Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ಮಾಧ್ಯಮ > ಪ್ರಕಟಣೆ > ನುಡಿಸಿರಿ 2017 ಸರ್ವಾಧ್ಯಕ್ಷರ ಭಾಷಣ

ನುಡಿಸಿರಿ 2017 ಸರ್ವಾಧ್ಯಕ್ಷರ ಭಾಷಣ

 

 

 

ಡಾ. ನಾಗತಿಹಳ್ಳಿ ಚಂದ್ರಶೇಖರ

ಬನಶಂಕರಿ ಎರಡನೇ ಹಂತ

ಬನಶಂಕರಿ, ಬೆಂಗಳೂರು – 560 070

 

 

ಡಿಸೆಂಬರ್ 1, 2017

 

 

2017ರ ನುಡಿಸಿರಿ ರಾಷ್ಟ್ರೀಯ ಸಮ್ಮೇಳನದ ಕಾರ್ಯಾಧ್ಯಕ್ಷರಾದ ಡಾ. ಮೋಹನ್ ಆಳ್ವ ಅವರೇ, ಈ ಸಮ್ಮೇಳನದ ಉದ್ಘಾಟಕರಾದ ಖ್ಯಾತ ವಿಮರ್ಶಕರಾದ ಡಾ. ಸಿ.ಎನ್. ರಾಮಚಂದ್ರನ್ ಅವರೇ, ಮಾಧ್ಯಮ ಬಂಧುಗಳೇ, ಪ್ರೀತಿಯ ವಿದ್ಯಾರ್ಥಿಗಳೇ, ಸಹೃದಯ ಸಾಹಿತ್ಯಾಸಕ್ತರೇ.

ಕಳೆದ ಹದಿಮೂರು ವರ್ಷದ ನುಡಿಸಿರಿಯ ಅಧ್ಯಕ್ಷರುಗಳೆಲ್ಲ ಎಲ್ಲದರಲ್ಲೂ ನನಗಿಂತ ಹಿರಿಯರು. ಭಾಷೆ, ಶಿಕ್ಷಣ, ಜನಪದ, ರಂಗಭೂಮಿ, ಚಲನಚಿತ್ರ, ವಿದ್ವತ್ತು, ಕಾವ್ಯ, ಸಂಘಟನೆ, ಸಾಹಿತ್ಯ, sಸಂಶೋಧನೆ ಮತ್ತು ಅಧ್ಯಾಪನ ಹೀಗೆ ಬಗೆ ಬಗೆಯ ಕ್ಷೇತ್ರಗಳಲ್ಲಿ ಅದ್ವಿತೀಯರಾದವರು. ಒಬ್ಬರಿಗಿಂತ ಒಬ್ಬರು ದೊಡ್ಡವರು. ಈ ಸರಣಿಯಲ್ಲಿ ನಾನೇ ಚಿಕ್ಕವ. ನಾನು ಚಿಕ್ಕವನಾಗಿದ್ದಾಗ ನನ್ನ ತಂದೆಯವರು ಜಾತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಎತ್ತರದ ದೃಶ್ಯಾವಳಿ ಗಳು ಕಾಣಿಸಲಿ ಎಂದು ತಮ್ಮ ಹೆಗಲ ಮೇಲೆ ಕೂರಿಸಿಕೊಳ್ಳುತ್ತಿದ್ದರು. ‘ನಾನೀಗ ಅಪ್ಪನಿಗಿಂತ ಎತ್ತರ’ ಎಂದು ಬೀಗುತ್ತಿದ್ದೆ. ತಿನಿಸು, ಆಟಿಕೆ ಕೊಡಿಸುತ್ತಿದ್ದರು. ಹೆಗಲ ಮೇಲೆ ಕುಳಿತು ಹರಿಯುವ ತೇರನ್ನು ನೋಡುತ್ತಿದ್ದೆ. ಈ ನುಡಿಸಿರಿಯ ಉತ್ಸವದಲ್ಲಿ ಅದೇ ನೆನಪಾಗುತ್ತಿದೆ. ಹಿರಿಯರು, ಗೆಳೆಯರೆಲ್ಲ ಸೇರಿ ನನ್ನನ್ನು ಈ ಎತ್ತರದ ಸ್ಥಾನದಲ್ಲಿ ಕುಳ್ಳಿರಿಸಿದ್ದೀರಿ. ಇದು ನನ್ನ ಅರ್ಹತೆಗಿಂತ ಮಿಗಿಲಾಗಿ ಕಿರಿಯರ ಬಗೆಗಿನ ನಿಮ್ಮ ಪ್ರೀತಿಯ ಅಭಿವ್ಯಕ್ತಿ.

ಎದುರಿಗೆ ಕಾಣುತ್ತಿರುವ ಹಿರಿಯ ತೇರುಗಳನ್ನು ಇಲ್ಲಿಂದ ಬೆರಗಾಗಿ ನೋಡುತ್ತಿದ್ದೇನೆ. ಈ ಕ್ಷಣವನ್ನು ನನ್ನ ಬದುಕಿನ ಅತ್ಯಮೂಲ್ಯ ಕ್ಷಣವೆಂದು ಪರಿಭಾವಿಸಿದ್ದೇನೆ. ಇದುವರೆಗೆ ನಾನು ಪಡೆದಿರುವ ಎಲ್ಲ, ಪ್ರಶಸ್ತಿ ಪುರಸ್ಕಾರ ಗಳಿಗಿಂತ ಬಹಳ ಹಿರಿದು ಎಂದು ನಂಬಿದ್ದೇನೆ. ಪ್ರತಿ ವರ್ಷ ನುಡಿಸಿರಿಗೆ, ಬಂದು ಹೋಗಿರುವ ನನಗೆ, ನುಡಿಸಿರಿ ಪ್ರಶಸ್ತಿ ಪುರಸ್ಕøತನಾದ ನನಗೆ, ಇಂಥದ್ದೊಂದು ಹೊಣೆಗಾರಿಕೆ, ಗೌರವ ಇಷ್ಟು ಬೇಗ ಲಭಿಸಿದೆ. ಈ ಗೌರವವನ್ನು ಅಪಾರ ವಿನಯದಿಂದ ಸ್ವೀಕರಿಸುತ್ತಾ ಡಾ. ಮೋಹನ ಆಳ್ವರಿಗೂ ಅವರ ಜತೆಗಿರುವ ಹಲವಾರು ಬೌದ್ಧಿಕ ಮತ್ತು ಸಾಂಸ್ಕøತಿಕ ಮನಸ್ಸುಗಳಿಗೂ ಒಡಲಾಳದ ಕೃತಜ್ಞತೆಯನ್ನು ಸಮರ್ಪಿಸುತ್ತಿದ್ದೇನೆ. ಅಲ್ಲದೆ ನಾನು ಹಲವರನ್ನು ನೆನೆಯ ಬೇಕಾಗಿದೆ. ಇದು ಔಪಚಾರಿಕವಲ್ಲ; ಒಡಲಾಳದ ಮಾತು. ಏಕೆಂದರೆ,

ಎನಿತು ಜನ್ಮದಲಿ ಎನಿತು ಜೀವರಿಗೆ

ಎನಿತು ನಾವು ಋಣಿಯೋ

ತಿಳಿದು ನೋಡಿದರೆ ಬಾಳು ಎಂಬುದಿದು

ಋಣದ ರತ್ನಗಣಿಯೋ

– ಎನ್ನುತ್ತಾರೆ ಜಿಎಸ್‍ಎಸ್. ಗೋಳುಗುಟ್ಟಿಸುವ ಬಡತನದ ನಡುವೆಯೂ ಎಮ್ಮೆ ಮೇಯಿಸಲು ಕಳುಹಿಸದೆ ಶಾಲೆಗೆ ಕಳುಹಿಸಿ ಕನ್ನಡ ವರ್ಣಮಾಲೆ ಕಲಿಸಿದ ಅಮ್ಮ; ಕೌತುಕದ ಕಥೆ ಹೇಳುತ್ತಿದ್ದ ಅಪ್ಪ, ನನ್ನನ್ನು ಗುಮಾನಿ ಮತ್ತು ಅಕ್ಕರೆಯಿಂದ ನೋಡುತ್ತಿದ್ದ ಕುಟುಂಬದ ಸದಸ್ಯರು, ಬಾ ಎಲ್ಲಾದ್ರೂ ಓಡಿಹೋಗಿ ಹಾಳಾಗೋಣ ಎಂದು ಕೈ ಬೀಸಿ ಕರೆಯುತ್ತಿದ್ದ ಊರ ಬದಿಯ ಹೆದ್ದಾರಿ; ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಹಂತದವರೆಗೆ ಅರಿವನ್ನು ಬಿತ್ತಿದ ಅನೇಕ ಶಿಕ್ಷಕರು; ನನ್ನ ದಿನಗೂಲಿಗೆ ತುತ್ತು ಅನ್ನ ಒದಗಿಸಿ ಓದು ಮುಂದುವರಿಸಲು ನೆರವಾದ ಮೈಸೂರು ಡೈರಿ; ಮಾನಸ ಗಂಗೋತ್ರಿಯಲ್ಲಿ ಕನಸಿನ ಗಂಗೋತ್ರಿಯಂತೆ ಸಿಕ್ಕಿ ನನ್ನ ಸಕಲೆಂಟು ಧಾವಂತ ದೌರ್ಬಲ್ಯಗಳನ್ನು ತಾಳಿಕೊಂಡು ನನ್ನ ಕುಟುಂಬ ಯಾತ್ರೆಯ ಜತೆಗೇ ಸಾಂಸ್ಕøತಿಕ ಯಾತ್ರೆಗೂ ಸಹಯಾತ್ರಿ ಎನಿಸಿ ಇಲ್ಲಿಯತನಕ ದಣಿವರಿಯದೆ ನಡೆದು ಬಂದಿರುವ ಪತ್ನಿ ಶೋಭಾ; ತಮಾಷೆ, ಅಕ್ಕರೆ, ಕಾಳಜಿಗಳ ನಡುವೆಯೂ ಕಟುವಿಮರ್ಶಕರಾದ ನನ್ನ ಇಬ್ಬರು ಮಕ್ಕಳಾದ ಸಿಹಿ-ಕನಸು; ಅಧ್ಯಾಪಕ ವೃತ್ತಿಯಲ್ಲಿ ತಮ್ಮ ಪ್ರಶ್ನೆಗಳ ಮೂಲಕ ನನ್ನ ಓದು ಇಂಗದಂತೆ ನೋಡಿಕೊಂಡ ತರುಣ ವಿದ್ಯಾರ್ಥಿಗಳು; ಕಥೆಗಾರನಾಗಿ ರೂಪುಗೊಳ್ಳಲು ಪ್ರಭಾವಿಸಿದ ಅನಂತಮೂರ್ತಿ, ಮಾಸ್ತಿ, ತೇಜಸ್ವಿ, ಲಂಕೇಶ್, ದೇವನೂರು, ಟಾಲ್ಸ್‍ಟಾಯ್, ಚಿನುವ ಅಚಿಬೆ ಮುಂತಾದ ಹಲವು ಲೇಖಕರು; ಓದುತ್ತ, ಚರ್ಚಿಸುತ್ತ ನನ್ನನ್ನು ಬೆಳೆಸಿದ ಹಲವು ಹಿರಿಯ ಕಿರಿಯ ಸ್ನೇಹಿತರು; ಶ್ರವ್ಯ ಮಾಧ್ಯಮದಲ್ಲಿ ಆರಂಭಿಕ ಹೆಜ್ಜೆ ಇರಿಸಲು ನೆರವಾದ ಮೈಸೂರು ಆಕಾಶವಾಣಿ; ಎಂಟನೆ ತರಗತಿಯಲ್ಲಿದ್ದಾಗ ಬರೆದ ಕಿರುಕಥೆಯನ್ನು ಮೊದಲು ಅಚ್ಚುಮಾಡಿದ ಸಂಯುಕ್ತ ಕರ್ನಾಟಕ ದಿನಪತ್ರಿಕೆ; ಚಳುವಳಿಯ ಪ್ರಯೋಗಗಳ ಮೂಲಕ ಬದುಕನ್ನು ಬೇರೆ ಬಗೆಯಲ್ಲಿ ನೋಡಲು ಕಲಿಸಿದ ಎಂಡಿಎನ್ ಮತ್ತು ಕಾರಂತರು; ಹತ್ತಾರು ದೈನಂದಿನ ಧಾರಾವಾಹಿಗಳ ಮೂಲಕ ಮನೆ ಮನಗಳನ್ನು ಮುಟ್ಟಲು ನೆರವಾದ ಸರ್ಕಾರಿ ಮತ್ತು ಖಾಸಗಿ ವಾಹಿನಿಗಳು; ನನ್ನನ್ನು ಪ್ರಭಾವಿಸಿದ ಹಲವು ಭಾಷೆಯ ಚಲನಚಿತ್ರಗಳು ಮತ್ತು ಅವುಗಳ ನಿರ್ದೇಶಕರು; ನನ್ನ ಸಿನಿಮಾಗಳನ್ನು ಪ್ರೀತಿಯಿಂದ ಸ್ವೀಕರಿಸಿದ ಪ್ರೇಕ್ಷಕರು; ನನ್ನ ಅರ್ಹತೆಗೆ ಮೀರಿದ ಕೀರ್ತಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿದ ವಿವಿಧ ಸರ್ಕಾರ ಮತ್ತು ಖಾಸಗಿ ಸಂಘಸಂಸ್ಥೆಗಳು; ಹಲವಾರು ಸಿನಿಮಾಗಳನ್ನು ನಿರ್ದೇಶಿಸಲು ನೆರವಾದ ಉದ್ಯೋಗದಾತ ನಿರ್ಮಾಪಕರು; ಬಹುತೇಕ ಒಳ್ಳೆಯದನ್ನೇ ನನ್ನ ಬಗ್ಗೆ ಬರೆದ ವಿಮರ್ಶಕರು; ನನ್ನ ಅಲೆಮಾರಿತನದಲ್ಲಿ ಸಿಕ್ಕಿದ, ಹಲವು ಬಗೆಯಲ್ಲಿ ನೆರವಾದ ಅನಿವಾಸಿ ಕನ್ನಡಿಗರು; ನಾಳಿನ ಚಿತ್ರೋದ್ಯಮಕ್ಕೆ ನಿಜವಾದ ಕೊಡುಗೆಗಳಂತಿರುವ ಪ್ರತಿಭಾಶಾಲಿಗಳೂ ಈ ಕಾಲದ ಕಾರಂಜಿಗಳೂ ಆಗಿರುವ ಟೆಂಟ್ ಸಿನಿಮಾ ಶಾಲೆಯ ನೂರಾರು ವಿದ್ಯಾರ್ಥಿಗಳು; ಕಳೆದ ಹದಿನೈದು ವರ್ಷಗಳಿಂದ ಆಚರಿಸುತ್ತಿರುವ ನಾಗತಿಹಳ್ಳಿ ಸಂಸ್ಕøತಿ ಹಬ್ಬಕ್ಕಾಗಿ ನಾಡಿನ ಮೂಲೆ ಮೂಲೆಗಳಿಂದ ನಮ್ಮ ಊರಿಗೆ ಬಂದು ಪ್ರೀತಿಯಿಂದ, ಕುಹಕದಿಂದ, ಅನುಕಂಪದಿಂದ, ಮೆಚ್ಚುಗೆಯಿಂದ ತರಾವರಿ ಬಗೆಯಲ್ಲಿ ತೊಡಗಿಸಿಕೊಂಡು ನನ್ನ ಹಳ್ಳಿಗೆ ಸಾಂಸ್ಕøತಿಕ ಸ್ಪರ್ಶ ನೀಡುತ್ತಿರುವ ನೂರಾರು ಮಿತ್ರರು; ನನ್ನ ಪುಟ್ಟ ಪ್ರಯೋಗಗಳಿಗೆ ಕೈ ಜೋಡಿಸಿದ ನಾಗತಿಹಳ್ಳಿಯ ‘ಅಭಿವ್ಯಕ್ತಿ’ ಸಂಘಟನೆಯ ಸೋದರ, ಸೋದರಿಯರು; ನನ್ನನ್ನು ಸದಾ ಸೂಕ್ಷ್ಮವಾಗಿ, ಸ್ವಾಭಿಮಾನಿಯಾಗಿ ಮತ್ತು ವಿನಯವಂತಿಕೆಯಿಂದ ಬದುಕಲು ಪರೋಕ್ಷವಾಗಿ ಸೂಚಿಸುತ್ತಾ ಬಂದ ನೀವು ಮತ್ತು ನಿಮ್ಮಂಥವರು…

