Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > Uncategorized > ಆಳ್ವಾಸ್ ನುಡಿಸಿರಿ 2015 ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ

ಆಳ್ವಾಸ್ ನುಡಿಸಿರಿ 2015 ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ

12313968_10153765687275818_5102656207263163704_nಡಾ.ಸುಮತೀಂದ್ರ ನಾಡಿಗ್
ಕವಿ, ವಿಮರ್ಶಕ ಸುಮತೀಂದ್ರ ನಾಡಿಗ್‍ರು ಸೂಕ್ಷ್ಮ ಒಳನೋಟವುಳ್ಳ ಕಾವ್ಯ ಸೃಷ್ಟಿ ಹಾಗೂ ಪ್ರಬುದ್ದ ವಿಮರ್ಶಕರಾಗಿ ಓದುಗರಿಗೆ ಪರಿಚಿತರಾದವರು. 1985ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ‘ಬೇಂದ್ರೆ ಕಾವ್ಯದ ವಿಭಿನ್ನ ನೆಲೆಗಳು’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಪಡೆದವರು. ಮೈಸೂರು ವಿಶ್ವವಿದ್ಯಾನಿಲಯ 1957ರಲ್ಲಿ ಹಾಗೂ ಅಮೇರಿಕಾದ ಟೆಂಡಲ್ ವಿಶ್ವವಿದ್ಯಾನಿಲಯದಿಂದ 1979ರಲ್ಲಿ ಇಂಗ್ಲಿಷ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಮೂರು ದಶಕಗಳ ಕಾಲ ಪ್ರಾದ್ಯಾಪಕರಾಗಿ ಭಾಷೆ-ಸಾಹಿತ್ಯದ ಬೋಧನೆಯನ್ನು ಬದ್ದತೆಯಿಂದ ನಿರ್ವಹಿಸಿಕೊಂಡು ಬಂದವರು. ಬೆಂಗಳೂರು ವಿಶ್ವವಿದ್ಯಾನಿಲಯ ಮಾತ್ರವಲ್ಲದೆ ಕಲ್ಕತ್ತಾ, ಗೋವಾ, ಮುಂಬೈ ವಿಶ್ವವಿದ್ಯಾನಿಲಯಗಳಲ್ಲಿಯೂ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದವರು.

ಏಕಾಂತ ಲೋಕಾಂತ, ಜಗ ಮತ್ತು ಚೇತನ, ದಾಂಪತ್ಯ ಗೀತ, ಭಾವಲೋಕ, ಕಪ್ಪುದೇವತೆ ಮುಂತಾದ ಕವನ ಸಂಕಲನಗಳ ಮೂಲಕ ಆಧುನಿಕ ಕನ್ನಡ ಕಾವ್ಯಪ್ರಕಾರವನ್ನು ಸಮೃದ್ಧಗೊಳಿಸಿದವರು.

ಸಾಹಿತ್ಯ ಚರಿತ್ರೆಯನ್ನು ಶೋಧಿಸುವ ಮತ್ತು ರೂಪಿಸುವ ಕಾರ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿದ ಇವರು ಮೌನದಾಚೆಯ ಮಾತು, ಅಡಿಗರು ಮತ್ತು ನವ್ಯಕಾವ್ಯ, ವಿಮರ್ಶೆಯ ದಾರಿಯಲ್ಲಿ, ಕಾವ್ಯವೆಂದರೇನು ಎಂಬ ವಿರ್ಮಶನ ಕೃತಿಗಳನ್ನು ಕನ್ನಡ ಜ್ಞಾನಜಗತ್ತಿಗೆ ನೀಡಿದವರು. ಆನೆ ಮತ್ತು ಇರುವೆ, ಗಾಳಿಪಟ ಸೇರಿದಂತೆ ಹಲವು ಮಕ್ಕಳ ಬರಹಗಳನ್ನು ಪ್ರಕಟಿಸುವ ಮೂಲಕ ಎಳವೆಯ ಸಾಹಿತ್ಯಾಭಿರುಚಿ ಬತ್ತದಂತೆ ನೋಡಿಕೊಂಡವರು. ಸಣ್ಣ ಕತೆಗಾರರಾಗಿ, ಅಪೂರ್ವ ಅನುವಾದರಾಗಿ, ದಣಿವರಿಯದ ಸಂಶೋಧಕರಾಗಿ ಪ್ರಸಿದ್ಧರಾದ ಇವರಿಗೆ ಮಾಸ್ತಿ ಪ್ರಶಸ್ತಿ, ನಿರಂಜನ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರ-ಗೌರವಕ್ಕೆ ಪಾತ್ರರಾದವರು. ಇವರ ಕನ್ನಡ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಆಳ್ವಾಸ್ ನುಡಿಸಿರಿ-2015ರ ನುಡಿಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.