Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ಮಾಧ್ಯಮ > ಪ್ರಕಟಣೆ > “ಆಳ್ವಾಸ್ ನುಡಿಸಿರಿ”: ಉದ್ಘಾಟನೆ | ಡಾ. ವೀಣಾ ಶಾಂತೇಶ್ವರ

“ಆಳ್ವಾಸ್ ನುಡಿಸಿರಿ”: ಉದ್ಘಾಟನೆ | ಡಾ. ವೀಣಾ ಶಾಂತೇಶ್ವರ

Inauguration of Nudisiri 2015“ಆಳ್ವಾಸ್ ನುಡಿಸಿರಿ”: ಉದ್ಘಾಟನೆ
26 ನವೆಂಬರ್, 2015

ಡಾ. ವೀಣಾ ಶಾಂತೇಶ್ವರ
`ಮಂತ್ರಾಲಯ’
ಮೊದಲನೆಯ ತಿರುವು, ಸಪ್ತಾಪುರ, ಧಾರವಾಡ – 580 001

ಎಲ್ಲರಿಗೂ ನಮಸ್ಕಾರ.
ಇಂದು ಸಂಜೆಯ ಈ ಶುಭಮುಹೂರ್ತದಲ್ಲಿ `ಆಳ್ವಾಸ್ ನುಡಿಸಿರಿ 2015’ರ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನದ ಕಾರ್ಯಕ್ರಮವನ್ನು ಉದ್ಘಾಟಿಸುವ ಅವಕಾಶ ನನಗೆ ದೊರೆತದ್ದು ಅನೇಕ ಕಾರಣಗಳಿಂದ ಅತ್ಯಂತ ವಿಶಿಷ್ಟ ಅನುಭವವಾಗಿ ಬಹುಕಾಲ ನನ್ನ ನೆನಪಿನಲ್ಲಿ ಉಳಿಯುವಂತಹದಾಗಿದೆ. ಯಾಕೆಂದರೆ, ಮೊದಲನೆಯದಾಗಿ, ಈ ಮೂಡುಬಿದರೆಯ ಸ್ಥಳ ಮಹಾತ್ಮೆಯೇ ವಿಶಿಷ್ಟವಾದದ್ದು, ಅನನ್ಯವಾದದ್ದು. ಇಲ್ಲಿ ಜೈನರ ಮಠಗಳು – ಬಸದಿಗಳು ಇವೆ. ಗೌರಿ – ಈಶ್ವರ -ವೆಂಕಟರಮಣ ಇತ್ಯಾದಿ ಹಿಂದೂ ದೇವತೆಗಳ ಮಂದಿರಗಳಿವೆ. ಅಲ್ಲದೆ ಮಸೀದಿಗಳೂ ಇವೆ, ಚರ್ಚ್‍ಗಳೂ ಇವೆ. ಸರ್ವಧರ್ಮ ಸಹಿಷ್ಣುತೆಗೆ- ಸೌಹಾರ್ದಕ್ಕೆ- ಸಹಬಾಳ್ವೆಗೆ ಇಡಿಯ ದೇಶಕ್ಕೇ, ಜಗತ್ತಿಗೇ, ಒಂದು ಸಾಂಕೇತಿಕ ಸಂದೇಶ ನೀಡುತ್ತಿರುವಂತಿದೆ ಈ ಊರು. ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ನಾವೆಲ್ಲರೂ ಈ ಸಮನ್ವಯ ಸಂದೇಶದ ಅರ್ಥವನ್ನು ತಿಳಿದುಕೊಳ್ಳುವುದು ಇಂದಿನ ಅವಶ್ಯಕತೆಯಾಗಿದೆ. ಎರಡನೆಯದಾಗಿ, ಹನ್ನೆರಡು ವರ್ಷಗಳಷ್ಟು ಹಿಂದೆ ನಿರ್ದಿಷ್ಟ
ವಾದ ಸದುದ್ದೇಶಗಳೊಂದಿಗೆ ಪ್ರಾರಂಭವಾಗಿ, ವರ್ಷದಿಂದ ವರ್ಷಕ್ಕೆ ಹೆಚ್ಚಿನ ಅರ್ಥಪೂರ್ಣತೆಯನ್ನು, ವಿಷಯವೈವಿಧ್ಯತೆಯನ್ನು, ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುತ್ತ, ಮೈಗೂಡಿಸಿಕೊಳ್ಳುತ್ತ ಸಾಗಿ ಬಂದಿರುವ ಆಳ್ವಾಸ್ ನುಡಿಸಿರಿಯ ಸಾಧನೆ ಬೆರಗುಗೊಳಿಸುವಂಥದ್ದು. ಕೇವಲ ವಿದ್ವಾಂಸರಿಗೆ ವೇದಿಕೆಯಾಗದೆ, ನಾಡಿನಾದ್ಯಂತದ ಸಹೃದಯೀ ಸಾಮಾನ್ಯ ಜನರನ್ನು, ವಿಶೇಷವಾಗಿ ಯುವಜನಾಂಗವನ್ನು, ಸೆಳೆಯುತ್ತಿರುವ ಈ ಕಾರ್ಯಕ್ರಮ ದೇಶಕ್ಕೇ ಮಾದರಿಯಾದದ್ದು. ಮೂರನೆಯದಾಗಿ, ಒಬ್ಬ ವ್ಯಕ್ತಿಗೆ ಗಿisioಟಿ ಅನ್ನುವುದು ಇದ್ದರೆ, ಜೊತೆಗೆ ಕರ್ತೃತ್ವಶಕ್ತಿ-ಛಲ-ನೈತಿಕ ಧೈರ್ಯವೂ ಇದ್ದರೆ, ಆ ವ್ಯಕ್ತಿಯೊಂದಿಗೆ ಹಲವಾರು ಸಮಾನಮನಸ್ಕರು ಕೈಜೋಡಿಸಿ ಹೆಗಲುಕೊಟ್ಟು ನಿಂತರೆ, ಇವರೆಲ್ಲರ ಒಟ್ಟು