Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ಮಾಧ್ಯಮ > ಪ್ರಕಟಣೆ > ಉದ್ಘಾಟಕರಾಗಿ ಡಾ.ಸಿ.ಎನ್.ರಾಮಚಂದ್ರನ್ ಮತ್ತು ಸರ್ವಾಧ್ಯಕ್ಷರಾಗಿ ಡಾ.ನಾಗತಿಹಳ್ಳಿ ಚಂದ್ರಶೇಖರ್

ಉದ್ಘಾಟಕರಾಗಿ ಡಾ.ಸಿ.ಎನ್.ರಾಮಚಂದ್ರನ್ ಮತ್ತು ಸರ್ವಾಧ್ಯಕ್ಷರಾಗಿ ಡಾ.ನಾಗತಿಹಳ್ಳಿ ಚಂದ್ರಶೇಖರ್

ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡುಬಿದಿರೆಯು, ಪ್ರತಿವರ್ಷ ಆಚರಿಸಿಕೊಂಡು ಬರುತ್ತಿರುವ ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನ ’ಆಳ್ವಾಸ್ ನುಡಿಸಿರಿ’ ಕನ್ನಡ ಬಾಂಧವರ ಸಹಾಯ-ಸಹಕಾರ-ಪ್ರೀತಿ-ವಿಶ್ವಾಸಗಳೊಂದಿಗೆ ಕಳೆದ ೧೩ ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಈ ವರ್ಷ ೧೪ನೇ ಸಮ್ಮೇಳನದ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಕನ್ನಡ ನಾಡು, ಕನ್ನಡ ಭಾಷೆಯ ಕುರಿತಾದ ಎಚ್ಚರ, ಕನ್ನಡ ಸಂಸ್ಕೃತಿಯ ಕುರಿತಾದ ಅನನ್ಯತೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಕ್ರಿಯವಾಗಿರುವ ಈ ಸಮ್ಮೇಳನವು ಕನ್ನಡದ ಒಳಿತಿಗಾಗಿ ದುಡಿಸಬೇಕಾದ ಎಲ್ಲಾ ಆಯಾಮಗಳನ್ನು ದುಡಿಸಿಕೊಂಡು ಕಾರ್ಯಪ್ರವೃತ್ತವಾಗಿದೆ. ಇದರಿಂದಲೇ ಈ ಸಮ್ಮೇಳನವು ಕೇವಲ ಸಾಹಿತ್ಯ ಸಮ್ಮೇಳನ ಮಾತ್ರವಾಗಿರದೆ ಕನ್ನಡದ ವಿರಾಟ್ ಸ್ವರೂಪದ ಅಭಿವ್ಯಕ್ತಿಯಾಗಿ ಜನಮನದ ಗಮನಸೆಳೆಯುತ್ತಿದೆ. ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡುಬಿದಿರೆಯು, ಪ್ರತಿವರ್ಷ ಆಚರಿಸಿಕೊಂಡು ಬರುತ್ತಿರುವ ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನ ’ಆಳ್ವಾಸ್ ನುಡಿಸಿರಿ’ ಕನ್ನಡ ಬಾಂಧವರ ಸಹಾಯ-ಸಹಕಾರ-ಪ್ರೀತಿ-ವಿಶ್ವಾಸಗಳೊಂದಿಗೆ ಕಳೆದ ೧೩ ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಈ ವರ್ಷ ೧೪ನೇ ಸಮ್ಮೇಳನದ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಕನ್ನಡ ನಾಡು, ಕನ್ನಡ ಭಾಷೆಯ ಕುರಿತಾದ ಎಚ್ಚರ, ಕನ್ನಡ ಸಂಸ್ಕೃತಿಯ ಕುರಿತಾದ ಅನನ್ಯತೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಕ್ರಿಯವಾಗಿರುವ ಈ ಸಮ್ಮೇಳನವು ಕನ್ನಡದ ಒಳಿತಿಗಾಗಿ ದುಡಿಸಬೇಕಾದ ಎಲ್ಲಾ ಆಯಾಮಗಳನ್ನು ದುಡಿಸಿಕೊಂಡು ಕಾರ್ಯಪ್ರವೃತ್ತವಾಗಿದೆ. ಇದರಿಂದಲೇ ಈ ಸಮ್ಮೇಳನವು ಕೇವಲ ಸಾಹಿತ್ಯ ಸಮ್ಮೇಳನ ಮಾತ್ರವಾಗಿರದೆ ಕನ್ನಡದ ವಿರಾಟ್ ಸ್ವರೂಪದ ಅಭಿವ್ಯಕ್ತಿಯಾಗಿ ಜನಮನದ ಗಮನಸೆಳೆಯುತ್ತಿದೆ.

