Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ವಿದ್ಯಾರ್ಥಿಸಿರಿ > ಆಳ್ವಾಸ್ ವಿದ್ಯಾರ್ಥಿಸಿರಿ 2016: ಅಧ್ಯಕ್ಷತೆಗೆ ಅನನ್ಯ ಆಯ್ಕೆ

ಆಳ್ವಾಸ್ ವಿದ್ಯಾರ್ಥಿಸಿರಿ 2016: ಅಧ್ಯಕ್ಷತೆಗೆ ಅನನ್ಯ ಆಯ್ಕೆ

vidyarthisiri-ananyaಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ವಿದ್ಯಾರ್ಥಿ ಸಾಹಿತ್ಯ – ಸಂಸ್ಕೃತಿ ಸಮ್ಮೇಳನ ’ಆಳ್ವಾಸ್ ವಿದ್ಯಾರ್ಥಿಸಿರಿ’-೨೦೧೬ ನವಂಬರ ೧೭, ಗುರುವಾರದಂದು ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆಯಲಿದೆ. ಈ ಸಮ್ಮೇಳನದ ಅಧ್ಯಕ್ಷತೆಗೆ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಅನನ್ಯ ಆಯ್ಕೆಯಾಗಿದ್ದಾಳೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ ಮೋಹನ ಆಳ್ವ ತಿಳಿಸಿದರು.

ಸಮ್ಮೇಳನದಲ್ಲಿ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಗೆ ಕಟೀಲು ಶ್ರೀದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು ವಿದ್ಯಾರ್ಥಿ ಮನು ಕಶ್ಯಪ್, ಸಮಾರೋಪ ಭಾಷಣಕ್ಕೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಸುಶ್ಮಿತಾ ಕೆ. ರೈ ಆಯ್ಕೆಯಾಗಿದ್ದಾರೆ. ಸಮ್ಮೇಳನದ ವಿದ್ಯಾರ್ಥಿ ಉಪನ್ಯಾಸ ಕಾರ್ಯಕ್ರಮಕ್ಕೆ ಉಜಿರೆ ಎಸ್‌ಡಿಯಂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಅರ್ಜುನ್ ಶೆಣೈ , ಆಳ್ವಾಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಭೂಮಿಕಾ ವಿಶ್ವೇಶ್ವರ ಹೆಗಡೆ ಹಾಗೂ ಧರ್ಮಸ್ಥಳದ ಎಸ್‌ಡಿಯಂ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪೂರ್ಣಿಮಾ ಆರ್ ಜೈನ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ವಿದ್ಯಾಗಿರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಇವರನ್ನು ಆಯ್ಕೆ ಮಾಡಲಾಯಿತು. ಲಿಖಿತ ಪರೀಕ್ಷೆ, ಆಶು ಭಾಷಣ ಹಾಗೂ ಸಂದರ್ಶನಗಳ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಿತು. ಅಂಡಾರು ಗುಣಪಾಲ ಹೆಗ್ಡೆ, ಜೀವನ್ ರಾಂ ಸುಳ್ಯ, ಶ್ರೀಧರ ಜೈನ್ ಮತ್ತು ಡಾ. ಧನಂಜಯ ಕುಂಬ್ಳೆ ಮೌಲ್ಯ ಮಾಪಕರಾಗಿ ಭಾಗವಹಿಸಿದ್ದರು.

ಅಧ್ಯಕ್ಷರ ಪರಿಚಯ: ಅಧ್ಯಕ್ಷತೆಗೆ ಆಯ್ಕೆಯಾಗಿರುವ ಅನನ್ಯ ಬಹುಮುಖ ಪ್ರತಿಭೆಯಾಗಿದ್ದು ಕನ್ನಡ, ತುಳು, ಇಂಗ್ಲಿಷ್ ಭಾಷೆಗಳಲ್ಲಿ ಭಾಷಣ, ಚರ್ಚಾಸ್ಪರ್ಧೆಗಳಲ್ಲಿ ಹಲವು ಬಹುಮಾನಗಳನ್ನು ಪಡೆದಿದ್ದಾರೆ. ಛದ್ಮವೇಷ, ಕೋಲಾಟ, ಕಂಠಪಾಠ, ಕಥೆ ಹೇಳುವುದು, ಯಕ್ಷಗಾನ ಭಾಗವತಿಕೆ, ತಾಳಮದ್ದಳೆ ಅರ್ಥಗಾರಿಕೆ, ನಾಟಕ, ಚಿತ್ರಕಲೆ, ಭರತನಾಟ್ಯ ಮೊದಲಾದ ಕ್ಷೇತ್ರಗಳಲ್ಲಿ ಪ್ರತಿಭಾನ್ವಿತೆ. ’ನಿತ್ಯ ಜೀವನ’ ಎಂಬುದು ಪ್ರಕಟಿತ ಕೃತಿ. ಹರಿಕಥೆಯ ಮಾದರಿಯ ಜಿನಕಥೆ ಎಂಬ ವಿಶೇಷ ಕಾರ್ಯಕ್ರಮವನ್ನು ಹಲವು ಕಡೆ ನೀಡಿದ್ದಾರೆ. ಪ್ರತಿಭ ಕಾರಂಜಿಯ ತಾಲೂಕು ಜಿಲ್ಲಾ ಮಟ್ಟದಲ್ಲಿ ಹಲವು ಬಹುಮಾನಗಳು, ಸೃಜನಾತ್ಮಕ ಬರವಣಿಗೆಗೆ ಕಲಾಶ್ರೀ ಪ್ರಶಸ್ತಿ ಮೊದಲಾದ ಹಲವು ಗೌರವಗಳು ಇವರಿಗೆ ಸಂದಿದೆ.

ಡಾ| ಎಂ. ಮೋಹನ ಆಳ್ವ
ಅಧ್ಯಕ್ಷರು
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