ಈ ನುಡಿಸಿರಿಯ ಅಧ್ಯಕ್ಷತೆಯ ನೆಪದಲ್ಲಿ ನಾನು ಈ ಎಲ್ಲರನ್ನೂ ನೆನೆಯಲೇಬೇಕು. ಏಕೆಂದರೆ ರಾಷ್ಟ್ರಕವಿಗಳು ಮಹಾಕಾವ್ಯದ ಆರಂಭದಲ್ಲಿ ಅಸಂಖ್ಯ ಚೇತನಗಳಿಗೆ ಕೃತಜ್ಞತೆ ಅರ್ಪಿಸುತ್ತಾರೆ. ನಾನು ಎಷ್ಟರವನು? ಕುವೆಂಪು ಹೇಳುತ್ತಾರೆ…

ಹೋಮರಗೆ ವರ್ಜಿಲಗೆ ಡಾಂಟೆ ಮೇಣ್ ಮಿಲ್ಟನಗೆ

ನಾರಣಪ್ಪಗೆ ಮೇಣ್ ಪಂಪನಿಗೆ ಋಷಿವ್ಯಾಸ

ಭಾಸ ಭವಭೂತಿ ಮೇಣ್ ಕಾಳಿದಾಸಾಧ್ಯರಿಗೆ

ನರಹರಿ ತುಲಸಿದಾಸ ಮೇಣ್ ಕೃತ್ತಿವಾಸಾದಿ

ನನ್ನಯ್ಯ ಫಿರ್ಧೂಸಿ ಕಂಬ ಅರವಿಂದರಿಗೆ

ಕಾಲ ದೇಶದ ನುಡಿಯ ಜಾತಿಯ ವಿಭೇದಮಂ

ಲೆಕ್ಕಿಸದೆ ಜಗತೀ ಕಲಾಚಾರ್ಯರೆಲ್ಲರ್ಗೆ

ದರ್ಶಿಸುತೆ ಮುಡಿಬಾಗಿ ಮಣಿದು ಕೈ ಜೋಡಿಸುವೆನಾಂ.

… ನಾನೂ ಸಹ. ಇಲ್ಲಿರುವ, ಅಲ್ಲಿರುವ, ಎಲ್ಲೆಲ್ಲೂ ಇರುವ ಜ್ಞಾತಾಜ್ಞಾತ ರಿಗೆಲ್ಲ ಋಣಿಯಾಗಿದ್ದೇನೆ.

* * *

ನನ್ನ ಮತ್ತು ಡಾ. ಮೋಹನ್ ಆಳ್ವರ ಸ್ನೇಹಕ್ಕೆ ಬರಿಯ ಹದಿನೈದು ವರ್ಷ ವಯಸ್ಸಾಗಿದೆ. ಇಲ್ಲಿ ಬರುವ, ಬಂದಿರುವ ಅನೇಕರಿಗಿರುವಂತೆ ನನ್ನದೂ ಅವರದು ಅಪ್ಪಟ ಸಾಂಸ್ಕøತಿಕ ಸಂಬಂಧ. ಸಮಾನ ಆಸಕ್ತಿ, ಅಭಿರುಚಿಗಳು ನಮ್ಮನ್ನು ಒಗ್ಗೂಡಿಸಿವೆ. ಅವರು ಈ ಮೂಡುಬಿದಿರೆಯಲ್ಲಿ ಬೃಹತ್ತಾಗಿ ಮಹತ್ತಾಗಿ ಈ ನುಡಿಹಬ್ಬವನ್ನು ಆಚರಿಸುತ್ತಾರೆ. ನಾವು ಗೆಳೆಯರೆಲ್ಲ ಕೂಡಿ ಎರಡು ಸಾವಿರ ಜನಸಂಖ್ಯೆಯ ನಮ್ಮ ನಾಗತಿಹಳ್ಳಿಯಲ್ಲಿ ತುಂಬ ಪುಟ್ಟದಾಗಿ ಆದರೆ ಅಷ್ಟೇ ಗಂಭೀರವಾದ ಉದ್ದೇಶದಿಂದ ‘ನಾಗತಿಹಳ್ಳಿ ಸಂಸ್ಕøತಿ ಹಬ್ಬ’ವನ್ನು ಆಚರಿಸುತ್ತ ಬಂದಿದ್ದೇವೆ. ನಾನು ನುಡಿಸಿರಿಗೆ ಪ್ರತಿವರ್ಷ ಬರುವಂತೆ

ಡಾ. ಮೋಹನ್ ಆಳ್ವರು ತಮ್ಮ ವಿದ್ಯಾರ್ಥಿಗಳ  ಕಲಾತಂಡಗಳೊಡನೆ ಗೆಳೆಯ ಜೀವನರಾಂ ಜತೆ ನಮ್ಮ ಪುಟ್ಟಹಳ್ಳಿಗೆ ಬಂದು, ಬಯಲು ಸೀಮೆಯ ಹಳ್ಳಿಯ ಜನತೆಗೆ ಕರಾವಳಿಯ ಯಕ್ಷಗಾನವೂ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮ ಗಳನ್ನು ಒದಗಿಸುತ್ತಾ ಬಂದಿದ್ದಾರೆ. ನಮ್ಮ ಹಳ್ಳಿಗೆ ಮಾತ್ರವಲ್ಲ. ಯಾವುದೇ ಹಳ್ಳಿಯ ಚಿಕ್ಕಪುಟ್ಟ ಸಂಸ್ಥೆಗಳು ಸಾಂಸ್ಕøತಿಕವಾಗಿ ಚಲನಶೀಲವಾಗಿದ್ದಾಗ ಆಳ್ವರು ಅದರಲ್ಲಿ ಪ್ರೀತಿಯಿಂದ ಭಾಗವಹಿಸುತ್ತಾರೆ. ಆರ್ಥಿಕ ವ್ಯವಹಾರವನ್ನು ಮೀರಿದ, ಕೇವಲ ಸಾಂಸ್ಕøತಿಕವಾದ ಈ ಸೋದರತ್ವಕ್ಕೆ ತುಂಬು ಕೃತಜ್ಞತೆ ಹೇಳಲು ನಾನೀ ಸಂದರ್ಭವನ್ನು ಬಳಸಿಕೊಳ್ಳುತ್ತಿದ್ದೇನೆ. ನಾವು ನಮ್ಮ ನಮ್ಮ ನೆಲೆಗಳಲ್ಲಿಯೇ ನಮ್ಮ ನಮ್ಮ ರೀತಿಯಲ್ಲಿ, ನಮ್ಮ ನಮ್ಮ ಬೇರುಗಳನ್ನು ಶೋಧಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಈ ವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿಗಳ ಕಲೆ, ಕ್ರೀಡೆ, ಅಧ್ಯಯನ, ಸಂಶೋಧನೆಗಳನ್ನು ಕಂಡು ಬೆರಗಾಗಿದ್ದೇನೆ. ಇಡೀ ರಾತ್ರಿ ನಾಗತಿಹಳ್ಳಿಯಲ್ಲಿ ಅದ್ಭುತವಾಗಿ ನಾಟಕ ಪ್ರದರ್ಶನ ಮುಗಿಸಿ ಪ್ರಯಾಣ ಮಾಡಿ ಮರುದಿನ ಮೂಡುಬಿದಿರಿಗೆ ಬಂದು ಪರೀಕ್ಷೆ ಬರೆದು ಅದರಲ್ಲೂ ಮೊದಲ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಪ್ರತಿಭಾವಂತರನ್ನು ಇಲ್ಲಿ ಕಂಡಿದ್ದೇನೆ. ವಿಜ್ಞಾನ ಹಿರಿದು, ಕಲೆ ಕಿರಿದು; ಅಥವಾ ಕಲಾವಿಭಾಗ ಹಿರಿದು ಕ್ರೀಡೆ ಕಿರಿದು ಎಂಬ ಭೇದವಿಲ್ಲದ ಆವರಣ ಇದು. ಆದ್ದರಿಂದಲೇ ಆಳ್ವಾಸ್ ವಿದ್ಯಾರ್ಥಿಗಳು ರಾಷ್ಟ್ರೀಯ ಹಂತದಲ್ಲಿ ಪ್ರತಿಭಾವಂತರಾಗಿ ಹೆಸರು ಮಾಡಿದ್ದಾರೆ. ನನ್ನ ಅಲೆಮಾರಿತನದಲ್ಲಿ ಕಂಡ ಅಪರೂಪದ ವಿದ್ಯಾಲಯ ಇದು. ಇದೆಲ್ಲ ಒಂದು ದಿನದ, ಒಂದು ತಿಂಗಳ ಅಥವಾ ಒಂದು ವರ್ಷದ ಮಟ್ಟಿಗಿನ ಉತ್ಸಾಹವಲ್ಲ. ವರ್ಷದಿಂದ ವರ್ಷಕ್ಕೆ ವಿಸ್ತಾರಗೊಳ್ಳುತ್ತಾ ಹೊಸ ಆಯಾಮ ಪಡೆದುಕೊಳ್ಳುವ ಪ್ರಯೋಗಶೀಲತೆ ಕೂಡಾ. ಈ ವರ್ಷದ ವಿಶೇಷವೇನು ಎಂಬ ಸಾಂಸ್ಕøತಿಕ ಕುತೂಹಲದಿಂದ ಸಹೃದಯರು ನಾಡಿನ ಮೂಲೆ ಮೂಲೆ ಗಳಿಂದ ಇಲ್ಲಿಗೆ ಬರುತ್ತಾರೆ. ಹೊಸತನ್ನು ಗ್ರಹಿಸುತ್ತಾರೆ. ಪ್ರಜಾಸತ್ತಾತ್ಮಕವಾದ, ಮುಕ್ತ ಸಂವಾದಗಳನ್ನು ಕೇಳುತ್ತಾರೆ. ಹಲವು ವೇದಿಕೆಗಳಲ್ಲಿ ಇಲ್ಲಿ ಏಕಕಾಲಕ್ಕೆ ಅರಳುವ ಕಾರ್ಯಕ್ರಮಗಳು ಜಡಗೊಂಡ ನಮ್ಮ ಮಹಾನಗರದ ಯಾಂತ್ರಿಕ ಮನಸ್ಸುಗಳನ್ನು ಮುದಗೊಳಿಸುತ್ತವೆ. ಚಿಂತನೆಗೊಡ್ಡುತ್ತವೆ. ಡಾ. ಮೋಹನ್ ಆಳ್ವ ದಣಿವರಿಯದೆ ಒಂದರ ಹಿಂದೊಂದು ವಿಶ್ವದರ್ಜೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇರುತ್ತಾರೆ. ಈ ಕಷ್ಟವನ್ನು ಬೇಕೆಂತಲೇ ಮೈಮೇಲೆ ಎಳೆದುಕೊಂಡಿರುವ ಆಳ್ವರು ಈಗ ಎಳೆಯುತ್ತಿರುವ ತೇರನ್ನು ನಿಲ್ಲಿಸುವಂತಿಲ್ಲ. ಸಾವಿರಾರು ಎಳೆಯ ಕೈಗಳನ್ನು ಸೃಷ್ಟಿಸಿರುವ ಅವರ ಈ ನುಡಿತೇರನ್ನೆಳೆಯುವ ಕಾಯಕ ನಿರಂತರವಾಗಿರಲಿ ಎಂದು ಆಶಿಸುತ್ತೇನೆ. ಕ್ರಿಯಾಶೀಲರು ಎಂದೂ ತಮ್ಮ ನೆಚ್ಚು ನಂಬುಗೆಗಳಿಂದ ಹಿಂದೆ ಸರಿಯಬಾರದು. ಅಷ್ಟೇ ಅಲ್ಲ ಎಲ್ಲರ ಟೀಕೆ ಟಿಪ್ಪಣಿಗಳನ್ನೂ ಅವರು ಉಡಾಯಿಸುವ ವ್ಯಂಗ್ಯದ ಕ್ಷಿಪಣಿಗಳನ್ನೂ ಅತ್ಯಂತ ಗೌರವದಿಂದ ಸ್ವೀಕರಿಸಬೇಕು. ಪ್ರಜಾಸತ್ತೆಯಲ್ಲಿ ನಂಬಿಕೆ ಉಳ್ಳ ಒಂದು ಸಂಕೀರ್ಣ ಸಮಾಜದಲ್ಲಿ ಬದುಕುವ ನಾವು ಯಾರೂ ಕಾಲಾತೀತರಲ್ಲ. ಪ್ರಶ್ನಾತೀತರೂ ಅಲ್ಲ. ಆರೋಗ್ಯಕರ ವಾಗ್ವಾದಗಳು, ಸಮಾಜಮುಖಿ ಟೀಕೆಗಳು ಒಂದು ಸಹಜ ವಾಸ್ತವ ಸ್ಥಿತಿ. ಖ್ಯಾತಿಯ ಉತ್ಕರ್ಷದಲ್ಲಿರುವ ಈ ನುಡಿಸಿರಿ ಯಂಥ ಉತ್ಸವಗಳೂ ಕೂಡಾ ವಿಮರ್ಶೆಯ ಅಗ್ನಿದಿವ್ಯವನ್ನು ಹಾದು ಹೋಗಬೇಕು. ಮೌಲ್ಯಾಪಮೌಲ್ಯಗಳ ಚರ್ಚೆಯನ್ನು ಜನತೆ ಮತ್ತು ಕಾಲದ ವಿವೇಕಕ್ಕೆ ಒಪ್ಪಿಸಿ ಮುಂದೆ ಸಾಗಬೇಕು.