ದೃಷ್ಟಿಕೋನ ಇತ್ಯಾತ್ಮಕವಾಗಿದ್ದರೆ, ಪವಾಡಗಳನ್ನೇ ಸಾಧಿಸಬಹುದು- ಅನ್ನುವುದನ್ನು ಇಲ್ಲಿ ಡಾ. ಮೋಹನ ಆಳ್ವ ಹಾಗೂ ಸಂಗಡಿಗರು ಸಿದ್ಧಮಾಡಿ ತೋರಿಸಿದ್ದಾರೆ. ನಾಲ್ಕನೆಯದಾಗಿ ಇಲ್ಲಿ ಪ್ರತಿವರ್ಷ ನಡೆಯುವ ನುಡಿಸಿರಿ ಹಾಗೂ ವಿರಾಸತ್ ಎಂಬ ಎರಡು ಬೃಹತ್ ಕಾರ್ಯಕ್ರಮಗಳು ಸಾಹಿತ್ಯ ಹಾಗೂ ಸಂಸ್ಕøತಿಗೆ ಸಂಬಂಧಪಟ್ಟಂತಹವು. ಸಾಹಿತ್ಯ-ಸಂಗೀತ-ಹಾಗೂ ಇತರ ಲಲಿತ ಕಲೆಗಳು ಮನುಷ್ಯನ ವ್ಯಕ್ತಿತ್ವವನ್ನು ಪರಿಷ್ಕರಿಸುವ, ಅವನಲ್ಲಿಯ ದುಷ್ಟಶಕ್ತಿಗಳನ್ನು ನಾಶಗೊಳಿಸಿ ಮನಸ್ಸನ್ನು ಪರಿಶುದ್ಧಗೊಳಿಸುವ, ಮತ್ತು ಅವನನ್ನು ದೈವತ್ವದೆಡೆಗೆ ಕರೆದೊಯ್ಯುವ ಸಾಧನಗಳಾಗಿವೆ. ಇವತ್ತು ಎಲ್ಲಾ ಕಡೆ ತಾಂಡವವಾಡುತ್ತಿರುವ ಅಶಾಂತಿ, ಅಸಹನೆ, ಅಸಹಿಷ್ಣುತೆ ಇತ್ಯಾದಿ ಅನಿಷ್ಟಗಳನ್ನು ಸಮರ್ಥವಾಗಿ ಎದುರಿಸಿ ಹಿಮ್ಮೆಟ್ಟಿಸಲು ಅವಶ್ಯವಿರುವ ಮಾನಸಿಕ ಸ್ಥೈರ್ಯ ನಮಗೆ ಸಾಹಿತ್ಯ-ಸಂಗೀತ-ಕಲೆ ಇವುಗಳಿಂದಲೇ ಸಿಗಬೇಕು. ಈ ನಿಟ್ಟಿನಲ್ಲಿಯೂ ಈ ಕಾರ್ಯಕ್ರಮಗಳು ಮುಖ್ಯವೆನಿಸುತ್ತವೆ. ಈ ಎಲ್ಲ ಕಾರಣಗಳಿಗಾಗಿ ಇವತ್ತು ಈ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವುದು ನನಗೊಂದು ಅಪರೂಪದ ಅನುಭವ. ಮತ್ತು ಇವೇ ಕಾರಣಗಳಿಗಾಗಿ, ಈ ನುಡಿಸಿರಿ ಕಾರ್ಯಕ್ರಮವೇ ನಮ್ಮ ನಾಡಿನಲ್ಲಿ ಹೊಸತನದ ಹುಡುಕಾಟದ (ಕರ್ನಾಟಕ-ಹೊಸತನದ ಹುಡುಕಾಟ ಎಂಬುದು ಈ ಸಲದ ಪ್ರಧಾನ ಪರಿಕಲ್ಪನೆಯಾಗಿದೆ) ಜೀವಂತ ಸಂಕೇತವಾಗಿದೆ ಎಂದು ಹೇಳಬಹುದು.
ಇಂದಿನಿಂದ ನಾಲ್ಕುದಿನ ನಡೆಯಲಿರುವ ಗೋಷ್ಠಿಗಳಲ್ಲಿ ಸಾಹಿತ್ಯ, ಶಿಕ್ಷಣ, ಮಾಧ್ಯಮ ಕ್ಷೇತ್ರಗಳಲ್ಲಿ ಹೊಸತನದ ಹುಡುಕಾಟದ ಬಗ್ಗೆ ಚಿಂತನೆ ನಡೆಯಲಿದೆ. ಜೊತೆಗೆ, ಇವತ್ತು ನಮ್ಮ ನಾಡಿನ ಜ್ವಲಂತ ಸಮಸ್ಯೆಯಾಗಿ ಜನಸಾಮಾನ್ಯರ ನೆಮ್ಮದಿಯನ್ನೇ ಕಲಕುತ್ತಿರುವ ‘ನೀರಿನ ಬಳಕೆ ಮತ್ತು ಹಂಚಿಕೆ’ಯ ವಿಷಯವೂ ಇಲ್ಲಿ ಪ್ರಸ್ತಾಪವಾಗಲಿದೆ. ಆಯಾ ವಿಷಯಗಳ ತಜ್ಞರು ತಮ್ಮ ಅಭಿಪ್ರಾಯಗಳನ್ನು- ಪರಿಹಾರಗಳನ್ನು- ಸಲಹೆಸೂಚನೆಗಳನ್ನು ಮಂಡಿಸಲಿದ್ದಾರೆ. ನಾನು ವಿಮರ್ಶಕಿಯಲ್ಲ, ವಿಷಯತಜ್ಞಳಲ್ಲ, ರಾಜಕಾರಣಿಯಂತೂ ಮೊದಲೇ ಅಲ್ಲ. ಒಬ್ಬ ಲೇಖಕಿಯಾಗಿ, ಶಿಕ್ಷಕಿಯಾಗಿ, ನಾಡಿನ ಒಬ್ಬ ಪ್ರಜ್ಞಾವಂತ ನಾಗರಿಕಳಾಗಿ, ಈ ವಿಷಯಗಳ ಬಗ್ಗೆ ನನ್ನ ಸರಳ ವಿಚಾರಗಳನ್ನು ಸರಳ ರೀತಿಯಲ್ಲಿ ಸಂಕ್ಷಿಪ್ತವಾಗಿ ನಿಮ್ಮ ಮುಂದೆ ಇಡಬಯಸುತ್ತೇನೆ.
