Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ಮಾಧ್ಯಮ > ಪ್ರಕಟಣೆ > ಆಳ್ವಾಸ್ ವಿದ್ಯಾರ್ಥಿಸಿರಿ – 2016 ಅಧ್ಯಕ್ಷರ ಭಾಷಣ – ಕು. ಅನನ್ಯ

ಆಳ್ವಾಸ್ ವಿದ್ಯಾರ್ಥಿಸಿರಿ – 2016 ಅಧ್ಯಕ್ಷರ ಭಾಷಣ – ಕು. ಅನನ್ಯ

ಓ ತಾಯೆ ಕನ್ನಡದ ಸಿರಿ ನುಡಿಯೆ, ನುಡಿಸಿರಿಯmanasa-digital-photos-17th-mdb-5

ಬಾರಮ್ಮ ಕರೆಯುವೆನು ನಿನಗೆ ತಲೆ ಬಾಗಿ

ಬಂದೆನ್ನ ನಾಲಗೆಯ ಮೇಲೆ ನೀ ನಲಿಯುತಿರೆ

ನಾ ಹಿಗ್ಗಿ ತೊದಲುಲಿವೆ, ನಿನ್ನ ಮಗುವಾಗಿ

ಕನ್ನಡ ನಾಡಿನ ಸಾಹಿತ್ಯ-ಸಂಸ್ಕೃತಿಯ ಮೈಸಿರಿಯನ್ನು ಮೂಡುಬಿದಿರೆಯ ಆಳ್ವಾಸ್ ವಿದ್ಯಾರ್ಥಿಸಿರಿಯ ಸಡಗರ ಸಂಭ್ರಮವನ್ನು ನೋಡ ಬಂದಿರುವ ನಾಡಿನ ಉದ್ದಗಲದ ಹಿರಿಯರೆ, ನನ್ನ ಪ್ರೀತಿಯ ಹಿರಿ-ಕಿರಿಯ ಸೋದರ ಸೋದರಿಯರೆ ತಮಗೆಲ್ಲ ನನ್ನ ಗೌರವದ, ನಲ್ಮೆಯ ವಂದನೆಗಳು. ಎಲ್ಲಕ್ಕಿಂತ ಮಿಗಿಲಾಗಿ ತಮ್ಮೆಲ್ಲರ ಮುಂದೆ ನನ್ನನ್ನು ಹೀಗೆ ತಂದು ನಿಲ್ಲಿಸಿ, ನಾಲ್ಕು ಮಾತುಗಳನ್ನಾಡಲು ಅವಕಾಶ ನೀಡಿದ ಡಾ. ಎಂ. ಮೋಹನ ಆಳ್ವರಿಗೆ ಅನಂತ ಪ್ರಣಾಮಗಳು.

ಮೊದಲೇ ಹೇಳಿದಂತೆ ನನ್ನದು ತೊದಲುಲಿ. ಮಕ್ಕಳ ತೊದಲುಲಿಯನ್ನು ಕೇಳುವುದೆಂದರೆ-ಹಿರಿಯರಿಗೇನೋ ನಿರೀಕ್ಷೆ, ಜತೆಯಲ್ಲೇ ಸಂತೋಷ. ಕಿರಿಯರಿಗೂ ಏನೋ ಕುತೂಹಲ ! ಹೀಗಾಗಿ ನಾಲ್ಕು ಮಾತುಗಳನ್ನು ಆಡುತ್ತೇನೆ. ಪ್ರೀತಿಯಿಂದ ಕೇಳಬೇಕಾಗಿ ವಿನಂತಿಸುತ್ತೇನೆ.

ಬದುಕಿನಲ್ಲಿ ಬಯಸಿದ್ದೆಲ್ಲ ಬಂದೊದಗುವುದಿಲ್ಲ. ಅಂತೆಯೆ ಬಂದುದೆಲ್ಲ ಬಯಸಿದ್ದೂ ಆಗಿರುವುದಿಲ್ಲ. ನನ್ನ ಪಾಲಿಗಿದು ಬಯಸದೆಯೆ ಬಂದ ಭಾಗ್ಯ. ಕೇವಲ ಭಾಗ್ಯವಲ್ಲ, ಸೌಭಾಗ್ಯ. ವಿದ್ಯಾರ್ಥಿಗಳು ಸದಾ ಕನಸು ಕಾಣುವವರು, ಕಂಡ ಕನಸ್ಸನ್ನು ನನಸಾಗಿಸಲು ಸದಾ ಪ್ರಯತ್ನ ಮಾಡಬೇಕಾದವರು.ವಿದ್ಯೆಗೆ ಆಸಕ್ತಿಯೆ ತಾಯಿ, ಅಭ್ಯಾಸವೇ ತಂದೆ ಎಂಬ ಸೂಕ್ತಿಯೊಂದಿದೆ. ಅಭಿರುಚಿಯಿಲ್ಲವಾದರೆ ಆಸಕ್ತಿ ಮೂಡುವುದಾದರೂ ಹೇಗೆ? ಆಸಕ್ತಿಯುಂಟಾಗದೆ ಅಭ್ಯಾಸ ಮಾಡುವುದಾದರೂ  ಹೇಗೆ? ಕಲಿಕೆಯ ಅಭಿರುಚಿ ಉಂಟಾಗುವುದೇ ಮನೆಯಲ್ಲಿ.

ಮನೆಯೆ ಮೊದಲ ಪಾಠಶಾಲೆ

ಜನನಿ ತಾನೆ ಮೊದಲ ಗುರುವು

ಜನನಿಯಿಂದ ಪಾಠ ಕಲಿತ ಜನರು ಧನ್ಯರು – ಹಾಡನ್ನು ನಾವೆಲ್ಲ ಕೇಳಿದ್ದೇವೆ. ಕೇಳಿ ಕುಣಿದಿದ್ದೇವೆ. ಕೈಲಾಸಂ “ಮಕ್ಕಳ ಸ್ಕೂಲು ಮನೇಲಲ್ವೆ?” ಎನ್ನುತ್ತಿದ್ದರಂತೆ! ಮಗುವು ಮನೆಯಲ್ಲಿ ನೋಡಿ ಕಲಿಯುತ್ತದೆ, ಕೇಳಿ ಕಲಿಯುತ್ತದೆ. ಕಲಿಯಬೇಕೆಂಬ ಕುತೂಹಲ-ಮಗುವಿನ ಸಹಜ ಸ್ವಭಾವ. ಹೀಗಾಗಿಅದು-ತಾನು ಕಂಡುದರ ಕುರಿತು ಕುತೂಹಲದಿಂದ ಪ್ರಶ್ನಿಸುತ್ತದೆ.  ಯಾರಲ್ಲಿ ಪ್ರಶ್ನೆ ಉಂಟಾಗುತ್ತದೋ ಅವರು ಬೆಳೆಯುತ್ತಾರೆ.

ಬಂಧುಗಳೆ,

ನಮಗೆ ಮನೆಯ ಕಲಿಕೆ ಸಾಕಾಗುವುದಿಲ್ಲ. ನಮ್ಮ ಮಗು ಶಾಲೆಗೆ ಹೋಗಿ ಕಲಿಯಬೇಕೆಂದು ತಾಯಿ-ತಂದೆ ಅಪೇಕ್ಷ್ಷಿಸಿ ಶಾಲೆಗೆ ಕಳಿಸುತ್ತಾರೆ. ಆಗ ನಾವು ವಿದ್ಯಾರ್ಥಿಗಳು ಎನಿಸುತ್ತೇವೆ. ವಿದ್ಯಾರ್ಥಿ ಎಂದರೇನೇ ವಿದ್ಯೆಯನ್ನು ಬೇಡಿ ಪಡೆಯುವವನು ಎಂದು ಅರ್ಥ. ಏನು ವಿದ್ಯೆ? ಏಕೆ ವಿದ್ಯೆ? ವಿದ್ಯೆಯಿಲ್ಲದೆ ಮನುಷ್ಯ ಬದುಕಲಾರನೆ?

