Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ಮಾಧ್ಯಮ > ಪ್ರಕಟಣೆ > `ಸತ್ಯವನ್ನು ಉತ್ಪಾದಿಸುತ್ತಿರುವ ಮಾಧ್ಯಮಗಳು ಸ್ವವಿಮರ್ಶೆ ಮಾಡಿಕೊಳ್ಳಬೇಕು’ ನುಡಿಸಿರಿ ವಿಚಾರಗೋಷ್ಠಿಯಲ್ಲಿ ತಜ್ಞರ ಒಕ್ಕೊರಲ ಅಭಿಪ್ರಾಯ

`ಸತ್ಯವನ್ನು ಉತ್ಪಾದಿಸುತ್ತಿರುವ ಮಾಧ್ಯಮಗಳು ಸ್ವವಿಮರ್ಶೆ ಮಾಡಿಕೊಳ್ಳಬೇಕು’ ನುಡಿಸಿರಿ ವಿಚಾರಗೋಷ್ಠಿಯಲ್ಲಿ ತಜ್ಞರ ಒಕ್ಕೊರಲ ಅಭಿಪ್ರಾಯ

ಮೂಡುಬಿದಿರೆ: ಆಳ್ವಾಸ್ ನುಡಿಸಿರಿ 2017 ರ ಎರಡನೇ ದಿನದ ವಿಶೇಷ ವಿಚಾರ ಗೋಷ್ಠಿಯು ಶನಿವಾರ ಕಾಲೇಜಿನ ರತ್ನಾಕರ ವರ್ಣಿ ವೇದಿಕೆಯಲ್ಲಿ ಜರುಗಿತು. “ಮಾಧ್ಯಮ-ಸ್ವವಿಮರ್ಶೆಯ ನೆಲೆ” ವಿಚಾರದಡಿ ಮಾಧ್ಯಮದ ಮೂರು ಪ್ರಧಾನ ಆಯಾಮಗಳಾದ ಸಾಮಾಜಿಕ ಜಾಲತಾಣ, ಪತ್ರಿಕಾ ರಂಗ ಹಾಗು ದೃಶ್ಯ ಮಾಧ್ಯಮಗಳ ಕುರಿತು ಚರ್ಚೆ ನಡೆಯಿತು.
ದೃಶ್ಯ ಮಾಧ್ಯಮಗಳ ಬಗ್ಗೆ ತುಮಕೂರು ವಿವಿಯ ಪ್ರಾಧ್ಯಾಪಕ ಡಾ. ನಿತ್ಯಾನಂದ ಶೆಟ್ಟಿ ಪ್ರಚಲಿತ ಉದಾಹರಣೆಗಳನ್ನು ನೀಡಿ “ಮಾಧ್ಯಮಗಳಿಗೆ ಸ್ವವಿಮರ್ಶೆಯ” ಅವಶ್ಯಕತೆಯ ಕುರಿತು ಮಾತನಾಡಿದರು. “ದೃಶ್ಯ ಮಾಧ್ಯಮ ಉಳಿದ ಮಾಧ್ಯಮಗಳಿಗಿಂತ ದೊಡ್ಡ ವ್ಯಾಪ್ತಿ ಹೊಂದಿದ್ದು ಪ್ರಸ್ತುತ ಸಮಾಜಕ್ಕೆ ಬುದ್ಧಿ ಹೇಳುವೆನೆಂಬ ಸರ್ವಜ್ಞಪೀಠದಲ್ಲಿ ಕುಳಿತು ಗರ್ವದಿಂದ ಬೀಗುತ್ತಿವೆ. ಚಿಂತನೆಗಳ ಪ್ರತಿಪಾದನೆ ಮಾಡಬೇಕಿದ್ದ ದೃಶ್ಯ ಮಾಧ್ಯಮಗಳು ಇಂದು ದಿಕ್ಕು ತಪ್ಪುತ್ತಿವೆ. ಇಂದಿನ ನಮ್ಮ ಮಾಧ್ಯಮಗಳು ಸತ್ಯ ತಿರುಚಿ ತನ್ನ ವಾಸ್ತವತೆಗೆ ತಕ್ಕಂತೆ ಅದನ್ನು ಪರಿವರ್ತಿಸಿಕೊಳ್ಳುವುದನ್ನು ರೂಢಿಸಿಕೊಳ್ಳುತ್ತಿವೆ. ಇಲ್ಲಿ ಸತ್ಯದ ಉತ್ಪಾದನೆ ಹಾಗೂ ಒಪ್ಪಿಗೆ, ಅಭಿಪ್ರಾಯದ ಉತ್ಪಾದನೆ ನಡೆಯುತ್ತಿದೆ. ಕಣ್ಣಾರೆ ನೋಡಿದ್ದು ಮಾತ್ರ ಸತ್ಯ ಎನ್ನುವ ಸುಳ್ಳನ್ನು ಸಮಾಜಕ್ಕೆ ಕಟ್ಟಿಕೊಡುವಂತಾಗಿವೆ.” ಎಂದು ಅವರು ಅಭಿಪ್ರಾಯಪಟ್ಟರು.
