Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ಮಾಧ್ಯಮ > ಪ್ರಕಟಣೆ > ಉಪನ್ಯಾಸ: ಜೀವನ ವಿಧಾನ- ಸಮಸ್ಯೆಗಳು ಮತ್ತು ಸವಾಲುಗಳು

ಉಪನ್ಯಾಸ: ಜೀವನ ವಿಧಾನ- ಸಮಸ್ಯೆಗಳು ಮತ್ತು ಸವಾಲುಗಳು

ಆಳ್ವಾಸ್ ನುಡಿಸಿರಿ ಕರ್ನಾಟಕದ ಕೂಡಲಸಂಗಮ: ಡಾ.ಜಿ.ಬಿ.ಹರೀಶ್ 

ಮೂಡಬಿದಿರೆ: ಆಳ್ವಾಸ್ ನುಡಿಸಿರಿಯ ಅಂಗವಾಗಿ ಅನೇಕ ಸಾಹಿತ್ಯಾಭಿರುಚಿ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. “ಜೀವನ ವಿಧಾನ- ಸಮಸ್ಯೆಗಳು ಮತ್ತು ಸವಾಲುಗಳು” ಎಂಬ ವಿಷಯದ ಕುರಿತು ಡಾ.ಜಿ.ಬಿ.ಹರೀಶ್ ಉಪನ್ಯಾಸ ನೀಡಿದರು.
“ಇಂದಿನ ಸಮಾಜದಲ್ಲಿ ಬಹುಮುಖ್ಯವಾಗಿ ಕಾಡುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳು ಎಂದರೆ ಎಡ-ಬಲಗಳ ಚರ್ಚೆಯಲ್ಲ ಅದು ಅಭಿರುಚಿ ಅಭಾವ, ಸಂವೇದನೆಯ ಕೊರತೆ ಹಾಗೂ ಸತ್ವವಿಲ್ಲದ ಮಾತುಗಳು” ಎಂದು ಡಾ.ಜಿ.ಬಿ.ಹರೀಶ್ ಹೇಳಿದರು.
“ಇಂದು ಪೀಳಿಗೆಗಳ ನಡುವೆ ಅಭಿರುಚಿಯ ವ್ಯತ್ಯಾಸ ಎದುರಾಗುತ್ತಿದೆ. ನಮ್ಮ ಸಂಸ್ಕೃತಿಯನ್ನು ಇಂದಿನ ಪೀಳಿಗೆ ಸಂಪೂರ್ಣವಾಗಿ ಕಡೆಗಣಿಸಿದೆ. ಉಡುಪುಗಳಲ್ಲಿ, ಭಾಷಾ ಬಳಕೆಯಲ್ಲಿ ಹಾಗೂ ಆಚರಣೆಯಲ್ಲಿ ವ್ಯತ್ಯಾಸ ಕಾಣುತ್ತಿದ್ದೇವೆ. ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ತೀವ್ರತರದಲ್ಲಿ ಎದುರಿಸಬೇಕಾಗುತ್ತದೆ” ಎಂದು ಅವರು ತಿಳಿಸಿದರು.
“ಅನುಭವ ಮನುಷ್ಯನನ್ನು ಗಟ್ಟಿಗೊಳಿಸುತ್ತದೆ ಹಾಗೂ ಆತನಿಗೆ ಸೃಜನಾತ್ಮಕ ಆಯಾಮ ನೀಡುತ್ತದೆ. ಆದರೆ ನಾವಿಂದು ಈ ರೀತಿಯ ಗುಣಗಳನ್ನು ನೀಡುವ ಸಂಬಂಧಗಳನ್ನು ಕಡೆಗಣಿಸಿ ಬದುಕುತ್ತಿದ್ದೇವೆ. ಶಿಕ್ಷಿತರಾಗಿ ಮತ್ತೊಬ್ಬರಿಗೆ ಭಾರವಾಗುವುದು ಹೇಗೆಂದು ಕಲಿಯುತ್ತಿದ್ದೇವೆ. ನಮ್ಮ ಪೂರ್ವಿಕರಲ್ಲಿದ್ದಂತಹ ಹೃದಯ ವೈಶಾಲ್ಯತೆ ಇಂದಿನವರಲ್ಲಿ ಉಳಿದಿಲ್ಲ. ಸಂಬಂಧಗಳ ನಡುವೆ ವಿಶ್ವಾಸ ಕುಸಿಯುತ್ತಿರುವುದೇ ಇದಕ್ಕೆ ಮುಖ್ಯ ಕಾರಣ” ಎಂದವರು ಅಭಿಪ್ರಾಯಪಟ್ಟರು.
“ಇಂದಿನ ಖಾಸಗಿ ಮಾಧ್ಯಮಗಳು ಪರಿಪೂರ್ಣ ಜೀವನ ವಿಧಾನ ಬಿಂಬಿಸುವಲ್ಲಿ ಸೋಲುತ್ತಿವೆ. ಜೀವನ ವಿಧಾನ ಎಂದರೆ ಕೇವಲ ಯುವಜನತೆಯದ್ದು ಎಂಬ ಪರಿಕಲ್ಪನೆಯನ್ನು ಮೂಡಿಸಿವೆ. ಆದರೆ ಇದು ಅಸತ್ಯ. ಮಾಧ್ಯಮಗಳ ಸತ್ವವಿಲ್ಲದ ಚರ್ಚೆಗಳು ಹಾಗೂ ಸಾರ್ವಜನಿಕರ ಟೊಳ್ಳು ಮಾತುಗಳ ಮೂಲ ಸಮಸ್ಯೆಗಳಾಗಿವೆ. ಬಹುಶಃ ಸ್ವಾತಂತ್ಯ್ರ ಪೂರ್ವದಲ್ಲಿ ಮೊಬೈಲ್ ಇದ್ದಿದ್ದರೆ ಹೋರಾಟದಲ್ಲಿ ಭಾಗಿಯಾಗುವ ಬದಲು ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸಂದೇಶ ರವಾನಿಸಿ ಸುಮ್ಮನಾಗುತ್ತಿದ್ದರೇನೋ ಎಂದು ಟೀಕಿಸಿದ ಅವರು ದಿನಪತ್ರಿಕೆ, ಆಕಾಶವಾಣಿಗಳಂತೆ ಖಾಸಗಿ ಮಾಧ್ಯಮಗಳು ಜವಾಬ್ದಾರಿ ತೋರಿಸಬೇಕು ಎಂದು ತಿಳಿಸಿದರು.
ಮುಂದೆ ಸಾಹಿತ್ಯ ಸವಾಲುಗಳ ಬಗ್ಗೆ ಚರ್ಚಿಸಿದ ಅವರು, “ಸಾಹಿತ್ಯ ಎಂದರೆ ಎಲ್ಲರೂ ಒಂದೇ ಎಂಬ ಮನೋಭಾವ ಜನರಲ್ಲಿತ್ತು. ವೈಚಾರಿಕ ವಿರೋಧಗಳೇನಿದ್ದರೂ ಅವು ಸಂಬಂಧಗಳಿಗೆ ಧಕ್ಕೆ ತರುತ್ತಿರಲಿಲ್ಲ. ಆದರೆ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಗೋಕುಲ ನಿರ್ಗಮನ ಪರ್ವ ಆರಂಭಗೊಂಡಿದೆ. ವೈಚಾರಿಕ ಸಮಸ್ಯೆಗಳು ವೈಯಕ್ತಿಕ ರೂಪ ಪಡೆದುಕೊಳ್ಳುತ್ತಿವೆ. ಡಿವಿಜಿ-ವಿಸಿ, ಕರ್ಣ-ದುರ್ಯೋಧನ, ಕೃಷ್ಣಾರ್ಜುನರಂಥ ಸ್ನೇಹವನ್ನು ಕಂಡ ನಮ್ಮ ನಾಡು ವೈಷಮ್ಯದ ರೂಪಕವಾಗಿ ಬೆಳೆಯುತ್ತಿರುವುದು ಆತಂಕಕಾರಿ” ಎಂದು ಹೇಳಿದರು.
“ಆಳ್ವಾಸ್ ನುಡಿಸಿರಿ ಕರ್ನಾಟಕದ ಕೂಡಲಸಂಗಮ ಇದ್ದಂತೆ. ಆಳ್ವಾಸ್ ನುಡಿಸಿರಿಯಂಥ ಕಾರ್ಯಕ್ರಮಗಳು ಇಂದಿನ ಸಮಸ್ಯೆಗಳಿಗೆ ಪರಿಹಾರೋಪಾಯವಾಗಿ ನಿಲ್ಲುತ್ತವೆ. ಇಂತಹ ಹಬ್ಬಗಳು ಹೆಚ್ಚಿದಷ್ಟು ನಮ್ಮ ನಡುವಿನ ಅಂತರ ಕುಗ್ಗಿ ಸಂಬಂಧಗಳು ಬೆಸೆಯುತ್ತವೆ” ಎಂದವರು ಅಭಿಪ್ರಾಯಪಟ್ಟರು.
ಉಪನ್ಯಾಸ ಕಾರ್ಯಕ್ರಮದಲ್ಲಿ ಆಳ್ವಾಸ್ ನುಡಿಸಿರಿ-2017ರ ಸರ್ವಾಧ್ಯಕ್ಷರಾದ ಡಾ.ನಾಗತಿಹಳ್ಳಿ ಚಂದ್ರಶೇಖರ್, ಸಾಹಿತಿ ನಾ.ದಾಮೋದರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮೂಲತಃ ಹಾಸನದವರಾದ ಡಾ.ಜಿ.ಬಿ.ಹರೀಶ್ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‍ಡಿ ಪಡೆದಿದ್ದಾರೆ. ಸಾಹಿತ್ಯ, ಐಟಿ ಹಾಗೂ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ಇವರು ‘ಕಣಜ’ ಎಂಬ ಅಂತರ್ಜಾಲ ತಾಣವನ್ನು ರೂಪಿಸಿದ್ದಾರೆ. ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಕನ್ನಡೇತರರಿಗೆ ಕನ್ನಡ ಕಲಿಕಾ ತರಬೇತಿಗಳನ್ನು ನಡೆಸುವ ಇವರು ವಿಮರ್ಶೆ, ಸಂಶೋಧನೆ, ಅನುವಾದ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಛಾಪು ಮೂಡಿಸಿದ್ದಾರೆ.

#ನುಡಿಸಿರಿ
#ನುಡಿಸಿರಿ2017
#Nudisiri
#Nudisiri2017