Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ಮಾಧ್ಯಮ > ಪ್ರಕಟಣೆ > ಆಳ್ವಾಸ್ ನುಡಿಸಿರಿ 2017ರ ಮುಖ್ಯಪರಿಕಲ್ಪನೆ ’ಕರ್ನಾಟಕ : ಬಹುತ್ವದ ನೆಲೆಗಳು’

ಆಳ್ವಾಸ್ ನುಡಿಸಿರಿ 2017ರ ಮುಖ್ಯಪರಿಕಲ್ಪನೆ ’ಕರ್ನಾಟಕ : ಬಹುತ್ವದ ನೆಲೆಗಳು’

ಆಳ್ವಾಸ್ ನುಡಿಸಿರಿ 2017ರ ಮುಖ್ಯಪರಿಕಲ್ಪನೆ ’ಕರ್ನಾಟಕ : ಬಹುತ್ವದ ನೆಲೆಗಳು’ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡುಬಿದಿರೆಯ ಆಶ್ರಯದಲ್ಲಿ ನಡೆಯುವ ಕನ್ನಡ ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನ ’ಆಳ್ವಾಸ್ ನುಡಿಸಿರಿ’ಯನ್ನು ಈ ವರ್ಷ ದಶಂಬರ 1, 2 ಮತ್ತು 3ನೇ ದಿನಾಂಕಗಳಂದು ಮೂರುದಿನಗಳ ಕಾಲ ವಿದ್ಯಾಗಿರಿಯ ಸುಂದರಿ ಆನಂದ ಆಳ್ವಾ ಆವರಣದಲ್ಲಿ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ. ಹದಿನಾಲ್ಕನೇ ವರ್ಷದ ಆಳ್ವಾಸ್ ನುಡಿಸಿರಿ ಸಮ್ಮೇಳನ ಇದಾಗಿದ್ದು ’ಕರ್ನಾಟಕ : ಬಹುತ್ವದ ನೆಲೆಗಳು’ ಎಂಬ ಪ್ರಧಾನ ಪರಿಕಲ್ಪನೆಯಲ್ಲಿ ಈ ಸಮ್ಮೇಳನವು ಜರುಗಲಿದೆ.

ಕರ್ನಾಟಕವು ಹಲವು ಜಾತಿ, ಧರ್ಮ, ಪಂಥ, ಪಂಗಡಗಳಿಂದ ಕೂಡಿದ ನಾಡು. ಬಯಲು, ಪರ್ವತಶ್ರೇಣಿ, ಕರಾವಳಿ ಮುಂತಾದ ಭೌಗೋಳಿಕ ಭಿನ್ನತೆಯೂ ಇಲ್ಲಿದೆ. ಕನ್ನಡ, ತುಳು, ಕೊಂಕಣಿ, ಬ್ಯಾರಿ, ಕೊಡವ ಮೊದಲಾದ ಭಾಷಿಕ ಭಿನ್ನತೆ, ಆಹಾರ-ಉಡುಪು-ವೇಷಭೂಷಣಗಳಲ್ಲೂ ಈ ವೈವಿಧ್ಯಗಳಿವೆ. ಸಾಹಿತ್ತಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅನೇಕಾನೇಕ ಭಿನ್ನತೆಗಳು ಈ ನೆಲದ ವಿಶೇಷತೆ. ಇವೆಲ್ಲವುಗಳೂ ಒಟ್ಟು ಸೇರಿ ಬಹುತ್ವ ಎನಿಸಿಕೊಳ್ಳುತ್ತದೆ. ಪ್ರಾದೇಶಿಕ, ಸಾಮಾಜಿಕ, ಕೌಟುಂಬಿಕ ಮತ್ತು ವೈಯುಕ್ತಿಕ ನೆಲೆಗಳಲ್ಲಿ ಹಾಸುಹೊಕ್ಕಿರುವ ಈ ಬಹುತ್ವವನ್ನು ಕಾಪಿಡಬೇಕಾದ ಜವಾಬ್ದಾರಿ ಕನ್ನಡನಾಡಿನ ಪ್ರತಿಯೊಬ್ಬರದೂ ಆಗಿದೆ. ಬಹುತ್ವವನ್ನು ಮುರಿದು ಮಾಡುವ ಏಕತ್ವ ನಮ್ಮದಾಗದೆ. ಬಹುತ್ವವನ್ನು ಉಳಿಸಿ ಗೌರವಿಸಬೇಕಾದ ಹಿನ್ನಲೆಯಿಂದ ’ಕರ್ನಾಟಕ : ಬಹುತ್ವದ ನೆಲೆಗಳು’ಎಂಬ ಪ್ರಮುಖ ಪರಿಕಲ್ಪನೆಯನ್ನು ಈ ವರ್ಷದ ಆಳ್ವಾಸ್ ನುಡಿಸಿರಿ ಸಮ್ಮೇಳನಕ್ಕೆ ಆರಿಸಲಾಗಿದೆ.

ಸಮ್ಮೇಳನದ ಸಾಹಿತ್ತಿಕ, ಸಾಂಸ್ಕೃತಿಕ, ಪ್ರದರ್ಶಕ ಹಾಗೂ ಮಾರಾಟವೇ ಮೊದಲಾದ ಅಂಗಗಳನ್ನು ಈ ಪ್ರಧಾನ ಪರಿಕಲ್ಪನೆಗೆ ಅನುಗುಣವಾಗಿ ಆಯೋಜಿಸಲಾಗುವುದರಿಂದ ಈ ವರ್ಷದ ಆಳ್ವಾಸ್ ನುಡಿಸಿರಿ ಸಮ್ಮೇಳನವು ವೈವಿಧ್ಯಮಯವಾಗಿ ಮೂಡಿಬರಲಿದೆ. ವಿದ್ಯಾರ್ಥಿಗಳಿಗೆ ಉಚಿತವಾಗಿ ಹಾಗೂ ಇತರರು ರೂ.100/-ನ್ನು ಪ್ರತಿನಿಧಿ ಶುಲ್ಕ ನೀಡುವ ಮೂಲಕ ಸಮ್ಮೇಳನದಲ್ಲಿ ಭಾಗವಹಿಸಬಹುದು. ಕನ್ನಡ ಪ್ರೇಮಿಗಳು ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಆಳ್ವಾಸ್ ನುಡಿಸಿರಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾಗಿ ಕೇಳಿಕೊಳ್ಳುತ್ತೇನೆ.

ಅಧ್ಯಕ್ಷರು,
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.)