Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ಮಾಧ್ಯಮ > ಪ್ರಕಟಣೆ > ನುಡಿಸಿರಿ 2017ರ ವಿಶೇಷಗಳು

ನುಡಿಸಿರಿ 2017ರ ವಿಶೇಷಗಳು

ಕನ್ನಡ ಸಂಸ್ಕೃತಿ ಉಳಿಯುವುದು ಕೇವಲ ಭಾಷೆ ಹಾಗೂ ಸಾಹಿತ್ಯದ ಅಭಿವೃದ್ಧಿಯಿಂದ ಮಾತ್ರ ಸಾಧ್ಯವಿಲ್ಲ. ಸಂಸ್ಕೃತಿಯೆಂಬುದು ನಮ್ಮ ಜೀವನವಿಧಾನದಲ್ಲಿ ಅಡಕವಾಗಿದೆ; ನಮ್ಮ ವಿಶಿಷ್ಟ ಸಂಪ್ರದಾಯಗಳಲ್ಲಿದೆ; ನಮ್ಮ ವಿನೂತನ ಆಚರಣೆಗಳಲ್ಲಿದೆ. ಇದೆಲ್ಲವನ್ನೂ ಉಳಿಸಿ-ಬೆಳೆಸಿದಾಗ ಮಾತ್ರ ಸಂಸ್ಕøತಿಯೆಂಬುದು ಪರಿಪೂರ್ಣ ಸ್ವರೂಪವನ್ನು ಪಡೆದುಕೊಳ್ಳಲು ಸಾಧ್ಯ. ಇಂತಹ ಸಾಧ್ಯತೆಗಳನ್ನು ತೋರಿಸಿಕೊಟ್ಟ ಅಮೋಘ ವೇದಿಕೆ `ಆಳ್ವಾಸ್ ನುಡಿಸಿರಿ’.

ಆಳ್ವಾಸ್ ನುಡಿಸಿರಿಯಲ್ಲಿ ಕೇವಲ ಸಾಹಿತ್ಯ ಸಮ್ಮೇಳನ ಮಾತ್ರವಲ್ಲ; ಇಲ್ಲಿ ನಮ್ಮ ಸಂಸ್ಕೃತಿ – ಸಂಪ್ರದಾಯಗಳಿಗೆ ವಿಶೇಷ ಗೌರವವಿದೆ. ಅದಕ್ಕಾಗಿಯೇ ಇದು `ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ’. ಈ ಸಮ್ಮೇಳನವು ತನ್ನ ಹೊಸತನಗಳಿಗೆ, ವೈವಿಧ್ಯತೆಗಳಿಗೆ, ಹಲವಾರು ವಿಶಿಷ್ಟತೆಗಳಿಗೆ ಹೆಸರುವಾಸಿಯಾಗಿದೆ. ಪ್ರತಿ ವರ್ಷವೂ ಹೊಸ ಪ್ರಯೋಗಗಳ ಜೊತೆಗೆ ಜನರ ಮುಂದೆ ಬರುವ ಆಳ್ವಾಸ್ ನುಡಿಸಿರಿ ಈ ಭಾರಿ ಮತ್ತಷ್ಟು ಸೃಜನಶೀಲವಾಗಿ, ಕಲಾತ್ಮಕವಾಗಿ ಕನ್ನಡಾಭಿಮಾನಿಗಳ ಮುಂದೆ ಬಂದಿದೆ.

ಆಳ್ವಾಸ್ ಕೃಷಿಸಿರಿ

ಇಂದಿನ ಪೀಳಿಗೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂಬ ದೂರುಗಳ ಮಧ್ಯೆ ಯುವಕರನ್ನು ಮತ್ತೆ ಮಣ್ಣಿನತ್ತ ಸೆಳೆಯುವ ಆಶಯ ಕೃಷಿಸಿರಿಯದ್ದು. ಆಳ್ವಾಸ್ ಕಾಲೇಜಿನ ಆವರಣದ ಆರು ಎಕರೆ ಪ್ರದೇಶದಲ್ಲಿ ಕೃಷಿಸಿರಿ ನಡೆಯುತ್ತಿದ್ದು, ಇದರಲ್ಲಿ ಎರಡು ಎಕರೆ ಪ್ರದೇಶದಲ್ಲಿ ಸುಧಾರಿತ ಮತ್ತು ರಾಸಾಯನಿಕ ರಹಿತ ಕೃಷಿಭೂಮಿಯನ್ನು ಸಿದ್ಧಪಡಿಸಲಾಗಿದೆ. ಇದರ ಜೊತೆಗೆ ವಿವಿಧ ಸಸ್ಯ, ಪ್ರಾಣಿ ಹಾಗೂ ಪಕ್ಷಿಗಳ ಪ್ರದರ್ಶನವಿದ್ದು, ಪ್ರಾಣಿಗಳ ಪ್ರತಿಕೃತಿಯನ್ನು ಸಿದ್ಧಪಡಿಸಲಾಗಿದೆ. ಜೊತೆಗೆ 250ಕ್ಕೂ ಮಿಕ್ಕಿದ ಕೃಷಿ ಮಳಿಗೆಗಳನ್ನು ತೆರೆಯಲಾಗಿದೆ.