ನಮ್ಮೂರಿಗೆ ಬಂದ, ನನ್ನ ಬಗ್ಗೆ ಅಪಾರ ಕಾಳಜಿ ಇರುವ ಸಾಹಿತಿ ಮಿತ್ರರೊಬ್ಬರು ‘ಇದೆಲ್ಲ ಬೇಕಾ? ನಿಮ್ಮ ಹಳ್ಳಿಯನ್ನು ಬದಲಿಸೋಕೆ ಸಾಧ್ಯವೇ? ಇದೆಲ್ಲ ಭ್ರಮೆ! ಇದರಿಂದ ಯಾರಿಗೆ ಪ್ರಯೋಜನ?’ ಇತ್ಯಾದಿಯಾಗಿ ಮಾತನಾಡಿದರು. ಏಕೆಂದರೆ ಇದು ಪ್ರಯೋಜನದ ಕಾಲ. ಪ್ರಯೋಜನವಿಲ್ಲದೆ ಯಾರೂ ಯಾವ ಕೆಲಸವನ್ನೂ ಮಾಡಲಾರರು, ಮಾಡಬಾರದು. ಇದು ಇವತ್ತಿನ ಸಿದ್ಧಾಂತ. ಕ್ರಾಂತಿಯ ಮಾತುಗಳನ್ನು ಭಾಷಣಕ್ಕೆ ಅಥವಾ ಬರಹಕ್ಕೆ ಸೀಮಿತಗೊಳಿಸಿಕೊಳ್ಳುವುದು ಒಂದು ಜಾಣತನ. ಮೋಹನ್ ಆಳ್ವರು ನುಡಿಸಿರಿಯನ್ನು ಪರಿಕಲ್ಪಿಸಿ ಆಚರಿಸದಿದ್ದರೆ ಯಾರೂ ಬಂದು ‘ನೀವು ಏಕೆ ನುಡಿಸಿರಿ ಆಚರಿಸುತ್ತಿಲ್ಲ?’ ಎಂದು ಕೇಳುತ್ತಿರಲಿಲ್ಲ. ಆದರೆ ನುಡಿಸಿರಿಯನ್ನು ಆಚರಿಸ ತೊಡಗಿದ ಮೇಲೆ ‘ಏಕೆ ಆಚರಿಸುತ್ತೀರಿ?’ ಎಂದು ಕೇಳುವವರಿದ್ದಾರೆ. ಸಾರಾಂಶವಾದರೂ ಇಷ್ಟೆ. ‘ನಾನು ಮಾಡುವುದಿಲ್ಲ. ನೀನೂ ಮಾಡಬೇಡ’. ಸದುದ್ದೇಶಗಳು, ಸಕಾರಾತ್ಮಕ ನಿಲುವುಗಳು ಏಕೆ ನಮ್ಮ ನಡುವೆ ಕಣ್ಮರೆ ಯಾಗುತ್ತಿವೆ? ‘ಮಾಡೆ ಮತ್ತು ಮಾಡಲು ಬಿಡೆ’ ಎನ್ನುವ ನಿಲುವಿನಿಂದ. ಸರಕಾರದವರು ‘ಅನ್ನಭಾಗ್ಯ’ ಯೋಜನೆ ತಂದರು. ಇಂದಿರಾ ಕ್ಯಾಂಟೀನ್ ಆರಂಭಿಸಿದರು. ಕೊಳೆಗೇರಿಯ ಜನರಿಗೆ ಮನೆ ಕಟ್ಟಿಕೊಡಲು ಯೋಜನೆಗಳನ್ನು ಹಾಕಿದರು. ನಾನು ಯಾವುದೇ ರಾಜಕೀಯ ಪಕ್ಷದ ವಕ್ತಾರನಲ್ಲ. ಆದರೆ ಬಡವರ ಹಸಿವು ನೀಗುವ, ತಲೆ ಮೇಲೊಂದು ಸೂರು ನೀಡುವ ಈ ಕಾರ್ಯಕ್ರಮಗಳನ್ನು ಯಾವುದೇ ಪಕ್ಷವಿರಲಿ ಮಾನವೀಯ ದೃಷ್ಟಿಯಿಂದ ನೋಡಲು ಯತ್ನಿಸುತ್ತೇನೆ. ಅಕ್ಕಿಯಲ್ಲಿ ಭ್ರಷ್ಟಾಚಾರ ಆರಂಭವಾಯಿತು. ಪ್ಲಾಸ್ಟಿಕ್ ಅಕ್ಕಿಯ ಸುಳ್ಳು ಸುದ್ದಿ ಬಿತ್ತರವಾಯಿತು. ಇಂದಿರಾ ಕ್ಯಾಂಟೀನ್‍ನಲ್ಲಿ ಜಿರಲೆ ಬಿತ್ತು. ಭ್ರಷ್ಟ ಅಧಿಕಾರಿಗಳಿಂದ ಕೊಳೆಗೇರಿ ಜನರಿಗೆ ಮನೆಗಳು ಸಿಗಲಿಲ್ಲ. ಇಲ್ಲಿ ಯಾರು ಒಳ್ಳೆಯ ಕೆಲಸ ಮಾಡಲು ಯತ್ನಿಸಿದರೂ ಕೂಡಲೇ ಅದು ನಿಷ್ಪಲವಾಗುವಂತೆ, ನಿರರ್ಥಕವಾಗುವಂತೆ ವ್ಯವಸ್ಥಿತವಾಗಿ ನೋಡಿಕೊಳ್ಳ ಲಾಗುತ್ತದೆ. ಇದು ನಮ್ಮ ನಡುವಿನ ಅತ್ಯಂತ ಹೀನಾಯವಾದ ಪ್ರವೃತ್ತಿ.

ಇದನ್ನು ಆತ್ಮಪ್ರಶಂಸೆ ಎಂದು ಯಾರೂ ತಿಳಿಯಬಾರದು. ನಾವು ಆಚರಿಸುತ್ತಿರುವ ನಾಗತಿಹಳ್ಳಿ ಸಂಸ್ಕøತಿ ಹಬ್ಬಕ್ಕೆ ಹದಿನೈದು ವರ್ಷಗಳಾಗಿದೆ. ಸುತ್ತಣ ಹಲವು ಗ್ರಾಮಗಳ ತರುಣರು ಅದರಿಂದ ಪ್ರಭಾವಿತರಾಗಿ ತಮ್ಮ ತಮ್ಮ ಗ್ರಾಮಗಳಲ್ಲಿ ತಮ್ಮದೇ ರೀತಿಯಲ್ಲಿ ತಮ್ಮ ನೆಲದ ಅಗತ್ಯಗಳಿಗನುಗುಣವಾಗಿ, ಸಾಂಸ್ಕøತಿಕ ಹಬ್ಬಗಳನ್ನು ಆಚರಿಸುತ್ತಿದ್ದಾರೆ. ನಮ್ಮ ಪುಟ್ಟಹಳ್ಳಿಯ ಹಬ್ಬ, ಹತ್ತಾರು ಹಳ್ಳಿಗೆ ಸ್ಪೂರ್ತಿ ನೀಡುವುದಾದರೆ ಮೂಡುಬಿದಿರೆಯ ನುಡಿಸಿರಿಯು ಸಾವಿರಾರು ಶಿಕ್ಷಣ ಸಂಸ್ಥೆಗಳಿಗೆ ಸಾಂಸ್ಕøತಿಕ ಮಾದರಿ. ಒಂದೇ ಮೌಲ್ಯದಲ್ಲಿ ನಂಬಿಕೆ ಇರುವ ಆದರೆ ಭಿನ್ನ ನೆಲೆಗಳಲ್ಲಿರುವ ಎಲ್ಲರೂ ಒಂದೆಡೆ ಸೇರಿ ಆರೋಗ್ಯಕರ ವಾದದ್ದನ್ನು ಮುಕ್ತವಾಗಿ ಚರ್ಚಿಸುವ ತುರ್ತು ಈಗಿನದು. ಹೊಂದಿಕೆಯೆಂಬುದು ಬಲು ಕಷ್ಟ. ಏಕೆಂದರೆ ಪ್ರತಿ ಮನುಷ್ಯ ತನ್ನ ಅಹಮಿನ ಕೋಟೆಯಲ್ಲಿ ದ್ವೀಪವಾಗಿ ಉಳಿದಿದ್ದಾನೆ. ಇಂಥ ಹೊತ್ತಿನಲ್ಲಿ ನುಡಿಸಿರಿ ಮತ್ತು ಅಂಥ ರಾಜಕೀಯೇತರ ವೇದಿಕೆಗಳು ಕರ್ನಾಟಕಕ್ಕೆ ಮಾತ್ರವಲ್ಲ ಭಾರತಕ್ಕೆ, ಭಾರತದ ಬಹುತ್ವಕ್ಕೆ ಬಹಳ ಮುಖ್ಯ.

ಇಂಥ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಾ ಬಂದಿವೆ. ಸುಬ್ಬಣ್ಣನವರು ಹೆಗ್ಗೋಡಿನಲ್ಲಿ, ಪಂಡಿತಾರಾಧ್ಯ ಸ್ವಾಮೀಜಿಯವರು ಸಾಣೆಹಳ್ಳಿಯಲ್ಲಿ ನಡೆಸುತ್ತಿರುವ ರಂಗಪ್ರಯೋಗಗಳು, ಧಾರವಾಡದ ಸಾಹಿತ್ಯ ಸಂಭ್ರಮ ತಮಗೆಲ್ಲ ತಿಳಿದೇ ಇದೆ. ಇನ್ನೂ ಅನೇಕ ಕಡೆ ಎಲೆಮರೆಯ ಕಾಯಿಗಳು ಬೇರೆ ಬೇರೆ ಸ್ವರೂಪಗಳಲ್ಲಿ ಇಂಥ ಕಾಯಕದಲ್ಲಿ ತೊಡಗಿದ್ದಾರೆ. ಇವುಗಳಲ್ಲಿ ಬೃಹತ್ತಾದದ್ದು ನುಡಿಸಿರಿ. ನುಡಿಸಿರಿ ಯಾರ ವಿರುದ್ಧವೂ ಅಲ್ಲ. ಅದು ಪ್ರದರ್ಶನವೂ ಅಲ್ಲ. ಹೀಗೂ ಮಾಡಬಹುದು ಎಂಬ ದೃಷ್ಟಿಯಿಂದ ಇದನ್ನು ನೋಡಬೇಕು. ಎಲ್ಲರೂ ಹೀಗೆ ಮಾಡಬೇಕೆಂದೇನಿಲ್ಲ. ಇದಕ್ಕಿಂತ ಭಿನ್ನವಾಗಿ ಮಾಡಬಹುದು. ಒಟ್ಟಿನಲ್ಲಿ ಇಲ್ಲಿ ಎಲ್ಲರಿಗೂ ತಾವು ಮಾಡಬೇಕಾದ ಬ್ರಹ್ಮಾಂಡ ಕೆಲಸಗಳಿವೆ. ಮಾಡಬೇಕಷ್ಟೆ. ಚಿಕ್ಕ ಚಿಕ್ಕ ಊರುಗಳಲ್ಲಿ ಚಿಕ್ಕ ಚಿಕ್ಕ ಸಂಘ ಸಂಸ್ಥೆಗಳ ಮೂಲಕ ಒಂದು ಪ್ರಯೋಗ ಮಾಡಬೇಕು. ಇದು ರಾಜಧಾನಿ, ಸರ್ಕಾರಿ ಹಣ, ವಿಧಾನಸೌಧಗಳ ಹಂಗಿಲ್ಲದೆ ಶಕ್ತರು ಮತ್ತು ಆಸಕ್ತರು ಕೂಡಿ ಇರುವಲ್ಲೇ ಮಾಡಬೇಕಾದ ಪ್ರಯೋಗ. ಇದುವರೆಗಿನ ಹದಿಮೂರು ಸಮ್ಮೇಳನಗಳಲ್ಲಿ ಮಹತ್ತರ ವಿಷಯಗಳು ಚರ್ಚಿತವಾಗಿವೆ. ಆ ವಿಷಯಗಳನ್ನು ಕುರಿತು ಆಯಾ ಅಧ್ಯಕ್ಷರುಗಳು ವಿಚಾರಪೂರ್ಣ ಭಾಷಣವನ್ನು ಮಾಡಿಸಿದ್ದಾರೆ. ಈ ವೇದಿಕೆಯಲ್ಲಿ ಸಾಹಿತ್ಯಿಕ-ಸಾಂಸ್ಕøತಿಕ ಸವಾಲುಗಳು, ಬೌದ್ಧಿಕ ಸ್ವಾತಂತ್ರ್ಯ, ಪ್ರಚಲಿತ ಪ್ರಶ್ನೆಗಳು, ಸಾಹಿತಿಯ ಜವಾಬ್ದಾರಿ, ಶಕ್ತಿ ಮತ್ತು ವ್ಯಾಪ್ತಿ, ಸಮನ್ವಯದೆಡೆಗೆ, ಜೀವನ ಮೌಲ್ಯಗಳು, ಸಂಘರ್ಷ ಮತ್ತು ಸಾಮರಸ್ಯ, ಜನಪರ ಚಟುವಟಿಕೆಗಳು, ಅಂದು ಇಂದು ಮುಂದು, ವರ್ತಮಾನದ ತಲ್ಲಣಗಳು, ಹೊಸತನದ ಹುಡುಕಾಟ ಮತ್ತು ನಾಳೆಗಳ ನಿರ್ಮಾಣ ಎಂಬ ವಿಷಯಗಳನ್ನು ಗಂಭೀರವಾಗಿ ಚರ್ಚಿಸಲಾಗಿದೆ. ಈ ಸರಣಿಯಲ್ಲಿ ಹದಿನಾಲ್ಕನೆಯ ನುಡಿಸಿರಿಗೆ ‘ಕರ್ನಾಟಕದ ಬಹುತ್ವದ ನೆಲೆಗಳು’ ಎಂಬ ಮಹತ್ವದ ವಿಷಯವನ್ನು ಆರಿಸಲಾಗಿದೆ. ಇದು ತುಂಬಾ ಪ್ರಸ್ತುತವಾದ ವಿಷಯ. ಈ ಗಂಭೀರವಾದ ವಿಷಯದ ಸುತ್ತ ಈ ಮೂರು ದಿನ ಚರ್ಚೆ ಯಾಗಲಿದೆ. ಸಾಹಿತ್ಯಗೋಷ್ಠಿಗಳಿವೆ. ವಿಶೇಷ ಉಪನ್ಯಾಸಗಳಿವೆ. ಹಿರಿಯರ ನೆನಪು, ನಮನ, ಸ್ಮರಣೆಯ ಕಾರ್ಯಕ್ರಮಗಳಿವೆ. ಕತೆಗಾರರು ಮತ್ತು ಕವಿಗಳ ಜೊತೆ ಅನುಸಂಧಾನವಿದೆ. ನುಡಿಸಿರಿ ಪ್ರಶಸ್ತಿ ವಿತರಣೆ ಇದೆ. ಕೃತಿ ಬಿಡುಗಡೆ ಇದೆ. ಎಷ್ಟೊಂದು ರಸದೌತಣ ! ಬೇಕಾದ್ದನ್ನು ಬೇಕಾದಷ್ಟು ಆರಿಸಿಕೊಳ್ಳುವ ಅಪೂರ್ವ ಅವಕಾಶ. ಮೇಲುನೋಟಕ್ಕೆ ಎಲ್ಲ ತಿಳಿದ ವಿಷಯವೇ ಅನ್ನಿಸಿದರೂ ತಿಳಿವು ತಿಳಿಯುತ್ತಾ ಹೋದಂತೆ ಆಳವೂ ವಿಸ್ತಾರವೂ ಆಗುತ್ತದೆ. ಇದು ತಿಳಿದವರು ತಿಳಿದವರಿಗೇ ತಿಳಿಸುತ್ತಿರು ವಂತೆ ಕಂಡರೂ ಈ ಹೇಳುವ ಕೇಳುವ ಚರ್ಚಾನುಸಂಧಾನದಲ್ಲಿ ಹೊಸಫಲಗಳು ಲಭಿಸಲಿವೆ ಎಂಬುದು ನನ್ನ ಗಾಢ ನಂಬಿಕೆ. ಏನೆಂದರೆ ಪ್ರತಿಯೊಂದು ವಿಷಯವೂ ಕಾಲದಿಂದ ಕಾಲಕ್ಕೆ ಹೊಸ ಅರ್ಥ ಆಯಾಮ ಪಡೆದುಕೊಳ್ಳುತ್ತಾ ನಮ್ಮ ಅರಿವನ್ನು ವಿಸ್ತರಿಸುವ ಶಕ್ತಿಯನ್ನು ಹೊಂದಿರುತ್ತದೆ. ಬಹುತ್ವದಲ್ಲಿ ಅಪಾರ ನಂಬಿಕೆ ಮತ್ತು ಗೌರವ ಹೊಂದಿರುವ ನನ್ನ ಅಧ್ಯಕ್ಷತೆಯಲ್ಲಿ ಇಂಥ ವಿಷಯವನ್ನು ಆರಿಸಿದ್ದಕ್ಕಾಗಿ ಎಲ್ಲ ಗೆಳೆಯರಿಗೆ ನಾನು ಋಣಿಯಾಗಿದ್ದೇನೆ.

