Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ಮಾಧ್ಯಮ > ಪ್ರಕಟಣೆ > ನುಡಿಸಿರಿಯಲ್ಲಿ ತೆರೆದುಕೊಂಡ ಕುಬ್ಜ ಮರಗಳ ವಿಶಾಲ ಸಾಮ್ರಾಜ್

ನುಡಿಸಿರಿಯಲ್ಲಿ ತೆರೆದುಕೊಂಡ ಕುಬ್ಜ ಮರಗಳ ವಿಶಾಲ ಸಾಮ್ರಾಜ್

ಮೂಡಬಿದ್ರಿ ಡಿ.1 : ಹೋದಲ್ಲೆಲ್ಲಾ ಗಿಡ ಹುಡುಕುವ ಅಲೆಮಾರಿ, ಹಸಿರಿನಲ್ಲಿ ಕಲೆ ಕಾಣುವ ಕಲಾವಿದ, ಬೋನ್ಸಾಯ್ ಗಿಡಗಳನ್ನು ಕಲೆ ಹಾಕುವ ಚಾಳಿಯಲ್ಲಿ ಬದುಕು ಕಂಡುಕೊಂಡ ಹೈದ್ರಾಬಾದ್‍ನ ಗೋವಿಂದ ರಾಜ್, ಕುಬ್ಜ ಮರಗಳ ಸಂಗ್ರಹಗಾರ. 30 ವರ್ಷಗಳಿಂದ ಬೋನ್ಸಾಯ್ ಮರಗಳನ್ನು ಬೆಳೆಸುವ ಇವರು ಹೋದಲ್ಲೆಲ್ಲಾ ಹೊಸ ಗಿಡಗಳ ಹುಡುಕಾಟದಲ್ಲಿರುತ್ತಾರಂತೆ.
ಭಾರತದ ಹಿರಿಯ ಬೋನ್ಸಾಯ್ ಸಂಗ್ರಹಕಾರರಲ್ಲಿ ಒಬ್ಬರಾದ ಇವರು 30 ವರ್ಷಗಳಿಂದ ಇದರ ಕಲಿಕೆ ಹಾಗು ಜ್ಞಾನವನ್ನು ಆಸಕ್ತರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಈ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಇಚ್ಚಿಸುವವರಿಗೆ ತರಬೇತಿ ಮತ್ತು ಕೋರ್ಸ್‍ಗಳನ್ನು ಹಮ್ಮಿಕೊಳ್ಳುವ ಈ ಸರಳಜೀವಿಯ ಮಕ್ಕಳಿಗೆ ಅದೇಕೊ ಇದರ ಬಗ್ಗೆ ಆಸಕ್ತಿಯೇ ಇಲ್ಲ. ಮಕ್ಕಳಿಗೆ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಸಮಯವಿಲ್ಲ ಎಂದು ಹೇಳುವಾಗ ಅವರ ಮಾತಿನಲ್ಲಿ ಒಂದು ನೋವಿತ್ತು.
ಬೋನ್ಸಾಯ್ ಗಿಡಗಳ ಆರೈಕೆ ಮತ್ತು ಪೋಷಣೆಗೆಂದು ತಮ್ಮ ಇಡೀ ದಿನವನ್ನು ವ್ಯಯಿಸುತ್ತಾರೆ. ದಿನವೊಂದಕ್ಕೆ 8ರಿಂದ 10 ಗಂಟೆಗಳನ್ನು ಈ ಗಿಡಗಳೊಂದಿಗೆ ಕಳೆಯವ ಗೋವಿಂದ ರಾಜ್‍ಗೆ ಇವುಗಳು ಮಕ್ಕಳಂತೆ. ಹಲವಾರು ಕಡೆ ತಿರುಗಾಡುವಾಗ ಎಲ್ಲಾದರೂ ಹಳೆಯ, ವಯಸ್ಸಾದ ಬೋನ್ಸಾಯ್ ಗಿಡಗಳನ್ನು ಕಂಡರೆ, ಅದನ್ನು ಕೇಳಿ ಖರೀದಿಸಿ ತಂದು ಸಾಕುವ ವಿಶಾಲ ಮನಸ್ಸು ಇವರದು. ಇಂತಹಾ ಗಿಡಗಳಿಗೆ ಎಳೆಯ ಗಿಡಗಳಿಗಿಂತಾ ಹೆಚ್ಚಿನ ಕಾಳಜಿ ಮತ್ತು ಪೋಷಣೆ ಬೇಕಾಗುತ್ತದೆ ಎಂದು ಹೇಳಿದರು.
