Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ಮಾಧ್ಯಮ > ಪ್ರಕಟಣೆ > ಸಾಹಿತಿಗಳು ಪಕ್ಷ ರಾಜಕಾರಣ ಮಾಡಬೇಕಾದ ಅವಶ್ಯಕತೆಯಿಲ್ಲ: ಡಾ.ಕೃಷ್ಣಮೂರ್ತಿ ಹನೂರು

ಸಾಹಿತಿಗಳು ಪಕ್ಷ ರಾಜಕಾರಣ ಮಾಡಬೇಕಾದ ಅವಶ್ಯಕತೆಯಿಲ್ಲ: ಡಾ.ಕೃಷ್ಣಮೂರ್ತಿ ಹನೂರು

ಮೂಡುಬಿದಿರೆ, ಡಿ.1: `ಪ್ರಾಚೀನ ಕಾಲದ ಕವಿಗಳು ತಮ್ಮ ಸಾಹಿತ್ಯ ಕೃತಿಗಳಲ್ಲಿ ರಾಜಕಾರಣದ ಬಗ್ಗೆ ಚರ್ಚಿಸಿದ್ದಾರೆ. ಅವರು ಅಂದಿನ ಆಸ್ಥಾನಗಳು, ಆಡಳಿತದ ಬಗ್ಗೆ ಚರ್ಚಿಸಿದ್ದಾರೆ. ಸಾಹಿತಿಗಳು ರಾಜಕೀಯದ ಬಗ್ಗೆ ಮಾತನಾಡಬಹುದೇ ಹೊರತು ಪಕ್ಷ ರಾಜಕಾರಣ ಮಾಡಬೇಕಾದ ಅವಶ್ಯಕತೆಯಿಲ್ಲ. ನಾವು ಏನಾದರೂ ವಾದವನ್ನು ಮಂಡನೆ ಮಾಡುವ ಮೊದಲು ಅದರ ನಿಜ ಸ್ವರೂಪವನ್ನು ಅರಿಯುವುದು ತುಂಬಾ ಮುಖ್ಯ’ ಎಂದು ಡಾ.ಕೃಷ್ಣಮೂರ್ತಿ ಹನೂರು ಹೇಳಿದರು.

ಆಳ್ವಾಸ್ ನುಡಿಸಿರಿಯಲ್ಲಿ ನಡೆದ `ಸಾಹಿತ್ಯ- ಆಶಯದ ನೆಲೆ’ ವಿಚಾರಗೋಷ್ಠಿಯಲ್ಲಿ ಪ್ರಾಚೀನ ಸಾಹಿತ್ಯದ ಕುರಿತು ಅವರು ಮಾತನಾಡಿದರು. ನಮ್ಮ ಸಾಹಿತ್ಯಗಳ ಬಗ್ಗೆ ವಿವರಿಸಿದ ಅವರು, ನಮ್ಮ ಕಥನಗಳಲ್ಲಿ ಸಾಕಷ್ಟು ವೈವಿಧ್ಯತೆಯಿದೆ. ಇಂತಹ ವೈವಿಧ್ಯಮಯವಾದ ಶಿಷ್ಟ ಸಾಹಿತ್ಯ ಪ್ರಕಾರವನ್ನು ನಾವು ಅರ್ಥೈಸಿಕೊಳ್ಳಬೇಕು ಇಲ್ಲದಿದ್ದರೆ ಮೊಂಡುವಾದಗಳನ್ನೇ ಪ್ರತಿಪಾದಿಸಬೇಕಾಗುತ್ತದೆ. ನಮ್ಮ ಸಾಹಿತಿಗಳು ವಿಭಿನ್ನ ನೆಲೆಯಲ್ಲಿ ಬಹುತ್ವವನ್ನು ಪ್ರತಿಪಾದಿಸಿದ್ದಾರೆ. ಇದನ್ನು ಸರಿಯಾಗಿ ಕಂಡುಕೊಂಡಾಗ ನಮ್ಮಲ್ಲಿನ ಏಕ ಅನೇಕವಾಗಿ ಏಕೋಭಾವವನ್ನು ಹೊಂದುತ್ತದೆ ಎಂದರು.

