Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ಮಾಧ್ಯಮ > ಪ್ರಕಟಣೆ > “ನಡೆದಾಡುವ ರಂಗಭೂಮಿ, ನಡೆದಾಡುವ ವಿಶ್ವಕೋಶ ನಾಡೋಜ” -ಡಾ. ಗಣೇಶ್‍ಅಮಿನಗಡ

“ನಡೆದಾಡುವ ರಂಗಭೂಮಿ, ನಡೆದಾಡುವ ವಿಶ್ವಕೋಶ ನಾಡೋಜ” -ಡಾ. ಗಣೇಶ್‍ಅಮಿನಗಡ

ಮೂಡಬಿದಿರೆ.ಡಿ.01 :- ಕಲೆಯನ್ನೇ ತಮ್ಮ ಉಸಿರಾಗಿಸಿಕೊಂಡು ಕಲೆಯನ್ನ ಆರಾಧಿಸುತ್ತ `ನಡೆದಾಡುವ ರಂಗಭೂಮಿ’, `ನಡೆದಾಡುವ ವಿಶ್ವಕೋಶ’ ಎಂದೇ ಪ್ರಸಿದ್ಧರಾಗಿರುವ ನಾಡೋಜ ಏಣಗಿ ಬಾಳಪ್ಪ ಅವರಜೀವನಗಾಥೆಯನ್ನು ಡಾ.ಗಣೇಶ್ ಅಮಿನಗಡ ವಿಸ್ತøತಗೊಳಿಸಿದರು.
‘ಆಳ್ವಾಸ್ ನುಡಿಸಿರಿ-2017ರ’ ಪ್ರಯುಕ್ತ ಆಳ್ವಾಸ್ ಕಾಲೇಜಿನ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ ಸಂಸ್ಮರಣೆ ಭಾಗವಹಿಸಿ ಏಣಗಿ ಬಾಳಪ್ಪನವರ ನೆನಪುಗಳನ್ನು ಹಂಚಿಕೊಂಡರು.
ಮುನ್ನೂರು ರಂಗಗೀತೆಗಳನ್ನು ಕಂಠಪಾಠದಂತೆ ಲೀಲಾಜಾಲವಾಗಿ ಹಾಡುತ್ತಿದ್ದ ಬಾಳಪ್ಪನವರು ಹುಟ್ಟಿದ್ದುಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿಯಲ್ಲಿ. 1914ರಲ್ಲಿ ಜನಿಸಿದ ನಾಡೋಜ ಏಣಗಿ ಬಾಳಪ್ಪವರು ತಮ್ಮ ಪೂರ್ತಿ ಜೀವನವನ್ನು ಕಲೆಯ ಆರಾಧನೆಗೆ ಮುಡಿಪಾಗಿಟ್ಟವರು ಎಂದರು.
ಕಂಚಿನಕಂಠ ಹೊಂದಿದ್ದ ಏಣಗಿಯವರು ರಂಗಭೂಮಿಗೆ ಬಂದದ್ದೆ ಬಯಲಾಟದ ಮೂಲಕ. ಏಣಗಿಯಲ್ಲಿ ನಡೆಯುತ್ತಿದ್ದ ಬಯಲಾಟಗಳಿಗೆ ಧ್ವನಿ ನೀಡುತ್ತಿದ್ದ ಬಾಳಪ್ಪನವರು ಹಾಡಿನ ಮೂಲಕವೇ ಗುರುತಿಸಿಕೊಂಡವರು. ಚಿಕ್ಕೋಡಿ ಶಿವಲಿಂಗ ಸ್ವಾಮಿಗಳು ರಚಿಸಿದ್ದ ಕಿತ್ತೂರುಚೆನ್ನಮ್ಮ ನಾಟಕದಲ್ಲಿ ಆಕಸ್ಮಿಕವಾಗಿ ಚೆನ್ನಮ್ಮ ಪಾತ್ರ ನಿರ್ವಹಿಸುವ ಅವಕಾಶ ಸಿಕ್ಕಾಗ ಎಲ್ಲರ ಮನ್ನಣೆಗೆ ಪಾತ್ರರಾದರು ಎಂದು ಉಲ್ಲೇಖಿಸಿದರು.
