Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ಮಾಧ್ಯಮ > ಪ್ರಕಟಣೆ > ಸಾಮರಸ್ಯ ಹಾಗೂ ಸಂಘರ್ಷ ವೈರುಧ್ಯದ ನೆಲೆಯ ಸಂಗತಿಗಳು: ಆರ್. ತಾರಿಣಿ ಶುಭದಾಯಿನಿ

ಸಾಮರಸ್ಯ ಹಾಗೂ ಸಂಘರ್ಷ ವೈರುಧ್ಯದ ನೆಲೆಯ ಸಂಗತಿಗಳು: ಆರ್. ತಾರಿಣಿ ಶುಭದಾಯಿನಿ

ಮೂಡುಬಿದಿರೆ, ಡಿ.1: `ಆಧುನಿಕ ಕನ್ನಡ ಸಾಹಿತ್ಯವು ಸಾಮರಸ್ಯ ಹಾಗೂ ಸಂಘರ್ಷವನ್ನು ಸಮನಾಗಿ ನಿಭಾಯಿಸಿದೆ. ಕನ್ನಡ ಬರಹಗಾರರು ಆಧುನಿಕತೆಗೆ ತೆರೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಪ್ರಜ್ಞಾಪೂರ್ವಕವಾಗಿ ಬಹುತ್ವವನ್ನು ವಿಶ್ಲೇಷಿಸುವ ಪ್ರಯತ್ನ ಮಾಡಿದರು. ನವ್ಯ ಪರಂಪರೆಯಲ್ಲಿ ಬಹುತ್ವವನ್ನು ಸಾಧಿಸಿದವರಲ್ಲಿ ಕುವೆಂಪು, ದ.ರಾ.ಬೇಂದ್ರೆ ವಿಶೇಷವಾಗಿ ಕಾಣಿಸಿಕೊಳ್ಳುತ್ತಾರೆ’ ಎಂದು ಆರ್. ತಾರಿಣಿ ಶುಭದಾಯಿನಿಯವರು ಹೇಳಿದರು.
ಆಳ್ವಾಸ್ ನುಡಿಸಿರಿಯಲ್ಲಿ ನಡೆದ `ಸಾಹಿತ್ಯ-ಆಶಯದ ನೆಲೆ’ ವಿಚಾರಗೋಷ್ಠಿಯಲ್ಲಿ ಆಧುನಿಕ ಸಾಹಿತ್ಯದ ಕುರಿತು ಅವರು ವಿಚಾರಮಂಡನೆ ಮಾಡಿದರು. ಸಾಹಿತ್ಯವನ್ನು ಬಹುತ್ವದ ನೆಲೆಯಲ್ಲಿ ವಿಶ್ಲೇಷಿಸಿದಾಗ ಅಲ್ಲಿ ಸಾಮರಸ್ಯ ಮಾತ್ರ ಇದೆಯೋ ಅಥವಾ ಸಂಘರ್ಷಗಳೂ ಇದೆಯೋ ಎಂಬುದನ್ನು ಯೋಚಿಸುವುದು ತುಂಬಾ ಮುಖ್ಯ. ಇದು ವೈರುಧ್ಯದ ನೆಲೆಯಲ್ಲಿರುವ ಸಂಗತಿ. ಕುವೆಂಪುರವರ ಸಾಹಿತ್ಯದಲ್ಲಿ ಸಾಂವಿಧಾನಿಕ ಸಮಾನತೆಯ ಆಶಯಗಳು ಕಾಣಿಸುತ್ತವೆ ಹಾಗೆಯೇ ದ.ರಾ.ಬೇಂದ್ರೆಯವರು ತಮ್ಮ ಕವನಗಳಲ್ಲಿ ವಿಭಿನ್ನ ಜ್ಞಾನಧಾರೆಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಇವರು ಆಧುನಿಕ ಸಾಹಿತ್ಯದಲ್ಲಿ ವಿಭಿನ್ನವಾಗಿ ನಿಲ್ಲುತ್ತಾರೆ. ಕನ್ನಡದ ಜ್ಞಾನಪರಂಪರೆಗಳು ನಮಗೆ ಸಾಕಷ್ಟು ವಿಚಾರಗಳನ್ನು, ತಿಳುವಳಿಕೆಗಳನ್ನು ನೀಡಿವೆ. ಹೀಗಾಗಿ ಅದು ಬಹುತ್ವದ ಅನುಸಂಧಾನವಾಗಬಲ್ಲದು ಎಂದು ಅವರು ಅಭಿಪ್ರಾಯಪಟ್ಟರು.