* * *

ಬಹುತ್ವವೆಂದರೇನು? ಅದು ಕೇವಲ ಬಾಹ್ಯರೂಪದ ವಿವಿಧ ಬಣ್ಣಗಳಲ್ಲ. ಅದು ಸೃಷ್ಟಿಯ ಸೋಜಿಗ ಕೂಡಾ. ಅಷ್ಟೇ ಅಲ್ಲ ಸೃಷ್ಟಿಕ್ರಿಯೆಯ ಮೂಲಧಾತು. ಬಹುತ್ವದ ಬೀಜದಿಂದ ಅಖಂಡವಾದ ಅನನ್ಯವಾದ ಸೃಜನಶೀಲ ಅಭಿವ್ಯಕ್ತಿ ಟಿಸಿಲೊಡೆಯಬಲ್ಲುದು. ಅದು ಎತ್ತಣ ಮಾಮರದ ಮೇಲೆ ಎತ್ತಣಿಂದಲೋ ಬಂದು ಕುಳಿತ ಕೋಗಿಲೆಯ ಹಾಡಿನಂತೆ. ಬಹುತ್ವವೆನ್ನುವುದು ಸಾವಯವದ ಇನ್ನೊಂದು ಅರ್ಥ. ಪ್ರಾಚೀನರಲ್ಲೂ, ಆಧುನಿಕರಲ್ಲೂ ಇದು ಜೀವನ ಮೌಲ್ಯದ ಪ್ರಶ್ನೆಯಾಗಿಯೇ ಉಳಿದುಬಂದಿದೆ. ಅಲ್ಲಲ್ಲಿ ಸಂಘರ್ಷದ ಅಪರೂಪದ ಉದಾಹರಣೆಗಳು ಸಿಕ್ಕರೂ ಕನ್ನಡ ಮನಸ್ಸು ಆದಿಯಿಂದ ಬಹುತ್ವವನ್ನು ಪ್ರಕಟಿಸುತ್ತಾ, ಆರಾಧಿಸುತ್ತಾ, ಆಚರಿಸುತ್ತಾ, ಅದರಲ್ಲಿ ಸ್ವಸ್ಥಗೊಳ್ಳುತ್ತಾ, ಅದರ ವಿವೇಕವನ್ನು ಸಮಾಜಕ್ಕೆ ಹಂಚುತ್ತಾ ಬಂದಿದೆ. ಬಹುತ್ವವನ್ನು ನಿರಾಕರಿಸುವುದು ಬದುಕನ್ನೇ ನಿರಾಕರಿಸಿದಂತೆ. ಈ ಬಗೆಯ ನಿರಾಕರಣಕ್ಕೆ ಎಳಸಿದ ಸಮಾಜ ಘಾಸಿಗೊಳ್ಳುತ್ತದೆ ಗಾಯಗೊಳ್ಳುತ್ತದೆ. ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಉಂಟುಮಾಡಬಲ್ಲ ಇಂಥ ಗಾಯಗಳು ಸಮಾಜವನ್ನು ಶತಶತಮಾನದವರೆಗೆ ನೋಯಿಸುತ್ತವೆ. ಅನೇಕ ಜರ್ಮನ್ನರು ಈಗಲೂ ಹಿಟ್ಲರ್‍ನೊಂದಿಗೆ ಗುರುತಿಸಿ ಕೊಳ್ಳಲು ಹಿಂಜರಿಯುತ್ತಾರೆ. ತಾವು ಕರ್ಮಠರಲ್ಲವೆಂದು ಸಾಬೀತುಪಡಿಸಲು ಸಿರಿಯಾದ ಅಸಂಖ್ಯಾತ ನಿರ್ವಸತಿಗರಿಗೆ ಆಶ್ರಯ ಕೊಡುತ್ತಾರೆ. ವಲಸೆ ಎಂಬುದು ಹೊಸ ಕಾಲದಲ್ಲಿ ಬಹುತ್ವವನ್ನು ಮರುವಿಮರ್ಶೆಗೆ ಒಳಪಡಿಸುತ್ತಿದೆ. ಭಾರತ ಜನನಿಯ ತನುಜಾತೆಯಾದ ಕರ್ನಾಟಕ ಮಾತೆಯ ನಾಡಗೀತೆ ಯಾಗಿರುವ ಆತ್ಮಗೀತದಲ್ಲಿ ಬಹುತ್ವದ ದನಿಗಳು ಅಸಂಖ್ಯವಾಗಿವೆ. ಮತ್ತು ಇದು ಅವಳ ಸೌಂದರ್ಯದ ಭಾಗವಾಗಿದೆ.

ನಮ್ಮ ರಾಷ್ಟ್ರಗೀತೆ ಮತ್ತು ನಾಡಗೀತೆಗಳನ್ನು ಗಮನಿಸಿದಾಗ ಬಹು ಸೂಕ್ಷ್ಮವಾಗಿ ಅವು ತಮ್ಮ ವಿವರಣೆಗಳ ಮೂಲಕವೇ ಬಹುತ್ವವನ್ನು ಸಾರುತ್ತವೆ. ರಾಷ್ಟ್ರಗೀತೆಯಲ್ಲಿ ಬರುವ ದ್ರಾವಿಡ ಎಂಬ ಒಂದೇ ಒಂದು ಪದ ಇಡೀ ದಕ್ಷಿಣ ಭಾರತವನ್ನು ಪ್ರತಿನಿಧಿಸುತ್ತದೆ. ಕುವೆಂಪು ನಾಡಗೀತೆಯಲ್ಲಿ ಅದನ್ನು ಮತ್ತೊಂದು ನೆಲೆಯಲ್ಲಿ ವಿಸ್ತರಿಸುತ್ತಾರೆ. ರಾಷ್ಟ್ರಗೀತೆ ದೇಶದ ಕಾವ್ಯಾತ್ಮಕ ಖesumeನಂತಿದ್ದರೆ, ನಾಡಗೀತೆ ನಮ್ಮ ಕರ್ನಾಟಕದ ಖesumeನಂತಿದೆ. ನಮ್ಮ ದೇಶದ, ನಮ್ಮ ರಾಜ್ಯದ ಮತ್ತು ಅವುಗಳಲ್ಲಿನ ಬಹುತ್ವದ ಸೌಂದರ್ಯವನ್ನು ಇದಕ್ಕಿಂತ ಚೆನ್ನಾಗಿ ಹೇಳಲು ಸಾಧ್ಯವಿಲ್ಲ ಎನ್ನುವಷ್ಟರಮಟ್ಟಿಗೆ ಇವೆರಡೂ ಅಡಕವಾಗಿವೆ. ಅರ್ಥಪೂರ್ಣವಾಗಿವೆ ಮತ್ತು ಅಮರತ್ವ ಹೊಂದಿವೆ. ಇಲ್ಲಿರುವುದು ಬರೀ ಹೆಸರಿನ ಪಟ್ಟಿಯಲ್ಲ. ಬಹುತ್ವದ ಅನಾವರಣ. ಟಾಗೋರ್ ಮತ್ತು ಕುವೆಂಪು ಬೇರೆ ಬೇರೆ ಸಂದರ್ಭಗಳಲ್ಲಿ, ಬೇರೆ ಬೇರೆ ಕಾರಣಗಳಿಗಾಗಿ ಇವುಗಳನ್ನು ರಚಿಸಿದ್ದರೂ ಇವುಗಳಲ್ಲಿ ಒಂದೇ ಕಾವ್ಯೋದ್ದೇಶ ನಿಚ್ಚಳವಾಗಿದೆ. ಅದು ಈ ನೆಲದ ಬಹುತ್ವವನ್ನು ಅತ್ಯಂತ ಘನತೆಯಿಂದ ಎತ್ತಿ ಹಿಡಿಯುವುದು. ರಾಷ್ಟ್ರಗೀತೆಯನ್ನು ಹಾಡಬೇಕೆ? ಹಾಡಬಾರದೆ? ಇತ್ಯಾದಿ ಚರ್ಚೆ ಇತ್ತೀಚೆಗೆ ಆರಂಭವಾಗಿದೆ. ರಾಷ್ಟ್ರಗೀತೆ ಹಾಡುವವರೆಲ್ಲ ದೇಶಭಕ್ತರು. ಹಾಡದಿದ್ದವನು ದೇಶದ್ರೋಹಿ. ಆದ್ದರಿಂದ ರಾಷ್ಟ್ರಗೀತೆ ಹಾಡುವುದರ ಮೂಲಕ ತಾನೊಬ್ಬ ರಾಷ್ಟ್ರಪ್ರೇಮಿ ಎಂದು ಸಾಬೀತುಪಡಿಸಬೇಕು ಎಂಬುದು ಮೂರ್ಖವಾದ. ದೇಶಭಕ್ತಿ ಒತ್ತಾಯದಿಂದ ಕಲಿಸುವಂಥದ್ದಲ್ಲ. ಪ್ರಜೆಯೊಬ್ಬ ಎಷ್ಟರಮಟ್ಟಿಗೆ ಸಂವಿಧಾನವನ್ನು ಗೌರವಿಸುತ್ತಾನೆ, ಹಕ್ಕುಬಾಧ್ಯತೆಗಳ ಬಗ್ಗೆ ಜಾಗೃತನಾಗಿದ್ದಾನೆ, ಸರಿಯಾಗಿ ತೆರಿಗೆ ಪಾವತಿ ಮಾಡುತ್ತಾನೆ, ಆ ನೆಲದ ಕಾನೂನನ್ನು ಗೌರವಿಸು ತ್ತಾನೆ, ಆ ನೆಲದ ಋಣವನ್ನು ಯಾವ ಬಗೆಯಲ್ಲಿ ಸಾರ್ಥಕವಾಗಿ ತೀರಿಸುತ್ತಾನೆ ಮುಂತಾದ ಮಾನದಂಡಗಳಿಂದ ಪ್ರಜೆಯೊಬ್ಬನ ದೇಶಭಕ್ತಿ ನಿರ್ಣಯವಾಗು ತ್ತದೆಯೇ ಹೊರತು ಬರಿಯ ರಾಷ್ಟ್ರಗೀತೆ ಹಾಡುವುದರಿಂದ ಮಾತ್ರವಲ್ಲ. ಆದರೆ ಸಾಹಿತ್ಯದ ವಿದ್ಯಾರ್ಥಿಯಾಗಿ ನನಗನ್ನಿಸುವುದೇನೆಂದರೆ ಸಂದರ್ಭ ದೊರೆತಾಗಲೆಲ್ಲಾ ರಾಷ್ಟ್ರಗೀತೆ, ನಾಡಗೀತೆ ಮತ್ತು ರೈತಗೀತೆಯನ್ನೂ ಸಹ, ಗಟ್ಟಿಯಾಗಿ ಹಾಡುವ ಅಥವಾ ಹಾಡಲು ಶಕ್ಯವಿಲ್ಲದಿದ್ದರೆ ಹೇಳುವ ಅವಕಾಶವನ್ನು ಕಳೆದುಕೊಳ್ಳಬಾರದು. ಅದರಿಂದ ದೊರಕುವ ಕಾವ್ಯಲಾಭ ಅನಿರ್ವಚನೀಯ. ಆ ಲಯ, ಛಂದೋವೈಖರಿ, ಸಿದ್ಧವಾದ ಶ್ರುತಿಬದ್ಧತೆ, ಅದು ಪ್ರತಿ ಸಲ ಕೊಡುವ ಭಾವಸುಖ ಇವಕ್ಕೆಲ್ಲ ಎರವಾಗಬಾರದು. ಮಕ್ಕಳು ಮಾತ್ರ ಹಾಡಬೇಕು ಹಿರಿಯರು ಸುಮ್ಮನೆ ಸೆಟೆದು ನಿಲ್ಲಬೇಕು ಅನ್ನುವ ನಂಬಿಕೆ ಕೆಲವರಲ್ಲಿದೆ. ಇದು ತಪ್ಪು. ಜಾತಿ ಭೇದಗಳ ಗೋಡೆ ಇಲ್ಲದೆ, ವಯಸ್ಸಿನ ಭೇದವಿಲ್ಲದೆ, ಲಿಂಗ ತಾರತಮ್ಯವಿಲ್ಲದೆ ಎಲ್ಲರೂ  ಹಾಡಬೇಕು. ಹಾಡದಿದ್ದರೆ ದೇಶಕ್ಕೇನೂ ನಷ್ಟವಿಲ್ಲ. ಭಾರತಾಂಬೆ ಅಥವಾ ಕನ್ನಡಮ್ಮ ಏನೂ ಕಣ್ಣೀರು ಹಾಕುವುದಿಲ್ಲ. ಆದರೆ ಅದು ಹಾಡದಿದ್ದವರಿಗೇ ನಷ್ಟ. ಇಂಥವು ಪ್ರಜೆಯೊಬ್ಬನ ಸೂಕ್ಷ್ಮತೆಗೆ ಸಂಬಂಧಿಸಿದವು; ಕಾನೂನಿಗಲ್ಲ. ನಾನಂತೂ ಯಾವ ದೇಶಕ್ಕೆ ಹೋದರೂ ಆ ದೇಶಗಳ ರಾಷ್ಟ್ರಗೀತೆಯನ್ನು ಗಮನಿಸುತ್ತೇನೆ. ಏಕೆಂದರೆ ಪ್ರತಿ ರಾಷ್ಟ್ರಗೀತೆ, ನಾಡಗೀತೆಗಳು ಆಯಾ ಮಣ್ಣಿನ, ಬಹುತ್ವದ, ಜನಾಭಿವ್ಯಕ್ತಿ ಯಾಗಿರುತ್ತವೆ.