ಕನ್ನಡ ನಾಡಿನ ಹೆಮ್ಮೆಯ ನುಡಿಸಿರಿ ಸಮ್ಮೇಳನವು ಈ ಬಾರಿ ಕನ್ನಡ ನಾಡು-ನುಡಿ-ಸಂಸ್ಕೃತಿಗಳ ಬಹುತ್ವದ ನೆಲೆಗಳನ್ನು ಅನಾವರಣಗೊಳಿಸಬಯಸಿದೆ. ಸಮ್ಮೇಳನವು ’ಕರ್ನಾಟಕ : ಬಹುತ್ವದ ನೆಲೆಗಳು’ ಎನ್ನುವ ಪ್ರಧಾನ ಪರಿಕಲ್ಪನೆಯಡಿಯಲ್ಲಿ ದಶಂಬರ ೦೧, ೦೨ ಮತ್ತು ೦೩ನೇ ದಿನಾಂಕಗಳಂದು ಮೂಡುಬಿದಿರೆಯ ವಿದ್ಯಾಗಿರಿಯ ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ಕವಿ ರತ್ನಾಕರವರ್ಣಿ ವೇದಿಕೆಯಲ್ಲಿ ವಿಜೃಂಭಣೆಯಿಂದ ನೆರವೇರಲಿದೆ.

ಆಳ್ವಾಸ್ ನುಡಿಸಿರಿ ೨೦೧೭ರ ಉದ್ಘಾಟಕರಾಗಿ ಡಾ.ಸಿ.ಎನ್.ರಾಮಚಂದ್ರನ್.

ಇಂಗ್ಲಿಷ್ ಭಾಷೆ-ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಪದವಿ ಹಾಗೂ ನ್ಯಾಯಶಾಸ್ತ್ರದಲ್ಲಿ ಎಲ್.ಎಲ್.ಬಿ. ಪದವಿಯನ್ನು ಪಡೆದವರು ಡಾ.ಸಿ.ಎನ್.ರಾಮಚಂದ್ರನ್. ಭಾರತ, ಸೊಮಾಲಿಯಾ, ಸೌದಿ ಅರೇಬಿಯಾ ಮತ್ತು ಅಮೇರಿಕಾಗಳಲ್ಲಿ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಬೋಧಕರಾಗಿ ಹೆಸರುವಾಸಿಯಾದ ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ೧೬ ವರ್ಷಗಳ ಕಾಲ ಪ್ರಾಧ್ಯಾಪಕರಾಗಿ, ವಿಭಾಗಮುಖ್ಯಸ್ಥರಾಗಿ ಕರ್ತವ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ದೆಹಲಿ, ಸ್ಯಾನ್‌ಫ್ರಾನ್ಸಿಸ್ಕೋ, ಟೋಕಿಯೋ, ತುರ್ಕಿ, ಕಾಲ್ಫ್ ಮೊದಲಾದ ದೇಶವಿದೇಶಗಳ ವಿಚಾರಸಂಕಿರಣಗಳಲ್ಲಿ ಪ್ರೌಢ ಪ್ರಬಂಧಗಳನ್ನು ಮಂಡಿಸಿ ಖ್ಯಾತರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಖ್ಯಾತ ವಿಮರ್ಶಕರಾಗಿ ಗುರುತಿಸಿಕೊಂಡಿರುವ ಶ್ರೀಯುತರು ಇಂಗ್ಲಿಷ್‌ನಲ್ಲಿ ೧೦, ಕನ್ನಡದಲ್ಲಿ ೧೬ ಕೃತಿಗಳನ್ನು ರಚಿಸಿದ್ದಾರೆ. ’ಸಾಹಿತ್ಯ ವಿಮರ್ಶೆ’, ’ತೌಲನಿಕ ಸಾಹಿತ್ಯ’, ’ಹೊಸಮಡಿಯ ಮೇಲೆ ಚದುರಂಗ’ ಅವುಗಳಲ್ಲಿ ಕೆಲವು ಕೃತಿಗಳು. ಕನ್ನಡದಿಂದ ಅನೇಕ ಕೃತಿಗಳನ್ನು ಇಂಗ್ಲಿಷ್‌ಗೆ ಇವರು ಅನುವಾದಿಸಿದ್ದು ’ಮಲೆಮಾದೇಶ್ವರ’ ಜನಪದ ಮಹಾಕಾವ್ಯದ ಅನುವಾದವು ಅತೀ ಮಹತ್ವಾಕಾಂಕ್ಷಿ ಅನುವಾದವೆಂದು ಪ್ರಸಿದ್ಧಿಪಡೆದಿದೆ. ಕರ್ನಾಟಕ ರಾಜ್ಯೋತ್ಸವ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕಥಾಪ್ರಶಸ್ತಿ ಹಾಗೂ ಕೆ.ಕೆ.ಬಿರ್ಲಾ ಫೆಲೋಶಿಪ್ ಮೊದಲಾದ ಪ್ರಶಸ್ತಿ, ಗೌರವಗಳಿಗೆ ಶ್ರೀಯುತರು ಪಾತ್ರರಾಗಿದ್ದಾರೆ.  ಘನ ವಿದ್ವಾಂಸರೂ, ಖ್ಯಾತ ವಿಮರ್ಶಕರೂ ಆಗಿರುವ ಡಾ.ಸಿ.ಎನ್.ರಾಮಚಂದ್ರನ್‌ರವರು ೧೪ನೇ ವರ್ಷದ ಆಳ್ವಾಸ್ ನುಡಿಸಿರಿಯನ್ನು ಉದ್ಘಾಟಿಸುತ್ತಿರುವುದು ನಮಗೆ ಹೆಚ್ಚಿನ ಸಂತೋಷವನ್ನುಂಟುಮಾಡಿದೆ.

ಆಳ್ವಾಸ್ ನುಡಿಸಿರಿ ೨೦೧೭ರ ಸರ್ವಾಧ್ಯಕ್ಷರಾಗಿ ಡಾ.ನಾಗತಿಹಳ್ಳಿ ಚಂದ್ರಶೇಖರ್.

ಮಂಡ್ಯ ಜಿಲ್ಲೆಯ ನಾಗತಿಹಳ್ಳಿಯವರಾದ ಚಂದ್ರಶೇಖರ್ ಅವರು ನಾಗತಿಹಳ್ಳಿ ಚಂದ್ರಶೇಖರ್ ಎಂದೇ ಪ್ರಸಿದ್ಧರು. ಕನ್ನಡ ಸ್ನಾತಕೋತ್ತರ ಪದವಿಯನ್ನು ಸ್ವರ್ಣಪದಕಗಳೊಂದಿಗೆ ಪಡೆದ ಇವರು ಮೂಲತ: ಕನ್ನಡದ ಪ್ರಾಧ್ಯಾಪಕರು. ತಮ್ಮ ಗ್ರಾಮದ ಒಳಿತಿಗಾಗಿ ಇವರು ಪ್ರಾರಂಭಿಸಿದ ’ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ’ಯು ಗ್ರಂಥಾಲಯ, ರಂಗಮಂದಿರ, ಕಂಪ್ಯೂಟರ್ ಕೇಂದ್ರಗಳು ಹಾಗೂ ಪ್ರತೀ ಯುಗಾದಿ ಸಮಯದಲ್ಲಿ ನಡೆಸುವ ’ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ’ದಿಂದ ಗ್ರಾಮೀಣ ಜನರ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಯಶಸ್ವಿಯಾಯಿತು.  ಈ ವೇದಿಕೆಯ ಮೂಲಕ ಗ್ರಾಮೀಣ ಜನರ ಆರ್ಥಿಕ ಸಮಸ್ಯೆಗೂ ಸ್ಪಂದಿಸುತ್ತಿರುವ ಸಂಗತಿ ಸುತ್ತುಮುತ್ತಲ ಗ್ರಾಮಸ್ಥರನ್ನು ಜಾಗೃತಿಗೊಳಿಸಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಪ್ರೇರೇಪಿಸಿತು.

ಬಹುಮುಖ ಪ್ರತಿಭೆಯ ನಾಗತಿಹಳ್ಳಿಯವರು ಕಥನಕಾರರಾಗಿ ಮುಖ್ಯರು. ತಮ್ಮ ಎಂಟನೆಯ ತರಗತಿಯಲ್ಲಿ ’ಆವರ್ತ’ ಎನ್ನುವ ಕಥೆ ಬರೆದ ಇವರು ಕಥೆ, ಕಾದಂಬರಿ, ಪ್ರವಾಸಕಥನಗಳನ್ನೊಳಗೊಂಡ ೨೧ ಕೃತಿಗಳನ್ನು ಪ್ರಕಟಿಸಿದ್ದಾರೆ. ’ನನ್ನ ಪ್ರೀತಿಯ ಹುಡುಗಿಗೆ’ ಹಲವು ಸಂಪುಟಗಳಲ್ಲಿ ಮೂಡಿಬಂದ ಅವರ ಆತ್ಮಕಥೆ. ’ಶತಮಾನದಂಚಿನಲ್ಲಿ’ ಅವರ ವಿವಿಧ ಲೇಖನಗಳ ಸಂಗ್ರಹ ಸಂಪುಟ.