 

ಕೃಷಿ ಆವರಣದ ಆಕರ್ಷಣೆಗಳು

ವಿದೇಶೀ ಪಕ್ಷಿಗಳು, ಬೋನ್ಸಾಯ್ ಕೃಷಿ, ವೈವಿಧ್ಯಮಯ ಪುಷ್ಪಗಳು, ನ್ಯೂಜಿಲ್ಯಾಂಡ್ ಮೂಲದ ಬಣ್ಣದ ಸಸ್ಯಗಳು, 44 ತಳಿಗಳ ಬಿದಿರು ಗಿಡಗಳು, ಕೃಷಿ ಸಂಬಂಧೀ ಗುಡಿಕೈಗಾರಿಕೆಗಳು, ಜಾಣುವಾರು ಪ್ರದರ್ಶನ, ಓಟದ ಕೋಣಗಳ ಸೌಂದರ್ಯ ಸ್ಪರ್ಧೆ,  ಬೆಕ್ಕುಗಳ ಪ್ರದರ್ಶನ, ಶ್ವಾನ ಪ್ರದರ್ಶನ, ಓಟಗಾರರ ದೇಹ ಸೌಣದರ್ಯ ಸ್ಪರ್ಧೇ, ಮತ್ಸ್ಯ ಪ್ರದರ್ಶನ, 500ಕ್ಕಕೂ ಮಿಕ್ಕಿದ ಸಮುದ್ರ ಚಿಪ್ಪುಗಳ ಪ್ರದರ್ಶನ ಕೃಷಿಸಿರಿಯಲ್ಲಿ ನಡೆಯಲಿದೆ.

ಈ ವಿಶೇಷ ಆಕರ್ಷಣೆಗಳ ಮೂಲಕ ಯುವ ಪೀಳಿಗೆಯನ್ನು ಮತ್ತೆ ಮಣ್ಣಿನ ಸಂಸ್ಕೃತಿಯೊಂದಿಗೆ ಬೆಸೆಯುವ ಪ್ರಯತ್ನ ಮಾಡಲಾಗುತ್ತಿದೆ.

ಆಳ್ವಾಸ್ ಚುಕ್ಕಿಚಿತ್ರ ಸಿರಿ

ಕನ್ನಡ ಸಂಸ್ಕೃತಿ ವಿವಿಧ ಕಲಾ ಪ್ರಕಾರಗಳೊಂದಿಗೆ ಬೆಸೆದುಕೊಂಡಿದೆ. ಅಂತಹ ವಿಶಿಷ್ಟ ಕಲೆಯನ್ನು ಪ್ರದರ್ಶಿಸುವ ಪ್ರಯತ್ನ ಈ ಬಾರಿ ಆಳ್ವಾಸ್ ನುಡಿಸಿರಿಯಲ್ಲಿ ನಡೆಯಲಿದೆ. ಚುಕ್ಕಿಚಿತ್ರ ರಚನೆ ಹಾಗೂ ಪ್ರದರ್ಶನ ಈ ಬಾರಿ ನಡೆಯಲಿದ್ದು, ಹಲವಾರು ಕಲಾವಿದರು ಇದರಲ್ಲಿ ಭಾಗವಹಿಸಲಿದ್ದಾರೆ.