ದೃಶ್ಯಮಾಧ್ಯಮದ ಕಾರ್ಯವೈಖರಿಗಳನ್ನು ಗಮನಿಸಿ ಅವರು “ಮಾಧ್ಯಮಗಳು ವಿಷಯಗಳನ್ನು ವೈಭವೀಕರಿಸುವುದು ಅವನ್ನು ಸ್ವಹಿತಾಸಕ್ತಿಗಾಗಿ ಬಳಸಿಕೊಳ್ಳುವುದರ ಸ್ವವಿಮರ್ಶೆ ನಡೆಯಬೇಕಿದೆ. ಮಾಧ್ಯಮಗಳು ನೋಟ್ ಬ್ಯಾನ್, ವೈದ್ಯ ಮುಷ್ಕರ ಮುಂತಾದವುಗಳಿಂದ ಸಂಭವಿಸಿದ ನಷ್ಟಗಳ ಹೊಣೆಯನ್ನು ಸರ್ಕಾರದ ಮೇಲೆ ಹೊರಿಸುತ್ತಿವೆ, ಆದರೆ ಯು.ಆರ್. ಅನಂತಮೂರ್ತಿ ಅವರ ವಿವಾದಾತ್ಮಕ ಹೇಳಿಕೆಯ ಅರಿವೂ ಇಲ್ಲದ ಜನರಿಗೆ ಅದು ತಲುಪುವಂತೆ ಮಾಡಿ ಜೀವನದ ಮುಸ್ಸಂಜೆಯ ಘಟ್ಟದಲ್ಲಿ ನಿಂತಿದ್ದ ಅವರ ನೆಮ್ಮದಿಯನ್ನು ಹಾಳು ಮಾಡಿದವು, ಇಂಗ್ಲೆಂಡಿನ ರಾಣಿ ಡಯಾನಾ ಮಾಧ್ಯಮಗಳ ಭಯದಿಂದ ಅಪಘಾತದಲ್ಲಿ ಸಾವನ್ನಪ್ಪುವಂತೆ ಮಾಡಿದವು. ಈ ದುರಂತಗಳ ಹೊಣೆಯನ್ನೇಕೆ ಮಾಧ್ಯಮಗಳು ಹೊರುವುದಿಲ್ಲ” ಎಂದು ಪ್ರಶ್ನಿಸಿದರು. ಮಾಧ್ಯಮಗಳ ಉತ್ತರದಾಯಿತ್ವದ ಬಗ್ಗೆ ಪ್ರಶ್ನಿಸಿದ ಅವರು ಮಾಜಿ ಶಾಸಕರೊಬ್ಬರ ಪತ್ನಿಯ ತೇಜೋವಧೆಯ ಅಭಿಯಾನ ಕೈಗೊಂಡ ದೃಶ್ಯ ಮಾಧ್ಯಮಗಳು ಅವರ ಆತ್ಮಹತ್ಯೆಯ ನಂತರವೇ ತೃಪ್ತಿಪಟ್ಟವು. ಅದು ಆತ್ಮಹತ್ಯೆಯಲ್ಲ ಮಾಧ್ಯಮಗಳಿಂದಾದ ಕೊಲೆ. ಮಾಧ್ಯಮಗಳನ್ನು ನಿಯಂತ್ರಿಸಿ ವಿಮರ್ಶಿಸಲೂ ಒಂದು ಗಟ್ಟಿ ಬೇರು ಬೇಕಿದೆ” ಎಂದು ಅವರು ಪ್ರತಿಪಾದಿಸಿದರು.
ಪತ್ರಿಕಾ ಮಾಧ್ಯಮದ ಕುರಿತು ವಿಚಾರ ಮಂಡಿಸಿದ ಪರ್ತಕರ್ತ ಡಾ. ನಿರಂಜನ್ ವಾನಳ್ಳಿ ಪತ್ರಿಕೆಯ ಬದಲಾದ ಆಯಾಮದ ಕುರಿತು ಮಾತನಾಡುತ್ತಾ “ವಾಸ್ತವವಾಗಿ ಯಾವ ವಿಷಯ ಸಮಾಜಮುಖಿಯಲ್ಲವೋ ಅದು ಸುದ್ದಿಯಾಗಲಾರದು ಆದರೆ ಪ್ರಸಕ್ತ ಸನ್ನಿವೇಶ ಇದಕ್ಕೆ ವಿರುದ್ಧವಾಗಿದೆ. ಪತ್ರಿಕೆಗಳು ಸ್ಪರ್ಧೆಗಿಳಿದಿರುವ ಈ ಕಾಲದಲ್ಲಿ ಪತ್ರಿಕೆಯು ದುಡ್ಡು ಬಿತ್ತಿ ದುಡ್ಡು ಬೆಳೆವ ಮಾಧ್ಯಮವಾಗಿ ಮಾರ್ಪಾಡಾಗಿದೆ ಎನ್ನುವುದು ಆತಂಕಕರ. ಸ್ಪರ್ಧೆಯ ನಾಗಾಲೋಟದಲ್ಲಿ ನೈತಿಕತೆ ಕಳೆದುಕೊಳ್ಳುತ್ತಿರುವ ಪತ್ರಿಕೆಗಳು ಜನರ ವಾಣಿಯಾಗದೆ ಬಲಾಢ್ಯರ ಗದೆಯಾಗುತ್ತಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ಪತ್ರಿಕಾ ಮಾಧ್ಯಮದ ಕುರಿತೊಂದು ಚಿಂತನೆ ಹಾಗು ಸ್ವವಿಮರ್ಶೆ ಅತ್ಯಗತ್ಯ” ಎಂದರು.