ಕಲೆಯ ಮೂಲಕವೇ ಗುರುತಿಸಿಕೊಂಡು ಸಿಕ್ಕ ಸಣ್ಣ ಪಾತ್ರಗಳಿಂದಲೆ ಸೈ ಎನಿಸಿಕೊಂಡ ನಾಡೋಜರವರು ಚಿಕ್ಕೋಡಿ ಶಿವಲಿಂಗ ಸ್ವಾಮಿಗಳು ಕಟ್ಟಿದ ಲಿಂಗರಾಜ ನಾಟಕ ಸಂಗೀತ ಮಂಡಳಿಗೆ ಸೇರಿಕೊಂಡ ನಂತರ ಹೆಚ್ಚಾಗಿ ಗುರುತಿಸಿಕೊಂಡದ್ದು ಸ್ತ್ರೀ ಪಾತ್ರಧಾರಿಯಾಗಿ. ವೀರರಾಣಿರುದ್ರಮ್ಮ ನಾಟಕದಲ್ಲಿರುದ್ರಮ್ಮನಾಗಿ ಸ್ತ್ರೀ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ಕಿತ್ತೂರುಚೆನ್ನಮ್ಮ, ಬೆಳವಡಿ ಮಲ್ಲಮ್ಮ, ವೀರರಾಣಿಯಾಗಿ ನಾಟಕರಂಗದಲ್ಲಿ ಮೆರೆದರು ಎಂದು ಸ್ಮರಿಸಿಕೊಂಡರು.
ನಾಡೋಜರವರ ಜೀವನವನ್ನು ಬದಲಾಯಿಸಿದ್ದು ಜಗಜ್ಯೋತಿ ಬಸವೇಶ್ವರ ನಾಟಕ. ಜೋಳದ ರಾಶಿ ದೊಡ್ಡನಗೌಡರು ಈ ಜಗಜ್ಯೋತಿಬಸವೇಶ್ವರ ನಾಟಕವನ್ನು ಆರಂಭಿಸಿದರು.ಈ ನಾಟಕದಿಂದ ಬಂದ ಆದಾಯವನ್ನು ಬಿಜಾಪುರದಲ್ಲಿರುವ ಬಸವನ ಬಾಗೇವಾಡಿಯಲ್ಲಿರೊ ಬಸವೇಶ್ವರದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಬಳಸಲಾಯಿತು ಎಂದು ತಿಳಿಸಿದರು.
ಬಸವೇಶ್ವರ ಪಾತ್ರ ನಿರ್ವಹಿಸುತ್ತ ಅವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಂದ ನಾಡೊಜರವರು ಸರಳ ಜೀವನವನ್ನು ಪಾಲಿಸಿಕೊಂಡು ಬಂದ ವ್ಯಕ್ತಿ.‘ಬಣ್ಣದ ಬದುಕಿನಚಿನ್ನದ ದಿನಗಳು’ ಪುಸ್ತಕ ಬರೆಯುವ ಸಂದರ್ಭದಲ್ಲಿಅವರಜೊತೆ ಕಳೆಯುತ್ತಿದ್ದ ಹೆಚ್ಚಿನ ಸಮಯದಲ್ಲಿಅವರು ಹೇಳುತಿದ್ದದ್ದು ಒಂದೇ ಬಸವೇಶ್ವರ ಪಾತ್ರದಿಂದ ನನ್ನ ವ್ಯಕ್ತಿತ್ವ ಬದಲಾಯಿತು ಎಂದು ಅಂದಿನ ದಿನಗಳನ್ನು ನೆನಪಿಸಿಕೊಂಡರು.
ಯಾವ ಪಾತ್ರ ನೀಡಿದರು ಸೈ ಆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಜೀವತುಂಬುತ್ತಿದ್ದರು. ಬಾಲನಟನಾಗಿ, ಗಾಯಕನಾಗಿ, ನಾಯಕಿ ಮತ್ತು ನಾಯಕ ಪಾತ್ರಧಾರಿಯಾಗಿ ನಂತರ ನಾಟಕ ಕಂಪೆನಿಯ ಮಾಲೀಕರಾಗಿಯೂ ಯಶಸ್ವಿಯಾದವರು. ನೂರ ಮೂರು ವರ್ಷ ಬದುಕಿದ್ದ ನಾಡೋಜರವರು ಜೀವನದ ಕೊನೆ ಸಮಯಗಳಲ್ಲೂ ರಂಗಗೀತೆಗಳನ್ನು ನೆನಪಿಸಿಕೊಳ್ಳುತ್ತಿದ್ದ ಮಹಾನ್‍ರಂಗಕರ್ಮಿ ಎಂದರು.
ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ಡಾ. ನಾಗತಿಹಳ್ಳಿ ಚಂದ್ರಶೇಖರ್ ,ಉಪಾಧ್ಯಕ್ಷ ನಾಗರಾಜ್‍ಶೆಟ್ಟಿ ಉಪಸ್ಥಿತರಿದ್ದರು.