ಮಕ್ಕಳಿಗೆ ತಂದೆ ಬಾಲ್ಯದೊ

ಳಕ್ಕರ ವಿದ್ಯೆಗಳ ನರುಪದಿರ್ದೊಡೆ ಕೊಂದ0

ಲಕ್ಕ ಧನಮಿರಲು ಕೆಡುಗು0

ಚಿಕ್ಕಂದಿನಾ ವಿದ್ಯೆ ಪೆÇರೆಗು ಚೂಡಾರತ್ನ – ಇದು ವಿದ್ಯೆಯ ಹಿರಿಮೆಯನ್ನು ಎತ್ತಿ ಸಾರುವ ಕವಿವಾಣಿ. ವಿದ್ಯೆಯೆಂದರೆ ಜ್ಞಾನ, ಅರಿವು. ಈ ಅರಿವು ಬೇಕಾದುದು ಮನುಷ್ಯರಿಗೆ ಮಾತ್ರ. ಮನುಷ್ಯನೆಂದರೆ-ವಿಚಾರವಂತನೆಂದೇ ಅರ್ಥ. ಮನುಷ್ಯನಾಗಿ ಹುಟ್ಟಿದರೆ ಸಾಲದು, ಮನುಷ್ಯನಾಗಿ ಬೆಳೆಯಬೇಕು. ಮನುಷ್ಯಶ್ರೇಷ್ಠನಾಗಿ ಬೆಳೆದು ನಿಲ್ಲಬೇಕು. ಇತರ ಜೀವರಾಶಿಗೆ ಭಿನ್ನವಾದವನೆಂದು ಗುರುತಿಸಿ ಗೌರವಕ್ಕೆ ಪಾತ್ರನಾಗಬೇಕು. ಈ ಎಚ್ಚರದಿಂದ ನಮ್ಮ ಹಿರಿಯರು ‘ಅಕ್ಷರಾಭ್ಯಾಸ’ವನ್ನು ಸಂಸ್ಕಾರವೆಂದು ತಿಳಿದರು, ಬಿಡದೆ ಅದನ್ನು ಸಾಧಿಸಿದರು. ಈ ವಿದ್ಯೆಯ ಬಗೆಗೆ ಬಲ್ಲವರ ಮಾತು ಹೀಗಿದೆ:

* ಎಲ್ಲ ಕಡೆಗಳಿಂದ ಬರುವ ಉನ್ನತ ವಿಚಾರಗಳನ್ನು ಸ್ವೀಕರಿಸುವುದು – ಋಗ್ವೇದ

* ಅಸತ್ಯದಿಂದ ಸತ್ಯದೆಡೆಗೆ ಕತ್ತಲಿಂದ ಬೆಳಕಿನೆಡೆಗೆ ಸಾವಿನಿಂದ ಅಮರತ್ವದೆಡೆಗೆ ಸಾಗುವುದು – ಉಪನಿಷತ್ತು

* ಮಗುವಿನಲ್ಲಿರುವ ನಾಲ್ಕು ಗುಣಗಳನ್ನು ಸಾಹಸ, ಬುದ್ಧಿಶಕ್ತಿ, ಸಂವೇದನಾಶೀಲತೆ ಮತ್ತು ದೈಹಿಕ ಶಕ್ತಿಯನ್ನು   ಪೋಷಿಸಿ ಬೆಳೆಸುವುದು – ಬರ್ನಾರ್ಡ್ ರಸೆಲ್

ಈ ಎಲ್ಲ ಮಾತುಗಳ ಒಟ್ಟು ಸಾರಾಂಶ ಮಗುವಿನಲ್ಲಿರುವ ಸುಪ್ತ ಪ್ರಜ್ಞೆಯನ್ನು ಹೊರ ಸೆಳೆದು ರೂಪಿಸುವ ಕ್ರಿಯೆ. ಇಲ್ಲಿ ‘ರೂಪಿಸು’ ಎನ್ನುವುದು ಅತ್ಯಂತ ಗಮನಾರ್ಹ. ‘ರೂಪಿಸು’ ಎಂದರೆ ರೂಪಕೊಡುವುದು. ಇದು ಕಲ್ಲನ್ನು ಕೆತ್ತಿ ರೂಪಕೊಡುವ ಕ್ರಿ. ಈ ಕ್ರಿಯೆಯೇ ಸಂಸ್ಕೃತಿ. ಕಲ್ಲು ಪ್ರಕೃತಿ. ಅದನ್ನುಬೇಕಾದಂತೆ ಕೆತ್ತಿ ಮೂರ್ತಿ ಮಾಡಿ ಪೂಜಿಸುವುದು ಸಂಸ್ಕೃತಿ. ಆ ಕಲ್ಲಿನಲ್ಲೇ ಹೊಲಸು ಮಾಡುವುದು ವಿಕೃತಿ. ಮನುಷ್ಯ ಸಂಸ್ಕಾರಗೊಂಡು ಸುಸಂಸ್ಕೃತನಾಗಿ ಬದುಕಬೇಕಾದವನು. ಹೀಗಾಗಿ ವಿದ್ಯಾಭ್ಯಾಸವೆಂಬುದು ಸಂಸ್ಕಾರ. ಒಂದೇ ಗಿಳಿಯ 2 ಪುಟ್ಟ ಮರಿಗಳು ಬೇರೆ ಬೇರೆ ಕಡೆಗಳಲ್ಲಿ ಬೆಳೆಯುತ್ತದೆ. ಒಂದುಕಟುಕನೊಬ್ಬನ ಜೊತೆ ಮತ್ತು ಇನ್ನೊಂದು ಸನ್ಯಾಸಿಯೋರ್ವರ ಜೊತೆ. ಕಟುಕನ ಜೊತೆ ಬೆಳೆದ ಗಿಳಿಮರಿ ದೂರದಿಂದ ಯಾರಾದರೂ ಬರುವುದನ್ನು ನೋಡಿಯೇ ಕೊಲ್ಲಿರಿ; ಬಡಿಯಿರಿ ಎನ್ನುತ್ತಿತ್ತು. ಸನ್ಯಾಸಿಯ ಜೊತೆ ಬೆಳೆದ ಗಿಳಿ ಮರಿ ಯಾರೇ ಬಂದರೂ ಬನ್ನಿ, ಕುಳಿತುಕೊಳ್ಳಿ, ಹೇಗಿದ್ದೀರಿ ಎಂದು ಕೇಳುತ್ತಿತ್ತು. ಯಾಕೆ ಹೀಗೆ? ಗಿಳಿ ಮರಿಗಳಿಗೆ ಸಿಕ್ಕ ಸಂಸ್ಕಾರ ಅಂತದ್ದು.

ಇದ್ದುದನ್ನು ಚೆನ್ನಾಗಿ ಮಾಡುವುದೇ ಸಂಸ್ಕೃತಿ. ಸಂಸ್ಕೃತಿ ಬೇರೆಯಲ್ಲ, ಸಂಸ್ಕಾರ ಬೇರೆಯಲ್ಲ. ಡಿ.ವಿ.ಜಿಯವರು ‘ನಡೆ-ನುಡಿಗಳ ಚೊಕ್ಕಟತನವೇ ಸಂಸ್ಕೃತಿ’ ಎಂದರು. ಈ ನಡೆಯನ್ನು- ಈ ನುಡಿಯನ್ನು ನಾವು ತಾಯಿ-ತಂದೆಯವರಿಂದ ಮನೆಯ ಹಿರಿಯರಿಂದ ಕಲಿಯುತ್ತೇವೆ. ಅವರನ್ನು ನೋಡಿಕಲಿಯುತ್ತೇವೆ. ಮನೆಯವರೆಲ್ಲ ಸಂಸ್ಕಾರವಂತರಾದರೆ,  ಮಗು ಸಂಸ್ಕಾರ ಪಡೆಯುತ್ತದೆ. ಹೇಳುವ ನೀತಿಗೂ, ಬಾಳುವ ರೀತಿಗೂ ಅಂತರವಿಲ್ಲದಿರುವುದೇ ನಡೆ-ನುಡಿಯ ಚೊಕ್ಕಟತನ. ಅದುವೇ ಸಂಸ್ಕಾರ. ಹೀಗಾಗಿ ನಾವು ಸಂಸ್ಕಾರ ಪಡೆಯುವುದು ಮೊದಲು ಸಂಸಾರದಿಂದ. ಸಂಸ್ಕಾರ ರಹಿತ ಸಂಸಾರಸಮಾಜದಲ್ಲಿ ಸಸಾರ ಆಗಿ ಬಿಡುತ್ತದೆ.

ನಮ್ಮಲ್ಲಿ ಒಂದು ಗಾದೆಯಿದೆ. ‘ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ’ ಎಂದು. ಹಿರಿಯಕ್ಕನೆಂದರೆ ಕೇವಲ ಅಕ್ಕನಲ್ಲ, ಮನೆಯ ಹಿರಿಯರೆಲ್ಲ. ಇದು ಹಿರಿಯರು ಗಮನಿಸಬೇಕಾದ ಸಂಗತಿ.

