Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > Uncategorized > ಆಳ್ವಾಸ್ ನುಡಿಸಿರಿ 2015 ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ

ಆಳ್ವಾಸ್ ನುಡಿಸಿರಿ 2015 ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ

12289522_10153765694070818_7975809095628471536_nಎಸ್.ವಿ. ರಾಜೇಂದ್ರಸಿಂಗ್ ಬಾಬು

ಚಲನಚಿತ್ರ ರಂಗದಲ್ಲಿ ‘ಬಾಬು’ ಎಂದು ಖ್ಯಾತರಾದವರು ಎಸ್.ವಿ. ರಾಜೇಂದ್ರಸಿಂಗ್. 1948 ಅಕ್ಟೋಬರ್ 22ರಂದು ಮೈಸೂರಿನಲ್ಲಿ ಜನಿಸಿದ ಇವರು 1955ರಲ್ಲಿ ವರನಟ ಡಾ. ರಾಜ್‍ಕುಮಾರ್ ಅವರೊಂದಿಗೆ ಬಾಲನಟನಾಗಿ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಗೈದರು.

ಚಲನಚಿತ್ರಕ್ಕೆ ಸಂಬಂಧಪಟ್ಟಂತೆ ಜರ್ಮನ್, ರಷ್ಯಾ, ಪ್ರೆಂಚ್ ದೇಶಗಳಲ್ಲಿ ಚಲನಚಿತ್ರ ರಂಗದ ತಂತ್ರಜ್ಞಾನದ ಬಗ್ಗೆ ವಿಶೇಷವಾದ ತರಬೇತಿಯನ್ನು ಪಡೆದು ತಮ್ಮ ತಂದೆಯ ‘ಮಮತಾ ಪಿಕ್ಚರ್ಸ್’ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಾ, ಅನೇಕ ಚಲನಚಿತ್ರ ನಿರ್ದೇಶನ ಸೇರಿದಂತೆ ಬೆಳ್ಳಿ ತೆರೆಯ ಸೂಕ್ಷ್ಮ ತಂತ್ರಗಳನ್ನು ಅರಿತು ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದೀರಿ. ಭಾರತೀಯ ಚಿತ್ರರಂಗ ಮಾತ್ರವಲ್ಲದೆ ‘ಹಾಲಿವುಡ್’ ಚಿತ್ರರಂಗಕ್ಕೂ ತಮ್ಮ ಕಾರ್ಯ ಕೌಶಲ್ಯಗಳಿಂದ ಕೊಡುಗೆ ನೀಡುವಲ್ಲಿ ಯಶಸ್ವಿಯಾಗಿದ್ದೀರಿ.

ರೋಹಿಣಿ ಪಿಕ್ಚರ್ಸ್‍ನ ಮೂಲಕ ಚಿತ್ರರಂಗದಲ್ಲಿ ಪ್ರೇಕ್ಷಕರಿಗೆ ಸಧಬಿರುಚಿಯ ಚಿತ್ರಗಳನ್ನು ನೀಡುವಲ್ಲಿ ತಮ್ಮ ಕೊಡುಗೆ ಮಹತ್ತರವಾದದ್ದು. 1974ರಲ್ಲಿ ತಾವು ನಿರ್ದೇಶಕರಾಗಿ ನಿರ್ದೇಶಿಸಿದ ಮೊದಲ ಕನ್ನಡ ಚಿತ್ರ ನಾಗರಹೊಳೆ. ಇದು ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದು ಸಿನೆಮಾ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು. ಅದೇ ರೀತಿ 1977ರಲ್ಲಿ ತೆರೆಕಂಡ ‘ಸಿಂಹದ ಮರಿ ಸೈನ್ಯ’ ಚಲನಚಿತ್ರ ಕೂಡಾ ಹಲವಾರು ಪ್ರಶಸ್ತಿಗಳನ್ನು ಪಡೆಯಿತು. ತಮಗೆ ಲಭಿಸಿದ ಯಶಸ್ಸಿನಿಂದಾಗಿ ತಾವು ಬೆಳ್ಳಿತೆರೆಯಲ್ಲಿ ಅತ್ಯಾಪೂರ್ವ ಎಣಿಸಿದ ಚಿತ್ರಗಳಾದ ಬಂಧನ, ಮುತ್ತಿನ ಹಾರ, ಹೂವು ಹಣ್ಣು, ಮಹಾಕ್ಷತ್ರಿಯ, ಮುಂಗಾರಿನ ಮಿಂಚು, ಭೂಮಿ ತಾಯಿ ಚೊಚ್ಚಲ ಮಗ, ದೋಣಿ ಸಾಗಲಿ ಇತ್ಯಾದಿ ಚಿತ್ರಗಳನ್ನು ನಿರ್ದೇಶಿಸಿ ಜನಪ್ರಿಯ ಗಳಿಸಿರುತ್ತೀರಿ.

ಮೈಸೂರು ವಿಶ್ವವಿದ್ಯಾನಿಲಯದ ಸಿನೆಮಾ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಚಲನಚಿತ್ರ ಮಂಡಳಿಯ ನಿರ್ದೇಶಕರ ಸಂಘದ ಅದ್ಯಕ್ಷರಾಗಿ, ಸರಕಾರ ಹಾಗೂ ಸರಕಾರೇತ ಸಂಘ ಸಂಸ್ಥೆಗಳ ಪ್ರಶಸ್ತಿ ಪೀಠದ ಸದಸ್ಯರಾಗಿ, ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದೀರಿ. ತಮ್ಮ ಸಾಧನೆಗಾಗಿ ಉತ್ತಮ ನಿರ್ದೇಶಕ ಪ್ರಶಸ್ತಿ, ಕರ್ನಾಟಕ ರಾಜ್ಯ ಚಲನಚಿತ್ರ ಮಂಡಳಿ ಪ್ರಶಸ್ತಿ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

ಹೀಗೆ ಕನ್ನಡ ಚಲನಚಿತ್ರ ರಂಗ ಮಾತ್ರವಲ್ಲದೆ ಇತರೆ ಭಾರತೀಯ ಭಾಷೆಗಳ ಬೆಳ್ಳಿ ಪರದೆಯಲ್ಲಿ ಅನುಪಮವಾದ ಸೇವೆಗೈದಿರುವ ಶ್ರೀ ಎಸ್.ವಿ. ರಾಜೇಂದ್ರಸಿಂಗ್ ಬಾಬು ಇವರಿಗೆ 2015ರ ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತೀದ್ದೇವೆ.