Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ಮಾಧ್ಯಮ > ಪ್ರಕಟಣೆ > ಆಳ್ವಾಸ್ ನುಡಿಸಿರಿ 2016ರ ಸರ್ವಾಧ್ಯಕ್ಷರ ಮತ್ತು ಉದ್ಘಾಟಕರ ಆಯ್ಕೆ

ಆಳ್ವಾಸ್ ನುಡಿಸಿರಿ 2016ರ ಸರ್ವಾಧ್ಯಕ್ಷರ ಮತ್ತು ಉದ್ಘಾಟಕರ ಆಯ್ಕೆ

ಮೂಡುಬಿದಿರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ವು ವಾರ್ಷಿಕ ಹಬ್ಬವಾಗಿ ಆಚರಿಸಿಕೊಂಡು ಬರುತ್ತಿರುವ ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಸಮ್ಮೇಳನ. ಕನ್ನಡ ಬಾಂಧವರ ಸಹಾಯ-ಸಹಕಾರ-ಪ್ರೀತಿ-ವಿಶ್ವಾಸಗಳೊಂದಿಗೆ ಕಳೆದ 12 ವರ್ಷಗಳಿಂದ ಯಶಸ್ವಿಯಾಗಿ ಸಂಘಟಿಸಿಕೊಂಡು ಬರುತ್ತಿದ್ದು ಈ ವರ್ಷ ಹದಿಮೂರನೆಯ ಸಮ್ಮೇಳನದ ಸಿದ್ಧತೆಗೆ ಅಣಿಯಾಗಿದ್ದೇವೆ. ನಾಡು-ನುಡಿಯ ಎಚ್ಚರವನ್ನು, ಕನ್ನಡ ಸಂಸ್ಕೃತಿಯ ಕಂಪನ್ನು ಪಸರಿಸುವುದಕ್ಕಾಗಿ ಆಯೋಜಿಸಲಾಗುವ ಈ ಸಮ್ಮೇಳನವು ಕನ್ನಡಿಗರ ಒಡಲ ಕನ್ನಡಗಂಗೆಯ ಅಂತರ್ವಾಹಿನಿಯನ್ನು ಎಚ್ಚರಿಸುವ, ಎಳೆಯರಲ್ಲಿ ಒಲವ ಸೆಲೆ ಮೂಡುವಂತೆ ಮಾಡುವ ಕಾರ್ಯದಲ್ಲಿ ಯಶಸ್ಸು ಕಂಡಿದೆ. ಪ್ರತಿಯೊಂದು ಸಮ್ಮೇಳನದ ಚರ್ಚಿತ ವಿಚಾರಗಳು, ಸಾಹಿತ್ಯಕ-ಸಾಂಸ್ಕೃತಿಕ ಕಾರ್ಯಕ್ರಮಗಳು, ಅಧ್ಯಕ್ಷ ಪೀಠದ ಪ್ರತಿಭಾನ್ವಿತರ ಆಸೆ-ಆಶಯಗಳು, ಈ ಕೆಲಸಗಳಿಗೆ ಇಂಬುಕೊಟ್ಟಿವೆ. ಕನ್ನಡನಾಡಿನ ಹೆಮ್ಮೆಯ, ಕನ್ನಡಿಗರ ಗೌರವದ ಈ ಸಮ್ಮೇಳನವು ಈ ವರ್ಷದ ನವೆಂಬರ್ ತಿಂಗಳಿನ 18, 19 ಮತ್ತು 20ನೇ ದಿನಾಂಕಗಳಂದು ಮೂರು ದಿನಗಳ ಕಾಲ ಮೂಡುಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ರತ್ನಾಕರವರ್ಣಿ ವೇದಿಕೆಯಲ್ಲಿ ವಿಜೃಂಭಣೆಯಿಂದ ಜರುಗಲಿದೆ.