ಹೊಸದಕ್ಕಾಗಿ ಹುಡಕಾಟ ಅನ್ನುವುದು ಮನುಷ್ಯನ ಮೂಲಭೂತ ಸ್ವಭಾವ. ಸಾಹಿತ್ಯದಲ್ಲಷ್ಟೇ ಅಲ್ಲ, ವಿಜ್ಞಾನ-ಕೃಷಿ-ಕೈಗಾರಿಕೆ-ಶಿಕ್ಷಣ ಎಲ್ಲಾ ಕ್ಷೇತ್ರಗಳಲ್ಲಿಯೂ ಎಲ್ಲಾ ಕಾಲಗಳಲ್ಲಿಯೂ ಕ್ರಿಯಾಶೀಲ ಮನಸ್ಸುಗಳು ಹೊಸತನಕ್ಕಾಗಿ, ಭಿನ್ನತೆಗಾಗಿ, ಅನನ್ಯತೆಗಾಗಿ, ಅಸ್ಮಿತೆಗಾಗಿ, ಹುಡುಕಾಟ ನಡೆಸಿಯೇ ಇರುತ್ತವೆ. ಸಾಹಿತ್ಯದೊಳಗಂತೂ ‘ಹಳೆಯಸಾಹಿತ್ಯ’, ‘ಆಧುನಿಕ ಸಾಹಿತ್ಯ’ ಅಂತನ್ನುವುದು ವಿಶ್ಲೇóಷಣೆಯ ಅನುಕೂಲಕ್ಕಾಗಿ ನಾವು ಕೊಟ್ಟಿರುವ ಕಾಲಸೂಚಕ ವಿಶೇಷಣಗಳಷ್ಟೇ. ಪ್ರತಿಯೊಂದು ಕಾಲಘಟ್ಟದ ಶ್ರೇಷ್ಠ ಸಾಹಿತ್ಯವೂ ಆ ಕಾಲದ ಯುಗಧರ್ಮವನ್ನು, Sಠಿiಡಿiಣ oಜಿ ಣhe ಂge ಅನ್ನು ಪ್ರತಿಪಾದಿಸುತ್ತದೆ. ಮತ್ತು ಆ ಮೂಲಕ ಸಾರ್ವಕಾಲಿಕ ಸತ್ಯಗಳನ್ನೂ ಮೌಲ್ಯಗಳನ್ನೂ ಪ್ರತಿಪಾದಿಸುತ್ತದೆ. ನಾವು ಇವತ್ತಿನ ಸಾಹಿತ್ಯದಲ್ಲಿ ಉದಾರೀಕರಣ-ಸ್ವಾತಂತ್ರ್ಯ-ಸಮಾನತೆ ಇತ್ಯಾದಿ ಮೌಲ್ಯಗಳ ಅನ್ವೇಷಣೆ ಹೊಸದು ಅನ್ನುತ್ತೇವೆ. ಆದರೆ ಗುರುನಾನಕ ಮತ್ತು ಸಂತ ಕಬೀರದಾಸರ ಸಾಹಿತ್ಯದಲ್ಲಿಯೂ ನಾವು ಇದನ್ನೇ ಕಾಣುತ್ತೇವೆ. ಮಹಾತ್ಮಾ ಗಾಂಧಿ ಮತ್ತು ಅಂಬೇಡ್ಕರ ಅವರ ಬರವಣಿಗೆ ಯಲ್ಲೂ ಇದನ್ನೇ ಕಾಣುತ್ತೇವೆ. ಒಂದು ಶ್ರೇಷ್ಠ ಸಾಹಿತ್ಯಕೃತಿ ತನ್ನ ಕಾಲದಲ್ಲಿ ಯಾವತ್ತೂ ಹೊಸತನದ ಹುಡುಕಾಟವೇ ಆಗಿರುತ್ತದೆ. ವಿಮರ್ಶೆಯಲ್ಲೂ ಅಷ್ಟೇ. ಕೃತಿ ಹಳೆಯದೇ ಆಗಿದ್ದರೂ ವಿಮರ್ಶಕರ ದೃಷ್ಟಿಕೋನ ಹಾಗೂ ಮಾನದಂಡಗಳು ಬದಲಾಗುತ್ತ ಸಾಗುತ್ತವೆ. ಹೀಗಾಗಿ ಒಂದು ಒಳ್ಳೆಯ ಕೃತಿಯ ಮೌಲ್ಯಮಾಪನ ನಿರಂತರವಾಗಿ ಸಾಗುವ ಸೃಜನಾತ್ಮಕ ಪ್ರಕ್ರಿಯೆಯಾಗುತ್ತದೆ. ಆ ಮೂಲಕ ಹೊಸ-ಹೊಸ ಒಳನೋಟಗಳನ್ನು ನೀಡುತ್ತ ಸಾಗುತ್ತದೆ.
ಜಾಗತೀಕರಣದ ಇವತ್ತಿನ ಸಂದರ್ಭದಲ್ಲಿ ನಾವು ಸಮಕಾಲೀನ ಜಾಗತಿಕ ಸಾಹಿತ್ಯದ ಒಲವುಗಳನ್ನು ಗಮನಿಸಿದಾಗ ನಮಗೆ ಕೆಲವು ಮುಖ್ಯ ಅಂಶಗಳು ಕಂಡುಬರುತ್ತವೆ. ಮತ್ತು ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯದಲ್ಲಿಯೂ ಈ ಹೊಸ ಒಲವುಗಳು ಪ್ರವೇಶಿಸಿದ್ದನ್ನು ಕಾಣಬಹುದು: 1. ಜಗತ್ತಿನ ಎಲ್ಲಾ ಭಾಷೆಗಳ ಸಾಹಿತ್ಯಕೃತಿಗಳ ವಿವರ ವಾದ ಅಧ್ಯಯನ; 2. ಭಿನ್ನ-ಭಿನ್ನ ಸಂಸ್ಕøತಿಗಳು ಭಿನ್ನ-ಭಿನ್ನ ಸಾಹಿತ್ಯ ಪ್ರಕಾರಗಳನ್ನು ರೂಪಿಸುವ-ಬೆಳೆಸುವ ವಿಧಾನಗಳ ಪರಿಶೀಲನೆ; 3. ಜಗತ್ತಿನ ಶ್ರೇಷ್ಠ ಸಾಹಿತಿಗಳ ಶ್ರೇಷ್ಠ ಕೃತಿಗಳ-ವಿಚಾರಗಳ ತುಲನೆ; ಮತ್ತು ಮುಖ್ಯವಾಗಿ 4. ಅನುವಾದ, ರೂಪಾಂತರ, ಮರುಬರವಣಿಗೆ ಇತ್ಯಾದಿ ಮೂಲಕ ಜಗತ್ತಿನ ಎಲ್ಲ ಭಾಷೆಗಳ ಶ್ರೇಷ್ಠ ಸಾಹಿತ್ಯಕೃತಿಗಳ ವಿಚಾರ-ವಿನಿಮಯ. ಹೀಗೆ ಈ ನಾಲ್ಕು ಪ್ರಕ್ರಿಯೆಗಳನ್ನು ಒಳಗೊಂಡ ಸಾಹಿತ್ಯಿಕ ಕೊಡುಕೊಳ್ಳುವಿಕೆಯ ಮೂಲಕ ಜಗತ್ತನ್ನೇ ಭಾವನಾತ್ಮಕವಾಗಿ ಒಂದುಗೂಡಿಸುವ ಪ್ರಯತ್ನ ಹೊಸ ಸಾಹಿತ್ಯದಲ್ಲಿ ಎದ್ದು ಕಾಣುತ್ತದೆ.
