Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > Uncategorized > ಆಳ್ವಾಸ್ ನುಡಿಸಿರಿ 2015 ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ

ಆಳ್ವಾಸ್ ನುಡಿಸಿರಿ 2015 ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ

ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯ

ವಿಶಾಲವೂ ತಳಸ್ಪರ್ಶಿಯೂ ಆದ ಅಧ್ಯಯನ ಹಾಗೂ ಪ್ರಭಾವಿ ವಾಕ್‍ಶಕ್ತಿಯ ಮೂಲಕ ಅಧ್ಯಾತ್ಮ ಕ್ಷೇತ್ರದಲ್ಲಿ ಸಾಧನೆ -ಸಿದ್ಧಿ ಪಡೆದವರು ಬನ್ನಂಜೆ ಗೋವಿಂದಾಚಾರ್ಯರು. ವೈದಿಕ ಸಾಹಿತ್ಯ, ಉಪನಿಷತ್ತು, ಮಹಾಭಾರತ, ಪುರಾಣ ಭಾರತೀಯ ತತ್ತ್ವಶಾಸ್ತ್ರ ಮುಂತಾದ ಜ್ಞಾನದ ಆಗರವನ್ನೂ, ಬುದ್ಧಿ-ಭಕ್ತಿಯಲ್ಲಿ ಮಂಡಿಸಿ ಅಮೃತವಚನ ನೀಡುತ್ತಾ ಬಂದವರು. ಮಧ್ವತತ್ತ್ವವನ್ನು ಶೋಧಿಸಿ ರೂಪಿಸಿದ 2000 ಪುಟಗಳ 5 ಮಹಾನ್ ಸಂಪುಟಗಳು ಇವರ ಸಂಶೋಧನೆ ಹಾಗೂ ಅಧ್ಯಾತ್ಮಕ ತಪಸ್ಸಿಗೆ ಸಾಕ್ಷಿ.
ಸಂಸ್ಕøತದ ಆನಂದಮಠ, ವಾಸ್ತುಸ್ತುತಿ, ವಿಷ್ಣುಸ್ತುತಿ ಹಾಗೂ ವಿವಿಧ ಸಂಸ್ಕøತ ಸ್ತ್ರೋತ್ರಗಳಿಗೆ ನೀಡಿರುವ ಕಿರು ವ್ಯಾಖ್ಯಾನಗಳು, ಮಹಾಭಾರತ, ಭಾಗವತ, ಉಪನಿಷತ್ತ್‍ಗಳಿಗೆ ಮಾಡಿರುವ ವಿಸ್ತಾರ ವ್ಯಾಖ್ಯಾನಗಳು, ಭಾರತೀಯ ಜ್ಞಾನ ನಿಧಿಯನ್ನು ಜೀವಂತವಾಗಿರಿಸಿದೆ. ಸಂಸ್ಕøತದ ಬಾಣನ ‘ಕಾದಂಬರಿ’, ಕಾಳಿದಾಸನ ‘ಶಾಕುಂತಲ’, ರುದ್ರಕನ ಮೃಚ್ಛಕಟಿಕ, ಭವಭೂತಿಯ ಉತ್ತರರಾಮಚರಿತವನ್ನು ಕನ್ನಡದಕ್ಕೆ ಅನುವಾದಿಸಿದ್ದು ಸಂಸ್ಕøತದ ವಿವಿಧ ಸ್ತುತಿ, ಸ್ತೋತ್ರಗಳನ್ನು ಸರಳ-ಸುಂದರವಾಗಿ ಅನುವಾದಿಸಿ ಸಂಸ್ಕøತ-ಕನ್ನಡದ ಅರಿವು-ಕುರುವಿಗೆ ಕೊಡುಗೆ ನೀಡಿದ್ದಾರೆ.

ಉಪನಿಷತ್ ಮತ್ತು ಭಾಗವತದ ಸಾರಸಂಗ್ರಹವನ್ನು ಕನ್ನಡದಲ್ಲಿ ಬರೆದು ಜ್ಞಾನವಲಯವನ್ನು ವಿಸ್ತರಿಸಿದ್ದಾರೆ. ತನ್ನ ಪ್ರಖರ ಪಾಂಡಿತ್ಯ, ಸೊಗಸಾದ ನಿರೂಪಣೆಗಳ ಮೂಲಕ ದೇಶ-ವಿದೇಶಗಳ ನೆಲದಲ್ಲಿ ಅಧ್ಯಾತ್ಮಿಕ ಬೋಧನೆಗಳನ್ನು ನೀಡುತ್ತಾ ಬಂದಿರುವ ಬನ್ನಂಜೆಯವರು ಸಂಶೋಧನೆ – ಬರಹ ಹಾಗೂ ಉಪನ್ಯಾಸಗಳ ಮೂಲಕ ಅಂತರಾಷ್ಟ್ರೀಯ ಖ್ಯಾತಿಗೆ ಪಾತ್ರರಾದವರು. ಯು.ಎಸ್.ಎ., ನೆದರ್‍ಲ್ಯಾಂಡ್, ಆಸ್ಟ್ರೇಲಿಯಾ ಸೇರಿದಂತೆ 100 ಮಂದಿ ಶಿಷ್ಯರು ಇವರಲ್ಲಿ ಅಧ್ಯಾತ್ಮಿಕ ಅಧ್ಯಯನ ಮಾಡುತ್ತಿದ್ದು, ದೇಶದ ಪದ್ಮಶ್ರೀ ಪ್ರಶಸ್ತಿ ಒಳಗೊಂಡಂತೆ ನೂರಾರು ಪ್ರಶಸ್ತಿ ಸನ್ಮಾನ ಗೌರವಗಳಿಗೆ ಪಾತ್ರರಾಗಿರುವ ಶ್ರೀ ಬನ್ನಂಜೆ ಗೋವಿಂದಾಚಾರ್ಯರಿಗೆ ಇವರ ಅಧ್ಯಾತ್ಮ ಸಾಹಿತ್ಯ ಮತ್ತು ಪ್ರವಚನ ಸೇವೆಯನ್ನು ಪರಿಗಣಿಸಿ ಆಳ್ವಾಸ್ ನುಡಿಸಿರಿ-2015ರ ನುಡಿಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.