ಸಾಮಾಜಿಕ ಜಾಲತಾಣ ಹಾಗು ಅಂತರ್ಜಾಲ ಮಾಧ್ಯಮದ ಕುರಿತು ಚರ್ಚಿಸಿದ ಎನ್. ರವಿಶಂಕರ್ ” ಸತ್ಯವು ಇಂದು ಮಾಧ್ಯಮಗಳಿಂದ ಅರೆ ಸತ್ಯವಾಗುತ್ತಿವೆ. ಜನರ ಕೆಲಸ ಇಂದು ಬದಲಾಗಿ ಅವರು ಪತ್ರಿಕೆಯನ್ನು ವೀಕ್ಷಿಸಿ ದೂರದರ್ಶನವನ್ನು ಓದುವಂತಾಗಿದೆ. ಲೇಖಕ ರುಡ್ಯಾರ್ಡ್ ಕಿಪ್ಲಿಂಗ್ ಮಾತಿನಂತೆ ಭಾರತದ ಬಗ್ಗೆ ಏನೇ ಹೇಳಿದರು ಅದರ ವಿರುದ್ಧವೂ ನಿಜ ಎನ್ನುವಂತಾಗಿದೆ. ಅಂತರ್ಜಾಲ ಹಾಗು ನವೀನ ಮಾಧ್ಯಮಗಳ ಪ್ರಭಾವ ಎಷ್ಟಿದೆ ಎಂದರೆ ಪ್ರವಾಹದಂಥಾ ಸಂಕಷ್ಟಗಳ ಸ್ಥಿತಿಯಲ್ಲೂ ಜನರು ಮೂಲಭೂತವಾದ ನೀರು ಆಹಾರಗಳ ಪೂರೈಕೆಗೆ ಬೇಡುವ ಮೊದಲು ಬ್ಯಾಟರಿ, ವಿದ್ಯುತ್ ಪೂರೈಕೆಗೆ ಹಾತೊರೆಯುವುದು ಸಾಬೀತಾಗಿದೆ. ಅಲ್ಲಿಗೆ ಜನರು ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳುವ ಬದಲು ಕಷ್ಟಗಳನ್ನು ಬಿತ್ತರಿಸುವುದಕ್ಕೇ ಹೆಚ್ಚು ಒತ್ತು ನೀಡುವಂತಾಗಿದೆ. ನೈತಿಕತೆಯ ತಳಹದಿ ತಪ್ಪುತ್ತಿರುವ ಈ ಘಟ್ಟದಲ್ಲಾದರೂ ಮಾಧ್ಯಮದ ಸ್ವವಿಮರ್ಶೆಯ ಅಗತ್ಯವಿದೆ” ಎಂದು ತಮ್ಮ ವಿಚಾರ ಮಂಡಿಸಿದರು.
ಈ ಸಂದರ್ಭದಲ್ಲಿ ಆಳ್ವಾಸ್ ನುಡಿಸಿರಿ 2017 ರ ಆಧ್ಯಕ್ಞ, ನಾಗತಿಹಳ್ಳಿ ಚಂದ್ರಶೇಖರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ, ಎಮ್ ಮೋಹನ್ ಆಳ್ವ, ಸಾಹಿತಿ ಡಾ.ನಾ.ದಾ.ಶೆಟ್ಟಿ ಉಪಸ್ಥಿತರಿದ್ದರು.

 

ನೇಶನ್ ವಾಂಟ್ಸ್ ಟು ನೋ
ದೃಶ್ಯಮಾಧ್ಯಮದಲ್ಲಿ ಪ್ರೈಮ್‍ಟೈಮ್‍ನಲ್ಲಿ ಕುಳಿತು `ನೇಶನ್ ವಾಂಟ್ಸ್ ಟು ನೊ’ ಎಂದು ಅಬ್ಬರಿಸುವ ಮಾಧ್ಯಮಗಳ ಅವ್ಯವಹಾರಗಳು, ರಾಜಕೀಯ, ಪಕ್ಷಪಾತ ಧೋರಣೆ ಹಾಗೂ ಸ್ವಹಿತಾಸಕ್ತಿಯ ಮೇಲಾಟಗಳ ಬಗ್ಗೆ ಇಡೀ ದೇಶ ತಿಳಿಯಲು ಬಯಸುತ್ತಿದೆ ಎಂದು ನಿತ್ಯಾನಂದ ಶೆಟ್ಟಿ ಮಾಧ್ಯಮಗಳನ್ನು ಕುಟುಕಿದರು.