ಆಳ್ವಾಸ್ ಗಾಳಿಪಟಸಿರಿ

ಮೊಬೈಲ್ ಗೇಮ್‍ಗಳ ಮಧ್ಯೆ ಮರೆಯಾಗುತ್ತಿರುವ ದೇಸೀ ಕ್ರೀಡೆ ಗಾಳಿಪಟವನ್ನು ಹಾರಿಸುವುದು. ಗ್ರಾಮೀಣ ಭಾಗಗಳಲ್ಲಿ ಹಬ್ಬದ ಸಮಯಗಳಲ್ಲಿ ಮಾತ್ರ ಆಡುವ ಈ ಕ್ರೀಡೆಯನ್ನು ಮತ್ತೆ ಮುನ್ನೆಲೆಗೆ ತರುವ ಯತ್ನ ಆಳ್ವಾಸ್ ಗಾಳಿಪಟಸಿರಿಯಲ್ಲಿ ನಡೆಯುತ್ತಿದೆ. ಡಿಸೆಂಬರ್ 2 ಮತ್ತು 3ರದು ನಡೆಯಲಿರುವ ಈ ಗಾಳಿಪಟೋತ್ಸವ ಯುವಕರ ಆಕರ್ಷಣೆಯ ಕೇಂದ್ರಬಿಂದುವಾಗಲಿದೆ.

 

ಆಳ್ವಾಸ್ ಉದ್ಯೋಗಸಿರಿ

ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ವಿಶೇಷ ಅವಕಾಶ ಕಲ್ಪಿಸುವ ಆಶಯದೊಂದಿಗೆ ಈ ಬಾರಿ ಆಳ್ವಾಸ್ ಉದ್ಯೋಗಸಿರಿಯನ್ನು ಆಯೋಜಿಸಲಾಗಿದೆ. 1ರಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿಯೇ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಅರ್ಹತೆಗನುಗುಣವಾಗಿ ಉದ್ಯೋಗಾವಕಾಶಗಳನ್ನು ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಡಿಸೆಂಬರ್ 3ರಂದು ಉದ್ಯೋಗಸಿರಿ ನಡೆಯಲಿದ್ದು 100ಕ್ಕೂ ಹೆಚ್ಚು ಕಂಪನಿಗಳು ಈ ಮೇಳದಲ್ಲಿ ಭಾಗವಹಿಸುತ್ತಿವೆ.

ಆಳ್ವಾಸ್ ರಂಗಸಿರಿ

ಕನ್ನಡ ಭಾಷೆಯ ಅಭಿವೃದ್ಧಿಯಲ್ಲಿ ರಂಗಭೂಮಿಯ ಪಾತ್ರ ಬಹು ಮಹತ್ವದ್ದು. ಜೊತೆಗೆ ಸಾಕಷ್ಟು ಸವಾಲುಗಳ ಜೊತೆಗೆ ಮುನ್ನುಗ್ಗುತ್ತಿರುವ ರಂಗಭೂಮಿಗೆ ಪ್ರಾಧಾನ್ಯತೆ ಒದಗಿಸಲು ಆಳ್ವಾಸ್ ರಂಗಸಿರಿಯನ್ನು ನಡೆಸಲಾಗುತ್ತಿದೆ. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ `ಧಾಂ ಧೂಂ ಸುಂಟರಗಾಳಿ’, ಅನನ್ಯ ಬೆಂಗಳೂರು ಪ್ರಸ್ತುತಿಯ `ಅತೀತ’, ನಟನ ಮೈಸೂರು ಪ್ರಸ್ತುತಿಯ `ಸುಭದ್ರ ಕಲ್ಯಾಣ’, ಸಂಗಮ ಕಲಾವಿದರು `ವಾಲಿವಧೆ’, ಜಿಪಿಐಇಆರ್ ರಂಗತಂಡದ `ಸಿರಿ’ ನಾಟಕಗಳು ಪ್ರದರ್ಶನಗೊಳ್ಳಲಿವೆ.

 

 