ಆತ್ಮೀಯರೆ,

ಮನೆಯಷ್ಟೇ ಸಂಸ್ಕಾರ ನೀಡದು. ಬದುಕುವ ಪರಿಸರವೂ ಸಂಸ್ಕಾರಕ್ಕೆ ಕಾರಣವಾಗುತ್ತದೆ. ‘ ಮನುಷ್ಯ ಪರಿಸರದ ಕೈಗೂಸು’ ಎಂಬ ಮಾತೊಂದಿದೆ. ಪರಿಸರದ ಪ್ರಭಾವದಿಂದ ತಪ್ಪಿಸಿಕೊಳ್ಳುವುದು ಸುಲಭಸಾಧ್ಯವಲ್ಲ. ಅನೇಕ ವೇಳೆ ಮನೆ ಚೆನ್ನಾಗಿದ್ದರೂ, ಸಂಸ್ಕಾರ ಸಂಪನ್ನವಾಗಿದ್ದರೂ, ಬದುಕುವ ಪರಿಸರ ಕೆಟ್ಟಿದ್ದರೆ ನಾವೂ ಕೆಡುತ್ತೇವೆ. ಹೀಗಾಗಿ ಪರಿಸರವನ್ನು ಗಮನಿಸಬೇಕಾದ ಅಗತ್ಯವಿದೆ. ಎಷ್ಟೋ ವೇಳೆ ಮನೆಯಲ್ಲಿ ಚೆನ್ನಾಗಿರುವ ಮಕ್ಕಳು- ಪರಿಸರ ದೋಷದಿಂದ ಕೆಡುತ್ತಾರೆ. ಇದಕ್ಕೆ ನಮ್ಮಲ್ಲಿ ಅನೇಕ ಉದಾಹರಣೆಗಳಿವೆ, ಕಥೆಗಳಿವೆ. “ಗಾಣದವನ ಸ್ನೇಹಕ್ಕಿಂತ- ಗಂಧದವನ ಕೂಡೆಗುದ್ದಾಟವೇ ಲೇಸು” ಎಂಬ ಗಾದೆ ಇದಕ್ಕೆ ಉದಾಹರಣೆ. ಮಕ್ಕಳು ಅನೇಕ ದುಶ್ಚಟಗಳಿಗೆ ಬಲಿ ಬೀಳುವುದು- ಸುತ್ತಣ ಸಮಾಜದ ಸಹವಾಸದಿಂದ. ಕೆಟ್ಟವರ ಸಂಪರ್ಕದಿಂದ. ಹಾಗೆಂದು ತನ್ನಿಂದಾದ ಕೆಟ್ಟದಕ್ಕೆ ಇತರರಿಗೆ ಬೆರಳು ತೋರಿಸಬಾರದು. ಒಂದೇ ತಾಯಿಯ ಮಕ್ಕಳಾದ ಅಣ್ಣ-ತಮ್ಮಂದಿರಲ್ಲಿ ಅಣ್ಣಕುಡುಕ, ಸೋಮಾರಿ. ತಮ್ಮ ಶ್ರಮಜೀವಿ. ಅಣ್ಣ ಹೇಳುತ್ತಾನೆ, ‘‘ನಾನು ಕೆಟ್ಟವನಾಗಲು ಕಾರಣ ನನ್ನ ತಂದೆ ಪ್ರತೀ ದಿನ ಕುಡಿದು ಬಂದು ಅಮ್ಮನಿಗೆ ಹಿಂಸಿಸುತ್ತಿದ್ದರು; ಅವರನ್ನು ನೋಡಿ ನಾನು ಹೀಗಾದೆ ಅಂತ’’ ತಮ್ಮ ಹೇಳ್ತಾನೆ, ‘‘ನಾನು ಒಳ್ಳೆಯವನಾಗಲೂ ಕಾರಣ ನನ್ನ ತಂದೆ, ಅವರ ಆ ಕುಡಿತದ ಚಟಕಂಡು ನಾನು ಹಾಗಾಗಬಾರದು, ನಾನು ಚೆನ್ನಾಗಿ ಓದಬೇಕು. ಅಮ್ಮನನ್ನು ಚೆನ್ನಾಗಿ ಸಾಕಬೇಕೆಂದು ಪಣ ತೊಟ್ಟೆ; ಇಂದು ಹೀಗೆ ಆಗಿದ್ದೇನೆ’’. ಬಂಧುಗಳೇ,

ಪರರನ್ನು ನಿಂದಿಸಲು ಬೆರಳು ತೋರಿಸುವಾಗ

ನಿನ್ನನೇ ತೋರುವುದು ಮೂರುಬೆರಳು

ಪರರ ಕುಂದನು ನೀನು ಎತ್ತಿ ಹೇಳುವ ಮುನ್ನ

ನಿನ್ನ ನೀ ತಿದ್ದಿಕೋ ಮೂರು ಬಾರಿ. ಅನ್ನೋ ಸುಭಾಷಿತದಂತೆ ನಾವು    ಎಚ್ಚರದಲ್ಲಿರಬೇಕಾದದ್ದು ಅತ್ಯಗತ್ಯ.

ಸಜ್ಜನರ ಸಹವಾಸ ಸವಿಜೇನ ಸವಿದಂತೆ

ದುರ್ಜನರ ಸಹವಾಸ ಹೆಜ್ಜೇನ ಕಡಿದಂತೆ

ನಮಗೆ ಬೇಕಾದುದು ಜೇನಿನ ಸಿಹಿಯೇ ಹೊರತು, ಹೆಜ್ಜೇನಿನ ಕಡಿತವಲ್ಲ. ವಿದ್ಯಾರ್ಥಿಗಳಾದ ನಾವು ಇದನ್ನು ಗಮನದಲ್ಲಿಟ್ಟುಕೊಂಡರೆ ನಮ್ಮ ಬದುಕು ಸಿಹಿಯಾಗುತ್ತದೆ, ಇಲ್ಲವಾದರೆ ಕಹಿಯಾಗುತ್ತದೆ.

ಸಂಸ್ಕಾರವೆಂಬುದು ಸಂಸಾರದಿಂದ ಬರುತ್ತದೆ. ಸಮಾಜದಿಂದ ಪ್ರಾಪ್ತಿಯಾಗುತ್ತದೆ. ಹೀಗಾಗಿ ಸಂಸಾರ, ಸಮಾಜ, ಸಂಸ್ಕಾರಗಳೆಂಬ ‘ಸಕಾರತ್ರಯಗಳು’ ನಮ್ಮ ಬದುಕನ್ನು ರೂಪಿಸುವಲ್ಲಿ ಮುಖ್ಯವಾಗುತ್ತದೆ. ಎಂದು ಧರ್ಮಸ್ಥಳದ ಪೂಜ್ಯ ಖಾವಂದರು ಹೇಳಿರುವುದು ನನ್ನಲ್ಲಿ ಭದ್ರವಾಗಿಬೇರೂರಿದೆ.

ಶುಚಿಗೊಳಿಸು ಜೀವನವ

ರುಚಿಗೊಳಿಸು ಜೀವನವ

ಶುಚಿ ರುಚಿಯಾಗಿರಲಿ ಬಾಳ ಕೊನೆತನಕ

ಎಂಬ ಕವಿವಾಣಿ ಬಾಳಿಗೆ ಬೆಳಕೆಂಬುದರಲ್ಲಿ ಸಂದೇಹವಿಲ್ಲ. ನಮ್ಮ ಬದುಕು ನಮ್ಮ ಕೈಯಲ್ಲಿದೆ. ಹೀಗೆ ನಮ್ಮ ಕೈಯಲ್ಲಿರುವುದಕ್ಕೆ ಸದಾ ಎಚ್ಚರಬೇಕು.

“ತನ್ನ ಒಳಿತಿಗೆ ತಾನೆ ಕಾರಣ

ತಾನೆ ಚಾರಣ-ಮಾರಣ”ಎಂದವರು ಎಸ್.ವಿ.ಪರಮೇಶ್ವರ ಭಟ್ಟರು. ನಮ್ಮ ಅರಿವೇ ನಮಗೆ ಗುರುವಾಗಬೇಕು. ನಮ್ಮ ಸಾಧನೆಯೇ ನಮ್ಮನ್ನು ಗುರಿ ಮುಟ್ಟಿಸಬೇಕು. ದಾರಿ ನೇರವಾಗಿದ್ದರೆ ಗುರಿ ಮುಟ್ಟುವುದು ಸುಲಭ. ದುರದೃಷ್ಟವೆಂದರೆ ಗುರಿಯಿದ್ದು ದಾರಿಯಿಲ್ಲದಿರುವುದು. ಈ ಸಂದರ್ಭದಲ್ಲಿಕುವೆಂಪು ಅವರ ಹಾಡಿನ ಸೊಲ್ಲೊಂದು ನೆನಪಾಗುತ್ತಿದೆ.