ಸಾಹಿತ್ಯದಂತೆ ಶಿಕ್ಷಣಕ್ಷೇತ್ರದಲ್ಲಿಯೂ ಈಗ ಅನೇಕ ಹೊಸ ಪ್ರಯೋಗಗಳಾಗುತ್ತಿವೆ. ಆದರೆ ಸಮಕಾಲೀನ ಅವಶ್ಯಕತೆಗಳನ್ನು ಪೂರೈಸುವ, ಸವಾಲುಗಳನ್ನು ಎದುರಿಸುವ, ಹಾಗೂ ಗಟ್ಟಿ ವ್ಯಕ್ತಿತ್ವದ ವಿದ್ಯಾರ್ಥಿಗಳನ್ನು ನಿರ್ಮಾಣ ಮಾಡುವ ಯಶಸ್ವೀ ಶಿಕ್ಷಣಪದ್ಧತಿಯನ್ನು ನಾವಿನ್ನೂ ಹುಡುಕಿಕೊಳ್ಳಬೇಕಾಗಿದೆ. ಇತ್ತೀಚೆಗೆ ಫಿನ್‍ಲೆಂಡ್ ದೇಶದ ಸುಧಾರಿತ ಶಿಕ್ಷಣ ನೀತಿಗಳ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಫಿನ್‍ಲೆಂಡ್ ಒಂದು ಪುಟ್ಟ ದೇಶ. ಅಲ್ಲಿನ ಶಾಲೆಗಳಲ್ಲಿ ಟ್ಯೂಶನ್ ಫೀನೇ ಇಲ್ಲ. ಜ್ಞಾನಾಭಿವೃದ್ಧಿ-ಸುಭದ್ರ ಆರ್ಥಿಕತೆ-ಸಂಶೋಧನೆ ಇವುಗಳಿಗಾಗಿ ಅತಿಹೆಚ್ಚು ಹೂಡಿಕೆ ಮಾಡುವ ಆ ದೇಶದಲ್ಲಿ ವ್ಯವಸ್ಥಿತ ಕಾರ್ಯನೀತಿ ಜಾರಿಗೊಳಿಸಿ ಅತ್ಯುತ್ತಮ ಶಿಕ್ಷಣ ವ್ಯವಸ್ಥೆ ರೂಪಿಸಲಾಗಿದೆ. ವಿದ್ಯಾರ್ಥಿಗಳ ಸರ್ವತೋಮುಖ ಕಲ್ಯಾಣಕ್ಕಾಗಿ ಏನೇನು ಅವಶ್ಯವೋ ಅದನ್ನೆಲ್ಲಾ ವಿದ್ಯಾರ್ಥಿಜೀವನದುದ್ದಕ್ಕೂ ಪೂರೈಸುತ್ತ ಹೋಗುವುದು ಶಿಕ್ಷಕರ ಜವಾಬ್ದಾರಿ. ಮತ್ತು ಯಾರೂ ಈ ಶಿಕ್ಷಕರನ್ನು ಪ್ರಶ್ನಿಸುವುದಿಲ್ಲ. ಅವರ ಮೇಲ್ವಿಚಾರಣೆ ಮಾಡುವುದಿಲ್ಲ. ಇಲ್ಲಿ ಶಿಕ್ಷಣದ ಮುಖ್ಯ ತಳಹದಿ ವಿಶ್ವಾಸ-ಭರವಸೆ. ಪ್ರಾಥಮಿಕ ಹಂತದ ಶಿಕ್ಷಕರು ಅತ್ಯುಚ್ಚ ಶಿಕ್ಷಣ ಪಡೆದವ ರಾಗಿರುತ್ತಾರೆ. ಮತ್ತು ಅವರಿಗೆ ಒಳ್ಳೆಯ ಸಂಬಳ- ಸವಲತ್ತುಗಳನ್ನು ಕೊಡಲಾಗುತ್ತದೆ. Uಓಔ-ವಿಶ್ವಸಂಸ್ಥೆಯು ಮಾನವ ಅಭಿವೃದ್ಧಿಗೆ ಸಂಬಂಧಿಸಿದಂತೆ ತಯಾರಿಸಿದ ವರದಿಯ ಪ್ರಕಾರ ಆ ಪುಟ್ಟ ದೇಶ ಫಿನ್‍ಲೆಂಡ್ ಅತ್ಯುಚ್ಚ ಸ್ಥಾನದಲ್ಲಿದೆ. ಮನಸ್ಸು ಮಾಡಿದರೆ ನಾವೂ ನಮ್ಮ ಕರ್ನಾಟಕದಲ್ಲಿ, ನಮ್ಮ ಭಾರತದಲ್ಲಿ, ಮಕ್ಕಳಸ್ನೇಹಿ ಶಿಕ್ಷಣಪದ್ಧತಿ ಯನ್ನು ಅಳವಡಿಸಿಕೊಂಡು ಕಲಿಯುವಿಕೆಯನ್ನು ಮಕ್ಕಳು ಮನಸಾ ಆನಂದಿಸುವಂತೆ ಮಾಡಬಹುದು. ಈಗ ನಮ್ಮ ಮಕ್ಕಳು ಶಾಲೆಗೆ ಹೋಗುವಾಗ ಹೊತ್ತುಕೊಂಡೊಯ್ಯುವ ಪುಸ್ತಕಗಳ ಭಾರ, ದೀರ್ಘಾವಧಿಯ ತರಗತಿಗಳು, ಪೋಷಕರಿಗೇ ಶಿಕ್ಷೆಯೆನಿಸುವ ಹೋಮ್‍ವರ್ಕ್, ಅನಾರೋಗ್ಯಕರ ಸ್ಪಧರ್É, ಡೊನೇಶನ್‍ಗಳ ಹಾವಳಿ- ಇಂಥ ಎಲ್ಲಾ ಅನಿಷ್ಟಗಳನ್ನು ಹೋಗಲಾಡಿಸುವ ಅವಶ್ಯಕತೆ ಇದೆ. ಸದ್ಯ ಪಠ್ಯಕ್ರಮವನ್ನು ತಜ್ಞರು ರೂಪಿಸುವ ವಿಧಾನ, ಪಠ್ಯಪುಸ್ತಕಗಳ ಆಯ್ಕೆ, ಪ್ರವೇಶಾತಿ, ಪರೀಕ್ಷಾ ಮೌಲ್ಯಮಾಪನ- ಇತ್ಯಾದಿ ಶಿಕ್ಷಣದ ಎಲ್ಲಾ ಮಹತ್ವದ ಪ್ರಕ್ರಿಯೆಗಳಲ್ಲಿಯೂ ನಮ್ಮಲ್ಲಿ ಭ್ರಷ್ಟಾಚಾರ ಮತ್ತು ರಾಜಕೀಯ ಇವುಗಳೇ ಒಳಸೇರಿ ಹದಗೆಡಿಸುತ್ತಿವೆ. ನಮ್ಮ ಕರ್ನಾಟಕದಲ್ಲಿ ಮಾತ್ರವಲ್ಲ, ನಮ್ಮ ಇಡಿಯ ದೇಶದಲ್ಲಿನ ಉನ್ನತ ಶಿಕ್ಷಣ ನೀಡುವ ಶೇಕಡಾ 90ರಷ್ಟು ವಿಶ್ವವಿದ್ಯಾಲಯಗಳಲ್ಲಿ ಪಠ್ಯಕ್ರಮ ಹಳೆಯದಾಗಿದೆ. ಹೀಗಾಗಿ ನಮ್ಮ ವಿಶ್ವವಿದ್ಯಾಲಯಗಳು ವಿಶ್ವಮಟ್ಟದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಇತ್ತೀಚೆಗೆ ಭಾರತರತ್ನ ಪುರಸ್ಕøತ ವಿಜ್ಞಾನಿ ಡಾ. ಸಿ.ಎನ್.ಆರ್. ರಾವ್ ವಿಷಾದ ವ್ಯಕ್ತಪಡಿಸಿದ್ದಾರೆ. ನಮ್ಮಲ್ಲಿ ಪ್ರತಿಭಾಶೋಧ ಕನಿಷ್ಠ ಮಟ್ಟದಲ್ಲಿದೆ. ನಾವು ಮಕ್ಕಳಿಗೆ ಆಧುನಿಕ ತಂತ್ರಜ್ಞಾನವನ್ನು ಸರಿಯಾಗಿ ಬಳಸಿ ಶಿಕ್ಷಣ ನೀಡುತ್ತಿಲ್ಲ, ಎಂದು ಅವರ ಅಭಿಪ್ರಾಯ. ನಮ್ಮಲ್ಲಿನ್ನೂ ಅಪ್ಪ ಹಾಕಿದ ಆಲದ ಮರಕ್ಕೇ ಜೋತು ಬೀಳುವ ಪ್ರವೃತ್ತಿ ಹೋಗಿಲ್ಲ. ಶಿಕ್ಷಣದ ವಿಷಯದಲ್ಲಾದರೂ ನಮ್ಮ ನೀತಿಯನ್ನು ನವೀಕರಿಸುವುದು ಈಗ ಅವಶ್ಯ. ಶಿಕ್ಷಣದಲ್ಲಿ ಆಧುನಿಕ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳಬೇಕಿದೆ. ಶಿಕ್ಷಣದ ಉದ್ದೇಶ ಜ್ಞಾನಾರ್ಜನೆ ಮಾತ್ರವಲ್ಲದೆ ವ್ಯಕ್ತಿತ್ವನಿರ್ಮಾಣವೂ ಆಗಿರಬೇಕು ಅನ್ನುವುದನ್ನು ನಾವು ಇನ್ನೂ ಸರಿಯಾಗಿ ತಿಳಿದುಕೊಳ್ಳಬೇಕಾಗಿದೆ. ದೂರದೃಷ್ಟಿ, ವಿದ್ವತ್ತು, ಮತ್ತು ಉದಾರ ದೃಷ್ಟಿಕೋನ ಹೊಂದಿದ ಶಿಕ್ಷಣತಜ್ಞರನ್ನು ಆಯ್ದು, ಒಂದು ಮಾದರಿ ಶಿಕ್ಷಣನೀತಿಯನ್ನು ರೂಪಿಸುವ ಹೊಣೆಯನ್ನು ಅವರಿಗೆ ವಹಿಸಿಕೊಡುವ ಕೆಲಸವನ್ನು ನಮ್ಮ ಸರಕಾರ ಮಾಡಬೇಕಾಗಿದೆ.