ಬಹುತ್ವವು ತನ್ನ ವಿರಾಟ್ ಸ್ವರೂಪದಲ್ಲಿ ಪ್ರಕಟವಾಗಿರುವುದೆಂದರೆ ಅದು ವಚನ ಚಳುವಳಿಯಲ್ಲಿ. ವಚನಗಳು ಎಂದಾಗ ಮುಂಚೂಣಿಯ ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ ಅವರನ್ನು ನೆನೆದು ‘ಕಳಬೇಡ ಕೊಲಬೇಡ’ ಅಥವಾ ‘ಬೆಟ್ಟದ ಮೇಲೊಂದು ಮನೆಯ ಮಾಡಿ’ಯಂಥ ಜನಪ್ರಿಯ ವಚನ ಗಳನ್ನು ಉಲ್ಲೇಖಿಸಿ, ಅದಷ್ಟೇ ವಚನ ಸಾಹಿತ್ಯ ಎಂಬಂತೆ ಸುಮ್ಮನಾಗುತ್ತೇವೆ. ಬಹುತ್ವದ ದೃಷ್ಟಿಯಿಂದ ಅಧ್ಯಯನ ಮಾಡಿದರೆ ಅಸಂಖ್ಯ ವಚನದನಿಗಳು ಕಾಣುತ್ತವೆ. ಕೆಲವು ವಚನಕಾರ್ತಿಯರಾದ ಅಮುಗೆ ರಾಯಮ್ಮ, ಆಯ್ದಕ್ಕಿ ಲಕ್ಕಮ್ಮ, ಕದಿರ ಕಾಯಕದ ಕಾಳವ್ವೆ, ಕನ್ನಡಿ ಕಾಯಕದ ದೇವಮ್ಮ, ಮೋಳಿಗೆ ಮಹಾದೇವಿ, ಸೂಳೆ ಸಂಕವ್ವೆ  ಇವರ ಹೆಸರುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ತಮ್ಮ ಸ್ಥಳ ಅಥವಾ ಕಸುಬನ್ನು ತಮ್ಮ ಹೆಸರಿನೊಂದಿಗೆ ಅಂಟಿಸಿಕೊಂಡು ಘನತೆ ಮೆರೆಯುವ, ಆ ಘನತೆಯೊಂದಿಗೇ ತನ್ನ ವಚನಾಭಿವ್ಯಕ್ತಿಯನ್ನು ಪ್ರಕಟಿಸುವ ಬಹುತ್ವದ ವೈಭವವನ್ನು ಕಾಣುತ್ತೇವೆ. ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದಲ್ಲಿ ಆದ ಬಹುತ್ವದ ವಚನ ಕ್ರಾಂತಿಗೆ ಸರಿಸಮನಾದದ್ದು ಜಗತ್ತಿನ ಚರಿತ್ರೆಯಲ್ಲಿ ಎಲ್ಲೂ ಕಾಣಸಿಗುವುದಿಲ್ಲ. ಚಕ್ರವರ್ತಿಗಳು ದಯಪಾಲಿಸಿದ ಬಿರುದು ಬಾವಲಿಗಳನ್ನಷ್ಟೇ ತಮ್ಮ ಹೆಸರಿನೊಂದಿಗೆ ತಗುಲಿಸಿಕೊಂಡು ಸಂಸ್ಕøತದೊಡನೆ ಸಂಭ್ರಮಿಸುತ್ತಿದ್ದ ಕಾಲದಲ್ಲಿ ವಚನಕಾರರು ತಮ್ಮನ್ನು ತಾವು ಗುರುತಿಸಿಕೊಂಡದ್ದು ಹೀಗೆ. ಕಂಬದ ಮಾರಿ ತಂದೆ, ಕರುಳ ಕೇತಯ್ಯ, ಕಾಮಾಟದ ಭೀಮಣ್ಣ, ಕಿನ್ನರಿ ಬ್ರಹ್ಮಯ್ಯ, ಕೂಗಿನ ಮಾರಯ್ಯ, ಕೊಟಾರದ ಸೋಮಣ್ಣ, ಕೋಲ ಶಾಂತಯ್ಯ, ಗಾಣದ ಕಪ್ಪಣ್ಣ, ಗಾವುದಿ ಮಾಚಯ್ಯ, ಗುಪ್ತ ಮಂಚಣ್ಣ, ಭಿಕ್ಷದ ಸಂಗಯ್ಯ, ಭಿಕಾರಿ ಭೀಮಯ್ಯ, ರಾಯಸದ ಮಂಚಣ್ಣ, ಉರಿಲಿಂಗ ಪೆದ್ದಿ, ರೇಚದ ಬಂಕಣ್ಣ, ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ, ಲದ್ದೆಯ ಸೋಮಯ್ಯ, ವರದ ಸಂಕಣ್ಣ, ಎಲೆಗಾರ ಕಾಮಣ್ಣ, ಒಕ್ಕಲಿಗ ಮುದ್ದಣ್ಣ, ಮೆಡ್ಲೇರಿ ಶಿವಲಿಂಗ, ಜಗಳಗಂಟ ಕಾಮಣ್ಣ, ಜೇಡರ ದಾಸಿಮಯ್ಯ, ಚೋದರ ಮಾಯಣ್ಣ, ವೈದ್ಯ ಸಂಗಣ್ಣ, ಸಂಗರ ಬೊಮ್ಮಣ್ಣ, ಸತ್ತಿಗೆ ಕಾಯಕದ ಮಾರಯ್ಯ, ಹಡಪದ ಅಪ್ಪಣ್ಣ, ಹಾದರ ಕಾಯಕದ ಮಾರಯ್ಯ, ಮಡಿವಾಳ ಮಾಚಿದೇವ, ಮಾದಾರ ಚೆನ್ನಯ್ಯ, ಮೇದರ ಕೇತಯ್ಯ, ಮೋಳಿಗೆ ಮಾರಯ್ಯ, ಹುಂಜನ ಕಾಳಗದ ವಾಸಯ್ಯ, ಹೆಂಡದ ಮಾರಯ್ಯ, ಹೊಡೆ ಹುಲ್ಲ ಬಂಕಣ್ಣ, ಬಹುರೂಪಿ ಚೌಡಯ್ಯ, ಬೊಕ್ಕಸದ ಚಿಕ್ಕಣ್ಣ ಇಂಥ ಅನೇಕ ವಚನಕಾರರ ಹೆಸರಿನ ಪೂರ್ವಾರ್ಧಗಳು ನಮ್ಮ ಸಮಾಜದ ಬಹುತ್ವದ ಬೇರುಗಳನ್ನು ಪರಿಚಯಿಸುತ್ತವೆ. ಸಮಾನತೆಯನ್ನು ಸಾರುತ್ತವೆ. ಸಿದ್ಧಮಲ್ಲಿಕಾರ್ಜುನ ಹೇಳುತ್ತಾನೆ.

ಆರೇನೆಂದಡೂ ಓರಂತಿಪ್ಪುದೆ ಸಮತೆ

ಆರು ಜರಿದವರೆನ್ನ ಮನದ ಕಾಳಿಕೆಯ

ಕಳೆದರೆಂಬುದೆ ಸಮತೆ

ಆರು ಸ್ತೌತ್ಯವ ಮಾಡಿಹರೆನ್ನ ಜನ್ಮಜನ್ಮದ

ಹಗೆಗಳೆಂಬುದೆ ಸಮತೆ

ಸಮತೆ, ಸಮಾನತೆ ಎನ್ನುವುದು ಬಹುತ್ವದ ಸಮಾನಾರ್ಥಕ ಪದಗಳಾಗಿವೆ. ಗುಣಮಟ್ಟದ ದೃಷ್ಟಿಯಿಂದ ಅವರ ರಚನೆಗಳಿಗೆ ಸಮಾನ ಅಂಕಗಳನ್ನು ನೀಡಲು ಸಾಧ್ಯವಿಲ್ಲದಿರಬಹುದು. ಆದರೆ ಅವರಿಗಿದ್ದ ಸಾಮಾಜಿಕಬದ್ಧತೆ, ಹೋರಾಟ ಪ್ರಜ್ಞೆಗಳಿಗೆ ಮತ್ತು ತಮ್ಮ ಬಹುತ್ವವನ್ನು ಏಕತ್ವದಲ್ಲಿ ಕರಗಿಸಿಕೊಳ್ಳುತ್ತಲೇ ತಮ್ಮ ವೃತ್ತಿ ಘನತೆಯನ್ನು ಬಿಟ್ಟುಕೊಡದ ಅವರ ಸ್ವಾಭಿಮಾನಕ್ಕೆ ಶರಣೆನ್ನಬೇಕು.

ವಚನಕಾರರ ಕೈಗೆ ಅಕ್ಷರಗಳು ಸಿಕ್ಕಿದ್ದವು. ಆದರೆ ನಮ್ಮ ಜನಪದರು ಓದು, ಬರಹಗಳಿಲ್ಲದೆ ಅಭಿವ್ಯಕ್ತಿಸಿದ ಮೌಖಿಕ ಪರಂಪರೆಯಲ್ಲಿ ವೈವಿಧ್ಯಮಯ ವಾದ ಬಹುತ್ವದ ಹೆಣಿಗೆಗಳನ್ನು ಕಾಣಬಹುದು. ಕರ್ನಾಟಕದ ಜನಪದ ವೈಭವವೆಂದರೆ ಬಹುತ್ವದ ಸಿರಿ. ಅದು ಅವರ ದಿನದಿನದ ಕಾಯಕದಲ್ಲಿ, ಕಸುಬಿನಲ್ಲಿ, ಹಾಡು ಕುಣಿತಗಳಲ್ಲಿ, ದುಃಖ ದುಮ್ಮಾನಗಳಲ್ಲಿ ತಿಂಡಿ ತಿನಿಸುಗಳಲ್ಲಿ, ಹಬ್ಬಾಚರಣೆಗಳಲ್ಲಿ, ನೆಲಮೂಲ ನಂಬಿಕೆ ಗಳಲ್ಲಿ ಹರಡಿಕೊಂಡಿದೆ. ಎಲ್ಲ ಕಲೆಗಳ, ಎಲ್ಲ ಶಾಸ್ತ್ರಗಳ ತಾಯಿ ಎನಿಸಿರುವ ನಮ್ಮ ಜನಪದ ಬಗೆದಷ್ಟೂ ಸಿಗುವ ಬತ್ತಲಾರದ ಗಂಗೆ. ಈಗ ಇಡೀ ಜಗತ್ತು ಒಂದು ಹಳ್ಳಿಯಾಗತೊಡಗಿ ವ್ಯವಹಾರಿಕತೆಯೊಂದೇ ಏಕೈಕ ಗುರಿಯಾಗುತ್ತಿದೆ. ಅದಕ್ಕೆ ಪೂರಕವಾಗಿ ಧರ್ಮ ಮತ್ತು ರಾಜಕಾರಣಗಳು ಗುಟ್ಟಾಗಿ ಕೈ ಜೋಡಿಸುತ್ತಿವೆ. ನಾಲ್ಕು ಮನೆಗಳ ಸಣ್ಣ ಹಳ್ಳಿಯೇ ಒಂದು ದೊಡ್ಡ ಜಗತ್ತಿನಂತೆ ಬದುಕುತ್ತಿದ್ದ ಜನಪದರ ಜೀವವೈವಿಧ್ಯ, ಸರಳತೆ ಮತ್ತು ನಿರ್ಲಾಲಸೆಗಳು ನಮ್ಮನ್ನು ಸರಿದಾರಿಗೆ ತರಬೇಕಾಗಿದೆ. ತನ್ನ ಜಾತಿಯನ್ನು ತನ್ನ ಹೆಸರಿನೊಂದಿಗೇ ಗುರುತಿಸಿಕೊಂಡು ನಿರ್ಲಿಪ್ತವಾಗಿದ್ದ ಸಮಾಜದಲ್ಲಿ ಅದು ಕ್ರಮೇಣ ಒಂದು ಅಸಮಾನತೆಯ ಅಸ್ತ್ರವಾಗಿ, ಶೋಷಣೆಯ ಪ್ರತೀಕವಾಗಿ ಬದಲಾಗಿದ್ದು ದುರದೃಷ್ಟಕರ. ಈಗ ಬದಿಯಲ್ಲಿ ಕುಳಿತವನ ಜಾತಿ ತಿಳಿದುಕೊಳ್ಳಲು ಅವನ ಅಪ್ಪನ ಹೆಸರು ಕೇಳಿ ತನ್ಮೂಲಕ ಅವನ ಜಾತಿಯನ್ನು ಅರಿತುಕೊಳ್ಳುವ ವಿಚಿತ್ರ ವಿರೋಧಾಭಾಸದಲ್ಲಿ ನಾವಿಂದು ಬದುಕುತ್ತಿದ್ದೇವೆ. ಮನಸ್ಸು ಧ್ರುವೀಕರಣಗೊಂಡಿದೆ. ಬಹುತ್ವವು ಶಕ್ತಿಮೂಲ. ಈ ಶಕ್ತಿಮೂಲವನ್ನು ಛಿದ್ರಗೊಳಿಸ ಬಾರದು. ಧ್ರುವೀಕರಣ ದಿಂದಾಗುವ ಅಪಾಯ ನಮ್ಮ ಬಹುತ್ವದ ಶಕ್ತಿಮೂಲವನ್ನು ನಾಶ ಮಾಡುವುದು. ಒಂದು ಜನಾಂಗದವರೆಲ್ಲ ಒಂದೇ ಕಡೆ ಏಕೆ ವಾಸಿಸಬೇಕು? ಒಂದು ವ್ಯವಸ್ಥೆಯಲ್ಲಿ ಒಂದೇ ಜನಾಂಗ ವಾಸಿಸುತ್ತಿದ್ದರೆ ಒಬ್ಬ ಇನ್ನೊಬ್ಬನಿಗೆ ಬೆದರಿಕೆ ಒಡ್ಡಲು ತಲೆ ಕಡಿಯಲು ಹವಣಿಸುತ್ತಾನೆ ಎಂದೇ ಅರ್ಥ. ಅದೇ ವ್ಯವಸ್ಥೆಯಲ್ಲಿ ಮೂವತ್ತು ಜನಾಂಗಗಳು ಒಟ್ಟಿಗಿದ್ದರೆ ಆ ಸಮಾಜ ಭಿನ್ನವಾದ ಕನಸು, ಭರವಸೆ, ಸಂತೋಷ ಮತ್ತು ಶಾಂತಿಗಾಗಿ ಪ್ರಯತ್ನಿಸುತ್ತದೆ. ಇದನ್ನೇ ಲೇಖಕ ವಾಲ್ಟೇರ್ ‘If there were only one religion are (in England) there would be each other threats, but these are thirty and they live in peace and happiness’ ಎನ್ನುತ್ತಾನೆ. ವಾಲ್ಟೇರ್ ಹೇಳಿದ ಮಾತು ಇಂಗ್ಲೆಂಡಿನಲ್ಲೀಗ ಒಂದು ಬಗೆಯಲ್ಲಿ ದಿಟವಾಗತೊಡಗಿದೆ. ಲಂಡನ್ ನಗರದಲ್ಲೀಗ ಅರ್ಧಕ್ಕಿಂತ ಹೆಚ್ಚು ಮಂದಿ ಬ್ರಿಟಿಷರಲ್ಲದವರು ಮತ್ತು ಬಿಳಿಯರಲ್ಲದವರು ಬದುಕುತ್ತಿದ್ದಾರೆ. ಬದುಕನ್ನು ಹುಡುಕಿ ಮಹಾನಗರಗಳಿಗೆ ವಲಸೆ ಹೋಗುವ ಮನುಷ್ಯರ ಚಲನಶೀಲತೆಯಿಂದ ಈಗ ಬಹುತೇಕ ನಗರಗಳು ವಿವಿಧ ಬಣ್ಣ, ಸಮುದಾಯಗಳಿಂದ ತುಂಬಿ ತುಳುಕತೊಡಗಿವೆ. ಹೀಗೆ ಹಲವು ಬಹುತ್ವಗಳು ಏಕೀಭವಿಸುವಾಗ ಸಂಘರ್ಷದ ಅಪಾಯವೂ ಇದೆ. ವಲಸೆ ಬಂದವರು ತಾವು ಸೇರಿದ ನೆಲದ ಸಂಸ್ಕøತಿ, ಆಚಾರ, ವಿಚಾರ, ಭಾಷೆ ಮುಖ್ಯವಾಗಿ ಆ ನೆಲದ ಸಂವಿಧಾನವನ್ನು ಗೌರವಿಸಿದರೆ ಅದು ಸಾಮರಸ್ಯ. ಹೋದ ಕಡೆಯೆಲ್ಲಾ ತಾವು ಹೊತ್ತು ತಂದ ತಮ್ಮ ಹಳೆಯ ಕಡತಗಳನ್ನು ಬಿಚ್ಚತೊಡಗಿದರೆ ಇನ್ನೊಬ್ಬರ ಮೇಲೆ ಹೇರತೊಡಗಿದರೆ ಅದು ಸಂಘರ್ಷ. ಬಹುತ್ವ ಭಾರೀ ಸಹನೆಯನ್ನು ಬೇಡುತ್ತದೆ. ಎಲ್ಲರಿಗೂ ಸಮಾನ ಅವಕಾಶದ ಸಾಧ್ಯತೆಯನ್ನು ಹುಟ್ಟು ಹಾಕುತ್ತದೆ. ಅಮೆರಿಕಾದ ಪ್ರಸಿದ್ಧ ಉದ್ಯಮಗಳಾದ ಗೂಗಲ್ ಮತ್ತು ಮೈಕ್ರೋಸಾಫ್ಟ್‍ನ ಮುಖ್ಯ ಆಡಳಿತ ಅಧಿಕಾರಿಗಳು (ಅ.ಇ.ಔ) ಭಾರತೀಯರು. ಆಲ್ಬರ್ಟ್ ಐನ್‍ಸ್ಟೀನ್‍ಗಿಂತ ಹೆಚ್ಚು ಬುದ್ಧಿಮತ್ತೆ ಹೊಂದಿದ್ದಾನೆ ಎಂದು ಇತ್ತೀಚೆಗೆ ಸಾಬೀತಾಗಿರುವುದು ಲಂಡನ್‍ನಲ್ಲಿ ನೆಲೆಸಿರುವ ಪ್ರಥಮ್ ಎಂಬ ಕನ್ನಡದ ಮಗು. ಈ ಸಲ ಆ ಬಾಲಕನನ್ನು ನನಗೆ ನೋಡಲು ಸಾಧ್ಯವಾಯಿತು. ಲಂಡನ್‍ನ ಪ್ರಸ್ತುತ ಮೇಯರ್ ಪಾಕಿಸ್ತಾನಿ ಸಂಜಾತ ಸಾದಿಖ್ ಖಾನ್. ಮಾರಿಷಸ್‍ನಲ್ಲಿ, ಕಿನ್ಯಾದಲ್ಲಿ ರಾಜಕಾರಣ ಮತ್ತು ಉದ್ಯಮ ವ್ಯವಹಾರ ವನ್ನು ಬಲವಾದ ಹಿಡಿತದಲ್ಲಿರಿಸಿಕೊಂಡಿರುವರು ಭಾರತೀಯರು. ಈ ಪಟ್ಟಿ ಇನ್ನೂ ಬಹಳ ದೊಡ್ಡದಿದೆ. ಸಿಂಗಾಪುರದಲ್ಲಿ ಒಂದು ಕಾನೂನಿದೆ. ವಸತಿ ಸಮುಚ್ಛಯದಲ್ಲಿರುವ ಮನೆಗಳನ್ನು ಎಲ್ಲ ದೇಶೀಯರಿಗೂ ಸಮಾನವಾಗಿ ಹಂಚುತ್ತಾರೆ. ಒಂದೇ ಧರ್ಮದವರು ಒಂದು ಕಡೆ ವಾಸಿಸದಂತೆ, ಎಲ್ಲರೂ ಹೊಂದಿ ಬಾಳುವಂತೆ ಎಚ್ಚರವಹಿಸುತ್ತಾರೆ. ನಿಮ್ಮ ಪಕ್ಕದ ಮನೆಯಲ್ಲಿ ಅನ್ಯಧರ್ಮೀಯನಿದ್ದಾಗ ಸಹಿಷ್ಣುತೆ, ಇನ್ನೊಬ್ಬರನ್ನು ತಿಳಿಯುವ ಕುತೂಹಲ, ಅನಗತ್ಯವಾದ ಪೂರ್ವಗ್ರಹ ಮತ್ತು ಸಂಶಯಗಳಿಂದ ಮುಕ್ತಿ ಸಾಧ್ಯವಾಗುತ್ತದೆ. ಎಲ್ಲರೂ ಕೇವಲ ಮನುಷ್ಯರು, ಎಲ್ಲರಿಗೂ ಬಡತನವಿದೆ, ಸಾವು ನೋವುಗಳಿವೆ, ಆಸೆ ನಿರಾಸೆಗಳಿವೆ, ಭಾವ ನಿರ್ಭಾವಗಳಿವೆ ಎಂಬ ಸತ್ಯ ಗೋಚರವಾಗುತ್ತದೆ. ನಾನು ಆದರ್ಶವನ್ನು ಸರಳೀಕರಿಸಿ ಹೇಳುತ್ತಿಲ್ಲ. ಜಗತ್ತು ಶಾಂತವಾಗಿ ನಡೆಯಲು ಬಹುತ್ವದ ರಕ್ಷಣೆ ಮತ್ತು ಗೌರವಗಳು ಅಗತ್ಯವಿರುವಂತೆಯೇ ಹಲವು ಬಹುತ್ವಗಳ ನಡುವೆ ಪ್ರೀತಿ ಹೊಂದಾಣಿಕೆಯ ಅಗತ್ಯವಾಗಿರುತ್ತದೆ. ಲಂಡನ್‍ನಲ್ಲಿ ಹೆಚ್ಚುತ್ತಿರುವ ಏಷ್ಯನ್ನರ ಸಂಖ್ಯೆಯನ್ನು ನೋಡುತ್ತಿದ್ದರೆ, ಲಂಡನ್ ಅನ್ನು ಏಷ್ಯನ್ನರಿಂದ ಮುಕ್ತಗೊಳಿಸಲು ಅವರು ಮುಂದೊಮ್ಮೆ ಒಬ್ಬ ‘ಬ್ರಿಟಿಷ್ ಗಾಂಧಿ’ಯನ್ನು ಕಂಡುಕೊಳ್ಳಬೇಕಾಗುತ್ತದೇನೋ. ಒಂದು ಕಾಲಕ್ಕೆ ಇಡೀ ಜಗತ್ತಿಗೆ ನುಗ್ಗಿ ಅಲ್ಲಿನ ಬಹುತ್ವವನ್ನು ಛಿದ್ರಗೊಳಿಸಿ ಏಕಚಕ್ರಾಧಿಪತ್ಯವನ್ನೂ, ತಮ್ಮ ಇಂಗ್ಲಿಷ್ ಭಾಷೆಯನ್ನು ಜಗತ್ತಿಗೆ ಹೇರುತ್ತ ಬಂದ ಇಂಗ್ಲೆಂಡ್ ದೇಶ ಈಗ ವಲಸಿಗರ ಬಹುತ್ವದ ಆಕ್ರಮಣಕ್ಕೆ ಒಳಗಾಗಿ ತಲ್ಲಣಿಸುತ್ತಿರುವುದು ವಿಪರ್ಯಾಸವಾದರೂ ಸತ್ಯ.

