Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ಮಾಧ್ಯಮ > ಪ್ರಕಟಣೆ > ಆಳ್ವಾಸ್ ನುಡಿಸಿರಿ 2015 ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ

ಆಳ್ವಾಸ್ ನುಡಿಸಿರಿ 2015 ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ

ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ
ಕಾಸರಗೋಡಿನ ಮಧೂರಿನಲ್ಲಿ 1947ರ ಮೇ 23ರಂದು ಶ್ರೀಮತಿ ಮಹಾಲಕ್ಷ್ಮೀ ಅಮ್ಮ ಶ್ರೀಯುತ ಪಂಡರಿಕಾಕ್ಷ ಹೆಬ್ಬಾರ ದಂಪತಿಗಳಿಗೆ ಮಗಳಾಗಿ ಜನಿಸಿದ ತಾವು, ಬಲ್ಲವರಿಂದ ಕೇಳಿಯೇ ಅಕ್ಷರಾಭ್ಯಾಸ ಪಡೆದವರು. ಇದರೊಂದಿಗೆ ಹಿಂದಿ ವಿಶಾರದ ಪದವಿಯನ್ನು ಪಡೆದಿದ್ದೀರಿ. ಸುಮಾರು 7 ವರ್ಷ ಮಧೂರು ಪದ್ಮನಾಭ ಸರಳಾಯರಲ್ಲಿ ಶಾಸ್ತ್ರೀಯ ಸಂಗೀತ ತರಬೇತಿ ಪಡೆದುಕೊಂಡಿರುವಿರಿ.
ಶ್ರೀಯುತ ಹರಿನಾರಾಯಣ ಬೈಪಾಡಿತ್ತಾಯರ ಕೈ ಹಿಡಿದ ಬಳಿಕ ಯಕ್ಷಗಾನವನ್ನು ಕಲಿತು ಬಳಿಕ ಏಕೈಕ ವೃತ್ತಿಪರ ಮಹಿಳಾ ಭಾಗವತರು ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಪತಿಯೊಂದಿಗೆ ಅಂದಿನ ಸುಬ್ರಹ್ಮಣ್ಯ, ಪುತ್ತೂರು, ಕದ್ರಿ, ಕರ್ನಾಟಕ, ಅರುವ, ಕುಂಬಳೆ, ಬಪ್ಪನಾಡು, ತಲಕಳ ಮುಂತಾದ ಡೇರೆ ಹಾಗೂ ಬಯಲಾಟ ಮೇಳಗಳಲ್ಲಿ ನಿರಂತರ 25ಕ್ಕೂ ಹೆಚ್ಚು ವರ್ಷಗಳ ಕಾಲ ವೃತ್ತಿ ಕಲಾವಿದೆಯಾಗಿ, 15ಕ್ಕೂ ಹೆಚ್ಚು ವರ್ಷಗಳಿಂದ ಅತಿಥಿ ಕಲಾವಿದೆಯಾಗಿ ಯಕ್ಷಗಾನಕ್ಕೆ ಸೇವೆ ಸಲ್ಲಿಸಿರುತ್ತೀರಿ.
ಯಕ್ಷಲೋಕದ ಘಟಾನುಘಟಿ ದಿಗ್ಗಜರನ್ನು ತಾಳಮದ್ದಳೆಯಲ್ಲಿ ಯಕ್ಷಗಾನ ಪ್ರದರ್ಶನಗಳಲ್ಲಿ ಕುಣಿಸಿದ ತಾವು ಯಕ್ಷಗಾನದ ಪ್ರಭುದ್ಧ ಹಿಮ್ಮೇಳ ಕಲಾವಿದರ ಸಲಹೆ ಮಾರ್ಗದರ್ಶನಗಳಿಂದ ಬೆಳೆದು ಬಂದು ಪ್ರಸ್ತುತ ಪ್ರಬುದ್ಧ ಕಲಾವಿದೆಯಾಗಿ ಗುರುತಿಸಿಕೊಂಡವರು.
ಗಂಡುಮೆಟ್ಟಿನ ಕಲೆಯಲ್ಲಿ ಅದರಲ್ಲೂ ವೀರರಸ ಪ್ರಧಾನ ಸನ್ನವೇಷಗಳಲ್ಲಿ ಹೆಣ್ಣು ಕಂಠವನ್ನು ಮೀರಿಸಿ ಯಕ್ಷಗಾನ ಕಲೆಯೆತ್ತಿ ಮಹಿಳೆಯರು ಆಕರ್ಷಿತರಾಗುವಂತೆ ಮೇಲ್ಪಂಕ್ತಿ ಹಾಕಿಕೊಟ್ಟ ಹಿರಿಮೆ ತಮ್ಮದು. ಭಾಗವತಿಕೆಯಲ್ಲಿ ವ್ಯಕ್ತವಾಗುವ ಸಾಹಿತ್ಯ ಶುದ್ಧಿ, ಭಾಷಾ ಶುದ್ಧಿ ತಮ್ಮ ಹೆಗ್ಗಳಿಕೆ.
ಯಕ್ಷಗಾನ ಪ್ರದರ್ಶನದಲ್ಲಿ ಎಲ್ಲೂ ಲೋಪವಾಗಬಾರದು ಎಂಬ ತತ್ವ ನಿಷ್ಠೆಯುಳ್ಳ ತಮಗೆ ತಮ್ಮಂತೆ ಇತರ ಮಹಿಳೆಯರು ಯಕ್ಷಗಾನ ಕ್ಷೇತ್ರದಲ್ಲಿ ಮುಂದೆ ಬರಬೇಕೆಂಬ ಅಭಿಷ್ಠೆಯಿಂದ ತಮ್ಮ ಬಳಿ ಬಂದವರಿಗೆ ಯಕ್ಷಗಾನದ ಪಾಠವನ್ನು, ಕರ್ನಾಟಕ ಸಂಗೀತದ ಪಾಠವನ್ನು ಮಾಡುತ್ತಿದ್ದೀರಿ. ಪತಿಯೊಂದಿಗೆ ಧರ್ಮಸ್ಥಳದ ಪ್ರಖ್ಯಾತ ಯಕ್ಷಗಾನ ತರಬೇತಿ ಕೇಂದ್ರದಲ್ಲಿ 10 ವರ್ಷಗಳಿಂದ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದೀರಿ.
ತಮ್ಮ ಸಾಧನೆಯನ್ನು ಗುರುತಿಸಿ ರಾಜ್ಯದ ವಿವಿದೆಡೆ ಮುಂಬೈ, ದಿಲ್ಲಿಯಲ್ಲಿ ಸಂಘ ಸಂಸ್ಥೆಗಳು ಸನ್ಮಾನ ಗೌರಾರ್ಪಣೆಗಳನ್ನು ಸಲ್ಲಿಸಿವೆ. ಮುಖ್ಯವಾಗಿ ರಾಜ್ಯ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಸಾಧಕ ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ ತಮಗೆ ಸಂದಿದೆ.
ಯಕ್ಷಗಾನ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಅನುಪಮವಾಗಿ ಸೇವೆ ಗೈದಿರುವ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ಇವರಿಗೆ 2015ರ ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತೀದ್ದೇವೆ.