ಗುರುವಿದ್ದನಂದು, ಗುರಿಯಿತ್ತು ಮುಂದು, ನುಗ್ಗಿದುದು ಧೀರದಂಡು

ಗುರುವಿಲ್ಲ ವಿಂದು, ಗುರಿಯಿಲ್ಲ ಮುಂದು, ಬಿದ್ದಿಹುದು ಹೇಡಿ ಹಿಂಡು

ನಮ್ಮ ಇಂದಿನ ಗುರಿ-ಗರಿಷ್ಠ ಅಂಕಗಳಿಸುವತ್ತ. ಕೈ ತುಂಬ ಸಂಪಾದಿಸುವ ವೃತ್ತಿಯತ್ತ. ನಾವಿಂದು ಶಿಕ್ಷಣ ಪಡೆಯುವುದು ಕೇವಲ ಉದ್ಯೋಗಕ್ಕಾಗಿ. ಸಂಪಾದನೆಗಾಗಿ. ಸಂಸ್ಕಾರಕ್ಕಾಗಿ ಅಲ್ಲವೇನೋ ಎಂಬ ಚಿಂತೆ ಕಾಡುತ್ತಿದೆ. ಬಲ್ಲವರ ಮಾತೊಂದಿದೆ. “ವಿದ್ಯಾಭ್ಯಾಸದಲ್ಲಿ ಎರಡು ವಿಧ. ಒಂದು – ನಾವು ಜೀವನೋಪಾಯಗಳನ್ನು ಹೇಗೆ ಗಳಿಸುವುದೆಂದು ಹೇಳಿ ಕೊಡುವುದು. ಇನ್ನೊಂದು – ಹೇಗೆ ಬದುಕಬೇಕೆಂದು ಹೇಳಿಕೊಡುವುದು.  ಈ ನಿಟ್ಟಿನಲ್ಲಿ ಹೆಚ್ಚಿನ ಒತ್ತು ಕೊಟ್ಟು ವಿದ್ಯಾಭ್ಯಾಸ ನೀಡಿ, ಅದೆಷ್ಟೋ ಸಿರಿಗಳನ್ನು ಬೆಳೆಸಿ ದೊಡ್ಡ ಹೆಮ್ಮರವಾಗಿಸುತ್ತಿರುವ ಧೀಮಂತ ವ್ಯಕ್ತಿತ್ವ ನಮ್ಮ ಮೋಹನ ಆಳ್ವರದ್ದು.ಹೆಚ್ಚಿನ ಅಂಕಗಳಿಸುವುದೇ ಅರ್ಹತೆಯೇನು? ಒಬ್ಬಾತ-ಒಬ್ಬಾಕೆ- ಅಂಕಗಳಿಕೆಯಲ್ಲಿ ಹಿಂದಿರಬಹುದು. ಆದರೆ ಹೇಗೆ ಬದುಕಬೇಕೆಂಬುದರಲ್ಲಿ ಉಳಿದವರಿಗೆ ಆದರ್ಶವಾಗಿರಬಹುದು. ನಾವು ಎಷ್ಟೇ ಅಂಕಗಳಿಸಿದರೂ ಕಲಿತದ್ದು ಎಷ್ಟು? ಒಂದು ಸುಭಾಷಿತ ಹೀಗಿದೆ,

ಆಚಾರ್ಯಾತ್ ಪಾದ ಮಾದತ್ತೇ

ಪಾದಂ ಶಿಷ್ಯ ಸ್ವ ಮೇಧಯಾ

ಪಾದಂ ತು ಸಹ ಚಾರಿಭ್ಯ:

ಪಾದಂ ಕಾಲ ಕ್ರಮೇಣಚ

ಗುರುಗಳಿಂದ ನಾಲ್ಕನೆಯ ಒಂದಂಶ, ಸ್ವ ಪ್ರಯತ್ನದಿಂದ ಕಾಲಂಶ, ಸಹಪಾಠಿಗಳ ಜೊತೆಯಲ್ಲಿ ಕಾಲಂಶ, ಉಳಿದ ಕಾಲು ಅಂಶ ಕಾಲದೊಂದಿಗೆ ಬದುಕುತ್ತ ನಾವಿದನ್ನು ಗಮನಿಸಬೇಕು. ವಿದ್ಯೆಯೇಂಬುದು ಸಾಗರವಿದ್ದಂತೆ. ಸಾಗರದ ಆಳ-ವಿಸ್ತಾರವನ್ನು ಸುಲಭದಲ್ಲಿ ತಿಳಿಯಲಾರೆವು! ಹಾಗೆಯೇ ವಿದ್ಯೆ ಕೂಡ.ಕಲಿತಷ್ಟು ಕಲಿಯಲಿಕ್ಕಿದೆ, ತಿಳಿದಷ್ಟು ತಿಳಿಯಲಿಕ್ಕಿದೆ.

ಬಂಧುಗಳೆ,

ನಮ್ಮ ಇಂದಿನ ಹೆತ್ತವರ ಆಶಯವಾದರೂ ಏನು? ಗುರುಗಳ ನಿರೀಕ್ಷೆ ಏನು? “ನಮ್ಮ ಮಕ್ಕಳು ಬುದ್ಧಿವಂತರಾಗಬೇಕು, ನಮ್ಮ ವಿದ್ಯಾರ್ಥಿಗಳು ಬುದ್ಧಿವಂತರಾಗಬೇಕು’’ ಇಷ್ಟೆ. ಕೇವಲ ಬುದ್ಧಿವಂತರಾದರೆ ಸಾಲದು, ಹೃದಯವಂತರೂ ಆಗಿರಬೇಕು. ಬುದ್ಧಿಗೇ ಪ್ರಾಧಾನ್ಯವಿತ್ತರೆ ಭಾವ-ಬಡವಾಗುತ್ತದೆ. ಮನುಷ್ಯನಲ್ಲಿ ಬುದ್ಧಿಯಿದೆ, ಭಾವವಿದೆ, ಹೃದಯವಿದೆ. ಈ ಮೂರು ಮುಪ್ಪುರಿಗೊಂಡಾಗ ಮಾತ್ರ ಬದುಕು ಭದ್ರವಾಗುತ್ತದೆ. ವಿದ್ಯೆ ನಮ್ಮ ಹೃದಯ ಸಂಸ್ಕಾರಕ್ಕೆ ಕಾರಣವಾಗಬೇಕು. ಒಂದು ಚಿಕ್ಕ ಕತೆಯಿದೆ.

ಒಬ್ಬ ಗುರುಗಳು ತನ್ನ ವಿದ್ಯಾರ್ಥಿಗಳನ್ನು ಚೆನ್ನಾಗಿ ಪರೀಕ್ಷಿಸಲೆಂದು ಇಕ್ಕಟ್ಟಾದ ದಾರಿಯಲ್ಲಿ ಗಾಜಿನ ಚೂರುಗಳನ್ನು ಹಾಕಿದರು. ಮಕ್ಕಳು ದಿನನಿತ್ಯ ಅದೇ ದಾರಿಯಲ್ಲಿ ಹೋಗುತ್ತಿದ್ದರು. ಮೂರು ಜನ ವಿದ್ಯಾರ್ಥಿಗಳು ಅದೇ ದಾರಿಯಲ್ಲಿ ಹೋಗುವಾಗ ಚೆಲ್ಲಿದ ಗಾಜಿನ ಚೂರನ್ನು ಕಂಡರು. ಒಬ್ಬಾತ‘ಉದ್ದ ಜಿಗಿತ‘ ಮಾಡಿ ಹಾರಿಹೋದ. ತಾನೇ ಬುದ್ಧಿವಂತನೆಂದು ತಿಳಿದುಕೊಂಡ. ಇನ್ನೊಬ್ಬ ಗಾಜಿನ ಚೂರುಗಳಿಲ್ಲದೆಡೆ ಮೆಲ್ಲನೆ ನಡೆಯುತ್ತ ಮುಂದೆ ಹೋದ. ಮೊದಲಿನವನಿಗಿಂತ ನಾನೇ ಬುದ್ದಿವಂತನೆಂದು ಉಬ್ಬಿ ಹೋದ. ಮೂರನೆಯವನು ಹೆಗಲ ಚೀಲವನ್ನು ಬದಿಗಿಟ್ಟು, ಗಾಜಿನ ಚೂರನ್ನೆಲ್ಲ ಒಟ್ಟು ಮಾಡಿದೂರಕ್ಕೆಸೆದು ಮುಂದೆ ಹೋದ. ಮೂರನೆಯವನು ಚಿಂತಿಸಿದ್ದು ಹೀಗೆ – “ಯಾರಾದರೂ ಕಣ್ಣು ಕಾಣದವರು ಬಂದರೆ, ಕತ್ತಲಲ್ಲಿ ಬಂದರೆ ಅವರ ಕಾಲಿಗೆ ತಾಗಿ ತೊಂದರೆಯಾಗಬಾರದಲ್ಲ” ಅವನು ಹೃದಯಕ್ಕೆ ಬೆಲೆಕೊಟ್ಟ. ಗುರುಗಳು ಮರುದಿನ ಮೂವರನ್ನು ಕರೆದು ನಿಮ್ಮಲ್ಲಿ ಯಾರು ಬುದ್ಧಿವಂತರು? ನಾನೆಲ್ಲವನ್ನೂ ನೋಡಿದ್ದೆನೆಂದರು. ಮೊದಲಿನವನು ಗುರುಗಳೇ ನಾನು ಉದ್ದಜಿಗಿತ ಮಾಡುವಂತೆ ಮನಸ್ಸು ಹೇಳಿತು, ಹಾಗೆ ಮಾಡಿದೆ. ನಾನಲ್ಲವೆ ಬುದ್ಧಿವಂತ ! ಎಂದ. ಎರಡನೆಯವನು ಗಾಜಿನ ಚೂರುಗಳಿಲ್ಲದೆಡೆ ಕಾಲಿಟ್ಟು ಮುನ್ನಡೆಯಲು ಬುದ್ಧಿಯನ್ನು ಉಪಯೋಗಿಸಿದ ನಾನೇ ಬುದ್ಧಿವಂತನಲ್ಲವೆಗುರುಗಳೇ ಎಂದ. ಮೂರನೆಯವನು ಏನನ್ನೂ ಹೇಳದೆ ಸುಮ್ಮನಿದ್ದ. ಆಗ ಗುರುಗಳೇ ಹೇಳಿದರು ನಿಮ್ಮಿಬ್ಬರಿಗಿಂತ ಈತನೇ ನಿಜವಾದ ಬುದ್ಧಿವಂತ. ಈತ ಹೃದಯಕ್ಕೆ ಬೆಲೆಗೊಟ್ಟ. ಇನ್ನೊಬ್ಬರಿಗೂ ತೊಂದರೆಯಾಗಬಾರದೆಂದು ಗಾಜಿನ ಚೂರನ್ನು ಹೊರಕ್ಕೆಸೆದ. ನೀವು ಕೇವಲ ಮನಸ್ಸಿಗೆ, ಬುದ್ಧಿಗೆಬೆಲೆಕೊಟ್ಟಿರಿ. ತನ್ನಂತೆ ಪರರನ್ನು ಬಗೆಯಬೇಕು. ತನಗೆ ಯಾವುದು ಕೆಟ್ಟದ್ದೋ, ಅದನ್ನು ಉಳಿದವರಿಗೂ ಕೆಟ್ಟದೆಂದು ತಿಳಿದು ನಡೆಯುವವನೇ ನಿಜವಾದ ಹೃದಯವಂತ ಎಂದರು. ನಾವು ಪಡೆಯುವ ಶಿಕ್ಷಣ ಹೃದಯ ಸಂಸ್ಕಾರಕ್ಕೆ ನೆರವಾಗದೆ ಹೋದರೆ ಅದು ಶಿಕ್ಷಣವೇ ಅಲ್ಲ.