ಆಳ್ವಾಸ್ ನುಡಿಸಿರಿ 2016ರ ಸರ್ವಾಧ್ಯಕ್ಷರಾಗಿ ಡಾ.ಬಿ.ಎನ್.ಸುಮಿತ್ರಾಬಾಯಿ ಆಯ್ಕೆ

sumithra-baiಮೈಸೂರಿನಲ್ಲಿ ಜನಿಸಿ ಹಾಸನದಲ್ಲಿ ಬೆಳೆದ ಡಾ.ಬಿ.ಎನ್.ಸುಮಿತ್ರಾಬಾಯಿಯವರು ಸಂಸ್ಕೃತಭಾಷಾ ಪ್ರಾಧ್ಯಾಪಕಿಯಾಗಿ ನಿವೃತ್ತರು. ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ಜೈನಶಾಸ್ತ್ರ ಮತ್ತು ಪ್ರಾಕೃತ ವಿಷಯವಾದ ’ಜಿನಸೇನನ ಹರಿವಂಶ ಪುರಾಣ ಒಂದು ಅಧ್ಯಯನ’ಕ್ಕಾಗಿ ಪಿ.ಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಸಂಶೋಧನಾ ವಿಷಯದ ಆಯ್ಕೆಗೆ ಸಂಬಂಧಿಸಿದಂತೆ ಎಚ್ಚರ ಮತ್ತು ಶಿಸ್ತನ್ನು ಅಳವಡಿಸಿಕೊಂಡಿರುವ ಇವರು ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಇವರ ಅಧ್ಯಾಪನ ಕ್ಷೇತ್ರ ಕನ್ನಡವಲ್ಲದಿದ್ದರೂ ಅಧ್ಯಯನ ಕ್ಷೇತ್ರವಂತೂ ಅಪ್ಪಟ ಕನ್ನಡದ್ದು. ಬಹುಭಾಷಾ ಪಂಡಿತೆಯಾಗಿರುವ ಇವರು ಅನ್ಯ ಭಾಷಾ ತಿಳುವಳಿಕೆಗಳನ್ನು ಕನ್ನಡಕ್ಕೆ ತಂದು ಕನ್ನಡ ಭಾಷಾ ಶ್ರೀಮಂತಿಕೆಗೆ ಕಾರಣರಾದವರು. ಮಹಿಳಾ ಅಧ್ಯಯನ, ಸ್ತ್ರೀವಾದಿ ಸಾಹಿತ್ಯ ವಿಮರ್ಶೆ, ಶಾಸ್ತ್ರಾಧ್ಯಯನ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ ಇವರು ಕನ್ನಡದ ಮಹಿಳಾ ಬರವಣಿಗೆ, ಜೈನ ಧರ್ಮದ ದೇವತೆಗಳು, ಕನ್ನಡದಲ್ಲಿ ಬಂದ ಜೈನ ಮಹಾಭಾರತಗಳ ಕುರಿತ ಸಂಶೋಧನೆಗಳನ್ನು ಇಂಗ್ಲಿಷ್‌ನಲ್ಲಿ ಪ್ರಕಟಿಸಿ ಕನ್ನಡದ ಕೀರ್ತಿ ವೃದ್ಧಿಸುವಂತೆ ಮಾಡಿದವರು. ಖ್ಯಾತ ವಿಮರ್ಶಕರಾಗಿ, ಸಂಶೋಧಕರಾಗಿ, ಕನ್ನಡದ ಸ್ತ್ರೀನಿಷ್ಠ ವಿಮರ್ಶೆಯ ಮುಂಚೂಣಿಯ ವಿಮರ್ಶಕರಾಗಿ ಹೆಸರುವಾಸಿಯಾಗಿರುವ ಡಾ.ಬಿ.ಎನ್.ಸುಮಿತ್ರಾಬಾಯಿಯವರು ಆಳ್ವಾಸ್ ನುಡಿಸಿರಿ 2016ರ ಸರ್ವಾಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿರುವುದು ನಮಗೆ ಅತೀವ ಸಂತೋಷವನ್ನುಂಟು ಮಾಡಿದೆ.