ಕೆಲವರ ಮಾತಿನ ಪ್ರಕಾರ ಬೋನ್ಸಾಯ್ ಎಂದರೆ ಒಂದು ಮರದ ಬೆಳೆಯುವ ಸಾಮಥ್ರ್ಯವನ್ನು ಹಿಡಿದಿಟ್ಟಂತೆ ಎನ್ನುತ್ತಾರೆ ಎಂಬ ಮಾತಿಗೆ ಸಹಜವಾಗಿಯೇ ಮುನಿಸಿಕೊಂಡ ಸಸ್ಸಾಭಿಮಾನಿ “ಮನೆಯ ಅಂಗಳದಲ್ಲಿ ಬೆಳೆಯುವ ಗುಲಾಬಿ ಚಿಗುರನ್ನು ಕತ್ತರಿಸುವಾಗ ಈ ಪ್ರಶ್ನೆ ಕಾಡಲಿಲ್ಲವೇಕೆ? ಯಾರೋ ಕೆಲವು ಮಂದಿ ರೂಢಿಸಿಕೊಂಡಿರುವ ನಕಾರಾತ್ಮಕ ಚಿಂತನೆಗಳಿಂದ ಒಂದು ಅದ್ಭುತ ಕಲೆಯ ಬಗ್ಗೆ ಅನುಮಾನಗಳು ಬೆಳೆಯುತ್ತವೆ. ತಮ್ಮಷ್ಟಕ್ಕೆ ಬೆಲೆಯುವ ಮರಗಳಿಗೆ ಹೋಲಿಸಿದರೆ ಈ ಕುಬ್ಜ ಗಿಡಗಳು ಹೆಚ್ಚು ಸಮಯ ಬದುಕುತ್ತವೆ. ಉತ್ತಮ ಪೋಷಣೆಯಿಂದ ಇವುಗಳ ಆಯಸ್ಸು ವೃದ್ಧಿಸುತ್ತವೆ ಹೊರತು ಯಾವುದೇ ರೀತಿಯ ತೊಂದರೆ ಮಾಡುವುದಿಲ್ಲ” ಎಂದು ವಿವರಿಸಿದರು.
ತಮ್ಮ ಕೆಲಸಕ್ಕೆ ಮಡದಿಯ ಬೆಂಬಲ ಉತ್ತಮವಾಗಿದ್ದು, ಅವರಿಂದಲೇ ಈ ಮಟ್ಟಕ್ಕೇರಲು ಸಾಧ್ಯವಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡರು. “ನಾನು ಬೇರೆ ಬೇರೆ ಕಡೆ ಸುತ್ತಾಡುತ್ತಲೆ ಇರುತ್ತೇನೆ. ನನ್ನ ಮಕ್ಕಳನ್ನು ಪ್ರೀತಿಂದ ಬೆಳೆಸಿದವಳು ಆಕೆ. ನಮ್ಮ ಮಕ್ಕಳೊಂದಿಗೆ ನನ್ನ ಗಿಡಗಳನ್ನೂ ಮಕ್ಕಳಂತೆ ನೋಡಿಕೊಳ್ಳುತ್ತಾಳೆ” ಎಂದು ಸಂತಸದಿಂದ ಹೇಳಿಕೊಂಡರು.
ಪ್ರತಿಯೊಬ್ಬ ವ್ಯಕ್ತಿಯ ಯೊಚನೆ ಬೇರೆ. ಒಬ್ಬೊಬ್ಬರಿಗೆ ಒಂದೊಂದು ಕೆಲಸದಲ್ಲಿ ತೃಪ್ತಿ ಸಿಗುತ್ತದೆ. ಬೋನ್ಸಾಯ್ ಗಿಡಗಳಲ್ಲಿ ಕಲೆ ಕಾಣುವ ಗೋವಿಂದ ರಾಜ್, ಪ್ರತಿದಿನದ ದಣಿವಾರಿಸಿಕೊಳ್ಳಲು ಇದನ್ನೇ ಮೆಚ್ಚಿಕೊಂಡಿದ್ದಾರೆ. ವಿಶ್ವಾದ್ಯಂತ ಹಬ್ಬುತ್ತಿರುವ ಬೋನ್ಸಾಯ್ ಬೇರುಗಳು ಯುವ ಜನತೆಯ ಮನಸ್ಸಿನ ಮೇಲೆ ಹಿಡಿತ ಸಾಧಿಸುತ್ತಿದೆ. ಗಿಡಗಳು ಕುಬ್ಜವಾದರೂ ಇವುಗಳ ಖ್ಯಾತಿ ವಿಶ್ವಾದ್ಯಂತ ಪಸರಿಸಿವೆ.
ಚೋಂದಮ್ಮ ಎ.ಜೆ