ಆತ್ಮೀಯರೇ,

‘ ವಿದ್ಯಾರ್ಥಿಗಳ ಸರ್ವತೋಮುಖವಾದ ಬೆಳವಣಿಗೆಯನ್ನು ಸಾಧಿಸುವುದೇ ಶಿಕ್ಷಣ ’ ಎಂಬ ಮಾತೊಂದಿದೆ. ಸರ್ವತೋಮುಖವೆಂದರೆ ‘ ಪಂಚಮುಖ ’ ಗಳು. ದೈಹಿಕ, ಮಾನಸಿಕ, ಬೌದ್ಧಿಕ, ನೈತಿಕ ಮತ್ತು ಸಾಂಸ್ಕೃತಿಕ ಮುಖಗಳೇ ನಮ್ಮ ಸರ್ವತೋಮುಖ ಬೆಳವಣಿಗೆಗಳು.

ದೈಹಿಕ ಬೆಳವಣಿಗೆ ಪ್ರಾಕೃತಿಕವಾದುದು. ಕಾಲಕಾಲಕ್ಕೆ ತಿನ್ನುವ ಆಹಾರವನ್ನು ಹೊಂದಿಕೊಂಡು ದೇಹದ ಬೆಳವಣಿಗೆ ಆಗುತ್ತದೆ. ಆಹಾರ ಸರಿಯಾಗಿಲ್ಲದೆ ಹೋದರೆ ಈ ಬೆಳವಣಿಗೆ ಕುಂಠಿತವಾಗುತ್ತದೆ. ಮಾನಸಿಕ ಬೆಳವಣಿಗೆ ನಿರಂತರ ಅಧ್ಯಯನದಿಂದ, ಚಿಂತನೆಯಿಂದ, ತಿನ್ನುವ ಆಹಾರದಿಂದ, ಬದುಕುತ್ತಿರುವ ಪರಿಸರದಿಂದ, ಬಲ್ಲವರ ಒಡನಾಟದಿಂದ ಪರಿಪಕ್ವಗೊಳ್ಳುತ್ತದೆ. ಬೌದ್ಧಿಕ ಬೆಳವಣಿಗೆ ಅತ್ಯಂತ ಸೂಕ್ಷ್ಮವಾದುದು. ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾದುದು. ಒಂದೇ ತಾಯಿ-ತಂದೆಯವರ ಮಕ್ಕಳಿಗೆಲ್ಲಾ ಈ ಬುದ್ಧಿಯ ಬೆಳವಣಿಗೆ ಒಂದೇ ರೀತಿಯಲ್ಲಿರುವುದಿಲ್ಲ. “ಬುದ್ಧಿ ಕರ್ಮಾನು ಸಾರಿಣೀ” ಎಂಬಮಾತು ಬಹಳ ಪ್ರಸಿದ್ಧವಾದುದು. ಕರ್ಮಗಳಲ್ಲಿ ಎರಡು ವಿಧ. ಒಂದು ಸತ್ಕರ್ಮ. ಇನ್ನೊಂದು ದುಷ್ಕರ್ಮ. ಇದು ಹಿಂದಣ ಕರ್ಮವಾಗಿರಬಹುದು. ಹೀಗಾಗಿಯೇ ನಮ್ಮ ದಾಸರು ‘ಪ್ರಾಚೀನ ಕರ್ಮವಿದು ಬಿಡಲರಿಯದು’ ಎಂದಿದ್ದಾರೆ. ನಾವು ಮಾಡುವ ಕೆಲಸ ನಮ್ಮ ಬುದ್ಧಿಗೆ ಕಾರಣವಾಗುತ್ತದೆ. ನೈತಿಕಬೆಳವಣಿಗೆಗೆ ನಮ್ಮ ವಿದ್ಯಾಭ್ಯಾಸ, ತಂದೆ-ತಾಯಿ, ಗುರು-ಹಿರಿಯರ ನೀತಿಯುತ ಬದುಕು, ಸ್ವಂತ ಓದು ಕಾರಣವಾಗುತ್ತದೆ. ನೀತಿಯೆಂದರೆ ಒಳ್ಳೆಯ ನಡತೆ. ನಮ್ಮ ವ್ಯಕ್ತಿತ್ವ ಪ್ರಕಟವಾಗುವುದೇ ನಮ್ಮ ನಡತೆಯಿಂದ. ನಮ್ಮಲ್ಲಿ ‘ಗತಿಗೆಟ್ಟರೂ ಮತಿಗೆಡಬೇಡ’ ಎಂಬ ನಾಣ್ಣುಡಿಯಿದೆ. ಮತಿಗೆಡುವುದೆಂದರೆನೀತಿಗೆಡುವುದು. ಐದನೆಯ ಮುಖವೇ ಸಾಂಸ್ಕೃತಿಕ ಮುಖ. ಗೀತ, ನೃತ್ಯ, ನಾಟಕ, ಚಿತ್ರ, ಇನ್ನಿತರ ಲಲಿತ ಕಲೆಗಳೇ ಸಾಂಸ್ಕೃತಿಕ ಚಟುವಟಿಕೆಗಳು. ಇವೆಲ್ಲ ಮನೋರಂಜನೆಯೊಂದಿಗೆ ಮನೋವಿಕಾಸಕ್ಕೂ ಕಾರಣವಾಗುತ್ತವೆ. ಮನಸ್ಸಿಗೆ ಮುದ ನೀಡುತ್ತವೆ. ಜೀವನೋಲ್ಲಾಸಕ್ಕೆ ಕಾರಣವಾಗುತ್ತವೆ. ಚಿಂತೆಯನ್ನು ದೂರ ಮಾಡುತ್ತವೆ. ಆನಂದವನ್ನು ತಂದೀಯುತ್ತವೆ. ಇಷ್ಟೇ ಅಲ್ಲ. ಇನ್ನೊಬ್ಬರ ಆನಂದಕ್ಕೂ ಕಾರಣವಾಗುತ್ತವೆ. ಉದಾಹರಣೆಗೆ ಇವರನ್ನೇ (ಡಾ. ಬಿ. ಜಯಶ್ರಿ ಯವರು) ನೋಡಿ –

ಹಿಗ್ಗಿ ಹಾಡಿದರೀಕೆ, ಹಾಡಿ ಹಿಗ್ಗಿದರೀಕೆ

ಹಿಗ್ಗುತ್ತ ಹಾಡಿ ಕುಣಿದಾಕೆ ನಮಗೆಲ್ಲ

ಹಿಗ್ಗನ್ನು ತಂದಿತ್ತ ನಟಿಯೀಕೆ”

ಯಾವತ್ತೂ ಹಾಡಿ ಕುಣಿಯುವವರಿಗೆ ಮುದಿತನವೇ ಇಲ್ಲ. ಮುದಿತನ ಬಂದರೂ ಗೊತ್ತಾಗುವುದಿಲ್ಲ. ನಮ್ಮ ಡಾ.ಮೋಹನ ಆಳ್ವರಿಗೂ ಗೊತ್ತು. ಹೀಗಾಗಿಯೆ  ಇಲ್ಲಿ ಸದಾ ಸಾಂಸ್ಕೃತಿಕ ಹಬ್ಬದ ವಾತಾವರಣ.