ಇಂದು ವಲಸಿಗ. ನಾಳೆ ಆ ದೇಶದ ಗೌರವಾನ್ವಿತ ಪ್ರಜೆ. ಮರುದಿನ ಅವನೇ ನಾಯಕ. ನೇತಾರ. ಅಮೆರಿಕಾ ಹುಟ್ಟಿದ್ದೇ ಹೀಗೆ. ಪ್ರಸಿದ್ಧ ಹಾಲಿವುಡ್ ನಟಿ ಆಂಜಲಿನಾ ಜೋಲಿ ““Our diversity is our strength. What a dull & pointless life it would be if every one was the same”” ಎಂಬ ಮಾತು ನಮ್ಮೆಲ್ಲರ ಮಾತಾಗಬೇಕು. ಬಹುತ್ವವು ಏಕತ್ವವಾಗಿ ಕರಗುವುದನ್ನು melting pot ಎನ್ನುತ್ತಾರೆ. ಆದರೆ ಭಾರತದ ಸಂದರ್ಭದಲ್ಲಿ ಕೆಲವೆಡೆ ಅದು boiling pot ನಂತೆ ಕಾಣಿಸುತ್ತದೆ. ಅಮೆರಿಕಾ ಅಧ್ಯಕ್ಷರಾಗಿದ್ದ ಜಿಮ್ಮಿ ಕಾರ್ಟರ್ We became not a melting pot. But a beautiful mosaic. Different people different beliefs, different yearnings, different dreams… ಎನ್ನುತ್ತಾರೆ.

ಆದರೆ ಪಾಶ್ಚಾತ್ಯ ಮಾದರಿಗಳನ್ನಿಟ್ಟುಕೊಂಡು ನಮ್ಮ ಪರಂಪರಾಗತ ಭಾರತವನ್ನು ದುರಸ್ತಿಗೊಳಿಸುವುದು ಕಷ್ಟ. ಅಲ್ಲಿನ ಸಮಸ್ಯೆ ಸವಾಲುಗಳೇ ಬೇರೆ. ನಮ್ಮವೇ ಬೇರೆ. ಅವರಲ್ಲಿ ಬಿಳಿ, ಕಪ್ಪು ಮತ್ತು ಕಂದು ಎಂಬ ಮೂರೇ ವರ್ಣಗಳ ಜನರಿದ್ದರೆ ನಮ್ಮಲ್ಲಿ ನೂರಾರು ಜಾತಿಗಳು, ನೂರಾರು ಬಣ್ಣಗಳು. ಇದನ್ನು ಸರಿಯಾಗಿ ಗ್ರಹಿಸಿದ್ದ ಮಹಾತ್ಮ ಗಾಂಧಿ “Our ability to reach unity in diversity will be the beauty and the test of our civilisation” ಎಂದರು. ಕರ್ನಾಟಕದ ಜಾತಿಯ ಹಂದರ ವನ್ನು ಗಮನಿಸಿದರೆ ಇದು ಎಷ್ಟೊಂದು ಸಂಕೀರ್ಣವಾಗಿದೆ ಎಂಬುದರ ಅರಿವಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಹಿಂದುಳಿದ ವರ್ಗಗಳ ಸಮೀಕ್ಷೆಯಲ್ಲಿ ಒಟ್ಟು 5 ಭಾಗಗಳಿವೆ.

ಒಂದನೇ ವರ್ಗದಲ್ಲಿ 95 ಜಾತಿಗಳಿವೆ. ಇವುಗಳಲ್ಲಿ 380 ಉಪಜಾತಿ ಗಳಿವೆ. ಇವುಗಳಲ್ಲಿ  ಸುಮಾರು 9 ಅಲೆಮಾರಿ ಮುಸ್ಲಿಂ ಉಪಜಾತಿಗಳಿವೆ.

ಎರಡನೇ ವರ್ಗ ‘ಎ’ನಲ್ಲಿ 102 ಜಾತಿಗಳಿವೆ. ಇವುಗಳಲ್ಲಿ 367 ಉಪಜಾತಿಗಳಿವೆ.

ಎರಡನೇ ವರ್ಗ ‘ಬಿ’ನಲ್ಲಿ 1 ಜಾತಿ ಇದೆ.

ಮೂರನೇ ವರ್ಗ ‘ಎ’ನಲ್ಲಿ 32 ಜಾತಿಗಳಿವೆ.

ಮೂರನೇ ವರ್ಗ ‘ಬಿ’ನಲ್ಲಿ 2 ಜಾತಿಗಳಿದ್ದು-ಇದರಲ್ಲಿ 40 ಉಪಜಾತಿ ಗಳಿವೆ.

ಕರ್ನಾಟಕದ ಬಹುಸಂಖ್ಯಾತ ಜಾತಿಗಳಾದ ಲಿಂಗಾಯಿತರಲ್ಲೇ 49 ಉಪಜಾತಿಗಳಿವೆ. ವಕ್ಕಲಿಗರಲ್ಲಿ 20 ಜಾತಿಗಳಿವೆ. ಅಲ್ಲಿಗೆ ಹಿಂದುಳಿದ ವರ್ಗಗಳ ಸಂಖ್ಯೆಯೇ 889 ಆಯಿತು. ಇದಲ್ಲದೆ ಪರಿಶಿಷ್ಟ ಜಾತಿಗಳ ಸಂಖ್ಯೆ 101, ಪರಿಶಿಷ್ಟ ಪಂಗಡಗಳ ಸಂಖ್ಯೆ 56. ಪ್ರತಿಯೊಂದು ಜಾತಿಗೂ ಅದರದೇ ಆದ ಆಚರಣೆಗಳಿವೆ. ಬಹುತ್ವ ವೆನ್ನುವುದು ಭಾಷೆ ಮತ್ತು ಜಾತಿ ಎರಡಕ್ಕೇ ಸೀಮಿತವಾಗಿಲ್ಲ. ಭೂಮಿಯ ಮೇಲ್ಮೈಗೂ ಅಲ್ಲಿನ ಬೆಳೆಗಳಿಗೂ ತನ್ಮೂಲಕ ಆಹಾರಾಭ್ಯಾಸಕ್ಕೂ ವಿಸ್ತøತಗೊಂಡಿದೆ. ನಂಜನಗೂಡಿನ ಮಣ್ಣಲ್ಲಿ ರಸಬಾಳೆ ಬೆಳೆದರೆ, ಬಳ್ಳಾರಿಯ ರಣ ಬಿಸಿಲಲ್ಲಿ ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಜಾಜಿ ಮಲ್ಲಿಗೆ ಅರಳುತ್ತದೆ. ಎಲ್ಲಿ ನೆಟ್ಟರೂ ಬೆಳೆದು ಫಲ ಕೊಡುವ ಉದಾರೀ ಸ್ವಭಾವದ ಬೆಳೆಗಳೂ ನಮ್ಮಲ್ಲಿವೆ. ಕೆಲವು ಸಸ್ಯಗಳು ತನಗೆ ಇಂಥದ್ದೇ ಮಣ್ಣು ಬೇಕೆಂದು ಸಂಪ್ರದಾಯವಾದಿಗಳಂತೆ ಹಠ ಹಿಡಿಯುತ್ತವೆ. ಯಾವ ಮಣ್ಣಿನಲ್ಲಿ ಬೀಜ ನೆಟ್ಟರೂ ಬೆಳೆದು ತನ್ನ ಹೂ ಹಣ್ಣು ಬಿಡುವ ಮರಗಳು ಮನುಷ್ಯರಿಗೆ ಮಾದರಿಯಾಗಬೇಕು. “ಅನ್ಯ ಧರ್ಮಗಳನ್ನು ಪ್ರೀತಿಸು; ಆದರೆ ನಿನ್ನ ಧರ್ಮದಲ್ಲಿ ಜೀವಿಸು” ಎಂದರು ಗಾಂಧಿ. ಕಾಡಿಗೆ ಚೆಲುವು ಬರುವುದು ನೂರಾರು ತರುಲತೆಗಳಿಂದ. ಒಂದೇ ಜಾತಿಯ ಮರಗಳಿರುವ ಕಾಡಿಗೆ ಸೌಂದರ್ಯವೆಲ್ಲಿ? ಈಗಿನ ವಿಶ್ವದ ಸಮಸ್ಯೆ ಎಂದರೆ ಇರುವ ಭಿನ್ನ ಜಾತಿಯ ಮರಗಳನ್ನೆಲ್ಲ ನಿರ್ನಾಮ ಮಾಡಿ ಕಾಡಿಗೆಲ್ಲ ತಮ್ಮದೊಂದೇ ಜಾತಿಯ ಮರವನ್ನು ಉಳಿಸುವ ಹುನ್ನಾರ. ಅದರಿಂದ ಕಾಡು ಉಳಿಯುತ್ತದೆಯೇ? ನಾಡು ಉಳಿಯುತ್ತದೆಯೇ?

