ಸಿರಿಹೆಜ್ಜೆ’, ಕರಾವಳಿ ಕರ್ನಾಟಕದ ಕನ್ನಡ ಕಾರ್ಯಗಳ ’ಕರಾವಳಿ ಕರ್ನಾಟಕ ಸಂಪುಟ’, ಸಮಗ್ರ ಕರ್ನಾಟಕದ ಸಂಪುಟ ’ಸಿರಿಗನ್ನಡ’, ಗಡಿನಾಡು-ಹೊರನಾಡು-ವಿದೇಶಗಳಿಂದ ಸಂಬಂಧಿಸಿದ ’ಕನ್ನಡ ವೈಜಯಂತಿ’ ಎಂಬ ನಾಲ್ಕು ಬೃಹತ್ಸಂಪುಟಗಳೊಂದಿಗೆ, ಹತ್ತು ನುಡಿಸಿರಿಗಳ ಅಧ್ಯಕ್ಷರ ಭಾಷಣಗಳ ಹೊತ್ತಗೆಯನ್ನು ಹೊರತಂದೆವು. ರಾಜ್ಯದಲ್ಲಿ, ಹೊರನಾಡಿನಲ್ಲಿ ಹೊರದೇಶದಲ್ಲಿ ಕನ್ನಡಕ್ಕಾಗಿ ದುಡಿದವರನ್ನು ಆಹ್ವಾನಿಸಿದೆವು, ಗೌರವಿಸಿದೆವು. ಹೀಗೆ ನಮ್ಮ ಸಂಕಲ್ಪದ ವಿಶ್ವನುಡಿಸಿರಿ ಸಾಕಾರಗೊಂಡಿತು. ಇದೇ ವರ್ಷ ಆಳ್ವಾಸ್ ವಿರಾಸತ್‌ಗೆ ೧೯ ವರ್ಷಗಳು ಸಂದು ೨೦ನೇ ವರ್ಷವಾಗುವುದರಿಂದ ಜೊತೆಗೂಡಿಸಿ ’ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್೨೦೧೩’ ಎಂದು ನಾಮಕರಣ ಮಾಡಿ ಎರಡು ಬೃಹತ್ ಉತ್ಸವಗಳನ್ನು ಒಟ್ಟಾಗಿ ಆZರಿಸಿದೆವು. ನೂರು ಸಂದೇಶಗಳನ್ನು ಆ ಮೂಲಕ ಸಮಾಜಕ್ಕೆ ನೀಡಿದೆವು.

ಕನ್ನಡ ಮನಸ್ಸು : ಅಂದು-ಇಂದು-ಮುಂದು :