ನಿಜವಾದ ಅರ್ಥದಲ್ಲಿ ನಾವು ಹೊಸತನ ಕಾಣಬಹುದಾಗಿದ್ದು ಮಾಧ್ಯಮ ಕ್ಷೇತ್ರದಲ್ಲಿ. ಮುದ್ರಣ ಹಾಗೂ ವಿದ್ಯುನ್ಮಾನ ಈ ಎರಡೂ ಕ್ಷೇತ್ರಗಳಲ್ಲಿ ಈಚೆಗೆ ಅದ್ಭುತವಾದ ಆವಿಷ್ಕಾರಗಳಾಗಿವೆ. ಸಾಮಾಜಿಕ ಅಂತರ್ಜಾಲದಲ್ಲಿ ಬ್ಲಾಗ್ ಬರಹಗಳ ಜನಪ್ರಿಯತೆ ಈಗ ಹೆಚ್ಚುತ್ತಲಿದೆ. ಬ್ಲಾಗ್ ಲೇಖಕರು ಹೆಚ್ಚಾಗಿ ಯೂನಿಕೋಡ್ ಬಳಸುತ್ತಿದ್ದಾರೆ- ಅಂದರೆ ಗಣಕದಲ್ಲಿ ಜಗತ್ತಿನ ಎಲ್ಲ ಭಾಷೆಗಳ ಪ್ರತಿ ಅಕ್ಷರಕ್ಕೆ ಸಂಕೇತ ನೀಡುವ ವ್ಯವಸ್ಥೆ. ಅಂತರ್ಜಾಲದಲ್ಲಿ ಮಾಹಿತಿ ನೀಡುವ ಗೂಗಲ್ ಸಹ ಯೂನಿಕೋಡ್ ಮೂಲಕವೇ ಕನ್ನಡದ ಬಗ್ಗೆ ವಿವರಗಳನ್ನು ಕೊಡುತ್ತದೆ. ಈಗ ಅನೇಕ ಕನ್ನಡ ಅಂತರ್ಜಾಲ ಪತ್ರಿಕೆಗಳೂ ಪ್ರಾರಂಭವಾಗಿವೆ. ಕರ್ನಾಟಕ ಸರಕಾರದ ‘ಕಣಜ’ ಎಂಬ ಜಾಲತಾಣವು ಕನ್ನಡದ ಬಗ್ಗೆ ವಿಸ್ತಾರವಾದ ಮಾಹಿತಿ ನೀಡುತ್ತದೆ. ಕನ್ನಡ ಕಟ್ಟುವ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಬಹುದು ಎಂಬುದು ಈಗ ಸಿದ್ಧವಾಗಿದೆ. ಆದರೆ ಈ ಸಾಮಾಜಿಕ ಜಾಲತಾಣದಿಂದ ಎಷ್ಟು ಅನುಕೂಲಗಳಿವೆಯೋ ಅಷ್ಟೇ ಅನಾಹುತಗಳೂ ನಡೆಯುವುದು ಸಾಧ್ಯ. ಇತ್ತೀಚೆ ಫೇಸ್‍ಬುಕ್, ಟ್ವಿಟರ್, ಮೊಬೈಲ್ ಇತ್ಯಾದಿಗಳ ದುರುಪಯೋಗದಿಂದ ಅನೇಕ ದುರ್ಘಟನೆಗಳು ನಡೆಯುತ್ತಿರುವುದನ್ನು ನಾವು ನೋಡಿದ್ದೇವೆ. ಆದ್ದರಿಂದ ಮಾಧ್ಯಮ ಕ್ಷೇತ್ರದ ಹೊಸ ಆವಿಷ್ಕಾರಗಳನ್ನು ಎಚ್ಚರಿಕೆಯಿಂದ, ವಿವೇಕದಿಂದ ಬಳಸುವುದು ಅವಶ್ಯವಿದೆ.
ಈ ಎಚ್ಚರಿಕೆ ಮತ್ತು ವಿವೇಕ ಬಹಳ ಮುಖ್ಯವಾಗಿ ಇವತ್ತು ನಮಗೆ ಅವಶ್ಯವಾಗಿವೆ. ಮುಖ್ಯವಾಗಿ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ಆಡಳಿತ ನೀತಿಗೆ ಇವೆರಡೂ- ಎಚ್ಚರಿಕೆ ಮತ್ತು ವಿವೇಕ- ಅತ್ಯವಶ್ಯವಾಗಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂತಹ basic amentiesಗೆ ಸಂಬಂಧಿಸಿದ ಆಂತರಿಕ ಸಮಸ್ಯೆಗಳಿಗೆ Uಓಔ ಸ್ಪಷ್ಟವಾದ ಪರಿಹಾರ ಸೂತ್ರಗಳನ್ನು ರೂಪಿಸಿದೆ. ನಮ್ಮ ಕಾವೇರಿ ಜಲವಿವಾದ ವನ್ನಾಗಲೀ ಕಳಸಾ-ಬಂಡೂರಿ ಅಥವಾ ಮಹದಾಯಿಗೆ ಸಂಬಂಧಪಟ್ಟ ಸಮಸ್ಯೆಗಳನ್ನಾಗಲೀ ಒಂದು ರಾಷ್ಟ್ರಮಟ್ಟದ ಸಂಧಾನಸೂತ್ರದಿಂದ ಮಾತ್ರ ಬಗೆಹರಿಸಿಕೊಳ್ಳಬಹುದು. ಗೋವಾ, ಮಹಾರಾಷ್ಟ್ರ, ಕರ್ನಾಟಕ- ಈ ಮೂರೂ ರಾಜ್ಯಗಳ ಮುಖ್ಯಮಂತ್ರಿಗಳನ್ನು, ವಿಷಯತಜ್ಞರನ್ನು, ಒಟ್ಟುಗೂಡಿಸಿಕೊಂಡು ನಮ್ಮ ಪ್ರಧಾನಮಂತ್ರಿಗಳು ಮಧ್ಯಸ್ಥಿಕೆವಹಿಸಿ ಯಾರಿಗೂ ಅನ್ಯಾಯವಾಗದಂತೆ, ಸೌಹಾರ್ದಯುತವಾಗಿ, ಒಂದು ಪರಸ್ಪರ ಸಮ್ಮತವಾದ ಒಡಂಬಡಿಕೆ ಮಾಡಿಸುವ ವ್ಯವಧಾನ ತೋರಿಸಬೇಕಾಗಿದೆ. ಹಿಂದೆಂದಿಗಿಂತ ಹೆಚ್ಚಾಗಿ ಇಂದು ನಮಗೊಂದು ರಾಷ್ಟ್ರೀಯ ಜಲನೀತಿ ಬೇಕಾಗಿದೆ.