ಮೂಲತ: ಕಥನಕಾರರಾದ ನಾಗತಿಹಳ್ಳಿಯವರು ’ಕಾಡಿನ ಬೆಂಕಿ’ ಚಿತ್ರಕ್ಕೆ ಸಂಭಾಷಣೆ ಬರೆಯುವ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆಮಾಡಿದವರು. ತಮ್ಮ ಅಧ್ಯಾಪನದ ದಿನಗಳಲ್ಲಿ ಚಿತ್ರಕಥೆ, ಸಂಭಾಷಣೆ, ಗೀತರಚನೆಗಳಲ್ಲಿ ಭಾಗಿಯಾಗುತ್ತಿದ್ದ ನಾಗತಿಹಳ್ಳಿಯವರು ’ಉಂಡೂಹೋದ ಕೊಂಡೂಹೋದ’ ಸಿನಿಮಾದ ಮೂಲಕ ಸಿನಿಮಾ ನಿರ್ದೇಶಕರಾಗಿ ೧೫ಕ್ಕಿಂತಲೂ ಹೆಚ್ಚು ಸಿನಿಮಾಗಳ ನಿರ್ದೇಶಿಸಿದವರು. ಹಲವು ರಾಜ್ಯ, ರಾಷ್ಟ್ರ ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ. ಇವರ ನಿರ್ದೇಶನದ ಹಲವಾರು ಧಾರವಾಹಿಗಳು ಕರ್ನಾಟಕದಾದ್ಯಂತ ಜನಜನಿತವಾಗಿವೆ.

ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಅತ್ಯುತ್ತಮ ಚಿತ್ರ- ಅತ್ಯುತ್ತಮ ಕಥಾಲೇಖನ-ಅತ್ಯುತ್ತಮ ಗೀತರಚನೆಗಾರ-ಅತ್ಯುತ್ತಮ ನಿರ್ದೇಶಕನೇ ಮೊದಲಾದ ಅನೇಕಾನೇಕ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಬಹುಮುಖ ಪ್ರತಿಭೆಯ ನಾಗತಿಹಳ್ಳಿ ಚಂದ್ರಶೇಖರ್‌ರವರು ಆಳ್ವಾಸ್ ನುಡಿಸಿರಿ ೨೦೧೭ರ ಸರ್ವಾಧ್ಯಕ್ಷಸ್ಥಾನವನ್ನು ಅಲಂಕರಿಸುತ್ತಿರುವುದು ನಮಗೆ ಅತೀವ ಸಂತೋಷವನ್ನುಂಟುಮಾಡಿದೆ.

ಆಳ್ವಾಸ್ ನುಡಿಸಿರಿ ೨೦೧೭ರ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ಪ್ರತಿನಿಧಿ ಶುಲ್ಕವಿಲ್ಲದೆ ಸಂಪೂರ್ಣ ಉಚಿತವಾಗಿ ಭಾಗವಹಿಸಬಹುದು. ಭಾಗವಹಿಸುವ ವಿದ್ಯಾರ್ಥಿಗಳು ಆಯಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ದೃಢೀಕರಣ ಪತ್ರ ಹೊಂದಿರಬೇಕು. ಇತರರಿಗೆ ಮೂರು ದಿನಗಳ ಊಟ, ವಸತಿಗಳು ಉಚಿತವಾಗಿದ್ದು ೧೦೦ ರೂ. ಪ್ರತಿನಿಧಿ ಶುಲ್ಕದೊಂದಿಗೆ ಸಮ್ಮೇಳನವನ್ನು ಸದುಪಯೋಗಪಡಿಸಿಕೊಳ್ಳಬಹುದು. ಖ್ಯಾತ ಸಾಹಿತಿಗಳು, ವಿಮರ್ಶಕರು, ಸಂಶೋಧಕರು, ಕಲಾವಿದರು ಭಾಗವಹಿಸುವ ಈ ಸಮ್ಮೇಳನಕ್ಕೆ ಕನ್ನಡ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾಗಿ ಕೇಳಿಕೊಳ್ಳುತ್ತೇನೆ.

ಸಂಪರ್ಕಕ್ಕಾಗಿ : ಸಂಪರ್ಕಕ್ಕಾಗಿ : 08258-261229, Email : nudisiri@alvas.org

ಡಾ| ಎಂ.ಮೋಹನ ಆಳ್ವ,
ಅಧ್ಯಕ್ಷರು,
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.)
ಮೂಡುಬಿದಿರೆ – 574227.