ಸಾಹಿತ್ಯ, ಕಲೆ, ರಂಗಭೂಮಿ, ಹೋಟೆಲ್ ಉದ್ಯಮ, ಬ್ಯಾಂಕಿಂಗ್, ಶಿಕ್ಷಣ ಹೀಗೆ ಹತ್ತಾರು ವಿಷಯಗಳಲ್ಲಿ ಜಗತ್ತಿನ ಗಮನ ಸೆಳೆದ ಈ ಮಂಗಳೂರು ಪ್ರಾಂತ್ಯಕ್ಕೆ ಅಂಟಿರುವ ಕೋಮುಗಲಭೆಯ ಕಳಂಕ ನನ್ನಂಥವರಿಗೆ ಅಪಾರ ಸಂಕಟ ತರುತ್ತದೆ. ಇಲ್ಲಿ ಎಲ್ಲ ಜಾತಿ, ಧರ್ಮಗಳಲ್ಲಿ ಒಳ್ಳೆಯವರಿದ್ದಾರೆ. ಸಹಬಾಳ್ವೆಗೆ ಕಾತರಿಸುವವರಿದ್ದಾರೆ. ಆದರೆ ಚಿಕ್ಕ ಪುಟ್ಟ ದುರ್ಘಟನೆಗಳಾದಾಗ ಅದನ್ನು ಸುದ್ದಿ ಮಾಧ್ಯಮಗಳು ಅಗತ್ಯಕ್ಕಿಂತ ಹೆಚ್ಚು ವೈಭವೀಕರಿಸುತ್ತವೆ. ಆ ವೈಭವೀಕರಣ ಎಷ್ಟು ಉತ್ಪ್ರೇಕ್ಷೆಯಿಂದ ಕೂಡಿರುತ್ತದೆ ಎಂದರೆ ನಮ್ಮ ದಕ್ಷಿಣ ಕನ್ನಡವನ್ನು ಜಮ್ಮು ಕಾಶ್ಮೀರಕ್ಕೆ ಹೋಲಿಸುತ್ತಾರೆ. ಒಂದು ಅಪರಾಧ ಸಂಭವಿಸಿದಾಗ ಅದನ್ನು ಅಪರಾಧವೆಂದು ಮಾತ್ರ ಪರಿಗಣಿಸಬೇಕು; ಅಪರಾಧಿ ಯಾವ ಜಾತಿಯವನು, ಯಾವ ಧರ್ಮದವನೆಂದು ಅಲ್ಲ. ಎಲ್ಲ ಜಾತಿ, ಧರ್ಮಗಳಲ್ಲಿ ಕಡಿಮೆ ಸಂಖ್ಯೆಯ ಕೆಟ್ಟವರು, ಹೆಚ್ಚಿನ ಸಂಖ್ಯೆಯ ಒಳ್ಳೆಯವರು ಇದ್ದಾರೆ ಎಂಬುದನ್ನು ಮರೆಯಬಾರದು. ವಿಪರ್ಯಾಸವೆಂದರೆ ಕೆಟ್ಟವರು ಬೇಗನೆ ಸಂಘಟಿತರಾಗುವ ಹಾಗೆ ಒಳ್ಳೆಯವರು ಆಗುವುದಿಲ್ಲ. ಲಂಕೇಶ್ ಹೇಳುತ್ತಾರೆ. ‘ಧರ್ಮದ ಮೂಲದ ಸರಳ ನಿಯಮದಲ್ಲಿ ಜಾತ್ಯಾತೀತ ನ್ಯಾಯದಲ್ಲಿ ನಂಬಿಕೆ ಇರುವವರೆಲ್ಲ ಇವತ್ತು ಒಂದಾಗಬೇಕಿದೆ. ಈ ದೇಶದ ಅಸಂಖ್ಯಾತ ಸಜ್ಜನರಿಗೆ ಇದು ಸಾಧ್ಯವಾಗದಿದ್ದರೆ ದೇಶ ಒಡೆದು ಹೋಗಲಿದೆ’ ಈ ಕೋಮುವಾದ ಯಾವುದೇ ಧರ್ಮದಲ್ಲಿದ್ದರೂ ಖಂಡನೀಯವೇ. ಈಗಲೂ ಕರಾವಳಿಯಲ್ಲಿರುವ ಕೆಲವು ಸಂಗತಿಗಳು ನಾಳಿನ ಬಗ್ಗೆ ಆಸೆ ಹುಟ್ಟಿಸುತ್ತವೆ. ಬಹುತ್ವವು ತನ್ನ ಅಸ್ಮಿತೆಯನ್ನು ಕಳೆದುಕೊಳ್ಳದೆ ಏಕೀಭವಿಸುವ ಅನೇಕ ಉದಾಹರಣೆಗಳು ಇಲ್ಲಿವೆ.

ಕರಾವಳಿಯ ಅಭಿಜಾತ ಕಲೆಯಾದ ಯಕ್ಷಗಾನಕ್ಕೂ ಸಾಂಸ್ಕøತಿಕ

ಬಹುತ್ವಕ್ಕೂ ವಿಶೇಷವಾದ ನಂಟಿದೆ. ಬಪ್ಪನಾಡು ಕ್ಷೇತ್ರಮಹಾತ್ಮೆ ಎಂಬ ಯಕ್ಷಗಾನ ಪ್ರಸಂಗದಲ್ಲಿ ಬರುವ ಬಪ್ಪಬ್ಯಾರಿ ಹಾಗೂ ಆತನ ಸಹಚರ ಉಸ್ಮಾನ್ ಬ್ಯಾರಿಯರ ಪಾತ್ರಗಳು ಯಕ್ಷಗಾನದ ಒಳಗೆ ಇದ್ದಿರಬಹುದಾದ ಅಸ್ಪøಶ್ಯತೆಯನ್ನು ತೊಡೆದು ಹಾಕುತ್ತವೆ. ಹಿಂದಿನ ದಿನಗಳಲ್ಲಿ ಕ್ರಿಶ್ಚಿಯನ್ ಬಾಬು ಎಂಬ ಕ್ರೈಸ್ತ ಮತಸ್ಥರು ಹಿಂದೂ ದೇವರುಗಳ ಪಾತ್ರಮಾಡಿ ಮೆರೆದದ್ದು ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. ಕಳೆದ ಬಾರಿ ಆಳ್ವಾಸ್ ನುಡಿಸಿರಿಯ ಪ್ರಶಸ್ತಿಗೆ ಭಾಜನರಾದ ಜಬ್ಬಾರ್ ಸಮೋ ಪ್ರಸಿದ್ಧ ಯಕ್ಷಗಾನದ ಅರ್ಥಧಾರಿ.

ಇದೀಗ ಕರಾವಳಿ ಜಿಲ್ಲೆಗಳ ಸಾಂಸ್ಕøತಿಕ ಮೆರವಣಿಗೆಗಳಲ್ಲಿ ಮುಸ್ಲಿಮರ ದಪ್ಪಿನಾಟವಾಗಲೀ ಕ್ರೈಸ್ತರ ಬೈಲಾ ನರ್ತನವಾಗಲೀ ಸ್ಥಾನ ಪಡೆದುಕೊಂಡಿರು ವುದು ಬಹುತ್ವದಿಂದ ಏಕತೆಯ ಕಡೆಗೆ ನಾವು ಸಾಗುತ್ತಿರುವುದನ್ನು ಸೂಚಿಸುತ್ತದೆ. ಕಾಸರಗೋಡಿನ `ಆರಿಕ್ಕಾಡಿ’ ಎಂಬಲ್ಲಿರುವ ‘ಆಲಿಭೂತ’ಕ್ಕೆ ಮುಸ್ಲಿಮರೂ ಹಿಂದೂಗಳೂ ಏಕರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಉಳ್ಳಾಲ ದರ್ಗಾದಲ್ಲಿ ಜಾತಿಮತದ ಅಂತರವಿಲ್ಲದೆ ಹರಕೆ ಹೊತ್ತುಕೊಳ್ಳುತ್ತಾರೆ. ಮುಲ್ಕಿಯ ಬಪ್ಪನಾಡು ಕ್ಷೇತ್ರದಲ್ಲೂ ಇಂದಿಗೂ ಮುಸ್ಲಿಮರಿಗೆ ಸ್ಥಾನವಿದೆ. ಪ್ರೊ. ನಿಸಾರ್ ಅಹಮದರು ಬೆಣ್ಣೆ ಕಳ್ಳ ಕೃಷ್ಣನ ಬಗ್ಗೆ ಕವನ ಬರೆಯುತ್ತಾರೆ. ಇವೆಲ್ಲವೂ ನಾವು ಸಾಂಸ್ಕøತಿಕ ಬಹುತ್ವದ ಮೂಲಕ ಏಕತ್ವದ ಕಡೆಗೆ ಸಾಗುತ್ತಿರುವುದನ್ನು ಸೂಚಿಸುವ ಅಂಶಗಳು. ಹಿಂದೂ ದೇವರಿಗೆ ಹರಕೆ ಹೊರುವ ಮುಸ್ಲಿಮರು, ಮುಸ್ಲಿಮರ ದರ್ಗಾಕ್ಕೆ ಪೂಜೆ ಸಲ್ಲಿಸುವ ಹಿಂದುಗಳು, ಚರ್ಚಿನಲ್ಲಿ ಪ್ರಾರ್ಥಿಸುವ ಹಿಂದುಗಳು, ಶಿಶುನಾಳ ಶರೀಫರಂಥ ತತ್ತ್ವಪದಕಾರರು, ಅನುಭಾವಿಗಳು ಬೇರೆ ಬೇರೆ ಕಾಲಘಟ್ಟಗಳಲ್ಲಿ ಬಹುತ್ವವನ್ನು ಸಾರಿದ್ದಾರೆ. ಮನುಷ್ಯನ ಹುಟ್ಟಿಗೂ ಅವನ ಗುಣಕ್ಕೂ ಯಾವ ಸಂಬಂಧವಿಲ್ಲವೆಂಬುದನ್ನು ಪಂಪ :

ಕುಲಂ ಕುಲಮಲ್ತು ಚಲಂ ಕುಲಂ

ಗುಣಂ ಕುಲಮಭಿಮಾನವೊಂದೆ ಕುಲಮಣ್ಬು ಕುಲಂ

ಎಂದು ‘ಮನುಷ್ಯ ಜಾತಿ ತಾನೊಂದೆ ವಲಂ?’ ಎಂಬ ಸಂದೇಶವನ್ನು ಸಾರಿರುವುದು ಎಲ್ಲ ಬಲ್ಲ ವಿಷಯ. ಬಹುತ್ವದೊಳಗೆ ಏಕತ್ವ ಸಾರುವ ಮಾತುಗಳನ್ನು ಕನಕ, ಪುರಂದರ, ಕುಮಾರವ್ಯಾಸ, ಸರ್ವಜ್ಞರಿಂದ ಹಿಡಿದು ನಮ್ಮ ಕಾಲದ ತೇಜಸ್ವಿ, ಲಂಕೇಶ್, ಅನಂತಮೂರ್ತಿ ಹೇಳುತ್ತ ಬಂದಿದ್ದಾರೆ. ಇಲ್ಲಿ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ಅವರೆಲ್ಲರಿಗೊಂದು ಕಿವಿಮಾತು. ನೀವೆಲ್ಲ ಸಮಯ ಬಂದಾಗ ನಿಮ್ಮ ಬೇರುಗಳತ್ತ ಮುಖ ಮಾಡಿ. ತೆನೆಯೊಂದು ಬಾಗಿ ಮರಳಿ ಮಣ್ಣಿಗೆ ಬೀಜ ಕೊಟ್ಟು ಫಲದಾಯಕವಾಗಿಸುವಂತೆ ರಚನಾತ್ಮಕ ವಾದದ್ದನ್ನು ಮಾಡಿ. ಜಗಳ, ಕಿತ್ತಾಟ, ಕೆಸರೆರೆಚಾಟ, ಭ್ರಷ್ಟಾಚಾರ, ಕೋಮುವಾದ ವನ್ನು ದೊಡ್ಡವರಿಗೆ ಬಿಟ್ಟುಬಿಡಿ. ಮತ್ತೆ ಜಿ.ಎಸ್.ಎಸ್. ನೆನಪಾಗುತ್ತಾರೆ.

ಕತ್ತೆತ್ತಿಯೂ ನೋಡದಿರು, ಈ ದೊಡ್ಡವರ

ಸಣ್ಣತನದತ್ತ; ಬಿಟ್ಟುಬಿಡು ಅವರನ್ನು ಅತ್ತಕಡೆಗೆ

ಕೆಟ್ಟ ಇಟ್ಟಿಗೆಯಿಂದ ಕಟ್ಟದಿರು ಹೊಸಮನೆಯ

ನಾಳಿನಾಸೆಯ ಶಿಖರ ನೀನೆ ನಮಗೆ

ನನಗೆ ಗೊತ್ತು. ಇಲ್ಲಿ ಎಲ್ಲ ಜನಾಂಗದ ಮಕ್ಕಳಿದ್ದಾರೆ. ಇದು ನಿಜವಾಗಿ ಬಹುತ್ವದ ಪ್ರತೀಕ. ತುಳುನಾಡೇ ಬಹುತ್ವದ ಪ್ರತಿನಿಧಿ. ಕನ್ನಡವನ್ನು ಕಟ್ಟಲು ತುಳು, ಕೊಡವ, ಕೊಂಕಣಿ, ಬ್ಯಾರಿ ಮತ್ತು ಲಂಬಾಣಿ ಭಾಷೆಗಳನ್ನು ಮಾತೃಭಾಷೆಯಾಗಿ ಉಳ್ಳ ಅನೇಕರು ಶ್ರಮಿಸಿದ್ದಾರೆ. ಕನ್ನಡನಾಡು ಎನ್ನುವುದೇ ಒಂದು ಬಹುರೂಪಿ ಮನಸ್ಸು. ಡಾ. ಬಿ.ಎ. ವಿವೇಕ ರೈ ಅವರು ಹೇಳುವಂತೆ ‘ಬಹುಭಾಷಾ ಸಮನ್ವಯದ ಅಪೂರ್ವ ಮಾದರಿಯನ್ನು ಇಟ್ಟುಕೊಂಡು ಕನ್ನಡದ ಕೂಡುಕುಟುಂಬದ ತೆಕ್ಕೆಯಲ್ಲಿ ಇರುವ ಎಲ್ಲ ಭಾಷೆಗಳನ್ನು ಅಭಿವೃದ್ಧಿಪಡಿಸಬೇಕು’. ಇಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳು ಮಾತ್ರವಲ್ಲ; ಹೊರಗಿನಿಂದ ಬಂದ ಸಾವಿರಾರು ಮಕ್ಕಳಿದ್ದಾರೆ. ಅಲ್ಲದೆ ಸೋಲಿಗ, ಹಕ್ಕಿಪಿಕ್ಕಿ, ಕುಡುಬಿ, ಜೇನುಕುರುಬ, ಸಿದ್ಧಿ, ಮಲೆಕುಡಿಯ, ಕೊರಗ, ಹಸಲ ಮುಂತಾದ ಸಮುದಾಯಗಳ ನೂರಾರು ಮಕ್ಕಳು ಉಚಿತವಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಓದಿ ವಿದ್ಯಾವಂತರಾದ ಮೇಲೆ ನಾವು ನಮ್ಮ ಹಳ್ಳಿಗಳನ್ನು, ಓಣಿಗಳನ್ನು, ಕೇರಿಗಳನ್ನು ಮರೆಯಬಾರದು. ನಮ್ಮ ಬದುಕಿನ ಯಶಸ್ಸು ಎಷ್ಟು ಮುಖ್ಯವೋ ನಾವು ಬಂದ ಮಣ್ಣಿನ ಋಣವೂ ಅಷ್ಟೇ ಮುಖ್ಯ ಎಂಬುದನ್ನು ಮನಗಾಣಬೇಕು. ಎಲ್ಲವನ್ನು ಸರ್ಕಾರವೇ ಮಾಡಬೇಕು, ಎಲ್ಲಕ್ಕೂ ಸರ್ಕಾರದತ್ತಲೇ ಕೈ ಚಾಚಬೇಕು ಎಂಬ ನಿಲುವು ಸಲ್ಲ. ಏಕೆಂದರೆ ಸರ್ಕಾರಕ್ಕೆ ಆದ್ಯತೆಗಳು ಸಾವಿರ. ದರ್ಶನಹೀನರಾದ ನಮ್ಮ ರಾಜಕೀಯ ನಾಯಕರು ಮತ್ತು ಜನವಿರೋಧಿ ಅಧಿಕಾರಷಾಹಿಗಳಿಂದಲೇ ತುಂಬಿರುವ ನಮ್ಮ ರಾಜನೀತಿಯಲ್ಲಿ ನಾವೆಲ್ಲ ತಬರಗಳೇ. ಭ್ರಷ್ಟಾಚಾರದಿಂದ ಬಿಡುಗಡೆಯ ಬಾಗಿಲುಗಳೇ ಕಾಣಿಸುತ್ತಿಲ್ಲ. ನಮ್ಮ ನಮ್ಮ ಕೆಲಸಗಳನ್ನು ಆದಷ್ಟೂ ನಾವೇ ಮಾಡಿಕೊಳ್ಳುವುದು ನಮಗಿರುವ ದಾರಿಗಳಲ್ಲೊಂದು. ಈ ವಿದ್ಯಾಲಯ ದಲ್ಲಿ ರೂಪುಗೊಳ್ಳುವ ಪ್ರತಿ ವಿದ್ಯಾರ್ಥಿಯೂ ಇಂಥದ್ದೊಂದು ಋಣಪ್ರಜ್ಞೆಯನ್ನು ಹೊಂದುವುದಾದರೆ ನುಡಿಸಿರಿಯ ಪ್ರಯೋಗ ಸಾರ್ಥಕ. ಈ ಬಹುತ್ವದ ವಿದ್ಯಾರ್ಥಿಗಳನ್ನು ನೋಡುತ್ತಿದ್ದರೆ ಹೆಚ್.ಎಸ್.ಶಿವಪ್ರಕಾಶ್ ಅವರ ‘ಒಗ್ಗಟ್ಟಿನ ಹಾಡು’ ನೆನಪಾಗುತ್ತದೆ.