ಅದರಂತೆ ನಮಗೊಂದು ಸೂಕ್ತವಾದ ರಾಷ್ಟ್ರೀಯ ಕೃಷಿನೀತಿಯೂ ಬೇಕಾಗಿದೆ. ರೈತರ ಬೆಳೆಗಳಿಗೆ ಒಂದು ವೈಜ್ಞಾನಿಕ ಬೆಲೆ ಗೊತ್ತುಪಡಿಸುವುದು, ಅವರಿಗೆ ಒಳ್ಳೆಯ ಬೀಜ-ಗೊಬ್ಬರ ಪೂರೈಸುವುದು, ನೀರಾವರಿಯ ವ್ಯವಸ್ಥೆ ಮಾಡಿಕೊಡುವುದು, ಯಾವ ಭೂಮಿಯಲ್ಲಿ ಯಾವ ಕಾಲದಲ್ಲಿ ಎಂಥ ಬೆಳೆ ಬೆಳೆಯಬೇಕೆನ್ನುವ ಬಗ್ಗೆ ಅವಶ್ಯಕ ಮಾಹಿತಿ ನೀಡುವುದು- ಈ ಎಲ್ಲಕ್ಕೂ ಸಂಬಂಧಪಟ್ಟಂತೆ ಯೋಗ್ಯ ಸಮಯದಲ್ಲಿ ಯೋಗ್ಯ ವ್ಯವಸ್ಥೆ ಮಾಡಬೇಕು. ಮುತ್ಸದ್ದಿಗಳು, ತಜ್ಞರು, ರಾಜಕಾರಣಿಗಳು ಎಲ್ಲರೂ ಸೇರಿ ಮಾಡಬೇಕಾದ ಕೆಲಸ ಇದು. ಇದು ಸಾಧ್ಯವಾದರೆ, ನಮ್ಮ ರಾಜ್ಯದಲ್ಲಿ ಈಚೆಗೆ ನಡೆದಂತಹ, ನಡೆಯುತ್ತಿರುವಂತಹ, ರೈತರ ಆತ್ಮಹತ್ಯೆಗಳಂತಹ ಆಘಾತಕಾರೀ ಘಟನೆಗಳಿಗೆ ಕಡಿವಾಣ ಹಾಕಬಹುದು.
ಇವತ್ತು ಈ ನುಡಿಸಿರಿ ಕಾರ್ಯಕ್ರಮದ ಸಂದರ್ಭದಲ್ಲಿ ಅನೇಕ ವಿದ್ವಾಂಸರು, ಪ್ರಜ್ಞಾವಂತರು, ಬುದ್ಧಿಜೀವಿಗಳು ಎಲ್ಲಾ ಒಟ್ಟಿಗೆ ಸೇರಿದ್ದೀರಿ. ನನ್ನ ಮನಸ್ಸನ್ನು ಆತಂಕಕ್ಕೀಡು ಮಾಡುತ್ತಿರುವ ಇನ್ನೂ ಒಂದೆರಡು ವಿಷಯಗಳನ್ನು ಸಹೃದಯರಾದ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಒಂದು ಮುಖ್ಯವಾದ ಆತಂಕಕಾರಿ ವಿಷಯವೆಂದರೆ ಇತ್ತೀಚೆ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಲೇ ಇರುವುದು. ದೆಹಲಿಯಲ್ಲಿ ನಿರ್ಭಯಾ ಪ್ರಕರಣ ನಡೆದಾಗ ಇಡಿಯ ದೇಶವೇ ತಲ್ಲಣಿಸಿತ್ತು. ಜಗತ್ತಿನೆದುರು ನಾಚಿಕೆಯಿಂದ ತಲೆತಗ್ಗಿಸಿತ್ತು. ಆದರೆ ನಂತರ ಏನಾಯಿತು? ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಹೋದವು. ಆರು ತಿಂಗಳ ಮಗುವಿನಿಂದ ಹಿಡಿದು ಎಂಬತ್ತರ ವಯಸ್ಸಿನ ಮುದುಕಿಯರ ತನಕ ಅನೇಕರು ಇದಕ್ಕೆ ಬಲಿಯಾಗುತ್ತಲೇ ಇದ್ದಾರೆ. ಅಪರಾಧಿಗಳು ತಪ್ಪಿಸಿಕೊಳ್ಳುತ್ತಲೇ ಇರುವುದರಿಂದ ಅಪರಾಧಗಳು ಹೆಚ್ಚಾಗುತ್ತಲೇ ಇವೆ. ಈಗ ಅರ್ಧ ಶತಮಾನದ ಹಿಂದೆ, ಅಂದರೆ ಸುಮಾರು ಐವತ್ತು ವರ್ಷಗಳ ಹಿಂದೆ, ನಾನು ಸ್ತ್ರೀ ಸ್ವಾತಂತ್ರ್ಯ, ಸ್ತ್ರೀಮುಕ್ತಿ, ಸಮಾನತೆ ಇತ್ಯಾದಿ ಕುರಿತು ಸ್ಥಾಪಿತಮೌಲ್ಯಗಳನ್ನು ಪ್ರತಿಭಟಿಸಿ ಕತೆ-ಕಾದಂಬರಿ ಬರೆದೆ. ನನ್ನೊಂದಿಗೆ ಆಗ ಇನ್ನೂ ಹಲವು ಲೇಖಕಿಯರಿದ್ದರು. ನಂತರ ಅನೇಕ ಲೇಖಕಿಯರು ಆ ಮಾರ್ಗದಲ್ಲಿ ಹೆಜ್ಜೆಯಿಟ್ಟು ಮುಂದೆ ಸಾಗಿ ಕನ್ನಡದಲ್ಲಿ ಸ್ತ್ರೀವಾದೀ ಸಾಹಿತ್ಯ ಎಂಬ ಹೊಸ ಪರಂಪರೆಯೇ ಹುಟ್ಟಿಕೊಂಡಿತು. ಅದೆಲ್ಲ ಈಗ ಇತಿಹಾಸ. ಆದರೆ ಇವತ್ತು ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅನ್ಯಾಯ- ಅತ್ಯಾಚಾರಗಳ ಭರಾಟೆ ನೋಡಿದಾಗ ನನಗೆ ದಿಗ್ಭ್ರಮೆಯಾಗುತ್ತದೆ. ಇದು ನಮ್ಮ ರಾಜ್ಯ, ನಮ್ಮ ದೇಶದಲ್ಲಷ್ಟೇ ಅಲ್ಲ, ಜಗತ್ತಿನ ಇತರ ಅನೇಕ ಪ್ರದೇಶಗಳಲ್ಲಿ ಭಯಾನಕವಾಗಿ ವ್ಯಾಪಿಸುತ್ತಿರುವ ಸಮಸ್ಯೆಯಾಗಿದೆ. ಯಾವ ಸಾಹಿತ್ಯದಿಂದ, ಯಾವ ಬರವಣಿಗೆಯಿಂದ, ಇಂತಹ ರಾಕ್ಷಸರ ಮನಸ್ಸು ಪ್ರಭಾವಿಸಲು- ಬದಲಾಯಿಸಲು ಸಾಧ್ಯವಿದೆ? ಸಾಹಿತ್ಯದಿಂದ ಸಮಾಜ ಸುಧಾರಣೆ ಸಾಧ್ಯ ಎಂಬ ಕಾನ್ಸೆಪ್ಟೇ ಅರ್ಥ ಕಳಕೊಂಡಿದೆಯೇ? ಯಾವ ವಿಚಾರ-ಬರವಣಿಗೆ-ಕಾನೂನು-ಶಿಕ್ಷಣ ಇತ್ಯಾದಿ ಯಾವುದರಿಂದಲೂ ಈ ಅತ್ಯಾಚಾರಿಗಳ ಮನಃಪರಿವರ್ತನೆ ಸಾಧ್ಯವಿಲ್ಲವೇ? ನಮ್ಮ ನಾಗರಿಕ ಸಮಾಜ ಎತ್ತ ಸಾಗುತ್ತಿದೆ?