Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ಮಾಧ್ಯಮ > ಪ್ರಕಟಣೆ > ಆಳ್ವಾಸ್ ನುಡಿಸಿರಿ 2015 ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ

ಆಳ್ವಾಸ್ ನುಡಿಸಿರಿ 2015 ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ

ಈಶ್ವರ ದೈತೋಟ

ವೃತ್ತಿ ಪ್ರೀತಿ ಮತ್ತು ಪರಿಶ್ರಮದ ಮೂಲಕ ಮಾಧ್ಯಮ ರಂಗದಲ್ಲಿ ಏರು ಹಾದಿಯಲ್ಲಿ ಸಾಗಿ ಮಹತ್ವದ ಸಾಧನೆ ಮಾಡಿರುವ ಈಶ್ವರ ದೈತೋಟ ಇವರು ತನ್ನ ಇಪ್ಪತ್ತರ ಕಿರಿ ವಯಸ್ಸಿನಲ್ಲಿ ಮುದ್ರಣ ಮಾಧ್ಯಮದಲ್ಲಿ ಪತ್ರಕರ್ತರಾಗಿ ಸೇರಿ ನಾಲ್ಕು ದಶಕಗಳ ಕಾಲ ರೇಡಿಯೋ, ದೂರದರ್ಶನಗಳಲ್ಲಿ ಸೇವೆ ಸಲ್ಲಿಸಿದ ತುಂಬು ಅನುಭವಿ.
1991 ರಿಂದ 2011ರವರೆಗೆ ಉದಯವಾಣಿ, ವಿಜಯಕರ್ನಾಟಕ, ಸಂಯುಕ್ತ ಕರ್ನಾಟಕ, ಟೈಮ್ಸ್ ಆಫ್ ಇಂಡಿಯ, ವಿಜಯವಾಣಿ ಮುಂತಾದ ಪತ್ರಿಕೆಗಳ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಕರ್ನಾಟಕದಲ್ಲಿ ಅತೀ ಹೆಚ್ಚು ಪತ್ರಿಕೆಗಳನ್ನು ಮುನ್ನಡೆಸಿದ ಮುಖ್ಯ ಸಂಪಾದಕ ಎಂಬ ಹಿರಿಮೆಗೆ ಪಾತ್ರರಾದವರು.
ಪತ್ರಿಕಾ ಕಾರ್ಯದ ಜೊತೆಗೆ ಅಂತರದೃಷ್ಟಿ, ಅನುಭಾವ, ಚಿಣ್ಣ ಚಿಣ್ಣರ ಪಾಠ, ಮಾಧ್ಯಮ ಭ್ರಮರಿ ಮುಂತಾದ ಅಂಕಣ ಬರಹಗಳ ಮೂಲಕ ವರ್ತಮಾನದ ಅನುವಾರ್ಯತೆಗಳಿಗೆ ಸ್ಪಂದಿಸಿದವರು. ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ 2500ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿ ನಾಡಿನಗಲ ಪರಿಚಿತರಾದವರು. ಉದಯ ಟಿ.ವಿ.ಯ ಸಂವೇದನೆ-ಶೇರಿಂಗ್ ವಿದ್ ಕನ್ಸರ್ನ್ ಎಂಬ ದೈನಿಕ ಸಂದರ್ಶನದ ಮೂಲಕ ಕನ್ನಡದ ಹೆಸರಾಂತ ಸಾಹಿತಿಗಳಾದ ಜಿ.ಎಸ್.ಶಿವರುದ್ರಪ್ಪ, ಯು.ಆರ್.ಅನಂತಮೂರ್ತಿ ಮುಂತಾದ ಸಾಹಿತಿಗಳನ್ನು ಮಾತಾನಾಡಿಸಿದವರು.
ಜಗತ್ತಿನ ಐದು ಭೂಖಂಡಗಳಿಗೆ ಪ್ರವಾಸ ಮಾಡಿ ಅಲ್ಲಿ ಪ್ರಾದೇಶಿಕ, ಸಾಂಸ್ಕøತಿಕ ವೈಶಿಷ್ಟ್ಯತೆಗಳ ಸಂಗ್ರಹ, ಸಾಧಕ ನೇತಾರರ ಕುರಿತ ಅತ್ಯಮೂಲ್ಯ ವಿವರಗಳನ್ನು ಸಂಗ್ರಹಿಸಿರುತ್ತಾರೆ.
ಹಲವು ಭಾರತೀಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವ ಇವರು 20ಕ್ಕೂ ಅಧಿಕ ಸ್ವತಂತ್ರ ಕೃತಿಗಳನ್ನು ಪ್ರಕಟಿಸಿದ್ದಾರೆ. ಪತ್ರಿಕೋದ್ಯಮ ರಂಗದ ಅಧಿಕೃತ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಇವರು ಅಂತರಾಷ್ಟ್ರೀಯ ಕಾರ್ಯಗಾರಗಳನ್ನು ಸಮೃದ್ಧಗೊಳಿಸಿದ್ದಾರೆ.
ಪತ್ರಿಕಾ ರಂಗದ ಅದ್ವಿತೀಯ ಸಾಧನೆಗಾಗಿ ಅಭ್ಯುದಯ ಪತ್ರಿಕೋದ್ಯಮ ರಾಜ್ಯ ಪ್ರಶಸ್ತಿ, ರಾಜ್ಯದ ಅತ್ಯುತ್ತಮ ಸಂಪಾದಕ ಪ್ರಶಸ್ತಿ, ರಾಜ್ಯ ಸರ್ಕಾರದ ಟಿ.ಎಸ್.ಆರ್.ಪತ್ರಿಕೋದ್ಯಮ ಪ್ರಶಸ್ತಿ ಸೇರಿದಂತೆ ಹಲವು ಗೌರವ-ಪುರಸ್ಕಾರಗಳಿಗೆ ಭಾಜನರಾಗಿರುವ ಇವರಿಗೆ ಆಳ್ವಾಸ್ ನುಡಿಸಿರಿಯ ಈ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಶ್ರೀ ಈಶ್ವರ ದೈತೋಟ ಇವರಿಗೆ ಆಳ್ವಾಸ್ ನುಡಿಸಿರಿ-2015ರ ನುಡಿಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.