ಪ್ರಾಚೀನ ಕವಿಗಳು, ಅವರ ಸಾಹಿತ್ಯ ಕೃಷಿಯನ್ನು ವಿವರವಾಗಿ ವಿಶ್ಲೇಷಿಸಿದ ಡಾ.ಹನೂರು,  8 ಮತ್ತು 9ನೇ ಶತಮಾನದಲ್ಲಿ ರಚಿತಗೊಂಡ ಕಾವ್ಯ ಪ್ರಕಾರಗಳು ಪರಾಕ್ರಮವನ್ನು ಯುದ್ಧವನ್ನು ಪ್ರತಿಬಿಂಬಿಸಿವೆ. ಇದರ ಜೊತೆಗೆ ಯುದ್ಧದ ದುರಂತವನ್ನೂ ಅವರು ಚಿತ್ರಿಸಿದ್ದಾರೆ. ಪಂಪ, ರನ್ನರ ಕಾವ್ಯಗಳಲ್ಲಿ ಸಾಹಿತ್ಯದ ಈ ವೈಚಿತ್ರ್ಯವನ್ನು ಕಾಣಬಹುದು. ಆದರೆ ಇದಕ್ಕೆ ವಿರುದ್ಧವಾಗಿ ಹುಟ್ಟಿಕೊಂಡದ್ದು ವಚನಸಾಹಿತ್ಯ. ಬಸವಣ್ಣನವರು ತಮ್ಮ ವಚನಗಳಲ್ಲಿ ದೈವ, ಪರಾಕ್ರಮಗಳನ್ನು ವಿರೋಧಿಸಿದರು. ಪಂಡಿತರಿಗೆ ಮಾತ್ರ ಸೀಮಿತವಾಗಿದ್ದ ಸಾಹಿತ್ಯವನ್ನು ಜನಸಾಮಾನ್ಯರಿಗೆ ನೇರವಾಗಿ ಹಾಗೂ ಅಷ್ಟೇ ಕಠೋರವಾಗಿ ತಲುಪಿಸಿದ್ದು ವಚನಸಾಹಿತ್ಯ ಎಂದರು.

ರಗಳೆಯ ಕವಿ ಹರಿಹರ, ರಾಘವಾಂಕ ಹಾಗೂ ಶ್ರೇಷ್ಠನಾದ ಕುಮಾರವ್ಯಾಸ ತಮ್ಮ ಸಾಹಿತ್ಯದಲ್ಲಿ ಬಹುತ್ವವನ್ನು ಪ್ರತಿಪಾದಿಸಿದರು. ಅವರ ಸಾಹಿತ್ಯ ಸಾಧನೆಯಿಂದಾಗಿ ಒಂದೇ ಶತಮಾನದಲ್ಲಿ ಸಿಂಹಾಸನಪರವಾಗಿದ್ದ ಸಾಹಿತ್ಯ ಜನಪರವಾಗಿ ಬೆಳೆದ ಪರಿ ಅದ್ಭುತವಾದದ್ದು. ಕುಮಾರವ್ಯಾಸ ತನ್ನ ಕೃತಿಯನ್ನು ಯಾರೂ ಬಳಸಬಹುದು ಯಾರೂ ಬೆಳೆಸಬಹುದು ಎಂದು ಹೇಳುತ್ತಾನೆ. ಇದು ಕವಿ ಹೊಂದಿದ್ದ ಬಹುತ್ವದ ನೆಲೆಗಳನ್ನು ಸೂಚಿಸುತ್ತದೆ ಎಂದು ಕೃಷ್ಣಮೂರ್ತಿ ಹನೂರು ಅಭಿಪ್ರಾಯ ಪಟ್ಟರು.

ವಿಚಾರಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷ ಡಾ. ನಾಗತಿಹಳ್ಳಿ ಚಂದ್ರಶೇಖರ್, ಸಾಹಿತಿ ನಾ.ದಾ. ಶೆಟ್ಟಿ ಉಪಸ್ಥಿತರಿದ್ದರು. ಎಸ್‍ಡಿಎಂ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ.ಸಂಪತ್‍ಕುಮಾರ್ ಕಾರ್ಯಕ್ರಮ ನಿರೂಪಿಸಿದರು.