- ಇವೇ ಮೊದಲಾದ ಪ್ರಶ್ನೆಗಳು ನನ್ನನ್ನು ಭ್ರಮೆನಿರಸನಗೊಳಿಸಿವೆ. ಆದರೆ ವ್ಯವಸ್ಥೆಯ ಬಗ್ಗೆ ಭ್ರಮೆ ನಿರಸನ ಹೊಂದುವುದು ಸಮಸ್ಯೆಗೆ ಪರಿಹಾರವಲ್ಲ ಅಂತ ನನಗೆ ಗೊತ್ತಿದೆ. ಇಲ್ಲಿ ಮುಖ್ಯವಾಗಿ ಆಗಬೇಕಾಗಿರುವುದು- ಒಂದು, ಅತ್ಯಾಚಾರ ವಿಷಯದ ಕಾನೂನನ್ನು ಕಠಿಣಗೊಳಿಸಿ ಕ್ಷಿಪ್ರವಾಗಿ ಶಿಕ್ಷೆ ಜಾರಿ ಮಾಡುವುದು. ಅತ್ಯಾಚಾರದ ಅಪರಾಧ ಎಸಗಿದವನು ಯಾರೇ ಆಗಿರಲಿ, ಯಾವ ಧರ್ಮದವನೇ ಯಾವ ಜಾತಿಯವನೇ ಆಗಿರಲಿ, ಪ್ರಭಾವೀ ರಾಜಕಾರಣಿಯಾಗಿರಲಿ, ಅಧಿಕಾರಿಯಾಗಿರಲಿ, ಸ್ವಾಮೀಜಿಯೇ ಆಗಿರಲಿ, ಸಾಮಾನ್ಯನೇ ಆಗಿರಲಿ, ಅಪರಾಧ ಸಾಬೀತಾದ ತಕ್ಷಣ ಅತ್ಯಂತ ಕಠಿಣ ಶಿಕ್ಷೆ ಜಾರಿಗೊಳಿಸಬೇಕು. ಇನ್ನೊಂದು- ನಮ್ಮ ಶಿಕ್ಷಣಪದ್ಧತಿಯಲ್ಲಿ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ವಿಧಾನಗಳನ್ನು ಅಳವಡಿಸಬೇಕು. ನಮ್ಮ ಭಾರತೀಯ ಸಂಸ್ಕøತಿಗೆ ತಕ್ಕ ಹಾಗೆ ಹೆಣ್ಣುಮಕ್ಕಳನ್ನು ಗೌರವಿಸುವ, ವ್ಯಕ್ತಿಸ್ವಾತಂತ್ರ್ಯವನ್ನು ಮನ್ನಿಸುವ ಮನೋಭಾವವನ್ನು ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಮಕ್ಕಳಲ್ಲಿ ಬೆಳೆಸಬೇಕು. ನಮ್ಮ ಪರಂಪರಾಗತ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿದಾಗ ಮಾತ್ರ ಅತ್ಯಾಚಾರ, ಮರ್ಯಾದಾಹತ್ಯೆ ಇತ್ಯಾದಿ ದೌರ್ಜನ್ಯಗಳನ್ನು ಹತ್ತಿಕ್ಕಲು ಸಾಧ್ಯ. ಮುಖ್ಯವಾಗಿ ಇಂಥವೆಲ್ಲಾ ಸಾಧ್ಯವಾಗಲು ನಮಗೆ ಏಕರೂಪ ನಾಗರಿಕ ಸಂಹಿತೆಯೂ ಅವಶ್ಯವಾಗಿ ಬೇಕು ಅನ್ನುವುದನ್ನು ನಾವು ಮರೆಯಬಾರದು.
ನಮ್ಮದು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದಾದ ಪ್ರಜಾಪ್ರುಭುತ್ವದ ದೇಶ ಅಂತ ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ದೇಶದಲ್ಲಿ ಇತ್ತೀಚಿನ ಆಗುಹೋಗುಗಳನ್ನು ನೋಡುತ್ತಿರುವಾಗ ನಮ್ಮ ಪ್ರಜಾಸತ್ತಾತ್ಮಕತೆಯನ್ನು ಎಂದಿಲ್ಲದ ಕಾರ್ಮೋಡಗಳು ಕವಿದುಕೊಂಡಂತೆ ಆತಂಕವಾಗುತ್ತದೆ. ‘ಜನರಿಗೆ ತಮ್ಮ ಹಕ್ಕು ಮತ್ತು ಹೊಣೆಗಾರಿಕೆ ಇವೆರಡರ ಅರಿವು ಇಲ್ಲದೆ ಹೋದರೆ ಪ್ರಜಾಪ್ರಭುತ್ವ ಕೇವಲ ನಕಲಿಮಾಲು’ ಎಂದು ಕವಿ ಗೋಪಾಕೃಷ್ಣ ಅಡಿಗರು ಹೇಳಿದರು. ‘ನಮ್ಮ ಸ್ವಾತಂತ್ರ್ಯ, ಹಕ್ಕು, ಹಾಗೂ ಪ್ರಜಾಪ್ರಭುತ್ವ ಇವುಗಳನ್ನು ಉಳಿಸಿಕೊಳ್ಳಲು ಇರುವ ಏಕಮಾತ್ರ ಪರಿಹಾರೋಪಾಯವೆಂದರೆ ಜನರ ಎಚ್ಚರಿಕೆಯೊಂದೇ’ ಎಂದು ಖುಶವಂತಸಿಂಗ್ ಹೇಳಿದ್ದಾರೆ. ‘ಪ್ರಜಾಪ್ರಭುತ್ವ ಎಂದರೆ ರಕ್ತಪಾತವಿಲ್ಲದೆ ಸಾಮಾಜಿಕ, ಆರ್ಥಿಕ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸಾಧ್ಯಮಾಡುವ ಸರಕಾರದ ಸ್ವರೂಪ’ ಎಂದು ಅಂಬೇಡ್ಕರರು ಹೇಳಿದ್ದರು. ಅವರು ಇನ್ನೂ ಒಂದು ಮಾತು ಹೇಳಿದ್ದರು; ‘ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ್ಯವು ಸಮಾನತೆಯನ್ನು ನುಂಗಿಹಾಕುವ ಅಪಾಯವಿರುತ್ತದೆ. ಹಾಗಾದಾಗ ಪ್ರಜಾಪ್ರಭುತ್ವ ಕೇವಲ ಒಂದು ಪ್ರಹಸನವಾಗುತ್ತದೆ.’