Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ಮಾಧ್ಯಮ > ಪ್ರಕಟಣೆ > ಆಳ್ವಾಸ್ ನುಡಿಸಿರಿ 2015 ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ

ಆಳ್ವಾಸ್ ನುಡಿಸಿರಿ 2015 ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ

ವರ್ತೂರು ನಾರಾಯಣ ರೆಡ್ಡಿ

ನಾರಾಯಣರೆಡ್ಡಿಯವರು ಲಕ್ಷ್ಮಯ್ಯ ರೆಡ್ಡಿ ಮತ್ತು ಯಲ್ಲಮ್ಮ ದಂಪತಿಗಳ ಮಗನಾಗಿ 18 ಸೆಪ್ಟೆಂಬರ್ 1935ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೋರಹುಣಸೆ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದರು. 1954ರಲ್ಲಿ ಎಸ್.ಎಸ್.ಎಲ್.ಸಿ. ಶಿಕ್ಷಣ ಪಡೆದ ಇವರು ಆರ್ಥಿಕ ಸಂಕಷ್ಟದ ಕಾರಣ ಆರಂಭದಲ್ಲಿ 18 ತಿಂಗಳ ಕಾಲ ಹೋಟೆಲ್ ಒಂದರಲ್ಲಿ ಕಾರ್ಮಿಕರಾಗಿ ದುಡಿದರು.
ಮುಂದೆ ಖಾಸಗಿ ಸರಕು ಲಾರಿ ಸಂಸ್ಥೆಯಲ್ಲಿ ಜವಾನರಾಗಿ ದುಡಿದು ತದನಂತರದಲ್ಲಿ ಬ್ರಾಂಚ್ ಮ್ಯಾನೇಜರ್ ಆಗಿ ಬಡ್ತಿ ಪಡೆದರು. ಶಿವಮೊಗ್ಗ-ಮುಂಬೈ-ಬೆಂಗಳೂರಿನಲ್ಲಿ ದುಡಿದು ತಮ್ಮ ಸಂಪಾದನೆ ಹಣದಿಂದ ಸೋರಹುಣಸೆಯ ತಮ್ಮ ಸ್ವಗ್ರಾಮದಲ್ಲಿ 4.5 ಎಕರೆ ಜಮೀನನ್ನು ಖರೀದಿಸಿ ಕೃಷಿಯನ್ನು ಆರಂಭಿಸಿದರು. 1973-1979ರ ಅವಧಿಯಲ್ಲಿ ರಾಸಾಯನಿಕಗಳನ್ನು ಬಳಸಿ ಕೃಷಿ ಮಾಡಿದಾಗ ಅಪಾರ ನಷ್ಟ ಅನುಭವಿಸಿದರು. 1979ರ ನಂತರದಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಕೊಂಡರು. ಕೆಲವೇ ವರ್ಷಗಳಲ್ಲಿ ಸಾವಯವ ಕೃಷಿಯಿಂದ ಲಾಭಗಳಿಸಲು ಆರಂಭಿಸಿ 1990ರ ವೇಳೆಗೆ ಪ್ರಸಿದ್ಧ ಪ್ರಗತಿಪರ ರೈತರೆಂಬ ಹೆಗ್ಗಳಿಕೆಗೆ ಪಾತ್ರರಾದರು.
ಇವರು ಅನೇಕ ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮತ್ತು ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದಾರೆ. 1990ರಲ್ಲಿ ನೆದರ್‍ಲ್ಯಾಂಡ್‍ನಲ್ಲಿ ನಡೆದ ಸಮ್ಮೇಳನದಲ್ಲಿ ಸಾವಯವ ಕೃಷಿಯ ಮಹತ್ವದ ಕುರಿತು ಪ್ರಬಂಧವನ್ನು ಮಂಡಿಸಿದ್ದಾರೆ. 