ಇಲ್ಲಿ ಇನ್ನೊಂದು ಮಾತನ್ನು ಹೇಳಲೇ ಬೇಕು. ನಮ್ಮಲ್ಲಿ ಅನೇಕ ಜನ ಹೆತ್ತವರು ಮಕ್ಕಳನ್ನು ಹಾಡಲು, ಕುಣಿಯಲು, ಆಡಲು ಬಿಡುತ್ತಿಲ್ಲ ! ಅವರ ದೃಷ್ಟಿಯಲ್ಲಿ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿದ ಮಗು ಚೆನ್ನಾಗಿ ಕಲಿಯುವುದಿಲ್ಲವೆಂದು. ನಮ್ಮ ಆಳ್ವಾಸ್ ಶಿಕ್ಷಣ ಸಂಸ್ಥೆ ಇದನ್ನುಸುಳ್ಳಾಗಿಸಿದೆ. ಯಾವತ್ತೂ ಸಾಂಸ್ಕೃತಿಕ ಚಟುವಟಿಕೆಗಳು ಪರೋಕ್ಷ ಪಾಠ ಶಾಲೆಗಳು. ಹೀಗಾಗಿ ನಾವು ನೀವೆಲ್ಲ ಸಾಂಸ್ಕೃತಿಕವಾಗಿಯೂ ಬೆಳೆಯಬೇಕಾಗಿದೆ. ಹೀಗೆ ಬೆಳೆದಾಗ ಸರ್ವತೋಮುಖ ಬೆಳವಣಿಗೆ0iÉುನ್ನಬಹುದು.

ಹಾಗೆಯೆ

ಕಥೆಯ ಮುಖ, ಸಂಭಾಷಣೆಯ ಮುಖ

ಅತಿ ಮಧುರ ಸಂಗೀತಗಳ ಮುಖ

ಕಥನ ಮಥನ ವಿಶೇಷ ನಿರ್ದೇಶನದ ಮುಖವಿರುವ

ಚತುರ ಮುಖನಿವ ನಿಜ ಚತುರ್ಮುಖ

ನುತಿಪೆ ಕನ್ನಡ ಚಲನ ಚಿತ್ರದ

ರಸಿಕ ನಾಗತಿಹಳ್ಳಿಯರ ಕ್ರತು ಚೇತನಕೆ ಮಣಿವೆ.

ಈ ಚೇತನಗಳ ನಡುವೆ ಹೊಸ ಚೈತನ್ಯ ಪಡೆದಿದ್ದೇನೆ ಎನ್ನಲು ತುಂಬಾ ಸಂತಸ ಪಡುತ್ತಾ,

ನನ್ನ ನಲ್ಮೆಯ ಸೋದರ-ಸೋದರಿಯರೆ,

ಇದು ವಿದ್ಯಾರ್ಥಿಸಿರಿಯ ಸಮ್ಮೇಳನ. ಸಮ್ಮೇಳನವೆಂದರೆ ಚೆನ್ನಾಗಿ ಒಂದುಗೂಡುವುದೆಂದು ಅರ್ಥ. ಯಾವುದು ಸಹ ಹಿತವನ್ನು ಬಯಸುತ್ತದೋ ಅದು ಸಾಹಿತ್ಯ. ‘ಹಿತೇನ ಸಹವರ್ತತೇ ಇತಿ ಸಾಹಿತ್ಯ’ ಇದು ಬಲ್ಲವರ ಮಾತು. ಸಾಹಿತ್ಯ ಮೈ ಮನಸ್ಸುಗಳನ್ನು ಬೆಸೆಯುತ್ತದೆ. ಬೆಸೆಯಬೇಕಾಗಿದೆ. ಸರ್ವಜ್ಞ ಕವಿ ಒಂದು ಮಾತನ್ನು ಹೇಳುತ್ತಾನೆ.

ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ

ಬಲ್ಲವರಿದ್ದು, ಸುಖವಿಲ್ಲ! ಸಾಹಿತ್ಯ

ಎಲ್ಲರಿಗಿಲ್ಲ ಸರ್ವಜ್ಞ

ಸಾಹಿತ್ಯ ಎಲ್ಲರದ್ದಾಗಬೇಕು. ಎಲ್ಲರೂ ಸಾಹಿತ್ಯ ರಚಿಸಲಾರರು. ಆದರೂ ಸಾಹಿತ್ಯದ ಸವಿಯನ್ನು ಸವಿಯಬೇಕು. ಅದು ತೋರುವ ಬೆಳಕನ್ನು ನೋಡಬೇಕು. ಮತ್ತೆ ಆ ಬೆಳಕಿನಲ್ಲಿ ಮುನ್ನಡೆಯಬೇಕು.

ಒಳ್ಳೆಯ ಪುಸ್ತಕ – ತಂದೆ ತಾಯಿಗಳಂತೆ ಪೆÇೀಷಿಸುತ್ತದೆ.

ಒಳ್ಳೆಯ ಪುಸ್ತಕ – ಗುರುಗಳಂತೆ ಮಾರ್ಗದರ್ಶನ ಮಾಡುತ್ತದೆ.

ಒಳ್ಳೆಯ ಪುಸ್ತಕ – ಗೆಳೆಯನಂತೆ ಆಪತ್ಕಾಲದಲ್ಲಿ ನೆರವಾಗುತ್ತದೆ.

ನಾನೇನೂ ಸಾಹಿತಿಯಲ್ಲ. ಸಾಹಿತ್ಯಾಸಕ್ತಿಯುಳ್ಳವಳು. ನಿಮ್ಮಲ್ಲಿ ಅನೇಕರು ಸಾಹಿತಿಗಳಾಗಿರಬಹುದು. ಸಾಹಿತ್ಯಾಸಕ್ತರಂತೂ ಆಗಿರಲೇ ಬೇಕು.

ಸಾಹಿತ್ಯದ ಓದಿನಿಂದ ನಮ್ಮ ಅನುಭವ ವಿಸ್ತಾರವಾಗುತ್ತದೆ. ಹೊಸ ಹೊಸ ಕಲ್ಪನೆಗಳು ಒಡಮೂಡುತ್ತದೆ. ಶಬ್ದ ಭಂಡಾರ ಹೆಚ್ಚುತ್ತದೆ. ಬರೆಯುವ ಆಸಕ್ತಿ ಉಂಟಾಗುತ್ತದೆ. ನಮಗೆಲ್ಲ ಸಾಹಿತ್ಯದ ಪ್ರೀತಿ ಉಂಟಾಗುವುದೇ ಆರಂಭದಲ್ಲಿ ಶಿಶುಗೀತೆಗಳಿಂದ, ಅದರಲ್ಲೂ ಅಭಿನಯ ಗೀತೆಗಳಿಂದ.ಅಭಿನಯ ಗೀತೆ ನಟನೆಯನ್ನು ಕಲಿಸುತ್ತದೆ. ಮಕ್ಕಳ ಕಥೆಗಳು ಮುದ ನೀಡುತ್ತದೆ. ಚಂದಮಾಮನಂತಹ ಕತೆಗಳು ನಮ್ಮನ್ನು ಕಥಾಲೋಕಕ್ಕೆ ಕೊಂಡೊಯ್ದು ಸಂತಸ ನೀಡುತ್ತದೆ. ಬನ್ನಿ ಸಾಹಿತ್ಯದ ಸಾಮಿಪ್ಯಕ್ಕೆ ಸಲ್ಲಾಪಕ್ಕೆ!

ಸ್ನೇಹಿತರೆ,

ಸಿದ್ಧಪ್ರಶ್ನೆಗೆ – ಸಿದ್ಧ ಉತ್ತರ ನೀಡುವ ಬದಲಾಗಿ, ಸ್ವತಂತ್ರವಾಗಿ ಉತ್ತರಿಸಲು ಸಾಹಿತ್ಯ ನೆರವಾಗುತ್ತದೆ. ಯಾವ ಶಿಕ್ಷಣ ಸ್ವಂತ ಚಿಂತನೆಗೆ ಪ್ರೇರಣೆಯಾಗುವುದಿಲ್ಲವೋ, ಯಾವ ಶಿಕ್ಷಣ ನಮ್ಮ ಕಾಲ ಮೇಲೆ ನಾವು ನಿಲ್ಲುವುದಕ್ಕೆ ಭರವಸೆಯನ್ನು ನೀಡುವುದಿಲ್ಲವೋ, ಯಾವ ಶಿಕ್ಷಣ ಬದುಕಿನಸಂಸ್ಕಾರಕ್ಕೆ ನೆರವಾಗುವುದಿಲ್ಲವೋ ಆ ಶಿಕ್ಷಣ ನಿರರ್ಥಕವೇ ಸರಿ.

ಸಣ್ಣ ಬಾಯಿಯಿಂದ ದೊಡ್ಡ ಪ್ರಶ್ನೆಯೊಂದನ್ನು ನಮ್ಮ ಹಿರಿಯರ ಮುಂದಿಡುತ್ತಿದ್ದೇನೆ, “ನಮಗೆಂತಹ ಶಿಕ್ಷಣ ಬೇಕೆಂದು ನಾವು ಎಂದಾದರೂ ಯೋಚಿಸಿದ್ದೇವೆಯೆ? ನಮಗೆ ಅದು ಬೇಕು, ಇದು ಬೇಕೆಂದು ಮನವಿ ಸಲ್ಲಿಸಬೇಕು. ಹೋರಾಟಕ್ಕಿಳಿಯುವ ನಾವು ಶಿಕ್ಷಣದ ಬಗೆಗೆ ಎಲ್ಲಿ ಮಾತಾಡಿದ್ದೇವೆ, ಎಲ್ಲಿ ಹೋರಾಡಿದ್ದೇವೆ?  ” ಈಗ ಹೇಗೆಂದರೆ ವಿದ್ಯಾರ್ಥಿಗೆ ಮುಕ್ಕಿಸುವುದು, ಪರೀಕ್ಷೆಯಲ್ಲಿ ಕಕ್ಕಿಸುವುದು, ಈ ನಡುವೆ ವಿದ್ಯಾರ್ಥಿ ತನಗೆ ಬೇಕಾದುದನ್ನು ಹೆಕ್ಕಿಸಿಕೊಂಡರೆ ಬಜಾವ್. – ನನ್ನೀ ಪ್ರಶ್ನೆ ನಿಮ್ಮ ಪಾಲಿಗೆ ದಡ್ಡ ಪ್ರಶ್ನೆಯಾಗಿ ಕಂಡೀತು, ನನ್ನ ಪಾಲಿಗದು ದೊಡ್ಡ ಪ್ರಶ್ನೆಯೆ.