ನಮ್ಮ ಸಾಹಿತ್ಯದ ಮೇಲಾಗುತ್ತಿರುವ ಅತಿಕ್ರಮಣಗಳ ಕುರಿತಾಗಿ ಮಾತನಾಡಿದ ಅವರು ವಸಾಹತುಶಾಹಿ ನಮ್ಮ ಸಾಹಿತ್ಯವನ್ನು ಪ್ರವೇಶಿಸಿದಾಗ ಇಲ್ಲಿರುವ ಬಹುತ್ವವನ್ನು ತಮಗೆ ಬೇಕಾದಂತೆ ಅರ್ಥೈಸಿಕೊಂಡರು. ರಾಜಕೀಯವಾಗಿ, ಸಾಮಾಜಿಕವಾಗಿ ಬೆಳೆದು ಬಂದ ಸಮಾಜ ಆಗ ಇದ್ದ ಬಹುತ್ವವನ್ನು ತಿದ್ದುವ ಪ್ರಯತ್ನ ಮಾಡಿತು. ಜಾತಿ, ವರ್ಗಗಳ ವಿಂಗಡಣೆಯಾದ್ದರಿಂದ ಬಹುತ್ವದ ಕಲ್ಪನೆಯಲ್ಲಿ ಗೊಂದಲಗಳುಂಟಾದವು ಎಂದು ತಿಳಿಸಿದರು.
ಇತ್ತೀಚಿನ ಸಾಹಿತ್ಯದ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ತಾರಿಣಿಯವರು, ಕೆಲವು ಸಾಹಿತ್ಯ ಕೃತಿಗಳು ರಾಷ್ಟ್ರೀಯತೆಯನ್ನು ಒಡೆದು ಪ್ರತ್ಯೇಕಿಸುವ ಸಂದೇಶಗಳನ್ನು ನೀಡುತ್ತಿವೆ. ಇದು ಸಂಘರ್ಷಾತ್ಮಕ ನೆಲೆಯನ್ನು ತೋರಿಸುತ್ತದೆ. ಹಾಗೂ ಈಗಿನ ಸ್ತ್ರೀವಾದ, ದಲಿತವಾದಗಳು ಕೇವಲ ರಾಜಕೀಯದ ಪ್ರತಿಬಿಂಬದಂತಿದ್ದು, ಅದರ ಗಟ್ಟಿತನವನ್ನು ಉಳಿಸಿಕೊಳ್ಳುವಲ್ಲಿ ಸೋಲುತ್ತಿವೆ. ಇಂತಹ ವಾದಗಳು ಬಹುತ್ವವನ್ನು ಸರಳೀಕರಣಗೊಳಿಸುತ್ತಿದೆ. ಎಲ್ಲವೂ ಸರಳೀಕರಣಗೊಂಡರೆ ಬಹುತ್ವ ಉಳಿಯಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಸಭಿಕರ ಮುಂದಿಟ್ಟರು.
ವಿಚಾರಗೋಷ್ಠಿಯಲ್ಲಿ ನುಡಿಸಿರಿಯ ಸಮ್ಮೇಳನಾಧ್ಯಕ್ಷ ಡಾ.ನಾಗತಿಹಳಿ್ಭೃ ಚಂದ್ರಶೇಖರ್, ಸಾಹಿತಿ ನಾ.ಧಾ.ಶೆಟ್ಟಿ ಉಪಸ್ಥಿತರಿದ್ದರು. ಎಸ್‍ಡಿಎಂ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ.ಸಂಪತ್‍ಕುಮಾರ್ ಕಾರ್ಯಕ್ರಮವನ್ನು ನಿರ್ವಹಿಸಿದರು.