ಆಳ್ವಾಸ್ ಸಿನಿಸಿರಿ

ಕನ್ನಡ ಭಾಷೆ, ಸಂಸ್ಕೃತಿಗಳ ಮೇಲೆ ಸಿನಿಮಾ ಮಾಧ್ಯಮ ಪ್ರಭಾವ ಹೆಚ್ಚಿನದು. ಅದಕ್ಕಾಗಿ ಸದಭಿರುಚಿ ಹೊಂದಿದ, ಅತ್ಯುತ್ತಮ ಚಿತ್ರಗಳನ್ನು ಸಿನಿಸಿರಿಯಲ್ಲಿ ಪ್ರದರ್ಶಿಸಲಾಗುತ್ತಿದೆ.  ಕ್ಯಾಂಪಸ್‍ನ ಪುಟ್ಟಣ್ಣ ಕಣಗಾಲ್ ವೇದಿಕೆಯಲ್ಲಿ ನವೆಂಬರ್ 30ರಿಂದ ನಾಲ್ಕು ದಿನಗಳ ಕಾಲ ಚಿತ್ರಪ್ರದರ್ಶನ ನಡೆಯಲಿದೆ. ಬೂತಯ್ಯನ ಮಗ ಅಯ್ಯು, ತಿಥಿ, ಮಾತಾಡ್ ಮಾತಾಡ್ ಮಲ್ಲಿಗೆ, ಶರಪಂಜರ,ಕೇರ್ ಆಫ್ ಫುಟ್‍ಪಾತ್, ಚಿಗುರಿದ ಕನಸು, ಬೆಟ್ಟದ ಹೂವು, ಚಿನ್ನಾರಿ ಮುತ್ತ, ಸಿಂಹದ ಮರಿ ಸೈನ್ಯ, ಪುಟ್ಟಕ್ಕನ ಹೈವೇ, ಭಾರತ್ ಸ್ಟೋರ್ಸ್, ಕಿರಗೂರಿನ ಗಯ್ಯಾಳಿಗಳು ಪ್ರದರ್ಶನಗೊಳ್ಳಲಿರುವ ಚಿತ್ರಗಳು.

ಆಳ್ವಾಸ್ ವಿಜ್ಞಾನಸಿರಿ

ಇದೇ ಮೊದಲ ಬಾರಿಗೆ ಅಕ್ಷರ ಉತ್ಸವದಲ್ಲಿ ವಿಜ್ಞಾನಕ್ಕೆ ಮಹತ್ವ ನೀಡಲಾಗಿದೆ. ಯುವವಿಜ್ಞಾನಿ ದಿ.ಹರೀಶ್ ಭಟ್‍ರ ಸ್ಮರಣಾರ್ಥ ನಡೆಯುತ್ತಿರುವ ಆಳ್ವಾಸ್ ವಿಜ್ಞಾನಸಿರಿಯಲ್ಲಿ ಇಸ್ರೊ, ಅಗಸ್ತ್ಯ, ಇನ್ಸೆಫ್, ನಿಟ್ಟೆ ಇಂಜಿನಿಯರಿಂಗ್ ಕಾಲೇಜು, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜುಗಳು ಸಿದ್ಧಪಡಿಸಿದ ವಿಜ್ಞಾನ ಮಾದರಿಗಳ ಪ್ರಾತ್ಯಕ್ಷಿಕೆ ನಡೆಯಲಿದೆ.

ಆಳ್ವಾಸ್ ಚಿತ್ರಕಲಾ ಮೇಳ

ಪ್ರಸಿದ್ಧ ಕಲಾವಿದರು ಸಿದ್ಧಪಡಿಸಿದ ವರ್ಣಚಿತ್ರಗಳು, ತೈಲಚಿತ್ರಗಳ ಪ್ರದರ್ಶನ ಚಿತ್ರಕಲಾ ಮೇಳದಲ್ಲಿ ನಡೆಯಲಿದೆ.

ದೇಸೀ ಕ್ರೀಡೆಗಳ ಪ್ರದರ್ಶನ

ಯುವಕರನ್ನೇ ಗಮನಟ್ಟುಕೊಂಡು ನಡೆಯುತ್ತಿರುವ ವಿಶೇಷ-ದೇಸೀ ಕ್ರೀಡೆಗಳ ಪ್ರದರ್ಶನ. ಕುಸ್ತಿ ಹಾಗೂ ದೇಹಧಾಡ್ರ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ರೋಚಕ ಪಂದ್ಯಗಳು ಆಕರ್ಷಣೆಯ ಕೇಂದ್ರಬಿಂದುವಾಗಲಿವೆ.

ಪುಸ್ತಕಮಳಿಗೆಗಳು

ಈ ರಾಷ್ಟ್ರೀಯ ನಾಡು ನುಡಿ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳು ವಿಶೇಷ ಆಕಷಣೆಯಾಗಿರಲಿವೆ. 350ಕ್ಕೂ ಮಿಕ್ಕಿದ ಪುಸ್ತಕ ಮಳಿಗೆಗಳು ಈ ಬಾರಿ ನುಡಿಸಿರಿಯಲ್ಲಿರಲಿದ್ದು, ಸಾಹಿತ್ಯಾಸಕ್ತರಿಗೆ ಭೂರಿ ಭೋಜನವೊದಗಿಸಲಿವೆ.