ಕೊಂಬೆ ರೆಂಬೆ ಬೇರೆ ಬೇರೆ

ಕಾಂಡ ಮಾತ್ರ ಒಂದೆ

ಬೇರು ಬೊಡ್ಡೆ ಬೇರೆ ಬೇರೆ

ಮರವು ಮಾತ್ರ ಒಂದೆ

ಬೇರೆ ಬೇರೆ ಮರದ ಜಾತಿ

ಬೇರೆ ಬೇರೆ ಗಾತ್ರ ರೀತಿ

ಮಣ್ಣು ಮಾತ್ರ ಒಂದೆ

ಬೇರೆ ಬೇರೆ ಪಕ್ಷಿ ಕೋಟಿ

ಪಕ್ಷ ಮಾತ್ರ ಒಂದೆ

ದನಿ ರಾಗ ಬೇರೆ ಬೇರೆ

ವೃಂದಗಾನ ಒಂದೆ

ಬಹುತ್ವ ಭಾಷೆಗೆ ಸೀಮಿತವಲ್ಲ; ಜಾತಿ, ಧರ್ಮಗಳಿಗೂ ಸೀಮಿತವಲ್ಲ; ಗಂಡು, ಹೆಣ್ಣು, ವಿಶೇಷ ಚೇತನರು ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೂ ಸೀಮಿತವಲ್ಲ; ಪ್ರಾದೇಶಿಕತೆಗೂ ಸೀಮಿತವಲ್ಲ. ಮನುಷ್ಯ ಮನುಷ್ಯನ ನಡುವಿನ ಗ್ರಹಿಕೆ ಮತ್ತು ಅವನು ನಂಬಿ ನಡೆಯುವ ಸಿದ್ಧಾಂತಗಳಿಗೂ ಬಹುತ್ವವು ಅನ್ವಯಿಸುತ್ತದೆ. ಆಸ್ತಿಕರು ನಾಸ್ತಿಕರನ್ನು ತಾಳಿಕೊಳ್ಳಬೇಕು. ನಾಸ್ತಿಕರು ಆಸ್ತಿಕರನ್ನು ತಾಳಿಕೊಳ್ಳಬೇಕು. ನಮಗೆ ಗೊತ್ತಿಲ್ಲದ, ನಮ್ಮದಲ್ಲದ ಸಿದ್ಧಾಂತದ ಬಗ್ಗೆ ಕನಿಷ್ಠ ಕುತೂಹಲವನ್ನಾದರೂ ಉಳಿಸಿಕೊಳ್ಳಬೇಕು. ಇದನ್ನು ಸಾಹಿತ್ಯ ಕೃತಿಗಳು ಮಾಡುತ್ತಾ ಬಂದಿವೆ. ಜನಪದವೂ ಮಾಡಿದೆ. ಮಂಟೆಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ, ಮಾದೇಶ್ವರ, ಸಂಕವ್ವ, ನೀಲಯ್ಯ, ಕಾರಯ್ಯ, ಬಿಲ್ಲಯ್ಯ, ಕುವೆಂಪು ಅವರ ಗುತ್ತಿ, ಕಾರಂತರ ಚೋಮ, ಲಂಕೇಶರ ಕರಿಯ, ದೇವನೂರರ ಅಮಾಸ, ಸಾಕವ್ವ, ಅನಂತಮೂರ್ತಿಯವರ ಪ್ರಾಣೇಶಾಚಾರ್ಯ, ತೇಜಸ್ವಿ ಯವರ ಮಂದಣ್ಣ, ಪ್ಯಾರ ಇವರೆಲ್ಲ ನಮ್ಮ ಬಹುತ್ವದ ಪ್ರತಿನಿಧಿಗಳು.

ಅಮೆರಿಕಾದ ಟ್ರಂಪ್ ಬಳಿ, ಉತ್ತರ ಕೊರಿಯಾದ ಕಿಮ್ ಜಾಂಗ್ ಬಳಿ ಮಾತ್ರ ಅಣುಬಾಂಬ್‍ಗಳಿವೆ ಎಂದುಕೊಳ್ಳಬೇಡಿ. ಅವು ನಮ್ಮೆಲ್ಲರ ಬಳಿ ಇವೆ. ಮೊಬೈಲ್‍ಗಳಾಗಿ! ಇದು ವಿಜ್ಞಾನದ ಯುಗವೂ ಅಲ್ಲ; ತಂತ್ರಜ್ಞಾನದ ಯುಗವೂ ಅಲ್ಲ; ಅನುಮಾನದ ಯುಗ. ಮೊಬೈಲ್ ಎಂಬ ಅಣುಬಾಂಬು ಎಲ್ಲರ ಕೈ ಸೇರಿರುವ ಯುಗ. ಇವು ವಿಕೃತ ವಿಕಿರಣಗಳನ್ನು ಕ್ಷಣಮಾತ್ರದಲ್ಲಿ ಹರಡಬಲ್ಲವು. ಸಾಮಾಜಿಕ ಜಾಲತಾಣಗಳು ವಿಷಬೀಜ ಬಿತ್ತಬಲ್ಲವು. ಟೆಲಿವಿಷನ್ ಮಾಧ್ಯಮ ಗ್ರಾಹಕರ ಮತ್ತು ಉತ್ಪಾದಕರ ನಡುವೆ ನಿಂತ ವೇಷಧಾರಿ ದಲ್ಲಾಲಿ. ಚಲನಚಿತ್ರ ಮಾಧ್ಯಮ ರಂಜನೆಯ ಹೆಸರಲ್ಲಿ ಬಂಡವಾಳಷಾಹಿಗಳ ಕಪಿಮುಷ್ಠಿಯಲ್ಲಿದೆ. ಬಹುತ್ವದ ಭಾಗವಾಗಿ ಈ ಹಿಂದೆ ಚಳುವಳಿಗಳು ಸ್ಫೋಟಿಸುತ್ತಿದ್ದವು. ಈಗ ಕುಳಿತಲ್ಲೇ ಕ್ರಾಂತಿ. ಒಂದು ಬಟನ್ ಒತ್ತಿ ‘ಲೈಕ್’ ಮಾಡುವ ನಿಷ್ಕ್ರಿಯತೆಯಿಂದ ಜನಪ್ರಿಯತೆಯ ಮತ್ತು ಗುಣಮಟ್ಟದ ಮಾನದಂಡಗಳು ನಿರ್ಧಾರವಾಗ ತೊಡಗಿವೆ. ಸಿನಿಮಾ ನಟ ನಟಿಯರು ತಮ್ಮನ್ನು ಲಕ್ಷಾಂತರ ಜನ ‘ಲೈಕ್’ ಮಾಡುತ್ತಾರೆಂದು ಘೋಷಿಸಿಕೊಳ್ಳುತ್ತಾರೆ. ಮಹಾತ್ಮ ಗಾಂಧಿಯವರ ಕಾಲದಲ್ಲಿ ಸಾಮಾಜಿಕ ಜಾಲತಾಣಗಳೇನಾದರೂ ಅಸ್ತಿತ್ವದಲ್ಲಿ ಇದ್ದಿದ್ದರೆ, ಅವರು ಉಪ್ಪಿನ ಸತ್ಯಾಗ್ರಹಕ್ಕೆ ಕರೆಕೊಟ್ಟಾಗ ಎಲ್ಲರೂ ಲೈಕ್ ಮಾಡಿ ಮನೆಯಲ್ಲೇ ಕುಳಿತುಕೊಂಡು ಮೆಸೇಜ್ ಫಾರ್ವರ್ಡ್ ಮಾಡುತ್ತಿದ್ದರೇನೋ. ಈಗ ಆರಂಭವಾಗಬಹುದಾದ ಚಳುವಳಿಗಳಿಗೂ ಇದೇ ಗತಿ ಒದಗಿದೆ. ಚಹಾ ಬಟ್ಟಲಿನಲ್ಲಿ ಸೋಮಾರಿಗಳ ಕ್ರಾಂತಿಯೋ ಕ್ರಾಂತಿ.

ಇಂಥ ಹತಾಶೆಯ ನಡುವೆಯೂ ನಾವು ನಾಳೆಗಳಿಗೆ ಸನ್ನದ್ದರಾಗಬೇಕಿದೆ. ನಮ್ಮ ನಡುವೆ ಇರುವ ಕಿಡಿಗಳನ್ನು ಬೆಂಕಿಯಾಗಿಸದೆ ಹಣತೆಯಾಗಿಸಿ ಕೊಳ್ಳಬೇಕಿದೆ. ಇಂಥ ಕಠೋರ ವಾಸ್ತವಗಳ ನಡುವೆಯೂ ನಾವು ಕನಸನ್ನು ಕಾಪಾಡಿಕೊಳ್ಳಬೇಕಾಗಿದೆ. ವಿಜ್ಞಾನವನ್ನು ಮುನ್ನೆಲೆಗೆ ತರಬೇಕಾಗಿದೆ. ಮೌಢ್ಯಗಳನ್ನು ಅಳಿಸಬೇಕಿದೆ. ಸಾಮಾಜಿಕ ಜಾಲತಾಣವನ್ನು ಸಾಂಸ್ಕøತಿಕ ಜಾಲತಾಣವನ್ನಾಗಿಸಬೇಕಾಗಿದೆ. ಇಲ್ಲಿ ತುಂಬಿ ತುಳುಕುವ ಜಡ ಮಾಹಿತಿಗಳನ್ನು ಅರಿವಿನ ಅಮೃತವನ್ನಾಗಿಸಿಕೊಳ್ಳಬೇಕಿದೆ. ಎಲ್ಲವೂ ಸರಿ ಇಲ್ಲ ಎಂಬ ಸಿನಿಕತೆಗಿಂತ ಎಲ್ಲವನ್ನೂ ಸರಿಗೊಳಿಸಿಕೊಳ್ಳುವ ವಿವೇಕ ನಮ್ಮದಾಗಬೇಕಿದೆ. ಚಲನಚಿತ್ರಗಳನ್ನು ವೀಕ್ಷಿಸಿ ಪರಿವರ್ತನೆಯಾದ ಅನೇಕ ಉದಾಹರಣೆಗಳೂ ನಮ್ಮೆದುರಿಗಿವೆ. `ಬಂಗಾರದ ಮನುಷ್ಯ’ ನೋಡಿ ಕೃಷಿಗೆ, ಹಳ್ಳಿಗೆ ಮರಳಿದವರು, `ಸನಾದಿ ಅಪ್ಪಣ್ಣ’ನನ್ನು ನೋಡಿ ತಂದೆ ತಾಯಿಗಳನ್ನು ಗೌರವಿಸಿದವರು, `ಅಮೆರಿಕಾ! ಅಮೆರಿಕಾ!!’ ನೋಡಿ ಸ್ವದೇಶದಲ್ಲೇ ಉಳಿದವರು… ಇವು ಕೆಲ ಉದಾಹರಣೆಗಳು. ಪರಿಣಾಮಕಾರಿಯಾದ ದೃಶ್ಯಮಾಧ್ಯಮವನ್ನು ಸಮಾಜವನ್ನು ಕಟ್ಟುವ ಕೆಲಸಕ್ಕೆ ಬಳಸಿಕೊಳ್ಳಬೇಕಾಗಿದೆ. ಚಿತ್ರೋದ್ಯಮದ ನನ್ನ ಮೂರು ದಶಕಗಳ ಯಾತ್ರೆಯಲ್ಲಿ ಇಂಥದ್ದೊಂದು ಎಚ್ಚರಿಕೆಯಿಂದ ನಡೆದಿದ್ದೇನೆ. ಎಲ್ಲ ಮನರಂಜನೆಯ ವ್ಯಾಕರಣಗಳ ನಡುವೆಯೂ ಸಮಾಜದ ಆರೋಗ್ಯಕ್ಕೆ ಪೂರಕವಾದದ್ದನ್ನು ಕೊಡಲು ಪ್ರಯತ್ನಿಸಿದ್ದೇನೆ.

ನನ್ನ ಮೆಚ್ಚಿನ ಲೇಖಕ ದೇವನೂರು ಮಹಾದೇವ ತಮ್ಮ ‘ಎದೆಗೆ ಬಿದ್ದ ಅಕ್ಷರ’ದಲ್ಲಿ ಭಾರತವನ್ನು

‘ಗಾಂಧಿ-ಕಾಠಿಣ್ಯದ ತಂದೆಯಂತೆ, ಜೆಪಿ-ಅಸಹಾಯಕ ತಾಯಿ.

ವಿನೋಬಾ-ಮದುವೆಯಾಗದ ವ್ರತನಿಷ್ಠ ಅಕ್ಕನಂತೆ

ಲೋಹಿಯಾ-ಊರೂರು ಅಲೆಯುವ ಮನೆ ಸೇರದ ಅಲೆಮಾರಿ ಮಗ.

ಅಂಬೇಡ್ಕರ್-ತಾರತಮ್ಯಕ್ಕೆ ಒಳಗಾಗಿ ಮುನಿಸಿಕೊಂಡು ಮನೆ ಹೊರಗೆ ಇರುವ ಮಗ.

-ಇದು ನಮ್ಮ ಕುಟುಂಬ. ನಾವು ಇಲ್ಲಿನ ಸಂತಾನ.

ಇದನ್ನು ಹೀಗಲ್ಲದೆ ಹೇಗೆ ನೋಡಬೇಕು?

– ಹೀಗೆ ಗ್ರಹಿಸುತ್ತಾರೆ. ಇಲ್ಲಿರುವ ಕುಟುಂಬ ಮತ್ತು ಸಂತಾನ ಎಂಬ ಪದಗಳು ಗಮನಾರ್ಹ. ನಮ್ಮ ಕುಟುಂಬದ ಸದಸ್ಯರಲ್ಲಿ ಒಬ್ಬೊಬ್ಬರದು ಒಂದೊಂದು ವ್ಯಕ್ತಿತ್ವ. ಆದರೆ ನಾವೆಲ್ಲ ಒಂದೇ ಸಂತಾನ. ಹಾಗೆಂದುಕೊಂಡಾಗ ಮಾತ್ರ ಕುಟುಂಬ ಉಳಿಯುತ್ತದೆ. ಇದು ಹಲವು ವಸ್ತುಗಳು ಹದವಾಗಿ ಬೆರೆತು ತಯಾರಾದ ಆಸ್ವಾದನೀಯ ಅಡುಗೆಯಂತೆ. ಹಲವಾರು ಉಪಕರಣ ಗಳಿಂದ ಉತ್ಪತ್ತಿಯಾಗಿ ಮೇಳೈಸಿದ ವಾದ್ಯವೃಂದದಂತೆ. ಒಂದನ್ನೇ ಪ್ರತ್ಯೇಕ ಗೊಳಿಸಿ ನೋಡಿದಾಗಲೂ, ನುಡಿಸಿದಾಗಲೂ ಅದು ಅದ್ಭುತ. ಒಂದರೊಳ ಗೊಂದು ಬೆರೆತಾಗಲೂ ಅದು ಅದ್ಭುತ. ಹೊಸ ಕಾಲದ ಮನಸ್ಸು ಈ ಸೋಜಿಗವನ್ನು ಅರಿಯಬೇಕಾಗಿದೆ.

 

ಸಂಬಂಜ ಅನ್ನೋದು ದೊಡ್ಡು ಕನಾ…!

 

 

* * *