ಆಳ್ವಾಸ್ ನುಡಿಸಿರಿ 2016ರ ಉದ್ಘಾಟನೆಗೆ ಡಾ.ಜಯಂತ ಗೌರೀಶ ಕಾಯ್ಕಿಣಿ

jayanth_kaikiniಸಮಕಾಲೀನ ಕನ್ನಡ ಸಾಹಿತಿಗಳಲ್ಲಿ ಪ್ರಮುಖರಾಗಿರುವ ಡಾ.ಜಯಂತ ಗೌರೀಶ ಕಾಯ್ಕಿಣಿಯವರು ಮೂಲತ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದವರು. ಎಂ.ಎಸ್ಸಿ ಬಯೋಕೆಮೆಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದುಕೊಂಡ ಇವರು ಮುಂಬಯಿಯ ಕಂಪೆನಿಗಳಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದವರು. ತನ್ನ ೧೯ನೇ ವಯಸ್ಸಿನಲ್ಲಿಯೇ ’ರಂಗದಿಂದೊಂದಿಷ್ಟು ದೂರ’ ಎನ್ನುವ ಕವನ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದ ಇವರು ಒಟ್ಟು ನಾಲ್ಕು ಬಾರಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಕವಿ, ಕತೆಗಾರ, ನಾಟಕಕಾರ, ಅಂಕಣ ಬರಹಗಾರರಾಗಿ, ಇತ್ತೀಚಿನ ದಿನಗಳಲ್ಲಿ ಚಲನಚಿತ್ರ ಕ್ಷೇತ್ರದಲ್ಲಿಯೂ ಅಪಾರ ಯಶಸ್ಸನ್ನು ಕಂಡವರು. ಸ್ವತಂತ್ರ ಬರಹಗಾರರಾಗಿ ಬರವಣಿಗೆಯಲ್ಲಿ ಸಂತೋಷಕಾಣುತ್ತಿರುವ ಜಯಂತ ಕಾಯ್ಕಿಣಿಯವರು ಕನ್ನಡ ಭಾಷೆಯನ್ನು ಅಪಾರವಾಗಿ ಪ್ರೀತಿಸುವವರು. ಈ ಟಿ.ವಿ ವಾಹಿನಿಯ ’ನಮಸ್ಕಾರ’ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತನಾಮ ಸಾಹಿತಿಗಳನ್ನು ಜನಮಾನಸಕ್ಕೆ ತಲುಪಿಸಿ ಅಪಾರ ಜನಮನ್ನಣೆಗೆ ಪಾತ್ರರಾದವರು.

ಆಭಿಜಾತ ಪ್ರತಿಭೆಯಾಗಿ, ಕನ್ನಡ ಭಾಷೆ-ಸಾಹಿತ್ಯವನ್ನು ಉಸಿರಾಗಿಸಿಕೊಂಡಿರುವ ಖ್ಯಾತ ಸಾಹಿತಿ ಡಾ.ಜಯಂತ ಗೌರೀಶ ಕಾಯ್ಕಿಣಿಯವರು ಆಳ್ವಾಸ್ ನುಡಿಸಿರಿ 2016ರ ಉದ್ಘಾಟನೆ ಮಾಡಲಿರುವುದು ನಮಗೆ ಹರ್ಷವನ್ನುಂಟುಮಾಡಿದೆ.
’ಕರ್ನಾಟಕ : ನಾಳೆಗಳ ನಿರ್ಮಾಣ’ ಎನ್ನುವ ಪ್ರಧಾನ ಪರಿಕಲ್ಪನೆಯಲ್ಲಿ ಮೂರು ದಿನಗಳ ಕಾಲ ನಡೆಯುವ ಆಳ್ವಾಸ್ ನುಡಿಸಿರಿ 2016ರ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ಪ್ರತಿನಿಧಿ ಶುಲ್ಕವಿಲ್ಲದೆ ಸಂಪೂರ್ಣ ಉಚಿತವಾಗಿ ಭಾಗವಹಿಸಬಹುದು. ಭಾಗವಹಿಸುವ ವಿದ್ಯಾರ್ಥಿಗಳು ಆಯಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ದೃಢೀಕರಣ ಪತ್ರದೊಂದಿಗೆ ಹಾಜರಾಗಬೇಕು. ಉಳಿದಂತೆ ಇತರರು ಸಮ್ಮೇಳನದ ಪ್ರತಿನಿಧಿಗಳಾಗಲು ೧೦೦ ರೂ ಪ್ರತಿನಿಧಿ ಶುಲ್ಕದೊಂದಿಗೆ ಈ ಸಮ್ಮೇಳನದ ಸದುಪಯೋಗಪಡೆದುಕೊಳ್ಳಬಹುದು. ಸಾಹಿತಿಗಳು, ವಿಮರ್ಶಕರು, ಸಂಶೋಧಕರು, ಕಲಾವಿದರು ಭಾಗವಹಿಸುವ ಈ ಸಮ್ಮೇಳನವನ್ನು ಕನ್ನಡ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಯಶಸ್ವಿಗೊಳಿಸಬೇಕಾಗಿ ಕೇಳಿಕೊಳ್ಳುತ್ತೇನೆ.

ದೂರವಾಣಿ: 08258-261229
Email: nudisiri@alvs.org

ಡಾ| ಎಂ.ಮೋಹನ ಆಳ್ವ.
ಅಧ್ಯಕ್ಷರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.), ಮೂಡುಬಿದಿರೆ.