- ಅಂತ. ಸದ್ಯದ ಪರಿಸ್ಥಿತಿ ಇಂಥದೇ ಅಪಾಯ ಎದುರಿಸುತ್ತಿದೆಯೇ ಅಂತ ನಾವು ಯೋಚನೆ ಮಾಡಬೇಕು. ಇವತ್ತು ವ್ಯಕ್ತಿಸ್ವಾತಂತ್ರ್ಯಕ್ಕೆ ಸಾಂಪ್ರದಾಯಿಕತೆ ಸವಾಲು ಹಾಕುತ್ತಿದೆ. ದೇಶಾದ್ಯಂತ ಅಸಹಿಷ್ಣುತೆ ವ್ಯಾಪಿಸುತ್ತಿದೆ. ಆದರೆ ‘ದೇಶದಲ್ಲಿ ಈ ಅಸಹಿಷ್ಣುತೆ ಹೊಸದಲ್ಲ, ಅದು 1947ರಿಂದಲೂ ಇದೆ, ಈ ಅಸಹಿಷ್ಣುತೆಯ ವಿರುದ್ಧದ ಹೋರಾಟವು ಯಾವುದೇ ರಾಜಕೀಯ ಪಕ್ಷವನ್ನು ಗುರಿಯಾಗಿಸುವುದು ಸರಿಯಲ್ಲ-‘ ಎಂದು ಈಚೆಗೆ ಚಿತ್ರನಟ ಕಮಲಹಾಸನ್ ಹೇಳಿದ್ದು ಸಹವಿಚಾರಯೋಗ್ಯವಾಗಿದೆ. ನಮ್ಮ ದೇಶ ಸಹಿಷ್ಣುತೆಗೆ ಹೆಸರಾದದ್ದು. ‘ಭಿನ್ನತೆಯಲ್ಲಿ ಏಕತೆ’ಗೆ ಹೆಸರಾದದ್ದು. ‘ನಾವು ವಿಶ್ವ ಸಹಿಷ್ಣುತೆಯನ್ನು ನಂಬುತ್ತೇವೆ. ಎಲ್ಲ ಧರ್ಮಗಳನ್ನೂ ಸತ್ಯವೆಂದು ಒಪ್ಪಿಕೊಳ್ಳುತ್ತೇವೆ. ನಾವು ಜಗತ್ತಿಗೇ ಸಹಿಷ್ಣುತೆ ಮತ್ತು ಸ್ವೀಕಾರಭಾವವನ್ನು, ಸೌಹಾರ್ದತೆ ಯನ್ನು ಕಲಿಸಿಕೊಟ್ಟವರು’ – ಎಂದು ವಿವೇಕಾನಂದರು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಸಹಿಷ್ಣುತೆಯಿಂದಲೇ ದೇಶದ ಪ್ರಗತಿ ಸಾಧ್ಯ; ದೇಶ ಆರ್ಥಿಕವಾಗಿ ಮುನ್ನಡೆ ಸಾಧಿಸಬೇಕಾದರೆ ಮುಕ್ತವಾಗಿ ಪ್ರಶ್ನಿಸುವ ವಾತಾವರಣ ಸೃಷ್ಟಿಸಬೇಕಾದದ್ದು ಅವಶ್ಯ- ಎಂದು ಈಚೆಗೆ ಅನೇಕ ಚಿಂತಕರು, ಅಭಿಪ್ರಾಯಪಡುತ್ತಿದ್ದಾರೆ. ಅಸಹಿಷ್ಣುತೆ ಈಗ ಕೇವಲ ನಮ್ಮ ದೇಶದ ಸಮಸ್ಯೆಯಾಗಿ ಉಳಿದಿಲ್ಲ. ಇತ್ತೀಚೆಗೆ ಫ್ರಾನ್ಸ್‍ನಲ್ಲಿ ನಡೆದ ಭಯೋತ್ಪಾದಕರ ದಾಳಿ ನಾಗರಿಕತೆಗೇ ಒಂದು ಕಲಂಕವಾಗಿತ್ತು. ಅಸಹಿಷ್ಣುತೆಯನ್ನು-ಭಯೋತ್ಪಾದನೆಯನ್ನು ದಿಟ್ಟವಾಗಿ ಎದುರಿಸಿ ಮಾನವೀಯ ಮೌಲ್ಯಗಳನ್ನು ಪುನರ್‍ಸ್ಥಾಪಿಸಲು ಇಡಿಯ ಜಗತ್ತೇ ಒಂದಾಗುವ ಅವಶ್ಯಕತೆ ಇದೆ ಎಂದು ಜಿ20 ಶೃಂಗಸಭೆಯಲ್ಲಿ ಜಗತ್ತಿನ ಮುಂದಾಳುಗಳು ಒಮ್ಮತದಿಂದ ಘೋಷಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳ ಬಹುದು. ನಾನು ಯಾವಾಗಲೂ ಆಶಾವಾದಿ. ‘ನುಡಿಸಿರಿ’ಯಂತಹ ಕಾರ್ಯಕ್ರಮಗಳು ನಮ್ಮಲ್ಲಿ ಸೌಹಾರ್ದಭಾವವನ್ನು ಹೆಚ್ಚಿಸುವ ದಿಕ್ಕಿನಲ್ಲಿ ಮಹತ್ವದ ಪ್ರಯತ್ನಗಳು ಅಂತ ನನಗನಿಸುತ್ತದೆ.
ನಾಡಿನ ಹಿರಿಯ ವಿದ್ವಾಂಸರು, ವಿಚಾರವಾದಿಗಳು, ನಮ್ಮೆಲ್ಲರಿಗೆ ಮಾರ್ಗದರ್ಶಕರು ಆದಂತಹ ಶ್ರೀ ವೆಂಕಟಾಚಲ ಶಾಸ್ತ್ರಿಗಳು ಈ ಸಲದ ‘ನುಡಿಸಿರಿ’ಯ ಅಧ್ಯಕ್ಷರಾದದ್ದು ಬಹಳ ಖುಶಿಯ ವಿಷಯ. ಅವರ ನೇತೃತ್ವದಲ್ಲಿ ಈ ನಾಲ್ಕು ದಿನಗಳ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ಈ ಎಲ್ಲ ಸಂಭ್ರಮದ ಪ್ರೇರಕಶಕ್ತಿಯಾಗಿರುವ ಡಾ. ಮೋಹನ ಆಳ್ವ ಅವರಿಗೂ ಅವರೊಂದಿಗೆ ಕೈಜೋಡಿಸಿರುವ ಎಲ್ಲ ನಿಷ್ಠಾವಂತ ಸಹಕಾರಿಗಳಿಗೂ ನನ್ನ ಗೌರವಪೂರ್ವಕ ಅಭಿನಂದನೆಗಳು. ನಿಮ್ಮೆಲ್ಲರಿಗೂ ನನ್ನ ಹೃದಯಪೂರ್ವಕ ವಂದನೆಗಳು.