ನಾಲ್ಕು ದಿನಗಳ ಕಾಲ ನಡೆದ ’ ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ – ೨೦೧೩’ ರ ವಿಶ್ವಸಮ್ಮೇಳನದಲ್ಲಿ ’ಕನ್ನಡ ಮನಸ್ಸು ಅಂದು-ಇಂದು-ಮುಂದು’ ಎಂಬ ವಿಚಾರದಲ್ಲಿ ಕನ್ನಡ ನಾಡು-ನುಡಿ ಭೂತಕಾಲದಲ್ಲಿ ಇದ್ದ ಇರವು, ವರ್ತಮಾನದಲ್ಲಿ ಇರುವ ಇರವನ್ನು ಇಟ್ಟುಕೊಂಡು ಭವಿಷ್ಯದಲ್ಲಿ ಆಗುವ ಕನ್ನಡ ತನದ ಬಗೆಗೆ ನಾಲ್ಕು ವೇದಿಕೆಗಳಲ್ಲಿ ಕೃಷಿ, ಜಾನಪದ ವಿದ್ಯಾರ್ಥಿ ಮತ್ತು ಸಾಹಿತ್ಯದ ಚರ್ಚೆಗೆದ ಅವಕಾಶ ಮಾಡಿಕೊಟ್ಟಿತು. ಇಲ್ಲಿ ಚರ್ಚಿತವಾದ ವಿಚಾರಗಳ ಸಂಪು ಟ ’ ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ ವಾಙ್ಮಯ- ಚಿತ್ರಸಂಚಯ’ ಪ್ರಕಟಿಸುತ್ತಿದ್ದೇವೆ. ನಾಲ್ಕು ವೇದಿಕೆಗಳಲ್ಲಿ ನಡೆದ ವಿಚಾರಗಳನ್ನು ಗಾತ್ರ ಮತ್ತು ವ್ಯಾಪ್ತಿಯಿಂದ ಸಮಗ್ರವಾಗಿ ಕಟ್ಟಿಕೊಡುವುದು ಸಾಧ್ಯವಾಗಲಿಲ್ಲ. ಆದರೂ ನಮ್ಮ ಆಶ್ರಯಗಳಿಗೆ ಕುಂದುಂಟಾಗದಂತೆ ಕ್ರೋಢಿಕರಿಸಿ ಕೊಡುವ ಪ್ರಯತ್ನವನ್ನು ಮಾಡಿದ್ದೇವೆ. ಪ್ರಸ್ತುತ ಪ್ರಧಾನ ವೇದಿಕೆಯಾದ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ ಸಾಹಿತ್ಯಕ ಕಾರ್ಯಕ್ರಮಗಳನ್ನು ಬಳಸಿಕೊಂಡು, ಉಳಿದಂತೆ ಜಾನಪದ-ಕೃಷಿ-ವಿದ್ಯಾರ್ಥಿಸಿರಿ ವೇದಿಕೆಗಳ ಸಂಗ್ರಹ ರೂಪದ ಲೇಖನವನ್ನು ಬಳಸಿಕೊಂಡಿದ್ದೇವೆ. ’ಜಾನಪದ ಸಿರಿ-ಅವಲೋಚಕನ’ ಲೇಖನವನ್ನು ಬರೆದುಕೊಟ್ಟ ಡಾ.ಅರುಣ ಕುಮಾರ ಎಸ್.ಆರ್.ಕಾರ್ಕಳ ಮತ್ತು ’ಕೃಷಿಸಿರಿ’ಯ ಅಗತ್ಯ ಛಾಯಾಚಿತ್ರಗಳೊಂದಿಗೆ ಅವಲೋಕನ ಲೇಖನವನ್ನು ಬರೆದುಕೊಟ್ಟ ಚಂದ್ರಹಾಸ ಚಾರ್ಮಾಡಿ ಇವರುಗಳಿಗೆ, ಈ ಕೃತಿ ಸಂಚಿಕೆಯ ಮಹತ್ವದ ಜವಾಬ್ದಾರಿಯನ್ನು ಹೊತ್ತು ನಿಷ್ಠೆಯಿಂದ ದುಡಿದ ಸಂಪಾದಕ ಮಂಡಳಿಗೆ, ನುಡಿಸಿರಿ ಸಮ್ಮೇಳನದ ವಿವಿಧ ಜವಾಬ್ದಾರಿಗಳನ್ನು ಹೊತ್ತು ಪ್ರೀತಿಯಿಂದ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಮಿತಿಗಳ ಪದಾಧಿಕಾರಿಗಳಿಗೆ, ನುಡಿಸಿರಿ ಭಾಷಣಗಳನ್ನು ಧ್ವನಿ ಮುದ್ರಿಸಿ ಬರವಣಿಗೆಯಲ್ಲಿ ಸಹಕರಿಸಿದ ಮಂಗಳೂರು ಆಕಾಶವಾಣಿಯ ನಿರ್ದೇಶಕರಿಗೆ ಮತ್ತು ಎಲ್ಲಾ ತಂತ್ರಜ್ಞರಿಗೆ ಕೃತಿಯಲ್ಲಿ ಬಳಸುವ ಛಾಯಾಚಿತ್ರಗಳನ್ನು ನೀಡಿದ ಛಾಯಾ ಚಿತ್ರಗ್ರಾಹಕರಿಗೆ, ಧ್ವನಿ ಸುರುಳಿಗಳಿಂದ ಲೇಖನಗಳನ್ನು ಅಕ್ಷರ ರೂಪಕ್ಕೆ ಇಳಿಸಿದ ಬಿಎಡ್ ವಿದ್ಯಾರ್ಥಿಗಳಾದ ಶ್ರೀ ಮುದ್ರಾಡಿ, ವನಿತಾ, ಪೂಜಾ, ಹರಿಣಾಕ್ಷಿ, ಸೌಮ್ಯ, ಶೃತಿ ನಾಯಕ್, ರಶ್ಮಿ, ದೀಪಾ ಭಟ್, ಅನಿಲ್ ಜೈನ್, ಪ್ರಜ್ಞಾ, ಭಾನು ಡಿ.ಆರ್, ಕಾವ್ಯಾ, ಸುಮತಿ, ಗೀತಾ, ಭರತ್, ಕಾವ್ಯಾ, ಮಂಜುಳ, ಲತಾ, ಗೀತಾ ಇವರಿಗೆ ನುಡಿಸಿರಿ ಕಛೇರಿಯ ಸಕಲ ಸಿಬ್ಬಂದಿಗೆ, ಈ ಕೃತಿಯನ್ನು ಸುಂದರವಾಗಿ ವಿನ್ಯಾಸಗೊಳಿಸಿ ಮುದ್ರಿಸಿದ ಆಕೃತಿ ಪ್ರಿಂಟ್ಸ್‌ನ ಕಲ್ಲೂರು ನಾಗೇಶ್‌ರವರಿಗೆ, ಹಾಗೂ ಆಳ್ವಾಸ್ ನುಡಿಸಿರಿಗೆ ಬೆಂಬಲವಾಗಿರುವ ಸಮಸ್ತ ಕನ್ನಡಿಗರಿಗೆ ನಾನು ಋಣಿಯಾಗಿದ್ದೇನೆ.

– ಡಾ| ಎಂ.ಮೋಹನ ಆಳ್ವ