1992ರಲ್ಲಿ ಜರ್ಮನಿಯಲ್ಲಿ ನಡೆದ ಸಮ್ಮೇಳನ, 1994ರಲ್ಲಿ ನೆದರ್‍ಲ್ಯಾಂಡ್‍ನಲ್ಲಿ ನಡೆದ ಸಮ್ಮೇಳನಗಳಲ್ಲಿ ಸಾವಯವ ಕೃಷಿಯ ಕುರಿತು ಪ್ರಬಂಧಗಳನ್ನು ಮಂಡಿಸಿದ್ದಾರೆ. ಹಾಗೆಯೇ 2001ರಲ್ಲಿ ಫ್ರಾನ್ಸ್‍ನಲ್ಲಿ, 2002ರಲ್ಲಿ ಬ್ರೆಜಿಲ್‍ನಲ್ಲಿ, 2014ರಲ್ಲಿ ರಷ್ಯಾದಲ್ಲಿ ನಡೆದ ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ಸಾವಯವ ಕೃಷಿ ಮತ್ತು ಬೀಜ ಸಂರಕ್ಷಣೆ ಕುರಿತ ಉಪನ್ಯಾಸಗಳನ್ನು ನೀಡಿದ್ದಾರೆ.
ಕಳೆದ 30 ವರ್ಷಗಳಿಂದ ಸಾವಯವ ಕೃಷಿಯ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ದೇಶದಾದ್ಯಂತ ಅನೇಕ ಕಡೆ ಪಾಲ್ಗೊಂಡು ಜಾಗೃತಿಯನ್ನು ಮೂಡಿಸುತ್ತಾ ಬಂದಿದ್ದಾರೆ. ಹಾಗೆಯೇ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನೆಯೊಂದಿಗೆ ಸಹಯೋಗವನ್ನು ಸಹ ಹೊಂದಿದ್ದಾರೆ. ಶಾಲಾ ಮಕ್ಕಳು ಮತ್ತು ಪ್ರೌಢಶಾಲಾ ಮಕ್ಕಳಿಗಾಗಿ 3 ದಿನಗಳ ಕಾರ್ಯಾಗಾರವನ್ನು ಸಹ ಕೃಷಿ ಗುರುಕುಲ ಎಂಬ ಹೆಸರಿನಲ್ಲಿ ತಮ್ಮ ಹೊಲದಲ್ಲಿಯೇ ಆಯೋಜಿಸಿ ಶೂನ್ಯ ಕೃಷಿಯ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಾ ಬಂದಿದ್ದಾರೆ.
1978ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಮದ ‘ಅತ್ಯುತ್ತಮ ರಾಗಿ ಬೆಳೆಗಾರ’ ಪ್ರಶಸ್ತಿ, 1994ರಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ‘ಪರಿಸರವಾದಿ ಪ್ರಶಸ್ತಿ’, 1994ರಲ್ಲಿ ಸಹಜ ಕೃಷಿ ತಂತ್ರಜ್ಞಾನ ಅಳವಡಿಸಿಕೊಂಡಿರುವ ಸಲುವಾಗಿ ‘ಉತ್ತಮ ಕೃಷಿಕ ಪ್ರಶಸ್ತಿ’, 1994ರಲ್ಲಿ ‘ರಾಜ್ಯೋತ್ಸವ ಪ್ರಶಸ್ತಿ’, 2004ರಲ್ಲಿ ಹಂಪಿ ವಿಶ್ವವಿದ್ಯಾನಿಲಯದಿಂದ ‘ನಾಡೋಜ ಪ್ರಶಸ್ತಿ’ ಲಭಿಸಿದೆ.
ಹೀಗೆ ಸಾವಯವ ಕೃಷಿಯಲ್ಲಿ ಸಲ್ಲಿಸಿದ ಸೇವೆ, ಪರಿಸರದ ಬಗೆಗಿನ ಕಾಳಜಿ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಇವರ ಕಾರ್ಯಕ್ರಮಗಳ ಅನುಪಮ ಸೇವೆಯನ್ನು ಪರಿಗಣಿಸಿ ವರ್ತೂರು ನಾರಾಯಣರೆಡ್ಡಿಯವರಿಗೆ ‘ಆಳ್ವಾಸ್ ನುಡಿಸಿರಿ -2015 ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.