ಸ್ನೇಹಿತರೇ ನಮಗೆಲ್ಲರಿಗೂ 2 ತಾಯಿ. ಒಂದು ಹೆತ್ತಮ್ಮ. ಇನ್ನೊಂದು ಕನ್ನಡಮ್ಮ. ನಾವು ಎಲ್ಲಿ ಓದುತ್ತಿದ್ದೇವೆ. ಆ ರಾಜ್ಯದ ಭಾಷೆಯನ್ನ ಯಾವತ್ತೂ ಕಡೆಗಣಿಸಬಾರದು, ಆಂಗ್ಲಮಾದ್ಯಮದಲ್ಲಿ ಓದಬಾರದೆಂದು ನಾನು ಹೇಳುತ್ತಿಲ್ಲ. ಆದರೆ ಕನ್ನಡವನ್ನು ಯಾವತ್ತೂ ಕಡೆಗಣಿಸಬಾರದು. ಅದೇ ರೀತಿಜನ್ಮ ಕೊಟ್ಟ ತಂದೆ-ತಾಯಿ, ಗುರುಹಿರಿಯರನ್ನು ಗೌರವಿಸುವುದನ್ನು ಮರೆಯದಿರಿ. ಅದುವೇ ನಮಗೆ ಶ್ರೀರಕ್ಷೆ. ಚಿಕ್ಕ ಮಕ್ಕಳಿರುವಾಗ ಊಟ ಮಾಡದಿದ್ದರೆ ಇರಲಿ ಬೇಕಾದರೆ ತಿಂತಾರೆ ಎಂದು ಸುಮ್ಮನಿರಲಿಲ್ಲ ನಮ್ಮ ತಂದೆ ತಾಯಿ. ಏನೇನೋ ಉಪಾಯ ಮಾಡಿ ತುತ್ತು ತಿನ್ನಿಸಿರುತ್ತಾರೆ. ಮಕ್ಕಳಾದ ನಾವುದೊಡ್ಡವರಾದ ಮೇಲೆ ಮನೆಗೆ ಹೊಸದೊಂದು ಟಿ.ವಿ ತಂದಿದ್ದೇವೆ ಅಂದುಕೊಳ್ಳಿ. ಅಪ್ಪನೋ ಅಮ್ಮನೋ ಕೇಳುತ್ತಾರೆ, ಎಲ್ಲಿಂದ ಖರೀದಿಸಿದೆ? ಮೂಡುಬಿದ್ರೆಯಿಂದ ಅಂತ ಉತ್ತರಿಸುತ್ತೇವೆ, ಮತ್ತೆ ಕೇಳ್ತಾರೆ ಅಪ್ಪ ಎಷ್ಟು ಕೊಟ್ಟೆ? ಸ್ವಲ್ಪ ಏರು ಧ್ವನಿಯಲ್ಲಿ 5,000 ಅಂತ ಹೇಳ್ತೇವೆ, ಅಷ್ಟಕ್ಕೆ ಸುಮ್ಮನಿರದ ಅಪ್ಪಕೇಳ್ತಾರೆ ಡಿಸ್ಕೌಂಟ್ ಇತ್ತ ಮಗಾ? ತಗೊಳಿ ನಮಗೆ ಸಿಟ್ಟು ಬಂದು ಆಯ್ತು. ಆಗದಿಂದ ಚಿರಿ ಚಿರಿ ಮಾಡ್ತಿದ್ದೀರಿ, ಅದೆಲ್ಲಾ ನಿಮಗೆ ಯಾಕೆ? ಸುಮ್ಮನೆ ಕೂತು ಟಿ.ವಿ. ನೋಡಿ ಅಷ್ಟೆ ಅಂತ ಬೈತೀವಿ, ಪಾಪ ನಾವು ಚಿಕ್ಕವರಿರುವಾಗ ಕೇಳಿದ ಪ್ರಶ್ನೆಯನ್ನೇ ಪದೇ ಪದೇ ಕೇಳಿದರೂ ಅದು ಕಾಗೆ ಅದು ಕಾಗೆ ಎಂದುಉತ್ತರಿಸಿರುತ್ತಾರೆ. ಅದೇ ನಾವು ದೊಡ್ಡವರಾದ ಮೇಲೆ ನಮಗೆ ನಮ್ಮ ತಂದೆ-ತಾಯಿ, ಅಜ್ಜ-ಅಜ್ಜಿಯಲ್ಲಿ ಮಾತಾಡಿಸುವುದಕ್ಕೆ ಸಮಯವಿಲ್ಲ. ಯಾವತ್ತೂ ಹಾಗೆ ಮಾಡಬಾರದು. ಬೇರೆಯವರು ನಮಗೇನನ್ನು ಮಾಡಬಾರದೆಂದು ನಾವು ಆಶಿಸುತ್ತೇವೋ ಅದನ್ನು ನಾವೂ ಬೇರೆಯವರಿಗೆ ಮಾಡಬಾರದು.

ಹಾಗೆ0iÉುೀ ಹಿರಿಯರಲ್ಲೂ ಒಂದು ಮನವಿ-ಮಗು ಇನ್ನೂ ಹೊಟ್ಟೆಯಲ್ಲಿರುವಾಗಲೇ ಗಂಡ-ಹೆಂಡತಿಯರಿಬ್ಬರು ಗಲಾಟೆ ಮಾಡುತ್ತಿರುತ್ತಾರಂತೆ ನನ್ನ ಮಗ ಡಾಕ್ಟರಾಗಬೇಕೆಂದು ಹೆಂಡತಿ, ಇಲ್ಲ ಲಾಯರ್ ಆಗಬೇಕೆಂದು ಗಂಡ. ದಯವಿಟ್ಟು ನಿಮ್ಮ ಮಕ್ಕಳನ್ನು ಅವರ ಅಭಿರುಚಿಗೆ ತಕ್ಕಂತೆ ಬಿಟ್ಟುಸಕಾಲಿಕವಾಗಿ ಪೆÇ್ರೀತ್ಸಾಹಿಸಿ. ಸಾಯಂಕಾಲವಾದರೆ ಸಾಕು ಹಾಳು ಧಾರಾವಾಹಿಗಳನ್ನೋ ಪಕ್ಕದ ಮನೆಯವರ ಜೊತೆ ಲೋಕಾಭಿರಾಮವನ್ನು ಮಾತಾಡುತ್ತಾ ಸಮಯ ವ್ಯರ್ಥ ಮಾಡುವ ಬದಲು ಮಕ್ಕಳೊಂದಿಗೆ ನಿಮ್ಮ ಸಮಯವನ್ನು ಕಳೆಯಲು ಪ್ರಯತ್ನಿಸಿ. ಬೇರೆ ಮಕ್ಕಳಿಗೆ ಹೋಲಿಸಿ ನಿಮ್ಮ ಮಗುವನ್ನುಹೀಯಾಳಿಸದಿರಿ.  ಪ್ರತಿಯೊಬ್ಬರಲ್ಲೂ ಸುಪ್ತ ಪ್ರತಿಭೆಗಳಿರುತ್ತದೆ. ಸತತ ಸಾಧನೆಯಿಂದ ಖಂಡಿತ ಸಫಲತೆ ಸಿಗುತ್ತದೆ. ಒಂದು ಪುಟ್ಟ ಹುಡುಗಿ ನನಗಿಂತ ಒಂದೇ ವರುಷ ಚಿಕ್ಕವನಾದ ತನ್ನ ತಮ್ಮನನ್ನು ಎತ್ತಿಕೊಂಡು ಬರುತ್ತಿರುವಾಗ ಯಾರೋ ಕೇಳುತ್ತಾರೆ, ನಿನಗೆ ಭಾರವಾಗುತ್ತಿಲ್ವಾ ಅಂತ. ಆಗ ಆ ಹುಡುಗಿಹೇಳುತ್ತಾಳೆ ‘‘ಇಲ್ಲಪ್ಪಾ ಇವನು ನನ್ನ ಮುದ್ದು ತಮ್ಮ’’ ಅಂತ. ಯಾಕೆ ಈ ವಿಚಾರ ಹೇಳಿದೆನೆಂದರೆ ನಾವಾದರೂ ಅಷ್ಟೆ, ಮಾಡುವ ಯಾವುದೇ ಕೆಲಸವನ್ನು ಪ್ರೀತಿಯಿಂದ ಮಾಡಿದರೆ ಯಾವುದೂ ಭಾರವಾಗುವುದಿಲ್ಲ. ಯಾವುದೂ ಅಸಾಧ್ಯವಾಗುವುದಿಲ್ಲ. ಬೇರೊಬ್ಬರ ಏಳಿಗೆಯನ್ನು ಕಂಡು ಹೊಟ್ಟೆ ಕಿಚ್ಚು ಪಡುವಬದಲು ಅವರಂತೆ ನಾನಾಗಬೇಕೆಂಬ ಸಂಕಲ್ಪ ಮಾಡಬೇಕು. ನಿನ್ನೆ ಎಂಬುದು ಕಳೆದು ಹೋಗಿದೆ, ನಾಳೆ ಎಂಬುದು ಹುಟ್ಟಬೇಕಷ್ಟೆ. ಆದುದರಿಂದ ಇಂದಿನ ದಿನದ ಬಗ್ಗೆ ಗಮನವಿರಲಿ, ಪ್ರತಿ ಇಂದು ಇಂದುಗಳಿಗೆ ಒತ್ತು ನೀಡಿದರೆ ಜೀವನ ಹಸನಾಗಿರುತ್ತದೆ. ಎನ್ನುತ್ತ,

ನನ್ನ ಮಾತುಮುಗಿಸುವುದಕ್ಕೂ ಮುಂಚೆ ನನ್ನ ಏಳಿಗೆಗೆ ಕಾರಣಕರ್ತರಾದವರನ್ನು ನೆನಪಿಸಿಕೊಳ್ಳಬೇಕಾದದ್ದು ನನ್ನ ಕರ್ತವ್ಯ. ನಾನು ಏನೇ ಬೆಳೆದಿದ್ದರೂ ಅದಕ್ಕೆ ಮೂಲಕಾರಣ ಧರ್ಮಸ್ಥಳದ ಮಾತನಾಡುವ ಮಂಜುನಾಥ ನನ್ನ ಧನಿಗಳು ಮತ್ತು ಅವರ ಕುಟುಂಬವರ್ಗದ ಆಶೀರ್ವಾದ. ಜೊತೆಗೆ ನಾನು ಕಲಿತವಿದ್ಯಾ ಸಂಸ್ಥೆ ಮತ್ತು ನನಗೆ ಪೆÇ್ರೀತ್ಸಾಹವಿತ್ತ ಶಿಕ್ಷಕ ವೃಂದ. ನಾನು ಸಭಾಕಂಪನವಿಲ್ಲದೆ ಮಾತನಾಡಬಲ್ಲೆನೆಂದರೆ ಅದಕ್ಕೆ ಮೂಲ ಕಾರಣ ರಾಜ್ಯ ಪ್ರಶಸ್ತಿ ವಿಜೇತ ಶ್ರೀ.ಬಿ.ಸೋಮಶೇಖರ ಸರ್. ನನಗೆ ಜಿನಕಥೆಗಳನ್ನು ಬರೆದುಕೊಟ್ಟು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ನನ್ನ ಜಿನಕಥೆ ಕಾರ್ಯಕ್ರಮನಡೆಯುತ್ತಿದೆಯಾದರೆ ಅದಕ್ಕೆ ಸಂಪೂರ್ಣ ಪೆÇ್ರೀತ್ಸಾಹ ಶ್ರೀ ಅಂಬಾತನಯ ಮುದ್ರಾಡಿಯವರದು. ನಾನು ಧಾರ್ಮಿಕವಾಗಿ ನಾಲ್ಕು ಮಾತನಾಡಬಲ್ಲೆನಾದರೆ ಅದಕ್ಕೆ ಪೆÇ್ರೀತ್ಸಾಹ ನನ್ನ ಪಾಲಿನ ಸಂಜೀವಿನಿಯಾಗಿರುವ ಶ್ರೀ ಮುನಿರಾಜ ರೆಂಜಾಳ ಸರ್, ಎಲ್ಲಕ್ಕಿಂತ ಮುಖ್ಯವಾಗಿ ನನ್ನನ್ನು ಈ ಸ್ಥಾನಕ್ಕೆ ಆಯ್ಕೆಮಾಡಿದ ಡಾ.ಮೋಹನ್ ಆಳ್ವ ಸರ್ ಇವರಿಗೆಲ್ಲ ನನ್ನ ಭಕ್ತಿಯ ನಮನಗಳು. ಒಮ್ಮೆ ಒಂಬತ್ತು ಎಂಟನ್ನು ನೋಡಿ ಒಂದು ಹೊಡೆಯುತ್ತದೆ. ಆಗ ಎಂಟು ಪ್ರಶ್ನಿಸಿತು ಯಾಕೆ ಹೊಡೆದೆ? ಆಗ ಒಂಬತ್ತು ಹೇಳಿತು ನಾನು ನಿನಗಿಂತ ದೊಡ್ಡವ, ಎಂಟು ಏಳಕ್ಕೆ ಹೊಡೆಯಿತು, ಏಳು ಆರಕ್ಕೆ, ಕೊನೆಗೆ ಒಂದರ ಸರದಿ ಅದುಸೊನ್ನೆಗೆ ಹೊಡೆಯಲಿಲ್ಲ. ಬದಲಾಗಿ ಸೊನ್ನೆಯಲ್ಲಿ ಹೇಳಿತು ನನ್ನ ಪಕ್ಕಕ್ಕೆ ಬಾ. ಆಗ ಅಲ್ಲಿ ಬಲ ಬಂತು. ಒಂದು ಹತ್ತಾಯಿತು, ಈಗ ಹತ್ತು ಒಂಬತ್ತನ್ನು ನೋಡಿ ಹೇಳುತ್ತದೆ ಪರಿವರ್ತನೆ ಜಗದ ನಿಯಮ. ನಾನೂ ಸೊನ್ನೆಯಾಗಿದ್ದವಳು ನನಗೆ ಬಲಬಂದುದೇ ಈಗ ತಾನೇ ಹೇಳಿದ ಮಹನೀಯರಿಂದಪ್ರತಿಯೊಬ್ಬರಿಗೂ ತಲೆಬಾಗಿ ವಂದಿಸುತ್ತಾ, ನನ್ನ ಅಭಿರುಚಿ, ಆಸಕ್ತಿಗಳಿಗೆ ಬೆಂಬಲಿಸುತ್ತಾ ನನ್ನನ್ನು ಬೆಳೆಸುತ್ತಿರುವ ನನ್ನ ಅಪ್ಪಾಜಿ ಮತ್ತು ಅಮ್ಮನ ಮಗಳು ನಾನೆನ್ನಲು ಹೆಮ್ಮೆ ಪಡುತ್ತಾ ನನ್ನ ಮಾತುಗಳಿಗೆ ಪೂರ್ಣ ವಿರಾಮ ನೀಡುವುದಕ್ಕೂ ಮುಂಚೆ ನನಗೊಂದು ಚಿಕ್ಕ ಕತೆ ನೆನಪಾಗುತ್ತಿದೆ. ಊರರಥೋತ್ಸವವನ್ನು ನೋಡಲು ಅಜ್ಜ ಮೊಮ್ಮಗನನ್ನು ಹೆಗಲೇರಿಸಿಕೊಂಡನಂತೆ. ಮಗುವಿಗೆ ರಥದ ಮೇಲಿರುವ ಮೂರ್ತಿ ಕಾಣಬೇಕಲ್ಲ  ಅದಕ್ಕಾಗಿ ಅಜ್ಜನ ಹೆಗಲೇರಿದ ಮೊಮ್ಮಗ – ‘ಅಜ್ಜಾ ದೇವರೆಷ್ಟು ಚೆನ್ನಾಗಿ ಕಾಣುತ್ತಾನೆ! ಏನು ಅಲಂಕಾರ ! ’ ಎಂದನಂತೆ. ಮೊಮ್ಮಗನ ಮಾತು ಕೇಳಿ ಅಜ್ಜ ಒಳಗೊಳಗೆನಕ್ಕನಂತೆ. ನನ್ನ ಮಾತನ್ನು ಕೇಳಿ ನೀವೂ ನಗಬಹುದು. ಆದರೆ ಒಳಗೊಳಗೆ ನಗಬೇಡಿ ಗಟ್ಟಿಯಾಗಿ ನಕ್ಕು ಬಿಡಿ. ನಾನೂ ನಿಮ್ಮೊಂದಿಗೆ ನಗುತ್ತೇನೆ.

ನುಡಿಸಿರಿಗೆ ಜಯವಿರಲಿ

ಸಿರಿ ನುಡಿಗೆ ಜಯವಿರಲಿ

ಆಳ್ವರಿಗೆ ಜಯವಿರಲಿ

ಕೇಳ್ದರಿಗೆ ಜಯವಿರಲಿ

ಕನ್ನಡಕೆ ಜಯವಿರಲಿ

ನಿಮ್ಮ ನಲ್ ನುಡಿ ಹರಕೆ ನನ್ನ ಮೇಲಿರಲಿ, ಎಲ್ಲಕ್ಕೂ ಮಿಗಿಲಾಗಿ ದೈವ ಕೃಪೆಯಿರಲಿ.